A,B,C,D ಕಲಿಸುವ ಮುನ್ನ ನಿಮ್ಮ ಮಗುವಿನಲ್ಲಿ ಈ ನಾಲ್ಕು ಕೌಶಲ್ಯಗಳಿವೆಯೇ ಚೆಕ್‌ ಮಾಡಿ

ಶಾಲೆ ಮೆಟ್ಟಿಲು ಹತ್ತುವ ಮುನ್ನವೇ ಮನೆಯಲ್ಲಿಯೇ ಮಗುವಿಗೆ ಮೊದಲ ಪಾಠ ಆರಂಭವಾಗಿ ಮನೆಯೇ ಮೊದಲ ಶಾಲೆ, ಅಮ್ಮನೇ ಮೊದಲು ಗುರು ಆಗಿ ಬಿಡುತ್ತಾರೆ. ಈಗಂತೂ ಮಗುವಿನ ಬಾಯಿಯಿಂದ ಕೆಲವೇ ಕೆಲವು ಶಬ್ದಗಳು ಹೊರ ಬಿದ್ದರೂ ಸಾಕು ತಕ್ಷಣವೇ A,B,C,D, ರೈಮ್ಸ್‌, ಬಣ್ಣಗಳ ಹೆಸರು, ಪ್ರಾಣಿ ಪಕ್ಷಿಗಳ ಹೆಸರು ಹೀಗೆ ಸಾಲು ಸಾಲು ಪಾಠ ಶುರುಮಾಡಿ ಕೊಳ್ಳುತ್ತಾರೆ ಪೋಷಕರು. ಮಗು ಅದನ್ನು ಅನುಕರಣೆ ಮಾಡುವಾಗ ಮುದ್ದು ಮುದ್ದಾಗಿ ಕೇಳಿಸುತ್ತದೆ.

ಆದರೆ ಎಲ್ಲಾ ಮಕ್ಕಳು ಹೀಗೆ ಕಲಿಸಿದ ತಕ್ಷಣ ಕಲಿತು ಬಿಡಬೇಕು ಅಂತೇನಿಲ್ಲ. ಕೆಲವು ಮಕ್ಕಳು ಏನೇ ಮಾಡಿದರೂ ನಾಲಗೆ ಹೊರಳಿಸುವುದೇ ಇಲ್ಲ. ಹಾಗಿದ್ದರೆ ಇದಕ್ಕೊಂದು ಕಾರಣ ಇರಬೇಕಲ್ಲ. ಖಂಡಿತಾ ಇದೆ. ನಿಮ್ಮ ಮಗುವಿಗೆ ನೀವು ಟೀಚರ್‌ ಆಗಿ A,B,C,D ಕಲಿಸುವ ಮುನ್ನ ಅದಕ್ಕೆ ಬೇಕಾದ ಕೌಶಲ್ಯ ಆ ಕಂದನಲ್ಲಿ ಇದೆಯೇ ಎನ್ನುವುದನ್ನು ಅರಿತುಕೊಳ್ಳಿ. ಆಗ ಮಾತ್ರ ನಿಮ್ಮ ಮತ್ತು ಮಗುವಿಗೆ ಕಲಿಸುವ ಕೆಲಸ ಸುಲಭವಾಗುವುದು. ಯಾವುದೇ ಒತ್ತಡ ಇಲ್ಲದೇ ಮಗು ಎಲ್ಲವನ್ನೂ ಸುಲಭವಾಗಿ ಕಲಿತುಕೊಳ್ಳಬಹುದು.

Teaching

ಮಗುವಿಗೆ ಅಕ್ಷರಮಾಲೆ ಮತ್ತು ಸಂಖ್ಯೆಗಳನ್ನು ಕಲಿಸುವುದು ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ. ಅದಕ್ಕೆ ಕೆಲವು ತಯಾರಿ ಬೇಕಾಗುತ್ತದೆ. ಮಕ್ಕಳ ಮನೋವೈದ್ಯರ ಪ್ರಕಾರ, ಮಕ್ಕಳು ಮೊದಲು ಕೆಲವು ಮೂಲ ಜೀವನ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಕಲಿಕೆ ಹೆಚ್ಚು ಸುಲಭವಾಗುತ್ತದೆ.

ನಿಮ್ಮ ಮಗುವಿನಲ್ಲೂ ಈ ಕೌಶಲ್ಯ ಇದೆಯೇ ನೋಡಿಕೊಳ್ಳಿ

ಮೊದಲ ಕೌಶಲ್ಯ ಭಾಷೆ

ಮಕ್ಕಳು ಓದಲು, ಬರೆಯಲು ಕಲಿಯುವ ಮೊದಲು, ತಮ್ಮ ಭಾವನೆಯನ್ನು ಅಂದರೆ ತನಗೇನಾಗುತ್ತಿದೆ, ಏನು ಬೇಕು, ಏನು ಬೇಡ ಇತ್ಯಾದಿಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕಾಗುತ್ತದೆ. ಹಾಗಾಗಿಯೇ ಮಗುವಿನಲ್ಲಿರಬೇಕಾದ ಮೊದಲ ಕೌಶಲ್ಯ ಭಾಷೆ. ಮಗುವು ಕನಿಷ್ಠ ಕೆಲವು ವಾಕ್ಯಗಳನ್ನಾದರೂ ಮಾತನಾಡುವಂತಿರಬೇಕು. ನನಗೆ ಹೊಟ್ಟೆ ನೋವಾಗುತ್ತಿದೆ, ಹಸಿವಾಗುತ್ತಿದೆ, ನೀರು ಬೇಕು, ನನ್ನ ಆಟದ ಸಾಮಾನನ್ನು ಅವನು ಅಥವಾ ಅವಳು ತೆಗೆದುಕೊಂಡರು... ಹೀಗೆ ಕನಿಷ್ಠ ಕೆಲವು ಮಾತುಗಳನ್ನಾದರೂ ಹೇಳಬಲ್ಲ ಶಕ್ತಿ ಹೊಂದಿರಬೇಕು. ಬಲವಾದ ಸಂವಹನ ಕೌಶಲ್ಯಗಳು ಮಕ್ಕಳು ಕಲಿಕೆಯ ಪರಿಸರದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತದೆ.

ಸ್ಮರಣಶಕ್ತಿ

ಮಕ್ಕಳನ್ನು ಶೈಕ್ಷಣಿಕವಾಗಿ ಸಿದ್ಧಪಡಿಸುವ ಮುನ್ನ ತಿಳಿದುಕೊಳ್ಳಬೇಕಾದ ಪ್ರಮುಖ ಕೌಶಲ್ಯವೆಂದರೆ ಸ್ಮರಣಶಕ್ತಿ. ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಇಲ್ಲ ಎಂದಾದರೆ ಎಷ್ಟು ಕಲಿಸಿದರೂ ಪ್ರಯೋಜನವಿಲ್ಲ. ಹಾಗಾಗಿ ಮಗುವಿಗೆ ಉತ್ತಮ ಸ್ಮರಣಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳಬೇಕು. ಮಗುವಿನ ಸ್ಮರಣ ಶಕ್ತಿ ಹೇಗಿದೆ ಎನ್ನುವುದನ್ನು ತಿಳಿಯಲು ಮಕ್ಕಳಿಗೆ ಹಾಡುಗಳು, ಪ್ರಾಸಗಳನ್ನು ಕಲಿಸಿ, ಅವುಗಳನ್ನು ಪಠಿಸಲು ಹೇಳಬೇಕು. ಪದಗಳು, ಶಬ್ದಗಳು, ಕಥೆಗಳನ್ನು ನೆನಪಿಟ್ಟುಕೊಂಡರೆ ಭವಿಷ್ಯದ ಅನೇಕ ಶೈಕ್ಷಣಿಕ ಕಾರ್ಯಗಳಿಗೆ ಇದೇ ಅಡಿಪಾಯ.

ಮೂರನೆಯ ಕೌಶಲ್ಯವೆಂದರೆ ಅನುಕರಣೆ

ಮಕ್ಕಳು ತಮ್ಮ ಸುತ್ತಲಿನ ಜನರನ್ನು ಗಮನಿಸಿ ಅನುಕರಿಸುವ ಮೂಲಕ ಬಹಳಷ್ಟು ಕಲಿಯುತ್ತಾರೆ. ಮಗು ತಂದೆ ತಾಯಿಯನ್ನು ಹೆಚ್ಚು ಅನುಕರಿಸುತ್ತದೆ. ನೀವು ಹೇಳಿ ಕೊಟ್ಟಿರುವುದನ್ನು ನಿಮ್ಮಂತೆಯೇ ಅನುಕರಿಸಿದರೆ ಅಲ್ಲಿಗೆ ನೀವು ಗೆದ್ದಿರಿ ಎಂದರ್ಥ. ಉದಾಹರಣೆಗೆ ನಾಯಿ ಬೌ,ಬೌ ಎಂದು ಹೇಳುತ್ತದೆ. ಬೆಕ್ಕು ಮಿಯಾವ್‌, ಮಿಯಾವ್‌ ಎನ್ನುತ್ತದೆ, ಬಾತುಕೋಳಿ ಕ್ವಾಕ್, ಕ್ವಾಕ್ ಎಂದು ಹೇಳುತ್ತದೆ ಎನ್ನುವುದನ್ನು ಮೊದಲು ಹೇಳಿಕೊಡಬೇಕು. ನಂತರ ಮಗುವಿನ ಬಳಿ ನಾಯಿ ಹೇಗೆ ಕೂಗುತ್ತದೆ, ಬೆಕ್ಕು ಹೇಗೆ ಸದ್ದು ಮಾಡುತ್ತದೆ ಎಂದು ಕೇಳಿದಾಗ ಸರಿಯಾಗಿ ಅನುಕರಿಸಿದರೆ ಮಗುವಿನಲ್ಲಿ ಅನುಕರಣೆಯ ಕೌಶಲ್ಯ ಇದೆ ಎಂದಾಯಿತು. ಇದು ಕ್ರಮೇಣ ಮಕ್ಕಳು ಸಾಮಾಜಿಕ ಸಂವಹನ ಮತ್ತು ಭಾಷಾ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಾಲ್ಕನೆಯದು ಉತ್ತಮ ಮೋಟಾರ್ ಕೌಶಲ್ಯ

ಅನೇಕ ಪೋಷಕರು ಮಕ್ಕಳಿಗೆ ಅಕ್ಷರಗಳು ಮತ್ತು ಸಂಖ್ಯೆಗಳನ್ನು ಹೇಗೆ ಗುರುತಿಸುವುದು ಎನ್ನುವ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತಾರೆ. ಇದನ್ನು ನೋಡಿ ಕಲಿಯುವುದು ಮಾತ್ರವಲ್ಲ, ಬರೆಯುವುದು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಅವುಗಳನ್ನು ಬರೆಯಲು ಸಂಪೂರ್ಣವಾಗಿ ವಿಭಿನ್ನ ಕೌಶಲ್ಯಗಳು ಬೇಕಾಗುತ್ತವೆ. ಇದಕ್ಕೆ ಮಗುವಿಗೆ ಉತ್ತಮ ಕೈ ಹಿಡಿತ ಮತ್ತು ಉತ್ತಮ ಮೋಟಾರ್ ಕೌಶಲ್ಯಗಳು ಇರಬೇಕು. ಇದನ್ನು ಸಾಧಿಸಲು ಪೋಷಕರು ಮಕ್ಕಳಿಗೆ ಕ್ರೆಯೋನ್‌ಗಳನ್ನು ನೀಡಿ ವೃತ್ತಗಳನ್ನು ಬರೆಯಲು ಹೇಳಬೇಕು. ಅಥವಾ ನೀವು ಹೇಳಿದಂತೆ ಗೆರೆ ಹಾಕಲು ಸೂಚಿಸಬೇಕು. ಮಗು ನೀವು ಹೇಳಿದಂತೆ ಮಾಡಿದರೆ ನಿಧಾನವಾಗಿ ಬರವಣಿಗೆಯನ್ನು ಆರಂಭಿಸಬಹುದು.

ಪರಿಣಾಮಕಾರಿ ಕಲಿಕೆಗೆ ಸರಳ ಅಡಿಪಾಯ

ಮನೋವೈದ್ಯರು ನೀಡಿರುವ ಈ ಸರಳ ಆದರೆ ಪರಿಣಾಮಕಾರಿ ಸಲಹೆಗಳು ಮಕ್ಕಳಲ್ಲಿ ಅಭಿವೃದ್ಧಿ ಕೌಶಲ್ಯಗಳ ಅಡಿಪಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮಗುವಿನ ಕಲಿಕೆ ಆರಂಭವಾಗುವ ಮುನ್ನ ಈ ನಾಲ್ಕು ಕೌಶಲ್ಯಗಳೂ ಮಗುವಿನಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮಗುವಿಗೆ ಒಮ್ಮೆ ಉತ್ತಮ ಜೀವನ ಕೌಶಲ್ಯಗಳು ದೊರೆತರೆ, ಶಿಕ್ಷಣದ ದಾರಿ ಸುಲಭವಾಗುವುದು. ಮಗುವಿನ ಶೈಕ್ಷಣಿಕ ಭವಿಷ್ಯವು ಅವರು ಎಷ್ಟು ಬೇಗನೆ ಅಕ್ಷರಮಾಲೆ ಅಥವಾ ಸಂಖ್ಯೆಗಳನ್ನು ಬಾಯಿ ಪಾಠ ಮಾಡುತ್ತಾರೆ ಎನ್ನುವುದರ ಮೇಲೆ ನಿರ್ಧಾರೆ ಆಗುವುದಿಲ್ಲ. ಬದಲಾಗಿ ಎಷ್ಟು ಪರಿಣಾಮಕಾರಿಯಾಗಿ ಮಕ್ಕಳು ಅದನ್ನು ಕಲಿಯುತ್ತಾರೆ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+