• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶನಿವಾರ ಮಳೆಯಿಂದ ಏನೇನಾಯ್ತು? ಪ್ರವಾಹ ಪೀಡಿತ ಜಿಲ್ಲೆಗಳಲ್ಲೊಂದು ಸುತ್ತು

By ಪ್ರತಿನಿಧಿ
|

ರಾಜ್ಯದಲ್ಲಿ ಮಳೆ ಅಬ್ಬರ ತಗ್ಗುವಂತೆ ಕಾಣುತ್ತಿಲ್ಲ. ಒಂದೆಡೆ ಮಳೆ, ಮತ್ತೊಂದೆಡೆ ನುಗ್ಗಿ ಹರಿಯುತ್ತಿರುವ ನದಿ ನೀರು... ಪ್ರವಾಹದಲ್ಲೇ ಪರಿತಪಿಸುತ್ತಿರುವ ಜನರಿಗೆ ಮನೆ ಮಠ ಕಳೆದುಕೊಂಡ ನೋವು... ಜೀವನಕ್ಕೆ ಆಸರೆಯಾಗಿದ್ದ ಜಮೀನು, ಜಾನುವಾರು, ಹೊಲಗಳೆಲ್ಲ ಹೇಳಹೆಸರಿಲ್ಲದಂತೆ ಕಾಣೆಯಾಗಿವೆ. ಮುಂದೇನು ಎಂಬ ಪ್ರಶ್ನೆಯೊಂದೇ ಕಳೆದುಕೊಂಡವರು ಕಣ್ಣಲ್ಲಿ ತುಂಬಿಕೊಂಡಿದೆ.

ಕರಾವಳಿ, ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಮಳೆಯ ರಭಸ ಹೆಚ್ಚುತ್ತಿದೆ. ಬೆಳಗಾವಿ, ಉತ್ತರ ಕನ್ನಡದಲ್ಲೂ ಮಳೆರಾಯ ಮರಳಿ ಹೋಗುವಂತೆ ಕಾಣುತ್ತಿಲ್ಲ. ಗುಡ್ಡ ಪ್ರದೇಶಗಳಲ್ಲಿ ಮರ ಬೀಳುವುದು, ಗುಡ್ಡ ಕುಸಿಯುವುದು ಇನ್ನೂ ನಿಂತಿಲ್ಲ. ನೆಲಕಚ್ಚಿದ ಮನೆಗಳಿಗಂತೂ ಲೆಕ್ಕವಿಲ್ಲ.

ಮಳೆ ನಿಲ್ಲಿಸೋ ಮಹಾದೇವ... ಅತಿವೃಷ್ಟಿ ನಿಲ್ಲಿಸಲು ಬೆಳಗಾವಿಯಲ್ಲಿ ಹೋಮ

ಇತ್ತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳು ಸಾಗುತ್ತಲೇ ಇವೆ. ಪರಿಹಾರ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ನೆರವು ಒದಗಿಸಲಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆ, ಶೋಧ ಕಾರ್ಯವೂ ಮುಂದುವರೆದಿದೆ.

ಶನಿವಾರ ಮಳೆಯಿಂದ ಎಲ್ಲೆಲ್ಲಿ ಏನೇನಾಗಿದೆ ಎಂಬ ವರದಿ ಇಲ್ಲಿದೆ...

ಕೋಟೆನಾಡಿಗೆ ಹರಿದು ಬಂದಿದೆ ನೀರು; ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿ

ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

ರಾಜ್ಯದಲ್ಲಿ ಭೀಕರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವಲೋಕನಕ್ಕೆಂದು ಬೆಳಗಾವಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ್ದರು. ನಗರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ, ಜಿಲ್ಲೆಯಲ್ಲಿ ಆಗಿರುವ ಹಾನಿ ಪ್ರಮಾಣದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬೆಳಗಾವಿ ನಗರದ ದಾಮಣೆ ರಸ್ತೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರೂ ಇದ್ದರು.

ಬೆಳಗಾವಿಯಲ್ಲಿ ಒಟ್ಟು 936 ಮನೆಗಳಿಗೆ ಹಾನಿಯಾಗಿದ್ದು, 19 ಹಳ್ಳಿಗಳು ಜಲಾವೃತವಾಗಿವೆ. 14 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಈ ನಡುವೆ ಅತಿವೃಷ್ಟಿ ತಡೆಯಲು ಪ್ರಾರ್ಥಿಸಿ ಬೆಳಗಾವಿಯ ಸಂಗಮೇಶ್ವರ ದೇವಾಲಯದಲ್ಲಿ ಹೋಮ ಹವನವೂ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಮಳೆಯಿಂದ ಒಟ್ಟು ಆರು ಮಂದಿ ಸಾವು

ಚಿಕ್ಕಮಗಳೂರಿನಲ್ಲಿ ಮಳೆಯಿಂದ ಒಟ್ಟು ಆರು ಮಂದಿ ಸಾವು

ಚಿಕ್ಕಮಗಳೂರಿನಲ್ಲಿ ಮಳೆಗೆ ಮತ್ತೆ ನಾಲ್ವರು ಬಲಿಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 6ಕ್ಕೆ ಏರಿದೆ. ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಯುವಕ ಸಂತೋಷ್ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ ನೀರು ಪಾಲಾಗಿದ್ದಾನೆ. ಕೂದುವಳ್ಳಿ ಸಮೀಪ ಹಳ್ಳ ದಾಟುವ ವೇಳೆ ಚಂದ್ರೇಗೌಡ ಎಂಬ ರೈತ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಮತ್ತಿಘಟ್ಟ ಗ್ರಾಮದಲ್ಲಿ ಗುಡ್ಡ ಕುಸಿದು ಶೇಷಮ್ಮ ಎಂಬ ಮಹಿಳೆ ಹಾಗೂ ಅವರ ಮಗ 35 ವರ್ಷದ ಸತೀಶ್ ಸಾವನ್ನಪ್ಪಿದ್ದು, ಒಂದೇ ದಿನದಲ್ಲಿ ಒಟ್ಟು ನಾಲ್ವರು ಮಳೆಗೆ ಬಲಿಯಾಗಿದ್ದಾರೆ. ಮತ್ತಿಘಟ್ಟದಲ್ಲಿ ನಿನ್ನೆ ಮಳೆಗೆ ಗುಡ್ಡ ಕುಸಿದಿದ್ದು, ಮಣ್ಣಿನಡಿ ಶೇಷಮ್ಮ ಸಿಲುಕಿಕೊಂಡಿದ್ದರು. ಅವರೊಂದಿಗೆ ಅವರ ಮಗನೂ ಸಾವನ್ನಪ್ಪಿದ್ದಾರೆ.

ಕೆಆರ್ ಎಸ್ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು

ಕೆಆರ್ ಎಸ್ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು

ಮಂಡ್ಯದ ಕೆಆರ್ ಎಸ್ ನಲ್ಲಿ ಕೇವಲ ಒಂದೇ ದಿನದ ಅವಧಿಯಲ್ಲಿ ನೀರಿನ ಮಟ್ಟ 10 ಅಡಿ ಏರಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 110 ಅಡಿಗೆ ತಲುಪಿದೆ. ಕೃಷ್ಣರಾಜಸಾಗರ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಈ ಪ್ರಮಾಣವು ಹೆಚ್ಚಾಗುವ ಸಂಭವವಿರುತ್ತದೆ. ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿ ಇರುವ ಮತ್ತು ನದಿಯ ಎರಡೂ ದಂಡೆಗಳಲ್ಲಿ ಇರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಕೃಷ್ಣರಾಜಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೇಮಾವತಿ ಜಲಾಶಯದಿಂದ 79 ಸಾವಿರ ಕ್ಯೂಸೆಕ್ ನೀರು ಹಾಗೂ ಹಾರಂಗಿ ಜಲಾಶಯದಿಂದ 16 ಸಾವಿರಕ್ಕೂ ಹೆಚ್ಚು ನೀರನ್ನು ಬಿಡಲಾಗುತ್ತಿದೆ. ಇದರಿಂದ ಕೆಆರ್ ಎಸ್ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಗರಿಷ್ಠ 124.80 ಅಡಿ ಸಾಮರ್ಥ್ಯದ ಕೆಆರ್ ಎಸ್ ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ತುಂಬುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸುಮಾರು 200ಕ್ಕೂ ಹೆಚ್ಚು ಮನೆಯೊಳಗೆ ಕಪಿಲೆಯ ನೀರು

ಸುಮಾರು 200ಕ್ಕೂ ಹೆಚ್ಚು ಮನೆಯೊಳಗೆ ಕಪಿಲೆಯ ನೀರು

ಕಬಿನಿ ಜಲಾಶಯದಿಂದ ಈಗಾಗಲೇ 1.60 ಲಕ್ಷ ಕ್ಯೂಸೆಕ್ ನಷ್ಟು ನೀರು ನದಿಗೆ ಬಿಟ್ಟ ಪರಿಣಾಮ ನದಿ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ದಾಖಲಾಗಿದೆ. ಇದರಿಂದ ಮೈಸೂರಿನ ನಂಜನಗೂಡು ಅಕ್ಷರಶಃ ಜಲಾವೃತವಾಗಿದೆ. ನಗರದ ಹಳ್ಳದ ಕೇರಿ, ತೋಪಿನ ಬೀದಿ, ಗೌರಿ ಘಟ್ಟದ ಬೀದಿ, ಸರಸ್ವತಿ ಕಾಲೋನಿ, ಚಾಮಲಾಪುರ ಬೀದಿಯ ಮೇದಾರ ಬೀದಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಕಪಿಲೆಯ ನೀರು ನುಗ್ಗಿದ್ದು ಸುಮಾರು 400ಕ್ಕೂ ಹೆಚ್ಚು ಜನರನ್ನು ಪ್ರವಾಹ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಮೈಸೂರು - ನಂಜನಗೂಡು ಹೆದ್ದಾರಿ ಮಲ್ಲನಮೂಲೆ ಮಠ ಮತ್ತು ನಂಜುಂಡೇಶ್ವರ ದೇವಾಲಯದ ಕಪಿಲಾ ಸ್ನಾನಘಟ್ಟ, ಪರಶುರಾಮ ದೇವಾಲಯದ ದಾಸೋಹ ಭವನ, ಶ್ರೀಕಂಠೇಶ್ವರ ದೇವಾಲಯದ ವಾಣಿಜ್ಯ ಸಂಕಿರ್ಣ, ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳು ಜಲಾವೃತವಾಗಿದೆ. ನಂಜನಗೂಡು ದೇವಾಲಯದ ಆವರಣಕ್ಕೆ ನೀರು ನುಗ್ಗಿದೆ. ವಿಷಕಂಠನಿಗೂ ಈಗ ಜಲಕಂಟಕ ಎದುರಾಗಿದೆ.

ರುದ್ರ ರೂಪ ತಾಳಿದ ಜೀವನದಿ ನೇತ್ರಾವತಿ

ರುದ್ರ ರೂಪ ತಾಳಿದ ಜೀವನದಿ ನೇತ್ರಾವತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಇಂದು ಕೂಡ ಭಾರೀ ಮಳೆ ಮುಂದುವರೆದಿದೆ. ಜಿಲ್ಲೆಯ ಜೀವ ನದಿ ಎಂದೇ ಕರೆಯಲಾಗುವ ನೇತ್ರಾವತಿ ಉಗ್ರ ರೂಪತಾಳಿದ್ದಾಳೆ. ಈ ಪರಿಣಾಮ ಬಂಟ್ವಾಳ ಸೇರಿದಂತೆ ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ. ಬಂಟ್ವಾಳದಲ್ಲಿ 100ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ತಡರಾತ್ರಿ ನೇತ್ರಾವತಿ ನೀರಿನ ಮಟ್ಟ 11.6 ಮೀಟರ್ ಮುಟ್ಟಿದ್ದು ನದಿ ತೀರದ 58 ಮನೆಗಳು ಜಲಾವೃತಗೊಂಡಿದ್ದವು. ಬೆಳ್ತಂಗಡಿ ಸಹಿತ ಘಟ್ಟಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗುತ್ತಿರುವ ಪರಿಣಾಮ ಬಂಟ್ವಾಳ ತಾಲೂಕಿನ ಕೆಲ ಪ್ರದೇಶ ಹಾಗೂ ನೆರೆ ನೀರು ನುಗ್ಗಿದೆ.

ಅಜಿಲಮೊಗರು, ನಾವೂರು, ಬಂಟ್ವಾಳ ಸಮೀಪದ ಜಕ್ರಿಬೆಟ್ಟು, ಕಡೇಶಿವಲಾಯ, ಬಡ್ಡಕಟ್ಟೆ, ವಿ.ಪಿ.ರಸ್ತೆ, ಕಂಚಿಕಾರಪೇಟೆ, ಬಸ್ತಿಪಡ್ಪು, ಭಂಡಾರಿಬೆಟ್ಟು, ನಂದರಬೆಟ್ಟು, ಬ್ರಹ್ಮರಕೊಟ್ಲು ಹಾಗೂ ಬರಿಮಾರು-ಬುಡೋಳಿ ಸಂಪರ್ಕ ರಸ್ತೆ ಮೊದಲಾದೆಡೆ ನೀರಿನಿಂದ ಮುಳುಗಡೆಯಾಗಿದೆ.

ಮಳೆಯಿಂದ ಮಡಿಕೇರಿ-ಮೈಸೂರು ಮಾರ್ಗ ಬಂದ್

ಮಳೆಯಿಂದ ಮಡಿಕೇರಿ-ಮೈಸೂರು ಮಾರ್ಗ ಬಂದ್

ಕೊಡಗಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಕುಶಾಲನಗರದ ಕೊಪ್ಪ ಸೇತುವೆ ಮೇಲೆ ಕಾವೇರಿ ನದಿ ನೀರು ತುಂಬಿ ಹರಿಯುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ-ಕುಶಾಲನಗರ-ಮೈಸೂರು ಮಾರ್ಗದಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ನದಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ. ಜಿಲ್ಲೆಯ 14 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಮೈಸೂರು-ಮಡಿಕೇರಿ ಮಾರ್ಗವನ್ನು ಬಂದ್ ಮಾಡಲಾಗಿದೆ.

ಈ ನಡುವೆ ಕಳೆದ ವರ್ಷದಂತೆ ಈ ವರ್ಷವೂ ಕೊಡಗಿನಲ್ಲಿ ನೆರೆ ಬಂದ ಪರಿಣಾಮ ಅಗತ್ಯ ಸಾಮಗ್ರಿಗಳನ್ನು ಪೂರೈಸುವಂತೆ ಕೋರಿ ಕೊಡಗು ಜಿಲ್ಲಾಧಿಕಾರಿ ಮೈಸೂರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.

ಕೊನೆಗೂ ಕೋಟೆ ನಾಡಿಗೆ ಹರಿದು ಬಂತು ನೀರು

ಕೊನೆಗೂ ಕೋಟೆ ನಾಡಿಗೆ ಹರಿದು ಬಂತು ನೀರು

ಮಳೆಯೇ ಕಾಣದಿದ್ದ ಚಿತ್ರದುರ್ಗದಲ್ಲಿ ಇದೀಗ ಮಳೆಯಾಗುತ್ತಿದೆ. ಜೊತೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿಯಾಗಿದೆ. ವೇದಾವತಿ ನದಿಗೆ ನೀರಿನ ಹರಿವು ಹೆಚ್ಚಿದೆ. ಕಡೂರು, ಬೀರೂರು, ಯಗಟಿ ಮೂಲಕ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬಲ್ಲಾಳ ಸಮುದ್ರಕ್ಕೆ ನೀರು ಹರಿದು ಬಂದಿದ್ದು, ನೀರಿನ ಹರಿವು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೊಸದುರ್ಗದ ಕೆಲ್ಲೋಡು ಸೇತುವೆ ಭರ್ತಿ ಆಗಿದೆ. ನಂತರ ಬೇವಿನಹಳ್ಳಿ ಮೂಲಕ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯದತ್ತ ನೀರು ಹರಿಯುತ್ತಿದೆ. ಇದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

English summary
Rain and Relief work is continuing in flood affected districts on saturday also. So here is detail round up story of rain situation in flood affected districts on saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X