ಭಾರತಕ್ಕೆ ಆಘಾತ ನೀಡಲು ಅಮೆರಿಕದಿಂದ ಹೊಸ ಸುಂಕ ಪ್ರಸ್ತಾಪ, ಯಾವೆಲ್ಲ ವಲಯಗಳಿಗೆ ಪೆಟ್ಟು?
ಭಾರತದ ರಫ್ತು ವಲಯಕ್ಕೆ ಅಮೆರಿಕದಿಂದ ಹೊಸದೊಂದು ದೊಡ್ಡ ಸವಾಲು ಎದುರಾಗಿದೆ. ಬಲವಂತದ ಕಾರ್ಮಿಕ ಪದ್ಧತಿ ನಿಯಮಾವಳಿಗಳಿಗೆ ಸಂಬಂಧಿಸಿದ ಕಳವಳಗಳ ಹಿನ್ನೆಲೆಯಲ್ಲಿ, ಭಾರತದಿಂದ ರಫ್ತಾಗುವ ಪ್ರಮುಖ ಉತ್ಪನ್ನಗಳ ಮೇಲೆ ಶೇ 12.5ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಲು ಅಮೆರಿಕ ಮುಂದಾಗಿದೆ. ಜೂನ್ 2ರಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ಈ ಹೊಸ ಪ್ರಸ್ತಾಪವನ್ನು ಪ್ರಕಟಿಸಿದ್ದು, ಬಲವಂತದ ಕಾರ್ಮಿಕರ ಮೂಲಕ ತಯಾರಾಗುವ ಸರಕುಗಳನ್ನು ಪರಿಣಾಮಕಾರಿಯಾಗಿ ನಿಷೇಧಿಸಲು ವಿಫಲವಾಗಿರುವ ಭಾರತ ಸೇರಿದಂತೆ ಜಗತ್ತಿನ ಒಟ್ಟು 60 ದೇಶಗಳನ್ನು ಇದು ಗುರಿಯಾಗಿಸಿಕೊಂಡಿದೆ.
1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ಈ ಹೆಚ್ಚುವರಿ ಸುಂಕವನ್ನು ವಿಧಿಸಲು ಚಿಂತನೆ ನಡೆಸಲಾಗುತ್ತಿದ್ದು, ಇದು ಜಾರಿಯಾದರೆ ಭಾರತದ ಪ್ರಮುಖ ರಫ್ತು ವಲಯಗಳಾದ ಜವಳಿ, ಸಿದ್ಧ ಉಡುಪುಗಳು, ರತ್ನ ಮತ್ತು ಆಭರಣ, ಚರ್ಮದ ಉತ್ಪನ್ನಗಳು, ಸಮುದ್ರ ಆಹಾರ (ಸೀಫುಡ್) ಮತ್ತು ಆಟೋಮೊಬೈಲ್ ಬಿಡಿಭಾಗಗಳ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕ ಈ ಕಠಿಣ ನಿರ್ಧಾರ ಕೈಗೊಂಡಿದ್ದೇಕೆ?
ಅಮೆರಿಕದ ಯುಎಸ್‌ಟಿಆರ್ ಸಂಸ್ಥೆಯು ನಡೆಸಿದ ತನಿಖೆಯ ಪ್ರಕಾರ, ಭಾರತ ಸೇರಿದಂತೆ 60 ದೇಶಗಳು ಬಲವಂತದ ಕಾರ್ಮಿಕ ಪದ್ಧತಿಯಿಂದ ತಯಾರಾಗುವ ಸರಕುಗಳ ಆಮದನ್ನು ತಡೆಯಲು ಸೂಕ್ತ ಕಾನೂನು ಜಾರಿಗೊಳಿಸಿಲ್ಲ. ಇದು ಅಮೆರಿಕದ ಸ್ಥಳೀಯ ಕಾರ್ಮಿಕರು ಮತ್ತು ಉದ್ಯಮಗಳಿಗೆ ಅಸಮಾನ ಮಾರುಕಟ್ಟೆ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಅಮೆರಿಕದ ರಾಯಭಾರಿ ಜೇಮಿಸನ್ ಗ್ರೀರ್ ತಿಳಿಸಿದ್ದಾರೆ. ಹೊಸ ನಿಯಮದ ಪ್ರಕಾರ, ಈಗಾಗಲೇ ಇಂತಹ ಕಾರ್ಮಿಕ ಪದ್ಧತಿಯ ವಿರುದ್ಧ ಕಟ್ಟುನಿಟ್ಟಿನ ನಿಯಮ ಹೊಂದಿರುವ ದೇಶಗಳಿಗೆ ಶೇ. 10 ರಷ್ಟು ಹೆಚ್ಚುವರಿ ಸುಂಕ ವಿಧಿಸಿದರೆ, ಸೂಕ್ತ ನಿಯಮಗಳಿಲ್ಲದ ಭಾರತದಂತಹ ದೇಶಗಳಿಗೆ ಶೇ.12.5 ರಷ್ಟು ಗರಿಷ್ಠ ಹೆಚ್ಚುವರಿ ಸುಂಕದ ಬಿಸಿ ತಟ್ಟಲಿದೆ.
ಈ ಪ್ರಸ್ತಾಪವು ಸದ್ಯಕ್ಕೆ ಅಂತಿಮವಾಗಿಲ್ಲ. ಸಾರ್ವಜನಿಕರು ಮತ್ತು ಉದ್ಯಮಿಗಳು ಜೂನ್ 22ರವರೆಗೆ ಯುಎಸ್‌ಟಿಆರ್ ವಿಚಾರಣೆಯಲ್ಲಿ ಭಾಗವಹಿಸಲು ವಿನಂತಿಸಬಹುದು ಮತ್ತು ಜುಲೈ 6ರವರೆಗೆ ತಮ್ಮ ಲಿಖಿತ ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶವಿದೆ. ತದನಂತರ ಜುಲೈ 7ರಂದು ನಡೆಯುವ ಸಾರ್ವಜನಿಕ ವಿಚಾರಣೆಯ ಬಳಿಕವಷ್ಟೇ ಅಂತಿಮ ನಿರ್ಧಾರ ಹೊರಬೀಳಲಿದೆ.
ಅಮೆರಿಕದಲ್ಲಿ ದುಬಾರಿಯಾಗಲಿರುವ ಭಾರತದ ಪ್ರಮುಖ ಉತ್ಪನ್ನಗಳು
ಹೊಸ ಸುಂಕ ನೀತಿ ಜಾರಿಗೆ ಬಂದರೆ, ಪ್ರಸ್ತುತ ಇರುವ ಸುಂಕದ ಮೇಲೆಯೇ ಈ ಹೆಚ್ಚುವರಿ ದರ ಅನ್ವಯವಾಗುವುದರಿಂದ ಅಮೆರಿಕದ ಆಮದುದಾರರಿಗೆ ಭಾರತೀಯ ಸರಕುಗಳು ದುಬಾರಿಯಾಗಲಿವೆ. ಇದರಿಂದ ಈ ಕೆಳಗಿನ ಕ್ಷೇತ್ರಗಳಿಗೆ ಭಾರಿ ನಷ್ಟವಾಗುವ ಭೀತಿ ಇದೆ.
ಜವಳಿ ಮತ್ತು ಸಿದ್ಧ ಉಡುಪುಗಳು: ಭಾರತದ ಗಾರ್ಮೆಂಟ್ಸ್ ಉದ್ಯಮಕ್ಕೆ ಇದು ದೊಡ್ಡ ಹೊಡೆತ ನೀಡಲಿದೆ. ರೆಡಿಮೇಡ್ ಬಟ್ಟೆಗಳು, ಕುರ್ತಾಗಳು, ನೂಲು ಮತ್ತು ಹೋಮ್ ಟೆಕ್ಸ್‌ಟೈಲ್ಸ್ ಉತ್ಪನ್ನಗಳ ಬೆಲೆ ಅಮೆರಿಕದಲ್ಲಿ ಹೆಚ್ಚಾಗಲಿದೆ.
ರತ್ನ ಮತ್ತು ಆಭರಣಗಳು: ಭಾರತೀಯ ಒಡವೆಗಳಿಗೆ ಅಮೆರಿಕ ದೊಡ್ಡ ಮಾರುಕಟ್ಟೆಯಾಗಿದ್ದು, ಹೊಸ ಸುಂಕದಿಂದಾಗಿ ಅಲ್ಲಿ ಭಾರತದ ಆಭರಣಗಳ ಬೆಲೆ ಗಗನಕ್ಕೇರಲಿದೆ.
ಚರ್ಮದ ಉತ್ಪನ್ನಗಳು ಮತ್ತು ಸೀಫುಡ್: ಚರ್ಮದ ಪಾದರಕ್ಷೆಗಳು ಹಾಗೂ ಈಗಾಗಲೇ ಹಲವು ನಿರ್ಬಂಧ ಎದುರಿಸುತ್ತಿರುವ ಭಾರತದ ಪ್ರಮುಖ ರಫ್ತು ಉತ್ಪನ್ನವಾದ 'ಸೀಗಡಿ' ಸೇರಿದಂತೆ ಸಮುದ್ರ ಆಹಾರದ ರಫ್ತಿಗೆ ಮತ್ತೊಂದು ಹಿನ್ನಡೆಯಾಗಲಿದೆ.
ಆಟೋಮೊಬೈಲ್: ಭಾರತದಲ್ಲಿ ತಯಾರಾಗುವ ವಾಹನಗಳು ಮತ್ತು ಅವುಗಳ ಬಿಡಿಭಾಗಗಳೂ ಸಹ ಅಮೆರಿಕದ ಗ್ರಾಹಕರಿಗೆ ದುಬಾರಿಯಾಗಲಿವೆ.
ಭಾರತಕ್ಕಿರುವ ವಿನಾಯಿತಿಗಳು
ಈ ಕಠಿಣ ಪ್ರಸ್ತಾಪದ ನಡುವೆಯೂ ಭಾರತದ ಜವಳಿ ಉದ್ಯಮಕ್ಕೆ ಒಂದು ಸಣ್ಣ ರಿಯಾಯಿತಿಯ ಭರವಸೆ ಸಿಕ್ಕಿದೆ. ನಿರ್ದಿಷ್ಟ ಪ್ರಮಾಣದ ಉಡುಪು ಮತ್ತು ಜವಳಿ ಆಮದಿಗೆ ಕಡಿಮೆ ಸುಂಕ ವಿಧಿಸುವ 'ಟೆಕ್ಸ್‌ಟೈಲ್ ಮೆಕ್ಯಾನಿಸಂ' ಅನ್ನು ಅಮೆರಿಕ ಪ್ರಸ್ತಾಪಿಸಿದೆ. ಆದರೆ ಇದರ ಪ್ರಮಾಣ ಎಷ್ಟು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಇದರೊಂದಿಗೆ, ಭಾರತದ ಅತ್ಯಂತ ಪ್ರಮುಖ ರಫ್ತು ವಲಯಗಳಾದ ಔಷಧ ವಲಯ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳನ್ನು ಸದ್ಯಕ್ಕೆ ಈ ಹೆಚ್ಚುವರಿ ಸುಂಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಜುಲೈ 6ರ ಸಾರ್ವಜನಿಕ ಸಮಾಲೋಚನಾ ಅವಧಿಯ ನಂತರವೂ ಈ ವಿನಾಯಿತಿಗಳು ಮುಂದುವರಿದರೆ ಭಾರತದ ಐಟಿ ಮತ್ತು ಫಾರ್ಮಾ ವಲಯ ನಿರಾಳವಾಗಬಹುದು. ಆದರೂ, ಅಂತಿಮ ತೀರ್ಪು ಬರುವವರೆಗೂ ಭಾರತೀಯ ರಫ್ತುದಾರರು ಜಾಗರೂಕರಾಗಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.













Click it and Unblock the Notifications