ದೆಹಲಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ: 21 ಮಂದಿ ಸಜೀವ ದಹನ, ಪ್ರಧಾನಿ ಮೋದಿ ಪರಿಹಾರ ಘೋಷಣೆ
ನವದೆಹಲಿಯ ದಕ್ಷಿಣ ಭಾಗದಲ್ಲಿರುವ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದ ಹೋಟೆಲ್ ಒಂದರಲ್ಲಿ ಇಂದು ಬೆಳಿಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘೋರ ದುರಂತದಲ್ಲಿ ಕನಿಷ್ಠ 21 ಮಂದಿ ಪ್ರಾಣ ಕಳೆದುಕೊಂಡಿದ್ದು, 35ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ಬಹುತೇಕರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಬೆಳಗ್ಗೆ 8:50ಕ್ಕೆ ಕಾಣಿಸಿಕೊಂಡ ಬೆಂಕಿ
ಪೊಲೀಸ್ ಮತ್ತು ಅಗ್ನಿಶಾಮಕ ದಳದ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 8:50ರ ಸುಮಾರಿಗೆ ಐದು ಅಂತಸ್ತಿನ ಕಟ್ಟಡದ ಬೇಸ್‌ಮೆಂಟ್‌ನಲ್ಲಿರುವ ಮಿಕಾಸಾ ಇನ್ ಹಾಗೂ ಫ್ಲರಿಶ್ ಸ್ಟೇ ಹೋಟೆಲ್‌ಗಳಿರುವ ಕಟ್ಟಡದ ರೆಸ್ಟೋರೆಂಟ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‌ನ ಶೆಫ್ ಕೇಶರ್ ಸಿಂಗ್ ಎಂಬುವವರು ಬೆಳಿಗ್ಗೆ ಎಲೆಕ್ಟ್ರಿಕ್ ಸ್ಟವ್ ಆನ್ ಮಾಡಲು ಮುಂದಾದಾಗ ದಿಢೀರನೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಕಟ್ಟಡವನ್ನು ಆವರಿಸಿದೆ. ಈ ವೇಳೆ ಹೋಟೆಲ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಅತಿಥಿಗಳಿದ್ದರು. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಬಹುತೇಕರು ಗಾಢ ನಿದ್ರೆಯಲ್ಲಿದ್ದ ಕಾರಣ ಯಾರಿಗೂ ತಕ್ಷಣವೇ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಪ್ರಾಣ ಉಳಿಸಿಕೊಳ್ಳಲು ಕೆಲವರು ಹೋಟೆಲ್‌ನ ಕಿಟಕಿಗಳಿಂದ ಕೆಳಗೆ ಜಿಗಿದಿದ್ದಾರೆ. ಈ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ಸಿಕ್ಕ ತಕ್ಷಣ ಎರಡು ವಾಟರ್ ಇಂಜಿನ್‌ಗಳು, ಎರಡು ವಾಟರ್ ಬೌಸರ್‌ಗಳು, ತ್ವರಿತ ಸ್ಪಂದನಾ ವಾಹನ ಸೇರಿದಂತೆ ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಕಷ್ಟಪಟ್ಟು ಕಾರ್ಯಾಚರಣೆ ನಡೆಸಿ 35ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, ದೆಹಲಿಯ ಮೂರು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಕ್ರಮ ಕಟ್ಟಡ ನಿರ್ಮಾಣವೇ ದುರಂತಕ್ಕೆ ಕಾರಣ?
ಈ ಕಟ್ಟಡವು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. ಈ ಐದು ಅಂತಸ್ತಿನ ಕಟ್ಟಡದಲ್ಲಿ ಕೇವಲ ಆರು ಕೊಠಡಿಗಳಿಗೆ ಮಾತ್ರ ಅನುಮತಿ ಇತ್ತು. ಆದರೆ, ನಿಯಮ ಮೀರಿ ಇಲ್ಲಿ ಅಕ್ರಮವಾಗಿ ಸುಮಾರು 25 ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಜೊತೆಗೆ ತುರ್ತು ನಿರ್ಗಮನದ ಯಾವುದೇ ವ್ಯವಸ್ಥೆ ಇರಲಿಲ್ಲ. ಬೆಂಕಿ ಹೊತ್ತಿಕೊಂಡಾಗ ಮೆಟ್ಟಿಲುಗಳ ಮೂಲಕವೇ ಓಡಬೇಕಾದ ಅನಿವಾರ್ಯತೆ ಇತ್ತು. ಇದೇ ಕಾರಣಕ್ಕೆ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Deeply saddened by the tragic fire incident in Malviya Nagar, Delhi. The loss of 21 lives, including foreign nationals who had come seeking medical treatment, is heartbreaking.
— Shashwat shukla (@shashwat2295) June 3, 2026
This tragedy raises serious questions about fire safety compliance, illegal hotel operations, and… pic.twitter.com/WCNYW4pErM
ಪ್ರಧಾನಿ ಮೋದಿ, ಸಿಎಂ ಸಂತಾಪ ಹಾಗೂ ಪರಿಹಾರ
ಈ ಭೀಕರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ದುರಂತದ ನಿಖರ ಕಾರಣ ಮತ್ತು ಹೋಟೆಲ್ ಮಾಲೀಕರ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ತನಿಖೆ ನಡೆಯುತ್ತಿದೆ.












Click it and Unblock the Notifications