ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
ಬೆಂಗಳೂರು, ಏಪ್ರಿಲ್ 25: ಐಪಿಎಲ್ ಹಾಗೂ ಲೋಕಸಭಾ ಚುನಾವಣೆ ಮತದಾನ ಸಲುವಾಗಿ ಮೆಟ್ರೋ ಸೇವೆ ವಿಸ್ತರಣೆ ಮಾಡಿದ್ದ BMRCL ಇದೀಗ ಮತ್ತೆ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಿದೆ. ಯಾವಾಗ?, ದಿನಾಂಕ, ವಿಸ್ತರಣೆ ಕಾರಣಗಳು ಸೇರಿದಂತೆ ಪೂರ್ಣ ಮಾಹಿತಿಗೆ ಮುಂದೆ ಓದಿ.
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪರೇಡ್ ಮೈದಾನದಿಂದ ಏಪ್ರಿಲ್ 28ರಂದು ಭಾನುವಾರ ಬೆಂಗಳೂರಿನಲ್ಲಿ TCS ವರ್ಲ್ಡ್ 10K ರನ್ ಆಯೋಜಿಸಲಾಗಿದೆ. ಈ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೆಟ್ರೋ ರೈಲುಗಳು ನಾಲ್ಕು ಟರ್ಮಿನಲ್ ನಿಂದ ಆರಂಭವಾಗುವ ಸಮಯದಲ್ಲಿ ಬದಲಾವಣೆ ಮಾಡಿದೆ.

ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಬದಲಾವಣೆ
TCS ವರ್ಲ್ಡ್ 10K ರನ್ ಪ್ರಯುಕ್ತ ಅದರಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ ನಮ್ಮ ಮೆಟ್ರೋ ರೈಲು ಸೇವೆಯನ್ನು ಅಂದು ಬೆಳಗ್ಗೆ 07:00 ಗಂಟೆಗೆ ಬದಲಾಗಿ ನಸುಕಿನ ಜಾವ 03:35 ಗಂಟೆಗೆ ಆರಂಭಿಸಲು ನಿರ್ಧರಿಸಿದ್ದಾಗಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
10 ನಿಮಿಷಕ್ಕೆ ರೈಲುಗಳ ಆವರ್ತನ
ಭಾನುವಾರ ಬೆಳಗ್ಗೆ 03:35 ಗಂಟೆಗೆ ನಮ್ಮ ಮೆಟ್ರೋ ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಮೆಟ್ರೋ ರೈಲು ಆರಂಭವಾಗುತ್ತವೆ. ರೈಲುಗಳು ಮುಂಜಾನೆ 03.35 ರಿಂದ 04.25 ಗಂಟೆಯ ಸಮಯದಲ್ಲಿ 10 ನಿಮಿಷಗಳ ಆವರ್ತನದಲ್ಲಿ ಚಲಿಸುತ್ತವೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ ಕಡೆಗೆ ಮೊದಲ ರೈಲು ಸೇವೆಯು ಬೆಳಗ್ಗೆ 04.10 ಗಂಟೆಗೆ ಪ್ರಾರಂಭವಾಗಿ ತದನಂತರ 10 ನಿಮಿಷಗಳ ಆವರ್ತನದಲ್ಲಿ ಬೆಳಗ್ಗೆ 5.00 ಗಂಟೆ ವರೆಗೆ ಚಲಿಸುತ್ತವೆ. ನಂತರ ರೈಲುಗಳು ಜನರ ದಟ್ಟಣೆಯ ಅನುಗುಣವಾಗಿ ಮೆಟ್ರೋ ಸೇವೆ ಆವರ್ತನಗೊಳ್ಳುತ್ತವೆ ಎಂದರು.
ವರ್ಲ್ಡ್ಸ್ ಪ್ರೀಮಿಯರ್ 10K ಓಟದಲ್ಲಿ ಭಾಗವಹಿಸಲು ಮೇಲಿನ ಸೌಲಭ್ಯವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ಪ್ರಯಾಣಿಕರು ನಗದು ರಹಿತ QR ಟಿಕೆಟ್‌ಗಳನ್ನು ಖರೀದಿಸಿ ಪ್ರಯಾಣಿಸುವಂತೆ BRMCL ಮನವಿ ಮಾಡಿಕೊಂಡಿದೆ.
ಮತದಾನ ದಿನವೂ ಮೆಟ್ರೋ ಸೇವೆ ವಿಸ್ತರಣೆ
ನಾಳೆ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ನಾಳೆ ಶುಕ್ರವಾರ ಏಪ್ರಿಲ್ 26ರಂದು ತಡರಾತ್ರಿ 11.55 ಗಂಟೆವರೆಗೆ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆ ರೈಲು ನಾಳೆ ಮಾತ್ರ ರಾತ್ರಿ 11.55 ನಾಲ್ಕು ಟರ್ಮಿನಲ್‌ಗಳಿಂದ ಹೊರಡಲಿವೆ. ಇದು ಪ್ರಯಾನಿಕರಿಗೆ ಅನುಕೂಲವಾಗಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications