ಚಿತ್ರದುರ್ಗದಲ್ಲಿ ಆಗಸ್ಟ್ 16 ರಂದು ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ

Subscribe to Oneindia Kannada

ಚಿತ್ರದುರ್ಗ, ಜುಲೈ 27: ರಾಜ್ಯ ಜಾನಪದ ಪರಿಷತ್ ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 16 ರಂದು ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಗಾಳಿಪಟ ಸ್ಪರ್ಧೆ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಗಾಳಿಪಟ ಕ್ರೀಡೆಯು ರಚನಾತ್ಮಕ ಕ್ರೀಡೆಯಾಗಿದ್ದು ಇದನ್ನು ಉಳಿಸಬೇಕು ಮತ್ತು ಯುವ ಜನಾಂಗವನ್ನು ಇದರಲ್ಲಿ ತೊಡಗಿಸಬೇಕೆಂಬ ಹಿನ್ನೆಲೆಯಲ್ಲಿ ಜಾನಪದ ಪರಿಷತ್ತು ಪ್ರತಿ ವರ್ಷ ಇಂತಹ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ. ಈ ಭಾರಿ ರಾಜ್ಯ ಮಟ್ಟದ ಸ್ಪರ್ಧೆಯನ್ನು ಚಿತ್ರದುರ್ಗದಲ್ಲಿ ನಡೆಸಲಾಗುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸುವರು," ಎಂದು ಮಾಹಿತಿ ನೀಡಿದರು.

State level kite competition on August 16th in Chitradurga

ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಿದ್ದು 12 ವರ್ಷದೊಳಗಿನ ಮತ್ತು 12 ರಿಂದ 22 ವರ್ಷ ಮತ್ತು 22 ವರ್ಷದ ನಂತರ ಮತ್ತು ನಾಲ್ಕು, ಐದು ಜನರು ಸೇರಿದ ತಂಡ ವಿಭಾಗ ಸೇರಿ ಒಟ್ಟು ನಾಲ್ಕು ವಿಭಾಗಗಳಿರುತ್ತವೆ.

ಪ್ರತಿ ವಿಭಾಗದಲ್ಲಿಯೂ ವಿಜೇತರಾದವರಿಗೆ ಜಾನಪದ ಪರಿಷತ್ತಿನಿಂದ ನಗದು ಪ್ರಶಸ್ತಿ ಮತ್ತು ಪ್ರಶಸ್ತಿ ಪತ್ರವನ್ನು ಮೊದಲ ಮೂರು ಸ್ಥಾನಗಳಿಗೆ ಮತ್ತು ಇನ್ನೆರಡು ಸಮಾಧಾನಕರ ಬಹುಮಾನವನ್ನಾಗಿ ನೀಡಲಾಗುತ್ತದೆ.

ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯವರು ಸೇರಿದಂತೆ ಎಲ್ಲರೂ ಭಾಗವಹಿಸಬಹುದಾಗಿದೆ. ಒಬ್ಬ ಸ್ಪರ್ಧಿಗಳ ಜೊತೆ ಒಬ್ಬರನ್ನು ಸಹಾಯಕರನ್ನಾಗಿ ನೀಡಲಾಗುತ್ತದೆ. ಆ.16 ರಂದು ಬೆಳಗ್ಗೆ 9 ರಿಂದ ಸ್ಪರ್ಧೆ ಆರಂಭವಾಗಲಿದ್ದು ಆರಂಭಕ್ಕೂ ಮುಂಚೆ ಸ್ಪರ್ಧಾಳುಗಳು ಸ್ಥಳದಲ್ಲಿಯೇ ನೊಂದಣಿ ಮಾಡಿಸಬೇಕು. ನೊಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ. ಸ್ಪರ್ಧೆಯಲ್ಲಿ ಗ್ರಾಮೀಣ ಪ್ರದೇಶದವರು ಮತ್ತು ನಗರ, ಪಟ್ಟಣದವರು ಸಹ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಪರ್ಧೆಯಲ್ಲಿ ಸುಮಾರು 500 ಕ್ಕಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಅವರೆಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಜಿಲ್ಲಾ ಆಡಳಿತದಿಂದ ಕಲ್ಪಿಸಲಾಗುತ್ತದೆ ಎಂದರು.

ಜಾನಪದ ಲೋಕದ ಸಮನ್ವಯಾಧಿಕಾರಿ ಡಾ. ಕುರುವ ಬಸವರಾಜ್ ಮಾತನಾಡಿ ಜಾನಪದ ಪರಿಷತ್ತಿನಿಂದ ಪ್ರತಿ ವರ್ಷ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು ಈ ವರ್ಷ ಚಿತ್ರದುರ್ಗದಲ್ಲಿ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು, ಮಹಿಳೆಯವರು ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಅವರಿಗೆ ಬೇಕಾದ ಗಾಳಿಪಟವನ್ನು ತಯಾರು ಮಾಡಿಕೊಂಡು ಬರಬಹುದು. ಮತ್ತು ಗಾಳಿಪಟದಲ್ಲಿ ಜಾಗೃತಿ ಮೂಡಿಸುವಂತಹ ವಿಷಯಗಳನ್ನು ಅಳವಡಿಸಿಕೊಂಡು ಹಾರಾಟ ನಡೆಸಬಹುದಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
State level kite competition has organised on August 16 at Science College grounds in Chitradurga. The competition has organised by the Association of State Janapada Parishad and Chitradurga District Administration.
Please Wait while comments are loading...