ಮಾಸ್ಕ್ ಹಾಕಿಕೊಳ್ಳದಿದ್ದರೆ ದುಬಾರಿ ದಂಡ; ಸಚಿವರಿಗೂ ಇಲ್ಲ ವಿನಾಯಿತಿ!
ಬೆಂಗಳೂರು, ಜೂನ್.24: ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಅಂತಾರಲ್ಲ. ಕೊರೊನಾವೈರಸ್ ಅಟ್ಟಹಾಸದ ನಡುವೆಯೂ ರಾಜ್ಯ ರಾಜಕಾರಣಗಳು, ಮಂತ್ರಿಗಳು ಇಂಥದ್ದೇ ವರ್ತನೆಗಳನ್ನು ತೋರುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಸರಿಯಾಗಿ ಚಾಟಿ ಬೀಸಿದೆ.
ಕರ್ನಾಟಕದ ಹೈಕೋರ್ಟ್ ಗೆ ಬೆಂಗಳೂರು ಮೂಲದ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ನ್ಯಾ.ನಟರಾಜ್ ರಂಗಸ್ವಾಮಿ ಅವರನ್ನೊಳಗೊಂಡ ವಿಭಾಗೀಯ ಪೀಠ ಪಿಐಎಲ್ ಅರ್ಜಿ ವಿಚಾರಣೆ ನಡೆಸಿತು.
ಲಾಕ್ ಡೌನ್ ನಡುವೆಯೇ ಆರೋಗ್ಯ ಸಚಿವರಿಗೆ ಚಿತ್ರದುರ್ಗದಲ್ಲಿ ಅದ್ದೂರಿ ಸ್ವಾಗತ!
ರಾಜ್ಯದಲ್ಲಿ ಕೊರೊನಾವೈರಸ್ ಹರಡುವಿಕೆ ಭೀತಿ ಹಿನ್ನೆಲೆ ವಿಧಿಸಿರುವ ಲಾಕ್ ಡೌನ್ ನಿಯಮವನ್ನು ರಾಜಕಾರಣಿಗಳೇ ಉಲ್ಲಂಘಿಸುತ್ತಿದ್ದಾರೆ. ಅಂಥ ನಾಯಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಮುಖಕ್ಕೆ ಮಾಸ್ಕ್ ಧರಿಸುವಲ್ಲಿ ನಾಯಕರ ನಿರ್ಲಕ್ಷ್ಯ
ರಾಜ್ಯದಲ್ಲೂ ಕೊರೊನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಚುನಾಯಿತ ಪ್ರತಿನಿಧಿಗಳೇ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಲಾಕ್ ಡೌನ್ ನಿಯಮಗಳಲ್ಲು ಸಾಲು ಸಾಲು ಉಲ್ಲಂಘನೆ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚಾನುಹೆಚ್ಚು ಜನಪ್ರತಿನಿಧಿಗಳೇ ಸಾರ್ವಜನಿಕ ಪ್ರದೇಶಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸುತ್ತಿಲ್ಲ ಎನ್ನುವ ಅಂಶವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿತ್ತು.

ಪ್ರಜೆಗಳಿಗೆ ತಪ್ಪು ಸಂದೇಶ ರವಾನಿಸಿದಂತೆ ಅಲ್ಲವೇ?
ದೇಶದಲ್ಲಿ ಕೊರೊನಾವೈರಸ್ ನಿಯಂತ್ರಿಸುವ ಉದ್ದೇಶದಿಂದ ಲಾಕ್ ಡೌನ್ ಘೋಷಿಸಲಾಗಿದ್ದು, ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ. ರಾಜಕೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳೇ ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಅಂಥವರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುವುದಿಲ್ಲವೇ. ಕಾನೂನು ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳದಿದ್ದರೆ ತಪ್ಪಾಗುತ್ತದೆ ಅಲ್ಲವೇ ಎಂದು ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ವರದಿಯಲ್ಲಿ ಆರೋಗ್ಯ ಸಚಿವರ ಕುರಿತು ಮಾಹಿತಿ
ಕರ್ನಾಟಕದಲ್ಲಿ ಕೆಲವು ಸಚಿವರು, ಶಾಸಕರೇ ಲಾಕ್ ಡೌನ್ ನಿಯಮಗಳನ್ನು ಗಾಳಿ ತೂರುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಟಿಎನ್ಎಂ ವರದಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರ ವಿರುದ್ಧವೂ ಆರೋಪಿಸಲಾಗಿತ್ತು. ಸಾರ್ವಜನಿಕವಾಗಿ ಬೆಂಬಲಿಗನ್ನು ಕಟ್ಟಿಕೊಂಡ ಆರೋಗ್ಯ ಸಚಿವರು ಲಾಕ್ ಡೌನ್ ನಿಯಮಗಳ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಮುಖಕ್ಕೆ ಮಾಸ್ಕ್ ಹಾಕುವುದಿರಲಿ ಕನಿಷ್ಠ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ ಎಂದು ಹೇಳಲಾಗಿದೆ.

ಆರೋಗ್ಯ ಸಚಿವರ ವಿರುದ್ಧ ದೂರುವುದಕ್ಕೆ ಕಾರಣವೇನು?
ಕಳೆದ ಜೂನ್.2ರಂದು ವೇದಾವತಿ ನದಿಗೆ ಬಾಗಿನ ಅರ್ಪಿಸಲು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಗ್ರಾಮಕ್ಕೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವರೂ ಆಗಿರುವ ಶ್ರೀರಾಮುಲು ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಎತ್ತಿನ ಗಾಡಿಯಲ್ಲಿ ಸಚಿವರನ್ನು ಮೆರವಣಿಗೆ ಮಾಡಿದರು. ಅಷ್ಟೇ ಅಲ್ಲದೇ ಮೆರವಣಿಗೆಯಲ್ಲಿ ಸಚಿವರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಸ್ವಾಗತಿಸಿದ್ದು, ಹೂ ಮಳೆಗರೆದಿದ್ದರು.

ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಕ್ರಮ
ರಾಜ್ಯ ಸರ್ಕಾರವು ಕೊರೊನಾವೈರಸ್ ನಿಯಂತ್ರಿಸಬೇಕಿದ್ದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಮತ್ತು ಕಟ್ಟಿನಿಟ್ಟಿನಿಂದ ಪಾಲನೆಯಾಗುವಂತೆ ಎಚ್ಚರಿಕೆ ವಹಿಸಬೇಕು. ಬಹುಮುಖ್ಯವಾಗಿ ಕೆಲಸದ ವೇಳೆಯಲ್ಲಿ, ಪಾರ್ಕ್, ಪಾರ್ಲರ್, ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು.

ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲಕರ ವ್ಯವಸ್ಥೆ
ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸಾರ್ವಜನಿಕರು ವಾಟ್ಸಾಪ್, ಈ-ಮೇಲ್, ಎಸ್ಎಂಎಸ್ ಮೂಲಕ ದೂರು ಸಲ್ಲಿಸುವುದಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಮುಂದಿನ ಒಂದು ವಾರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಕುಂದುಕೊರತೆ ನಿವಾರಣಾ ಕಾರ್ಯವಿಧಾನವನ್ನು ರಚಿಸಬೇಕು ಎಂದು ವಿಭಾಗೀಯ ಪೀಠವು ಸರ್ಕಾರಕ್ಕೆ ಸೂಚನೆ ನೀಡಿದೆ.

ಮಾಸ್ಕ್ ಹಾಕಿಕೊಳ್ಳದಿದ್ದಲ್ಲಿ ದಂಡ ವಿಧಿಸಿ ಎಂದ ಕೋರ್ಟ್
ಕೊರೊನಾವೈರಸ್ ನಿಯಂತ್ರಿಸಬೇಕಿದ್ದಲ್ಲಿ ಲಾಕ್ ಡೌನ್ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿ. ವಿಪತ್ತು ನಿರ್ವಹಣಾ ಕಾಯ್ದೆ 51 ಮತ್ತು 54 ಹಾಗೂ ಭಾರತೀಯ ದಂಡ ಸಂಹಿತೆ 188ರ ಅಡಿಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿರಿ ಎಂದು ಹೈಕೋರ್ಟ್ ತಿಳಿಸಿದೆ.

1.31 ಲಕ್ಷ ಜನರಿಂದ ಲಾಕ್ ಡೌನ್ ಉಲ್ಲಂಘನೆ
ಕರ್ನಾಟಕವೊಂದರಲ್ಲೇ ಲಕ್ಷಾಂತರ ಜನರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವುದರ ಬಗ್ಗೆ ರಾಜ್ಯ ಸರ್ಕಾರವೇ ಅಂಕಿ-ಅಂಶಗಳನ್ನು ನೀಡಿದೆ. ಜೂನ್.20ರ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು, 1.31 ಲಕ್ಷ ಜನರು ಲಾಕ್ ಡೌನ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಗೃಹ ದಿಗ್ಬಂಧನದಲ್ಲಿರುವ ಬದಲು ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ ಶ.44.86ರಷ್ಟು ಜನರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವುದು ಸಾಬೀತಾಗಿದೆ. ಇನ್ನು, ಮೈಸೂರಿನಲ್ಲಿ 11,307 ಜನರ ವಿರುದ್ಧ ಹಾಗೂ ಕಲಬುರಗಿಯಲ್ಲಿ 10,385 ಜನರ ವಿರುದ್ಧ ಲಾಕ್ ಡೌನ್ ಉಲ್ಲಂಘಿಸಿರುವ ಬಗ್ಗೆ ಸರ್ಕಾರವು ವರದಿಯಲ್ಲಿ ಉಲ್ಲೇಖಿಸಿದೆ.