Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
ಬೆಂಗಳೂರು, ಏಪ್ರಿಲ್ 25: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ತಾಪಮಾನ ಆರ್ಭಟ ಈ ಬೇಸಿಗೆಯಲ್ಲಿ ವಿಪರೀತವಾಗಿತ್ತು. ಬೆಂಗಳೂರಿನ ಮಟ್ಟಿಗೆ ಈ ಭಾರಿ ಏಪ್ರಿಲ್ ಬಿಸಿಲು ಇನ್ನಿಲ್ಲದಂತೆ ಕಾಡಿತ್ತು. ಅತ್ಯಧಿಕ ಗರಿಷ್ಠ ತಾಪಮಾನ ಕಂಡಿದ್ದ ರಾಜಧಾನಿ ಇದೀಗ ಸಾರ್ವಕಾಲಿಕ ಗರಿಷ್ಠ ತಾಪಮಾನಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.
ಉದ್ಯಾನ ನಗರಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ಕಳದ 12 ವರ್ಷಗಳಲ್ಲಿಯೇ ಕಂಡು ಬರದ ತಾಪಮಾನ ಏಪ್ರಿಲ್ 25ರಂದು ದಾಖಲಾಗಿದೆ. ಇಂದು ಗುರುವಾರ ಬೆಂಗಳೂರಿನಲ್ಲಿ ಬರೋಬ್ಬರಿ 38.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಇದು ಗರಿಷ್ಠ ತಾಪಮಾನಕ್ಕಿಂತ ಸುಮಾರು 4 ಡಿಗ್ರಿ ಸೆಲ್ಸಿಯಸ್ ನಷ್ಟು ಅಧಿಕ ಎಂದು ಹವಾಮಾನ ಇಲಾಖೆ (IMD) ವರದಿ ತಿಳಿಸಿದೆ.

12 ವರ್ಷದಲ್ಲೇ ಭಾರೀ ತಾಪಮಾನ
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಅಂದರೆ ಒಟ್ಟು ಸುಮಾರು 12 ವರ್ಷಗಳಲ್ಲಿ ಬೆಂಗಳೂರಿನಲ್ಲಿಯೇ ಈ ತಾಪಮಾನ ಸಾರ್ವಕಾಲಿಕ ದಾಖಲೆ ಬರೆದಿದೆ. ಇಷ್ಟು ವರ್ಷದಲ್ಲಿ ಸುಮಾರು ನಾಲ್ಕು ಬಾರಿ ಮಾತ್ರ ಏಪ್ರಿಲ್ ತಿಂಗಳಿನಲ್ಲಿ ಗರಿಷ್ಠ 37.8 ಡಿಗ್ರಿ ಸೆಲ್ಸಿಯಸ್ ಬಿಸಿಲು ಕಂಡು ಬಂದಿತ್ತು. ಆಗೆಲ್ಲ ಜನರು ತತ್ತರಿಸಿದ್ದರು.
ಆದರೆ ಈ ವರ್ಷ ಏಪ್ರಿಲ್ 2024ರಲ್ಲಿ ಹಲವು ಭಾರಿ ಈ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಆದರೆ ಇದೇ ಮೊದಲಿಗೆ ಏಪ್ರಿಲ್ 25ರಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (KIAL) ನಲ್ಲಿ ಅತ್ಯಧಿಕ ಗರಿಷ್ಠ 38.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಇದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ವರ್ಷ ಬೇಸಿಗೆಯಲ್ಲಿ ಅತ್ಯಧಿಕ ತಾಪಮಾನ ಕಂಡು ಜನರು ಶಾಖದ ಅಲೆಗೆ ತತ್ತರಿಸಿದ್ದರು. ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಅದು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರಿನ ವಿವಿಧೆಡೆ ತಾಪಮಾನ ಎಷ್ಟು?
ಗುರುವಾರ ಬೆಂಗಳೂರಿನ KIAL ಹೊರತುಪಡಿಸಿದರೆ, ನಗರದಲ್ಲಿ 37.4 ಡಿಸೆ ಮತ್ತು ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 36.6 ಡಿಗ್ರಿ ಸೆಲ್ಸಿಯಸ್ ತಾಪಮಾನ, ಇನ್ನೂ ಕನಿಷ್ಠ ತಾಪಮಾನ 23 ಡಿ.ಸೆ ದಾಖಲಾಗಿದೆ.
2024ರಲ್ಲಿ ಬೆಂಗಳೂರಿನಲ್ಲಿ ಈವರೆಗೆ ಒಂದು ದಿನ ಮಾತ್ರವೇ ಮಳೆ ಕಂಡಿದೆ. ಮಾರ್ಚ್ ತಿಂಗಳಲ್ಲಿ ಶೂನ್ಯ ಮಳೆ ದಾಖಲಾಗಿದೆ. ಇದೆಲ್ಲ ನೋಡಿದರೆ ಬೆಂಗಳೂರಿನ ಭವಿಷ್ಯದ ಬೇಸಿಗೆ ಮತ್ತಷ್ಟು ಕಠೋರವಾಗಿರಲಿದೆ ಎಂದು ವಿಶ್ಲೇಷಿಲಾಗುತ್ತಿದೆ.
ಬೆಂಗಳೂರು ಮಾತ್ರವಲ್ಲದೇ, ಕಲಬುರಗಿ, ರಾಯಚೂರು, ಬೀದರ್, ಹಾವೇರಿ, ಬೆಳಗವಿ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ, ಗದಗ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಈ ಬಾರಿಯ ಶಾಖದ ಅಲೆಗೆ ತತ್ತರಿಸಿವೆ. ನೀರಿನ ಸಮಸ್ಯೆ ಉಂಟಾಗಿದೆ. ಈ ಸ್ಥಿತಿ ರಾಜ್ಯದಲ್ಲಿ ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ಐಎಂಡಿ ಅಂದಾಜಿಸಿದೆ.
ಕಳೆದ ಶನಿವಾರ ಬೆಂಗಳೂರಿಗೆ ತುಂತುರು ಮಳೆ ಆಗಿದ್ದು ಬಿಟ್ಟರೆ, ಈ ವರ್ಷ ಒಮ್ಮೆಯು ಜೋರು ಮಳೆ ಆಗಿಲ್ಲ. ಜನ ಬಿಸಿಲಿನ ದಿನಗಳನ್ನು ಇನ್ನಷ್ಟು ದಿನಗಳ ಕಾಲ ಎದುರಿಸಬೇಕಿದೆ.












Click it and Unblock the Notifications