ಸಮಾಜವಾದಿ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನಿತೀಶ್, ಲಾಲೂ: ಅಮಿತ್ ಶಾ
ಪಟ್ನಾ, ಅಕ್ಟೋಬರ್ 11: ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಶಿಷ್ಯರು ಸಮಾಜವಾದಿ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಹಾರದ ಸರನ್ ಜಿಲ್ಲೆಯಲ್ಲಿ ಜಯಪ್ರಕಾಶ ನಾರಾಯಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿರುವ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಜಯಪ್ರಕಾಶ ನಾರಾಯಣ ಅವರ ಶಿಷ್ಯರೆಂದು ಹೇಳಿಕೊಳ್ಳುವವರು, ಅವರ ಸಮಾಜವಾದಿ ಸಿದ್ಧಾಂತವನ್ನು ಮರೆತು ಬಿಟ್ಟಿದ್ದಾರೆ ಎಂದು ಬಿಹಾರದ ಮಹಾಘಟಬಂಧನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ನಿತೀಶ್ ಹಾಗೂ ಲಾಲೂ ಅವರಿಗೆ ಅಧಿಕಾರದ ಹಸಿವಿದೆ. ಅವರು ಅಧಿಕಾರಕ್ಕಾಗಿ ಜೆಪಿ ಸಿದ್ಧಾಂತಗಳನ್ನು ತೊರೆದಿದ್ದಾರೆ. ಆ ಮೂಲಕ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದಾರೆ. ಈಗ ಅವರಿಗೆ ಜೆಪಿ ಪ್ರತಿಪಾದಿಸಿದ ಸಿದ್ಧಾಂತಗಳೊಂದಿಗೆ ಯಾವುದೇ ಸಂಬಂಧವಿಲ್ಲ' ಎಂದು ತಿಳಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಸಮಾಜದ ದುರ್ಬಲ ವರ್ಗಗಳ ಏಳ್ಗೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ವರ್ಗಗಳ ಪರವಾಗಿ ಜೆಪಿ ನಿಂತಿದ್ದರು. ಬಡವರ ಬಗ್ಗೆ ಕಾಳಜಿ ಹೊಂದಿದ್ದರು' ಎಂದು ಶಾ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಯಪ್ರಕಾಶ ನಾರಾಯಣ ಅವರ 120 ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಲೋಕ ನಾಯಕರೆಂದೇ ಪ್ರಸಿದ್ಧರಾಗಿರುವ ಜಯಪ್ರಕಾಶ ನಾರಾಯಣ ಅವರು ಬಿಹಾರದ ಸರಾನ್‌ನಲ್ಲಿ 1902ರ ಅಕ್ಟೋಬರ್ 11ರಂದು ಜನಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದ ನೇತೃತ್ವವನ್ನು ಜೆಪಿ ವಹಿಸಿದ್ದರು.
ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಅನೇಕ ನಾಯಕರು ಜೆಪಿ ಚಳುವಳಿಯಲ್ಲಿದ್ದ ಮುಂಚೂಣಿ ನಾಯಕರು.












Click it and Unblock the Notifications