ಪ್ರಯಾಣಿಕರೇ ಗಮನಿಸಿ: ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣಕ್ಕೆ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ರೈಲು ಬಿಡಲಾಗುತ್ತದೆ. ಜೊತೆಗೆ ಹಾಲಿ ರೈಲುಗಳ ಸೇವಾವಧಿ ವಿಸ್ತರಣೆ ಮಾಡಲಾಗುತ್ತದೆ. ವಿಜಯಪುರ-ಬೆಂಗಳೂರು ರೈಲು ಬೆನ್ನಲ್ಲೆ ಅರಮನೆ ನಗರಿ ಮೈಸೂರಿನಿಂದ ಹೊರಡುವ ಪ್ರಮುಖ ರೈಲಿನ ಸೇವೆ ವಿಸ್ತರಣೆ ಮಾಡಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ತರಣೆಗೊಂಡ ರೈಲುಗಳ ವೇಳಾಪಟ್ಟಿ
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಮಂಡಳಿಯು ಮೈಸೂರು- ಮದಾರ್ ಜಂಕ್ಷನ್ -ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ರೈಲು (06281/06282) ಸೇವೆಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ. ಈ ರೈಲುಗಳು ಈಗಿರುವ ಸಮಯ, ನಿಲ್ದಾಣಗಳು, ದರ ವ್ಯವಸ್ಥೆ ಹಾಗೂ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಸೇವಾವಧಿ ಮಾತ್ರವೇ ಜುಲೈವರೆಗೆ ವಿಸ್ತರಣೆ ಆಗಿದೆ. ಇದರಿಂದ ಒಟ್ಟು ನಾಲ್ಕು ಹೆಚ್ಚುವರಿ ಟ್ರಿಪ್ ಸೇವೆ ಲಭ್ಯವಾಗಲಿವೆ.

ಮೈಸೂರು- ಮದಾರ್ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು (06281) ಇದು ಪ್ರಸ್ತುತ ಜೂನ್ 27ರವರೆಗೆ ಮಾತ್ರವೇ ಸೇವೆಗೆ ನಿಗದಿ ಮಾಡಲಾಗಿತ್ತು. ಇದೀಗ ಜುಲೈ 04 ಮತ್ತು ಜುಲೈ 11 (ಶನಿವಾರ) ದಂದು ವಿಸ್ತರಿಸಲಾಗಿದೆ. ಇದರಿಂದ ಈ ಮಾರ್ಗದ ಸಾವಿರಾರು ಪ್ರಯಾಣಿಕರಿಗೆ ಒಟ್ಟು 2 ಹೆಚ್ಚುವರಿ ಟ್ರಿಪ್ ಸೇವೆ ಸಿಗಲಿದೆ.
ಮದಾರ್ ಜಂಕ್ಷನ್ -ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06282) ಇದು ಜೂನ್ 29ರವರೆಗೆ ಮಾತ್ರವೇ ಸೇವೆಗೆ ನಿಗದಿ ಆಗಿತ್ತು. ಅದನ್ನು ಜುಲೈ 06 ಹಾಗೂ ಜುಲೈ 13 (ಸೋಮವಾರ) ರಂದು ವಿಸ್ತರಿಸಲಾಗಿದೆ. ಇದರಿಂದ ಒಟ್ಟು 2 ಹೆಚ್ಚುವರಿ ಸೇರಿ ಎರಡು ದಿಕ್ಕಿನಲ್ಲಿ ಒಟ್ಟು ನಾಲ್ಕು ಟ್ರಿಪ್‌ಗಳ ಹೆಚ್ಚುವರಿ ರೈಲು ಸೇವೆ ಸಿಕ್ಕಂತಾಗುತ್ತದೆ. ಹೆಚ್ಚುವರಿ ಸೇವೆ ದಿನಾಂಕ, ಸಮಯ ನೋಡಿಕೊಂಡು ರೈಲ್ವೆ ಪ್ರಯಾಣಿಕರು ಸಂಚಾರಕ್ಕೆ ಪ್ಲ್ಯಾನ್ ಮಾಡಿಕೊಳ್ಳಬಹುದು ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಚಾರ ಸಮಯ
ಮೈಸೂರು ನಿಲ್ದಾಣದಿಂದ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 8 ಗಂಟೆಗೆ ಹೊರಡುತ್ತದೆ. ಅಲ್ಲಿಂದ ಮೂರನೇ ದಿನ ಬೆಳಗ್ಗೆ 5 ಗಂಟೆಗೆ ಮದಾರ್ ಜಂಕ್ಷನ್ ಅನ್ನು ತಲುಪುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಮದಾರ್ ಜಂಕ್ಷನ್‌ನಿಂದ ವಿಶೇಷ ರೈಲು ಸಂಜೆ 18.20ಕ್ಕೆ ಹೊರಡುತ್ತದೆ. ಅಲ್ಲಿಂದ ಮೂರನೇ ದಿನ ದಿನ ಸಂಜೆ 18.30ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸುತ್ತದೆ.
ಇತ್ತೀಚೆಗೆ ಬೆಂಗಳೂರಿನ ಯಶವಂತಪುರದಿಂದ ನೇರವಾಗಿ ಉತ್ತರ ಕರ್ನಾಟಕದ ವಿಜಯಪುರಕ್ಕೆ ನಿಗದಿಯಾಗಿದ್ದ ವಿಶೇಷ ರೈಲನ್ನು ಜೂನ್ ಅಂತ್ಯದಿಂದ ಆಗಸ್ಟ್ ಅಂತ್ಯದವರೆಗೆ ಒಟ್ಟು ಮುಂದಿನ ಎರಡು ತಿಂಗಳು ವಿಸ್ತರಣೆ ಮಾಡಿ ಬೆಂಗಳೂರು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.













Click it and Unblock the Notifications