ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಲಾಲು ವಿರುದ್ಧ ಬಿಜೆಪಿ ಗರಂ!
ಇಂಡಿಯಾ ಒಕ್ಕೂಟದ ಮಹತ್ವದ ಸಭೆ ನಾಳೆ ಮುಂಬೈನಲ್ಲಿ ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸಲು ಮುಖಂಡರು ಮುಂಬೈ ವಿಮಾನ ಹತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಗ್ಗೆ ಲಾಲು ಪ್ರಸಾದ್ ಯಾದವ್ ಆಡಿದ ಮಾತು ಬೆಂಕಿ ಹೊತ್ತಿಸಿಬಿಟ್ಟಿದೆ. ಲಾಲು ವಿರುದ್ಧ ಬಿಜೆಪಿ ಗರಂ ಆಗಿದ್ದು, ತಿರುಗೇಟು ಕೊಟ್ಟಿದೆ.
ಅಂದಹಾಗೆ ಲಾಲು ಪ್ರಸಾದ್ ಯಾದವ್, ಮುಂಬೈನ ಪ್ರತಿಪಕ್ಷಗಳ ಸಭೆಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ್ದರು. ಬಿಹಾರ ರಾಜಧಾನಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದ್ದ ಲಾಲು ಪ್ರಸಾದ್ ಯಾದವ್, 'ನಾವು ಈಗಾಗಲೇ ನರೇಂದ್ರ ಮೋದಿಯವರ ಕುತ್ತಿಗೆ ಹಿಡಿದಿದ್ದೇವೆ, ಈಗ ನಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತೇವೆ' ಎಂದಿದ್ದರು. ಈ ಹೇಳಿಕೆ ಭಾರಿ ವಿವಾದ ಎಬ್ಬಿಸಿತ್ತು. ಅಲ್ಲದೆ ಒಬ್ಬ ಹಿರಿಯ ರಾಜಕಾರಣಿ ಪ್ರಧಾನಿ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂಬ ಮಾತು ಕೇಳಿಬಂದಿತ್ತು. ಈಗ ಬಿಜೆಪಿ ಕೂಡ ಬಿಹಾರದ ಮಾಜಿ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದೆ.

ಲಾಲು ವಿರುದ್ಧ ತೀವ್ರ ವಾಗ್ದಾಳಿ
ಅಷ್ಟಕ್ಕೂ ಲಾಲು ಯಾದವ್ ಹೇಳಿಕೆಗೆ ಉತ್ತರ ನೀಡಿರುವ ಬಿಜೆಪಿ ವಕ್ತಾರ ನಿಖಿಲ್ ಆನಂದ್, ಅನುಭವಿ ರಾಜಕಾರಣಿ ಈ ರೀತಿ ಹೇಳಿಕೆ ನೀಡಿದ್ದು ತಪ್ಪು ಎಂದಿದ್ದಾರೆ. ಅಲ್ಲದೆ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಇಂತಹ ಹೇಳಿಕೆಗಳ ಮೂಲಕ ತಮ್ಮ ಬೆಂಬಲಿಗ ಪಡೆಗೆ ಯಾವ ರೀತಿ ಸಂದೇಶ ಕೊಡುತ್ತಿದ್ದಾರೆ. ಅನುಭವಿ ರಾಜಕಾರಣಿ ಒಬ್ಬರು ಯಾವುದೇ ನಾಯಕನ ವಿರುದ್ಧ ಅಸಭ್ಯ ಭಾಷೆ ಬಳಸಬಾರದು ಎಂದು ಸಲಹೆ ಕೂಡ ನೀಡಿದ್ದಾರೆ. ಹೀಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಲಾಲು ಪ್ರಸಾದ್ ಯಾದವ್ ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಪುತ್ರನನ್ನು ಸಿಎಂ ಮಾಡಲು ಅವರು ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.
ಒಟ್ನಲ್ಲಿ ಲಾಲು ಯಾದವ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅದರಲ್ಲೂ ನಾಳೆ ಮಹತ್ವದ ಮುಂಬೈ ಸಭೆಯಲ್ಲಿ ಸೇರಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ. ಹೀಗಿದ್ದಾಗ ಲಾಲು ಯಾದವ್ ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕಿಡಿ ಹೊತ್ತಿಸಿದ್ದು, ಬಿಜೆಪಿ ಕೂಡ ಲಾಲು ಯಾದವ್ ಹೇಳಿಕೆಗೆ ಆಕ್ರೋಶ ಹೊರಹಾಕಿದೆ. ಅಲ್ಲದೆ ಅನುಭವದ ಆಧಾರದಲ್ಲಿ ಇಂತಹ ವರ್ತನೆ ಸರಿಯೇ? ಎಂಬ ಪ್ರಶ್ನೆ ಹಾಕುವ ಮೂಲಕ ಬಿಹಾರ ಮಾಜಿ ಸಿಎಂಗೆ ಖಡಕ್ ಪ್ರಶ್ನೆ ಕೇಳಿದೆ. ಸಾಮಾಜಿಕ ಜಾಲತಾಣದಲ್ಲೂ ಲಾಲು ಯಾದವ್ ಅವರ ಈ ಹೇಳಿಕೆಗೆ ಬೇಸರ ವ್ಯಕ್ತವಾಗಿದೆ.
ಹೀಗೆ ಮುಂಬೈನ ಇಂಡಿಯಾ ಒಕ್ಕೂಟದ ಸಭೆಗೂ ಮುನ್ನ ಲಾಲು ಪ್ರಸಾದ್ ಯಾದವ್‌ರ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ. ನಾಳೆ ಮುಂಬೈನಲ್ಲಿ ವಿರೋಧ ಪಕ್ಷಗಳ ನಾಯಕರು ಸಭೆ ನಡೆಸಲಿದ್ದು, ಸಭೆಯ ಬಳಿಕ ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನ ಕಾದು ನೋಡಬೇಕು. ಆದರೆ ಈಗಾಗಲೇ ಈ ಹೇಳಿಕೆ ವೈರಲ್ ಆಗಿದ್ದು, ಬಿಜೆಪಿ ನಾಯಕರು ಲಾಲು ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ ಹಿರಿಯ ನಾಯಕರು ತಿಳಿದು ಮಾತನಾಡಲಿ ಅಂತಿದ್ದಾರೆ.












Click it and Unblock the Notifications