Appu Gandhadagudi Agarbatti: ವರನಟನ ಜನ್ಮದಿನದಂದು ಹೊಸ ಉದ್ಯಮಕ್ಕೆ ಕಾಲಿಟ್ಟ ಅಶ್ವಿನಿ ಪುನೀತ್ ರಾಜಕುಮಾರ್
ಬೆಂಗಳೂರು, ಏಪ್ರಿಲ್ 25: ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್ ಅವರ 95ನೇ ಜನ್ಮ ದಿನಾಚರಣೆಯನ್ನು ನೆನ್ನೆ ಬುಧವಾರವಷ್ಟೇ (ಏ.24) ರಂದು ಆಚರಿಸಲಾಗಿದೆ. ಈ ಶುಭದಿನದಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು 'ಅಪ್ಪು' ಹೆಸರಿನಲ್ಲಿ ಹೊಸ ಉದ್ಯಮ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
ಹೌದು, ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಮತ್ತು 'ಗಂಧದಗುಡಿ' ಸುವರ್ಣ ಮಹೋತ್ಸವ ಸವಿ ನೆನಪಿಗಾಗಿ 'ಅಪ್ಪು ಗಂಧದಗುಡಿ ಅಗರಬತ್ತಿ' ಉದ್ಯಮವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಟ್ವೀಟ್ (ಎಕ್ಸ್) ಮೂಲಕ ಹೊಸ ಉದ್ಯಮಕ್ಕೆ ಕೈ ಹಾಕಿರುವುದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಪ್ಪಾಜಿಯವರ ಹುಟ್ಟು ಹಬ್ಬವನ್ನು ಸ್ಮರಿಸಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು, ಗಂಧದಗುಡಿ ಚಿತ್ರದ ಸುವರ್ಣ ಮಹೋತ್ಸವ ನೆನಪಿಸಿದ್ದಾರೆ. ಇದರ ಅಂಗವಾಗಿ 'ಅಪ್ಪು ಗಂಧದಗುಡಿ ಅಗರಬತ್ತಿ'ಯೊಂದಿಗೆ ಈ ಶುಭಗಳಿಗೆ ಸ್ಮರಿಸೋಣ ಎಂದು ಪೋಸ್ಟ್ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರ, ಅಪ್ಪಾಜಿ ಅಭಿಮಾನಿಗಳ ಸಂಘ, ಸಂಸ್ಥೆಗಳು ಡಾ.ರಾಜ್ ಜನ್ಮದಿನ ಪ್ರಯುಕ್ತ ಅವರ ಹೆಸರಿನ ವೃತ್ತಗಳಲ್ಲಿ, ಪ್ರಮುಖ ರಸ್ತೆ, ಹೋಟೆಲ್ ಗಳಲ್ಲಿ ಹಾಗೂ ಕಂಠೀರವ ಸ್ಟುಡಿಯೋ ಮುಂದೆ ಅನ್ನದಾನ, ರಕ್ತದಾನದಂತಹ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಅಗರಬತ್ತಿ ತಯಾರಿಕೆ, ವಿಶೇಷತೆ ಮಾಹಿತಿ
ಅಪ್ಪು ಅವರು ಇದ್ದಾಗಲೇ ಈ ಅಗರಬತ್ತಿ ಉದ್ಯಮ ಆರಂಭಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಒಪ್ಪಂದವು ಆಗಿರಲಿಲ್ಲ. ಇದೀಗ ರಾಜೇಶ್ ಎಂಬುವವರು ಮತ್ತೊಮ್ಮೆ 'ಅಪ್ಪು ಗಂಧದಗುಡಿ ಅಗರಬತ್ತಿ' ಬಗ್ಗೆ ಪ್ರಸ್ತಾವ ಮುಂದಿಟ್ಟರು ಎಂದು ಅಶ್ವಿನಿ ಅವರು ತಿಳಿಸಿದರು.

ಅಪ್ಪು ಸರ್ ಇದ್ದಾಗಲೇ ಈ ಬಗ್ಗೆ ಮಾತುನಾಡಿದ್ದೇವೆ. ಇದೀಗ ಅಶ್ವಿನಿ ಅವರ ಜೊತೆ ಅಗತಬತ್ತಿ ಉದ್ಯಮ ನಡೆಸುವುದು ಖುಷಿ ತಂದಿದೆ. ಅಗರಬತ್ತಿ ಮೂಲಕ ಪ್ರತಿ ಮನೆ ಮನೆಗೂ ಅಪ್ಪು ಅವರನ್ನು ಕರೆದೊಯ್ಯುತ್ತಿದ್ದೇವೆ. ಅಗರಬತ್ತಿ ತಯಾರಿಕೆಗೆ ಗ್ರೌಂಡ್ ವಾಟರ್ ಬಳಸಲಾಗಿದೆ. ವಾಟರ್ ಫ್ರಂ ಏರ್ ಬಳಸಲಾಗಿದೆ. ಇದು ಸಾಮಾಜಿಕವಾಗಿ ದೊಡ್ಡ ಪರಿಣಾಮ ಭೀರಲಿದೆ ಎಂದು ರಾಜೇಶ್ ಮಾಹಿತಿ ನೀಡಿದರು.












Click it and Unblock the Notifications