Trisha: ಟ್ರೋಲಿಗರಿಗೆ ನಾಯಿ ಫೋಟೋ ಹಾಕಿ ನನ್ನ ಜೀವನದಲ್ಲಿ ಬೇರೆ ಯಾರಿಗೂ ಮೂಗು ತೂರಿಸೋ ಸ್ವಾತಂತ್ರ್ಯವಿಲ್ಲ ಎಂದ ತ್ರಿಶಾ
ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಇತ್ತೀಚಿನ ದಿನಗಳಲ್ಲಿ ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಬದುಕಿನ ಕಾರಣಕ್ಕೆ ಭಾರಿ ಸುದ್ದಿಯಲ್ಲಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ ಅವರೊಂದಿಗೆ ತ್ರಿಶಾ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ. ಈ ಕುರಿತು ಇದುವರೆಗೆ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ನೆಟ್ಟಿಗರು ಮಾತ್ರ ತ್ರಿಶಾ ಅವರನ್ನು ಸತತವಾಗಿ ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ಎಲ್ಲ ಟ್ರೋಲ್‌ಗಳಿಗೆ ಮತ್ತು ತಮ್ಮ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸುವವರಿಗೆ ನಟಿ ತ್ರಿಶಾ ಸೋಶಿಯಲ್ ಮೀಡಿಯಾದಲ್ಲಿ ಒಂದೇ ಸಾಲಿನ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ.
ನನ್ನ ವಿಚಾರದಲ್ಲಿ ಮೂಗು ತೂರಿಸಲು ಇವನಿಗೆ ಮಾತ್ರ ಅನುಮತಿ
ನಟಿ ತ್ರಿಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೇ ತಿಂಗಳ ಕೆಲವು ಸುಂದರ ಕ್ಷಣಗಳ (May Dump) ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಮುದ್ದಿನ ನಾಯಿಯ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, "ನನ್ನ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಲು ನಾನು ಅನುಮತಿಸುವ ಏಕೈಕ ಮೂಗು ಎಂದರೆ ಅದು ಇದು ಮಾತ್ರ" (The only nose I allow in my business) ಎನ್ನುವ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಮೂಲಕ ಅನಗತ್ಯವಾಗಿ ತಮ್ಮ ಖಾಸಗಿ ಜೀವನದ ಬಗ್ಗೆ ಗಾಳಿಸುದ್ದಿ ಹಬ್ಬಿಸುವವರ ಬಾಯಿ ಮುಚ್ಚಿಸಲು ತ್ರಿಶಾ ಈ ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ವದಂತಿ ಹರಡಲು ಕಾರಣಗಳೇನು?
ತ್ರಿಶಾ ಮತ್ತು ವಿಜಯ್ ನಡುವಿನ ಸಂಬಂಧದ ವದಂತಿಗಳಿಗೆ ಇತ್ತೀಚಿನ ಕೆಲವು ಘಟನೆಗಳು ಮತ್ತಷ್ಟು ತುಪ್ಪ ಸುರಿದಿದ್ದವು. ಕಳೆದ ಮಾರ್ಚ್‌ನಲ್ಲಿ ಚೆನ್ನೈನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರೂ ಒಂದೇ ಬಣ್ಣದ ಉಡುಪು ಧರಿಸಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ, ವಿಜಯ್ ಅವರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ತ್ರಿಶಾ ಭಾವುಕರಾಗಿ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದ್ದರು. ನಟ ಅಜಿತ್ ಕುಮಾರ್ ಅವರ ತಾಯಿಯ ನಿಧನದ ಸಂದರ್ಭದಲ್ಲೂ ವಿಜಯ್ ಜೊತೆ ತ್ರಿಶಾ ಸಾಂತ್ವನ ಹೇಳಲು ಒಟ್ಟಿಗೆ ಭೇಟಿ ನೀಡಿದ್ದರು. ಈ ಸರಣಿ ಘಟನೆಗಳು ಇವರಿಬ್ಬರ ನಡುವಿನ ವದಂತಿಗೆ ಪುಷ್ಟಿ ನೀಡಿದ್ದವು.
ಕರುಪ್ಪು ಸಿನಿಮಾದಲ್ಲಿ ತ್ರಿಶಾ ಮೋಡಿ
ವೈಯಕ್ತಿಕ ಟ್ರೋಲ್‌ಗಳ ನಡುವೆಯೂ ತ್ರಿಶಾ ಅವರ ಸಿನಿಮಾ ವೃತ್ತಿ ಬದುಕು ಸದ್ಯ ಅತ್ಯುನ್ನತ ಹಂತದಲ್ಲಿದೆ. ಇತ್ತೀಚೆಗೆ ಸೂರ್ಯ ಅವರೊಂದಿಗೆ ನಟಿಸಿದ, ಆರ್.ಜೆ. ಬಾಲಾಜಿ ನಿರ್ದೇಶನದ 'ಕರುಪ್ಪು' (Karuppu) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಇದು 2026ರ ಅತ್ಯಧಿಕ ಕಲೆಕ್ಷನ್ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿದ್ದು, ಭಾರತದಲ್ಲಿ ₹180 ಕೋಟಿ ಹಾಗೂ ವಿಶ್ವಾದ್ಯಂತ ₹300 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ ಮೆಗಾಸ್ಟಾರ್ ಚಿರಂಜೀವಿ ನಟನೆಯ, ಮಲ್ಲಿಡಿ ವಸಿಷ್ಠ ನಿರ್ದೇಶನದ 'ವಿಶ್ವಂಭರ' (Vishwambhara) ಚಿತ್ರದಲ್ಲೂ ತ್ರಿಶಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ.













Click it and Unblock the Notifications