ಮತದಾನಕ್ಕೆ ಕೌಂಟ್‌ಡೌನ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಸಿದ್ಧತೆ ಹೇಗಿದೆ?-ಮಾಹಿತಿ
ಚಾಮರಾಜನಗರ, ಏಪ್ರಿಲ್, 25: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಎರಡು ಹಂತದಲ್ಲಿ ನಡೆಯಲಿದ್ದು, ಏಪ್ರಿಲ್ 26ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ಮೊದಲ ಹಂತದ ಮತದಾನಕ್ಕೆ ಕೌಂಟ್‌ಡೌನ್ ಆರಂಭವಾಗಿದ್ದು, ಚಾಮರಾಜನಗರ ಕ್ಷೇತ್ರದಲ್ಲಿ ಮಸ್ಟರಿಂಗ್ ಕಾರ್ಯ ಮುಗಿಸಿ ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ.
ಚಾಮರಾಜನಗದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಇವಿಎಂ ಹಿಡಿದು ನಿಗದಿಪಡಿಸಿದ ಮತಗಟ್ಟೆಗಳತ್ತ ಚುನಾವಣಾ ಸಿಬ್ಬಂದಿ ಬಸ್‌ಲ್ಲಿ ತೆರಳಿದರು. ಚಾಮರಾಜನಗರ ಜಿಲ್ಲೆಯಲ್ಲಿ 1196 PRO, 1196 APRO, 2392 PO ಸೇರಿದಂತೆ 4,784 ಸಿಬ್ಬಂದಿಯು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 2,000 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

2,000 ಬ್ಯಾಲೆಟ್ ಯೂನಿಟ್ ಹಾಗೂ 559 ಕಾಯ್ದಿರಿಸುವುದನ್ನು ಸೇರಿಸಿದರೆ ಒಟ್ಟು 2,559 ಬ್ಯಾಲೆಟ್ ಯೂನಿಟ್ ಬಳಸಲಾಗುತ್ತಿದ್ದೆ. 2,618 ಕಂಟ್ರೋಲ್ ಯೂನಿಟ್, 2,792 ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಜಿಲ್ಲೆಯ 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.
ಶಾಂತಿಯುತ ಮತದಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 4 ಡಿವೈಎಸ್ಪಿ, 13 ಪಿಐ, 41 ಪಿಎಸ್ಐ, 67 ಎಎಸ್ಐ, 936 ಕಾನ್ಸ್‌ಟೇಬಲ್, 600 ಹೋಂ ಗಾರ್ಡ್ ಸೇರಿದಂತೆ 1,667 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇನ್ನು, ಮತಗಟ್ಟೆಗಳತ್ತ ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 163 ಕೆಎಸ್ಆರ್‌ಟಿಸಿ ಬಸ್ ಬಳಕೆ ಮಾಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 7ರಿಂದ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭಗೊಳ್ಳಲ್ಲಿದ್ದು, ಮತದಾನ ಪ್ರಕ್ರಿಯೆಗೆ ಲೋಕ ಅಖಾಡ ಸಜ್ಜಾಗಿದೆ.
ಸಿದ್ಧತೆ ಹೇಗಿದೆ?: ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಅಂಚೆ ಮತದಾನ ಮಾಡಿ ಮತಗಟ್ಟೆಗಳತ್ತ ತೆರಳಿದರೇ ಹಲವರು ಇಡಿಎಸ್ ಸರ್ಟಿಫಿಕೇಟ್ ಪಡೆದುಕೊಂಡು ಮತಗಟ್ಟೆಗಳತ್ತ ತೆರಳಿದರು. ಇಡಿಎಸ್ ಪಡೆದವರು ಮತಗಟ್ಟೆಗಳಲ್ಲೇ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ. ಇನ್ನು ಚಾಮರಾಜನಗರ ಡಿಸಿ ಶಿಲ್ಪಾನಾಗ್, ಎಸ್ಪಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಸಿಇಒ ಆನಂದಪ್ರಕಾಶ್ ಮೀನಾ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾವುದೇ ಗೊಂದಲಕ್ಕೆ ಒಳಗಾಗಬೇಡಿ, ಸಂದೇಹಗಳಿದ್ದರೇ ಕೇಳಿ ಪರಿಹರಿಸಿಕೊಳ್ಳಿ. ಧೈರ್ಯವಾಗಿ ಕರ್ತವ್ಯ ನಿರ್ವಹಿಸಿ, ಸಮಸ್ಯೆ-ಸಂದೇಹ ಏರ್ಪಟ್ಟರೇ ಸಹಾಯವಾಣಿಗೆ ಕರೆಮಾಡಿ ಎಂದು ಜಿಲ್ಲಾಧಿಕಾರಿ ಚುನಾವಣಾ ಸಿಬ್ಬಂದಿಗೆ ಧೈರ್ಯ ತುಂಬಿದರು.












Click it and Unblock the Notifications