250 ವರ್ಷಗಳ ಅಮೆರಿಕ ಸ್ವಾತಂತ್ರ್ಯ; ಅಮೆರಿಕ ರಾಯಭಾರಿ ಸರ್ಜಿಯೊ ಗೋರ್ ಅವರಿಂದ ಚೆನ್ನೈಯಲ್ಲಿ ಸಂಭ್ರಮಾಚರಣೆ
ಚೆನ್ನೈ: ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೊ ಗೋರ್ ಅವರು ಜೂನ್ 22 ರಂದು ಚೆನ್ನೈಯಲ್ಲಿನ ಅಮೆರಿಕದ ಕಾನ್ಸುಲೇಟ್ ಜನರಲ್ ಆಯೋಜಿಸಿದ್ದ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷದ ಸಂಭ್ರಮವನ್ನು ಆಚರಿಸಿದರು.
ರಾಯಭಾರಿ ಗೋರ್ ಅವರು, "ಚೆನ್ನೈನಲ್ಲಿರುವ ನಮ್ಮ ಕಾನ್ಸುಲೇಟ್, ದೆಹಲಿಯಲ್ಲಿರುವ ನಮ್ಮ ರಾಯಭಾರ ಕಚೇರಿ ಹಾಗೂ ಅಮೆರಿಕ ಸರ್ಕಾರದ ಪರವಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಅಮೆರಿಕನ್ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಹಾಗೂ ದೇಶದಾದ್ಯಂತ ಇರುವ ಎಲ್ಲರೊಂದಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ನಮ್ಮ ರಾಯಭಾರ ಕಚೇರಿ ಸಹಕಾರಕ್ಕಾಗಿ ಸದಾ ತೆರೆದಿದೆ. ಈ ಸಂಬಂಧವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಾವು ನಿಮ್ಮೊಂದಿಗೆ ಕೈಜೋಡಿಸಲು ಬಯಸುತ್ತೇವೆ," ಎಂದು ಹೇಳಿದರು.

ಯು.ಎಸ್. ಕಾನ್ಸಲ್ ಜನರಲ್ ಚೆನ್ನೈ, ಮರಿಯಾನಾ ಎಲ್. ನೈಶುಲರ್ ಮತ್ತು ತಮಿಳುನಾಡು ಲೋಕೋಪಯೋಗಿ ಮತ್ತು ಕ್ರೀಡಾಭಿವೃದ್ಧಿ ಸಚಿವ ಆಧವ್ ಅರ್ಜುನ ಅಮೆರಿಕ-ಭಾರತ ನಡುವಿನ ಆಳವಾದ ಸಂಬಂಧ ಹಾಗೂ ವ್ಯೂಹಾತ್ಮಕ ತಂತ್ರಜ್ಞಾನ, ಎಂಜಿನಿಯರಿಂಗ್, ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿಉಭಯ ದೇಶಗಳ ನಡುವೆ ಮತ್ತಷ್ಟು ಬಲವಾದ ಸಹಕಾರದ ಸಾಧ್ಯತೆಗಳ ಬಗ್ಗೆ ಗಮನ ಸೆಳೆದರು.
ಎ. ಆರ್. ರೆಹಮಾನ್ ಫೌಂಡೇಷನ್ನಿನ ಸನ್ಶೈನ್ ಆರ್ಕೆಸ್ಟ್ರಾದ ʼಬ್ರಾಸ್ ಎನ್ಸೆಂಬಲ್ʼ ನ ಸುಂದರ ಸಂಗೀತ ಕಾರ್ಯಕ್ರಮವು ಸಂಜೆಯ ಮೆರಗು ಹೆಚ್ಚಿಸಿತು. ಅಲೀಶಾ ಮ್ಯಾಥ್ಯೂ ಥಾಯಿಲ್ ಅಮೆರಿಕ ಮತ್ತು ಭಾರತದ ರಾಷ್ಟ್ರಗೀತೆಗಳನ್ನು ಹಾಡಿದರು.
ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಾಹ್ಯಾಕಾಶ ಪ್ರಾಯೋಗಿಕ ಅಥವಾ ಆನುಭವಿಕ ಕಲಿಕಾ ಕೇಂದ್ರವನ್ನು (ಸ್ಪೇಸ್ ಎಕ್ಸ್ಪೀರಿಯೆನ್ಷಿಯಲ್ ಲರ್ನಿಂಗ್ ಸೆಂಟರ್) ಉದ್ಘಾಟಿಸಲಾಯಿತು. ಚೆನ್ನೈನ ಅಮೆರಿಕನ್ ಸೆಂಟರ್ನಲ್ಲಿ ಇದು ಶಾಶ್ವತವಾಗಿ ಇರಲಿದ್ದು, ಮುಂದಿನ ತಿಂಗಳಿನಿಂದ ಸಾರ್ವಜನಿಕ ಭೇಟಿಗೆ ತೆರೆದುಕೊಳ್ಳಲಿದೆ.
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಚೆನ್ನೈನ ಐತಿಹಾಸಿಕ ರಿಪನ್ ಕಟ್ಟಡವನ್ನು ಅಮೆರಿಕದ ಧ್ವಜದ ಬಣ್ಣಗಳಾದ ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.












Click it and Unblock the Notifications