ನೀವು ಭವಿಷ್ಯದ ಪೀಳಿಗೆಗೆ ಮಾದರಿ: ಲಾಲುಗೆ ಕಿಡ್ನಿ ನೀಡಿದ ಮಗಳಿಗೆ ಬಿಜೆಪಿ ನಾಯಕರಿಂದ ಪ್ರಶಂಸೆ
ನವದೆಹಲಿ, ಡಿಸೆಂಬರ್ 06: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಸೋಮವಾರ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದಾರೆ. ಅವರಿಗೆ ಮೂತ್ರಪಿಂಡ ದಾನ ಮಾಡಿದ್ದು ಅವರಪುತ್ರಿ ರೋಹಿಣಿ ಆಚಾರ್ಯ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಲಾಲು ಯಾದವ್ ಮತ್ತು ರೋಹಿಣಿ ಆಚಾರ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯಾದವ್ ಅವರ ಕುಟುಂಬ ತಿಳಿಸಿದೆ.
40 ವರ್ಷ ವಯಸ್ಸಿನ ರೋಹಿಣಿ ಆಚಾರ್ಯ ಅವರು ತಮ್ಮ ಕಿಡ್ನಿಯನ್ನು 74 ವರ್ಷದ ತಮ್ಮ ತಂದೆಗೆ ದಾನ ಮಾಡಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರೋಹಿಣಿ ಆಚಾರ್ಯ ಆದರ್ಶ ಮಗಳು ಎಂದ ಬಿಜೆಪಿ ನಾಯಕ
ಲಾಲು ಯಾದವ್ ಅವರ ಟೀಕಾಕಾರರಲ್ಲಿ ಒಬ್ಬರಾದ ಫೈರ್‌ಬ್ರಾಂಡ್ ಬಿಜೆಪಿ ನಾಯಕ, ಸಂಸದ ಗಿರಿರಾಜ್ ಸಿಂಗ್ ಅವರು ರೋಹಿಣಿ ಅವರನ್ನು ಹಾಡಿ ಹೊಗಳಿದ್ದಾರೆ. ನಿಮ್ಮ ನಡತೆ ಹಾಗೂ ತ್ಯಾಗಗಳ ಮೂಲಕ ನೀವು ಎಲ್ಲರಿಗೂ ಆದರ್ಶವಾಗಿದ್ದೀರಿ ಎಂದು ಫೋಟೊದೊಂದಿಗೆ ಟ್ವೀಟ್ ಮಾಡಿದ್ದಾರೆ.
'ರೋಹಿಣಿ ಆಚಾರ್ಯ ಆದರ್ಶ ಮಗಳು. ನಾನು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ. ಭವಿಷ್ಯದ ಪೀಳಿಗೆಗೆ ನೀವು ಮಾದರಿಯಾಗಿದ್ದೀರಿ' ಎಂದು ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ನನಗೆ ಮಗಳಿಲ್ಲ... ಎಂದ ಬಿಜೆಪಿ ಸಂಸದ
ರೋಹಿಣಿ ಆಚಾರ್ಯ ಅವರ ತ್ಯಾಗವನ್ನು ಸ್ಮರಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
'ನನಗೆ ಮಗಳಿಲ್ಲ. ಇಂದು, ರೋಹಿಣಿ ಆಚಾರ್ಯರನ್ನು ನೋಡಿದ ನಂತರ, ನನಗೆ ಮಗಳನ್ನು ನೀಡದಿದ್ದಕ್ಕಾಗಿ ನಾನು ದೇವರೊಂದಿಗೆ ಜಗಳ ಮಾಡಲು ಬಯಸುತ್ತೇನೆ' ಎಂದು ದುಬೆ ಟ್ವೀಟ್ ಮಾಡಿದ್ದಾರೆ.
|
ಫೋಟೊ, ವಿಡಿಯೊ ಹಂಚಿಕೊಂಡ ಲಾಲು ಕುಟುಂಬ
ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಮಗಳು ಮಿಸಾ ಭಾರತಿ ನಿನ್ನೆ ಸಂಜೆ ಶಸ್ತ್ರಚಿಕಿತ್ಸೆಯ ನಂತರ ಹಲವಾರು ಫೋಟೊಗಳು ಮತ್ತು ವಿಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಿಸಾ ಮತ್ತು ರೋಹಿಣಿ ಅವರ ಕಿರಿಯ ಸಹೋದರರು ಕೂಡ ಆಸ್ಪತ್ರೆಯಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
'ಪಾಪಾ ಅವರ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ, ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಯಿತು. ದಾನಿ ಅಕ್ಕ ರೋಹಿಣಿ ಆಚಾರ್ಯ ಮತ್ತು ಅಪ್ಪ ಲಾಲು ಪ್ರಸಾದ್ ಯಾದವ್ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು' ಎಂದು ಅವರು ಬರೆದುಕೊಂಡಿದ್ದಾರೆ.

ಸಿಂಗಾಪುರದಲ್ಲೇ ಉಳಿದುಕೊಂಡ ತೇಜಸ್ವಿ ಯಾದವ್, ಮಿಸಾ
ತೇಜಸ್ವಿ ಯಾದವ್ ಮತ್ತು ಮಿಸಾ ಭಾರತಿ ಅವರು ತಮ್ಮ ತಂದೆ ಹಾಗೂ ಸಹೋದರಿಯೊಂದಿಗೆ ಸಿಂಗಾಪುರದ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದಾರೆ. ಕೆಲ ಸಮಯದಿಂದ ಅಸ್ವಸ್ಥರಾಗಿದ್ದ ಲಾಲು ಯಾದವ್ ಅವರಿಗೆ ಈ ವರ್ಷದ ಆರಂಭದಲ್ಲಿ ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಲಾಗಿತ್ತು.
ಶಸ್ತ್ರಚಿಕಿತ್ಸೆಗೂ ಮುಂಚೆ ತಮ್ಮ ತಂದೆಯೊಂದಿಗಿರುವ ಭಾವಚಿತ್ರವನ್ನು ಲಾಲು ಪುತ್ರಿ ರೋಹಿಣಿ ಹಂಚಿಕೊಂಡಿದ್ದಾರೆ.,
'ರಾಕ್ ಅಂಡ್ ರೋಲ್ ಆಡಲು ಸಿದ್ಧವಾಗಿದ್ದೇನೆ. ನನಗೆ ಶುಭವಾಗಲಿ' ಎಂದು ಟ್ವೀಟ್ ಮಾಡಿದ್ದಾರೆ.

ಬಿಹಾರದಾದ್ಯಂತ ಪೂಜೆ, ಹವನ, ಪ್ರಾರ್ಥನೆ
ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ಪ್ರಭಾವಿ ನಾಯಕರಲ್ಲಿ ಒಬ್ಬರು. ಹಿಂದೆ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು. ಲಾಲು ಅವರು ಸಿಂಗಾಪುರದಲ್ಲಿ ಕಿಡ್ನಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಂಡಿದ್ದಾರೆ. ಅವರು ಬೇಗ ಗುಣಮುಖರಾಗಿ ಹೊರಬರಲಿ ಎಂಬುದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರ ಆಶಯವಾಗಿದೆ. ಆ ಹಿನ್ನೆಲೆಯಲ್ಲಿ ಬಿಹಾರದಾದ್ಯಂತ ದೇವಾಲಯಗಳಲ್ಲಿ ಪೂಜೆ, ಹವನ ಹಾಗೂ ಪ್ರಾರ್ಥನೆಗಳನ್ನು ಬೆಂಬಲಿಗರು ಸಲ್ಲಿಸಿದ್ದಾರೆ. ಆರ್‌ಜೆಡಿ ನಾಯಕನಿಗೆ ಹಲವಾರು ರಾಜಕೀಯ ಮುಖಂಡರು ಹಾರೈಸಿದ್ದಾರೆ.












Click it and Unblock the Notifications