ಲಾಲೂನನ್ನು ಜೈಲಿಗಟ್ಟಿದ ದಿಟ್ಟ ಅಧಿಕಾರಿ ಅಮಿತ್ ಖರೆ!

Posted By:
Subscribe to Oneindia Kannada

1985 ಬ್ಯಾಚ್ ನ ಈ ಐಎಎಸ್ ಅಧಿಕಾರಿ ಭಾರೀ ನಾಚಿಕೆ ಸ್ವಭಾವದವರು, ಯಾರೊಂದಿಗೂ ಅಷ್ಟಾಗಿ ಬೆರೆಯುವವರೂ ಅಲ್ಲ. ಪಕ್ಕದಲ್ಲಿಯೇ ಹಾದು ಹೋದರೂ ಗಮನಕ್ಕೆ ಬಾರದಿರುವಷ್ಟರ ಮಟ್ಟಿಗೆ ರಿಸರ್ವ್ಡ್ ವ್ಯಕ್ತಿ. ಯಾವೊಂದು ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕುವವರೂ ಅಲ್ಲ.

ಆದರೆ, ಕೆಲಸದಲ್ಲಿ ಎಷ್ಟು ನಿಷ್ಣಾತರೆಂದರೆ, ಟೇಬಲ್ ಮೇಲೆ ನೂರಾರು ಫೈಲುಗಳಿದ್ದರೂ ನಿಮಿಷಗಳಲ್ಲಿ ಎಲ್ಲವನ್ನೂ ನೋಡಿ, ಅದರಲ್ಲಿನ ಭಾನಗಡಿ, ಅಡ್ಡವಾಸನೆಯನ್ನು ಕ್ಷಣಾರ್ಧದಲ್ಲಿ ಗ್ರಹಿಸುವಂಥ ಚಾಣಾಕ್ಷರು. ಅವರ ಈ ಚಾಕಚಕ್ಯತೆಯೇ 900 ಕೋಟಿ ರುಪಾಯಿ ಮೇವು ಹಗರಣವನ್ನು ಪತ್ತೆ ಹಚ್ಚಲು ನೆರವಾಯಿತು.

ತೀರ್ಪು ನೀಡಬೇಕಿರುವ ಜಡ್ಜ್‌ಗೆ ಲಾಲೂ ಕರೆ ಮಾಡಿದ್ದೇಕೆ?

ಅವರೇ, ಪ್ರಸ್ತುತ ಜಾರ್ಖಂಡ್ ರಾಜ್ಯದ ಹಣಕಾಸು ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರುವ 56 ವರ್ಷದ ಖಡಕ್ ಅಧಿಕಾರಿ ಅಮಿತ್ ಖರೆ. ಇದೀಗ ಬಿಹಾರದ ಲಾಲೂ ಪ್ರಸಾದ್ ಯಾದವ್ ಅವರು ಬಹುಕೋಟಿ ಮೇವು ಹಗರಣದಲ್ಲಿ ಸಿಲುಕಿದ್ದಕ್ಕೆ ಇವರೇ ಕಾರಣ.

ಲಾಲೂನ ಜೈಲಿಗೆ ಕರೆದೊಯ್ದ 900 ಕೋಟಿ ಮೇವು ಹಗರಣದ ಟೈಮ್ ಲೈನ್

ಲಾಲೂ ಪ್ರಸಾದ್ ಯಾದವ್ ಅವರಂಥ ರಾಜಕಾರಣಿಗಳನ್ನು ಎದುರು ಹಾಕಿಕೊಂಡರೆ ನೆಮ್ಮದಿಯಿಂದ ಇರಲು ಸಾಧ್ಯವೆ? ಇದರಿಂದ ಖರೆ ಅವರು ಕಂಗೆಡಲಿಲ್ಲ. ಹಲವಾರು ಬಾರಿ ವರ್ಗಾವಣೆ ಕಂಡಿದ್ದಾರೆ, ಬೆದರಿಕೆ ಕರೆಗಳನ್ನು ಎದುರಿಸಿದ್ದಾರೆ. ಇದೆಲ್ಲಕ್ಕಿಂತ ಅವರು ಈ ಹಗರಣವನ್ನು ಪತ್ತೆ ಹಚ್ಚಿದ್ದೇ ಒಂದು ರೋಚಕ ಕಥಾನಕ.

ಭಾರೀ ಮೊತ್ತದ ಹಣ ಗುಳುಂ ಮಾಡಿದ ಮಾಹಿತಿ

ಭಾರೀ ಮೊತ್ತದ ಹಣ ಗುಳುಂ ಮಾಡಿದ ಮಾಹಿತಿ

1996ರ ಜನವರಿ 22ರಂದು ಕೆಲಸದಲ್ಲಿ ಮುಳುಗಿದ್ದ ಜಿಲ್ಲಾಧಿಕಾರಿ ಖರೆ ಅವರಿಗೆ ಪಶು ಸಂಗೋಪನಾ ಇಲಾಖೆಯಲ್ಲಿ ಭಾರೀ ಮೊತ್ತದ ಹಣ ಹಿಂತೆಗೆದುಕೊಂಡಿರುವ ಬಗ್ಗೆ ಮತ್ತೊಬ್ಬ ಐಎಎಸ್ ವಿಎಸ್ ದುಬೆ ಅವರಿಂದ ಮಾಹಿತಿ ಬಂದಿತ್ತು. ಆ ಸಮಯದಲ್ಲಿ ಬಿಹಾರ ಸರಕಾರ ಭಾರೀ ಹಣಕಾಸು ಸಂಕಷ್ಟವನ್ನು ಎದುರಿಸುತ್ತಿತ್ತು. ಇಂಥ ಸಮಯದಲ್ಲಿ, 1995ರ ನವೆಂಬರ್ ಮತ್ತು ಡಿಸೆಂಬರ್ ನಡುವಿನಲ್ಲಿ 10.12 ಕೋಟಿ ರುಪಾಯಿ ಮತ್ತು 9 ಕೋಟಿ ರುಪಾಯಿ ಹಣವನ್ನು ಹಿಂತೆಗೆದುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು.

ಬಡವರಿಗಾಗಿ ದನ, ರಾಜಕಾರಣಿಗಾಗಿ ಧನ

ಬಡವರಿಗಾಗಿ ದನ, ರಾಜಕಾರಣಿಗಾಗಿ ಧನ

ಸರಿಯಾಗಿ ನಾಲ್ಕು ದಿನಗಳ ನಂತರ, ಜನವರಿ 26ರಂದು ಬಿಹಾರದ ಚಾಯಿಬಸಾ ಖಜಾಂಚಿಯಿಂದ ಈ ಬಗ್ಗೆ ವರದಿ ಬಂದಿತ್ತು. ಅತ್ಯಂತ ಸೂಕ್ಷ್ಮಗ್ರಾಹಿಯಾಗಿದ್ದ ಅಮಿತ್ ಖರೆ ಅವರಿಗೆ, ಸರಕಾರಿ ಹಣಕಾಸಿನ ಮುಗ್ಗಟ್ಟಿನಲ್ಲಿರುವಾಗ ಇಷ್ಟುದೊಡ್ಡ ಮೊತ್ತ ಹಿಂತೆಗೆದುಕೊಂಡಿರುವುದು ಯಾಕೋ ಸರಿಬರಲಿಲ್ಲ. ಆ ಸಮಯದಲ್ಲಿ ಬಡವರಿಗಾಗಿ ದನಗಳನ್ನು ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ, ಈ ಮೊತ್ತವನ್ನು ಹಿಂತೆಗೆದುಕೊಂಡಿದ್ದು ಮೇವಿಗಾಗಿ! ಬಡವರಿಗಾಗಿ ದನ, ರಾಜಕಾರಣಿಗಾಗಿ ಧನ!

ಖದೀಮರ ಅವ್ಯವಹಾರದ ಹೊಲಸು ವಾಸನೆ

ಖದೀಮರ ಅವ್ಯವಹಾರದ ಹೊಲಸು ವಾಸನೆ

ಮೇವಿನ ಖರೀದಿಯಲ್ಲಾದ ಅಡ್ಡವಾಸನೆಗಿಂತ ಖದೀಮರ ಅವ್ಯವಹಾರದ ಹೊಲಸು ವಾಸನೆ ಅಮಿತ್ ಖರೆ ಅವರ ಮೂಗಿಗೆ ಬಡಿದಿತ್ತು. ಹಣಕಾಸು ವಿಭಾಗದಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ, ಗರಿಷ್ಠ 10 ಲಕ್ಷ ರುಪಾಯಿಗಳನ್ನು ಮಾತ್ರ ಹಿಂತೆಗೆದುಕೊಳ್ಳಲು ಅವಕಾಶವಿತ್ತು. ಆದರೆ, ಇಲ್ಲಿ ನಡೆದಿದ್ದು, 10 ಲಕ್ಷವಲ್ಲ 10 ಕೋಟಿಯ ಅವ್ಯವಹಾರ. ಅದೂ ಒಂದಲ್ಲ ಎರಡೆರಡು!

ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬೋಗಸ್ ರಿಸೀಟು

ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬೋಗಸ್ ರಿಸೀಟು

ಈ ಬಗ್ಗೆ ಹಣಕಾಸು ವಿಭಾಗದ ಅಧಿಕಾರಿಗಳನ್ನು ವಿಚಾರಿಸಲು ಕರೆದಾಗ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಲ್ಲಿ ಅವರಿಗೆ ಸಿಕ್ಕಿದ್ದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬೋಗಸ್ ರಿಸೀಟುಗಳು, ಸಿಕ್ಕಾಪಟ್ಟೆ ಹಣ, ಎಲ್ಲೆಂದರಲ್ಲಿ ಬಿದ್ದಿದ್ದ ದಾಖಲೆಗಳು. ಅಕ್ಷರಶಃ ಹಣಕಾಸು ವಿಭಾಗ ತಿಪ್ಪೆಯಂತಾಗಿತ್ತು. ಖರೆ ಅವರು ತಡಮಾಡದೆ, ಇಡೀ ಇಲಾಖೆಗೆ ಬೀಗ ಜಡಿದು, ಹಿರಿಯ ಅಧಿಕಾರಿಗೆ ಹಣಕಾಸು ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.

ಪ್ರಾಣಾಪಾಯವನ್ನು ಆಹ್ವಾನಿಸಿದಂತೆ

ಪ್ರಾಣಾಪಾಯವನ್ನು ಆಹ್ವಾನಿಸಿದಂತೆ

ಇಪ್ಪತ್ತೆರಡು ವರ್ಷಗಳ ಹಿಂದೆ ಬಿಹಾರ ಇಂದಿನಂತಿರಲಿಲ್ಲ. ಅಕ್ಷರಶಃ ಗೂಂಡಾರಾಜ್ಯವಾಗಿತ್ತು. ರಾಜಕಾರಣಿಗಳನ್ನು, ಅವರ ಗೂಂಡಾ ಬೆಂಬಲಿಗರನ್ನು ಎದುರು ಹಾಕಿಕೊಳ್ಳುವುದೆಂದರೆ, ಪ್ರಾಣಾಪಾಯವನ್ನು ಆಹ್ವಾನಿಸಿದಂತೆ. ಅವರು ಲಿಖಿತವಾಗಿ ವರದಿಯನ್ನು ನೀಡಿದ್ದಲ್ಲದೆ, ಮೂರು ಕ್ರಿಮಿನಲ್ ಕೇಸುಗಳನ್ನು ತಪ್ಪಿಸತ್ಥರ ವಿರುದ್ಧ ಜಡಿದರು. ಇಂದು ಅವರ ಪ್ರಾಮಾಣಿಕತೆ, ಧೈರ್ಯ ಗೆದ್ದಿದೆ. ಲಾಲೂ ಪ್ರಸಾದ್ ಯಾದವ್ ಅವರನ್ನು ಕೋರ್ಟು ಜೈಲಿಗಟ್ಟಿದೆ.

ಲಾಲೂ ಪ್ರಸಾದ್ ಯಾದವ್ ಮತ್ತು ಜಗನ್ನಾಥ್ ಮಿಶ್ರಾ

ಲಾಲೂ ಪ್ರಸಾದ್ ಯಾದವ್ ಮತ್ತು ಜಗನ್ನಾಥ್ ಮಿಶ್ರಾ

ಈ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ಜಗನ್ನಾಥ್ ಮಿಶ್ರಾ ಅವರು ಸೇರಿದಂತೆ 55ಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿದ್ದರು. ಇವರಲ್ಲಿ ಹನ್ನೊಂದು ಜನರು ಈ ಇಪ್ಪತ್ತೆರಡು ವರ್ಷಗಳಲ್ಲಿ ಸತ್ತೇ ಹೋಗಿದ್ದಾರೆ. ಜಗನ್ನಾಥ್ ಮಿಶ್ರಾ ಮತ್ತಿತರ 6 ಜನರು ನಿರ್ದೋಷಿ ಎಂದು ಸಾಬೀತಾಗಿದ್ದರೆ, ಲಾಲೂ ಪ್ರಸಾದ್ ಯಾದವ್ ಅವರು ಜೈಲಿನಲ್ಲಿ ಮೇವು ಮೆಲ್ಲಲಿದ್ದಾರೆ.

ಕುರ್ಚಿಯನ್ನೂ ಬಿಡಬೇಕಾಯಿತು ಲಾಲೂ

ಕುರ್ಚಿಯನ್ನೂ ಬಿಡಬೇಕಾಯಿತು ಲಾಲೂ

ಈ ಹಗರಣ 1996ರಲ್ಲಿ ಬೆಳಕಿಗೆ ಬಂದರೂ, ಮುಂದಿನ ಎರಡು ದಶಕಗಳ ಕಾಲವೂ ಮೇವು, ಔಷಧಿ, ಪಶುಸಂಗೋಪನಾ ಸಾಧನ ಖರೀದಿಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದೇ ಇದೆ. ಇದರಲ್ಲಿ ರಾಜಕಾರಣಿಗಳು ಮಾತ್ರವಲ್ಲ ಹಲವಾರು ಇಲಾಖೆಗಳ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ಒಟ್ಟು 53 ಕೇಸುಗಳು ದಾಖಲಾಗಿದ್ದವು. ಈ ಹಗರಣದಿಂದಾಗಿ ಲಾಲೂ ಅವರು ಮುಖ್ಯಮಂತ್ರಿ ಕುರ್ಚಿಯನ್ನೂ ಬಿಡಬೇಕಾಯಿತು, ಜೈಲಿನ ಊಟವನ್ನೂ ಮಾಡಬೇಕಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amit Khare, the upright IAS officer who unearthed multicrore (Rs 900 cr) fodder scam in Bihar. It is an interesting story how Amit Khare brought the culprits, including former cm of Bihar Lalu Prasad Yadav, to book.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ