ಒಲ್ಲದ ಮನಸ್ಸಿನಿಂದ ಕೊನೆಗೂ ಒತ್ತಡಕ್ಕೆ ಮಣಿದ ಪಾಕಿಸ್ತಾನ
Recommended Video

ಇಸ್ಲಮಾಬಾದ್, ಫೆ 13: ಯಾರು ಏನೇ ಹೇಳಿದರು, ತನ್ನ ನಿಲುವಿನಿಂದ ಹಿಂದಕ್ಕೆ ಸರಿಯದೇ ಇದ್ದ ಪಾಕಿಸ್ತಾನ, ಕೊನೆಗೂ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸೇರಿ ಹಲವಾರು ಮುಸ್ಲಿಂ ನಾಯಕರು ಮತ್ತು ಸಂಘಟನೆಗಳನ್ನು 'ಭಯೋತ್ಪಾದಕ'ರ ಪಟ್ಟಿಗೆ ಅಧಿಕೃತವಾಗಿ ಸೇರಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ಪಟ್ಟಿ ಮಾಡಿರುವ ಎಲ್ಲಾ ವ್ಯಕ್ತಿಗಳನ್ನು ಮತ್ತು ಸಂಘಟನೆಗಳನ್ನು, ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಕಡತಕ್ಕೆ ಪಾಕಿಸ್ತಾನದ ರಾಷ್ಟ್ರಪತಿ ಸೋಮವಾರ (ಫೆ 12) ಅಂಕಿತ ಹಾಕಿದ್ದಾರೆ.
ಈ ಪಟ್ಟಿಯಲ್ಲಿ ಪಾಕಿಸ್ತಾನದಲ್ಲಿ ಭಾರೀ ಪ್ರಭಾವಿ ವ್ಯಕ್ತಿಯಾಗಿರುವ ಹಫೀಜ್ ಸಯೀದ್ ಅವರ ಜೆಯುಡಿ (ಜಮಾತ್-ಉದ್-ದವಾ) ಉಗ್ರ ಸಂಘಟನೆಯೂ ಒಂದು. ಈ ಎಲ್ಲಾ ಸಂಘಟನೆಗಳ ಬ್ಯಾಂಕ್ ಅಕೌಂಟ್ ಅನ್ನು ಪಾಕಿಸ್ತಾನ ಸರಕಾರ ಸದ್ಯದಲ್ಲೇ ಮುಟ್ಟುಗೋಲು ಹಾಕಿಕೊಳ್ಳಲಿದೆ.

ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ಈಗಾಗಲೇ ನಿಷೇಧ ಹೇರಿರುವ 72 ವ್ಯಕ್ತಿಗಳನ್ನು, ಪಾಕಿಸ್ತಾನದ ಗೃಹ ಸಚಿವಾಲಯ ಜನವರಿ ತಿಂಗಳಲ್ಲಿ ಉಗ್ರರ ಪಟ್ಟಿಗೆ ಸೇರಿಸಬೇಕೆಂದು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು.
ಕಳೆದ ವರ್ಷ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಗೃಹಬಂಧನದಿಂದ ಬಿಡುಗಡೆಗೊಳಿಸಿತ್ತು. ಪಾಕಿಸ್ತಾನದ ಈ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಗೃಹಬಂಧನದಿಂದ ಹೊರಬಂದ ನಂತರ ಪಟ್ಟಿಯಿಂದ ಕೈಬಿಡುವಂತೆ ಹಫೀಜ್ ಪರ ವಕೀಲರು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದರು.
ಎಫ್ಎಟಿಎಫ್ (Financial Action Task Force) ಮಂಡಳಿಯ ನಿರ್ಣಾಯಕ ಸಭೆ ಮುಂದಿನ ವಾರ ನಡೆಯಲಿದ್ದು, ಅದಕ್ಕೆ ಮೊದಲೇ ಪಾಕಿಸ್ತಾನ ಸರಕಾರ, ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಕಡತಕ್ಕೆ ಸಹಿಹಾಕುವ ಮೂಲಕ ಸದ್ಯಕ್ಕೆ ಬಚಾವ್ ಆಗಿದೆ.











Click it and Unblock the Notifications