Bengaluru Rent 5: ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆ ಬೇಕಾ, ಕೈಗೆಟುಕುವ ಬೆಲೆಯ 5 ಬೆಸ್ಟ್ ಪ್ರದೇಶಗಳಿವು
Bengaluru Rent 5: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಪ್ರಾಪರ್ಟಿ ಬೆಲೆಯೂ ಸಹ ಹೆಚ್ಚಳವಾಗುತ್ತಿದೆ. ಇದರ ನಡುವೆ ಮಧ್ಯಮ ವರ್ಗದವರು ಹಾಗೂ ಬಡವರು ಬೆಂಗಳೂರಿನಲ್ಲಿ ಬಾಡಿಗೆ ಮನೆಗಳನ್ನು ಹುಡುಕುವುದಕ್ಕೆ ಪರದಾಡುವ ಪರಿಸ್ಥಿತಿ ಇದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್ ಆಗುವುದರೊಂದಿಗೆ ಬಾಡಿಗೆ ಬೆಲೆಯೂ ಸಹ ಭಾರೀ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 5 ಪ್ರದೇಶಗಳ ವಿವರ ಇಲ್ಲಿದೆ. ಬೆಂಗಳೂರಿನ ಹೃದಯ ಭಾಗ ಸೇರಿದಂತೆ ವಿವಿಧ ಭಾಗಗಳಲ್ಲಿ 1 ಬಿಎಚ್‌ಕೆ ಹಾಗೂ 2 ಬಿಎಚ್‌ಕೆ ಮನೆಗಳ ಬಾಡಿಗೆಯು ಬಾರಿ ದುಬಾರಿಯಾಗಿದೆ. ಆದರೆ ಇದರ ಹೊರತಾಗಿ ಕೆಲವು ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಬೆಲೆಯು ಭರ್ಜರಿ ಕಡಿಮೆಯಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
1. ಕೆಂಗೇರಿ
ಪಶ್ಚಿಮ ಬೆಂಗಳೂರಿನ ಕೆಂಗೇರಿಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುತ್ತವೆ. ಈ ಭಾಗದಲ್ಲಿ ಮೆಟ್ರೋ ಸಂಪರ್ಕ ಜಾಲದ ವಿಸ್ತರಣೆಯಿಂದಾಗಿ ಗಮನಾರ್ಹ ಸುಧಾರಣೆ ಆಗಿದೆ. ಈ ಪ್ರದೇಶದಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುತ್ತವೆ. ಕೆಂಗೇರಿ ಪ್ರದೇಶದಲ್ಲಿ ಪ್ರಶಾಂತ, ಶಾಂತಿಯುತ ವಾತಾವರಣ ಮತ್ತು ಮೂಲಸೌಕರ್ಯ ಸುಧಾರಣೆಯ ಲಾಭವೂ ಇದೆ.
ಸರಾಸರಿ ಮಾಸಿಕ ಬಾಡಿಗೆ ಬೆಲೆ: 1BHKಗೆ 6,500 ರೂಪಾಯಿಯಿಂದ 10,000 ರೂಪಾಯಿ ವರೆಗೆ ಇದೆ. 2 ಬಿಎಚ್‌ಕೆ ಅಥವಾ ದೊಡ್ಡ ಮನೆಗಳಿಗೆ 25,000 ಸಾವಿರ ರೂಪಾಯಿಯ ವರೆಗೆ ಇದೆ.

2. ಎಲೆಕ್ಟ್ರಾನಿಕ್ ಸಿಟಿ
ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ ಮತ್ತೊಂದು ಪ್ರದೇಶವೆಂದರೆ ಅದು ಎಲೆಕ್ಟ್ರಾನಿಕ್ ಸಿಟಿ. ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರಿನ ಅತ್ಯಂತ ಪ್ರಮುಖ ರಿಯಲ್ ಎಸ್ಟೇಟ್ ಪ್ರದೇಶವಾಗಿದೆ. ಇದರ ಹೊರತಾಗಿಯೂ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳು ಬಾಡಿಗೆಗೆ ಸಿಗುತ್ತಿವೆ. ಮೆಟ್ರೋ ಮೂಲಸೌಕರ್ಯ ಹಾಗೂ ಸುಗಮ ಸಂಚಾರಕ್ಕೆ ಅನುಕೂಲಕರವಾದ ರಸ್ತೆಗಳು ಇರುವ ಕಾರಣಕ್ಕೆ ಈ ಭಾಗದಲ್ಲಿ ಬಾಡಿಗೆ ಮನೆಗಳ ಬೇಡಿಕೆಯೂ ಸಹ ಹೆಚ್ಚಾಗಿದೆ.
ಸರಾಸರಿ ಮಾಸಿಕ ಬಾಡಿಗೆ ಬೆಲೆ: 7,500 ರೂಪಾಯಿ ಯಿಂದ 30,000 ರೂಪಾಯಿ ವರೆಗೆ ಇದೆ.
3. BTM ಲೇಔಟ್
ಬಿಟಿಎಂ ಲೇಔಟ್‌ನಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತಿವೆ. ವಿದ್ಯಾರ್ಥಿಗಳು, ಯುವ ವೃತ್ತಿಪರರು ಮತ್ತು ನವೋದ್ಯಮ ಉದ್ಯೋಗಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಕೋರಮಂಗಲ, HSR ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಹೊರ ವಲಯ ಅಥವಾ ಹೊರ ಪ್ರದೇಶದಲ್ಲಿ ಪ್ರೀಮಿಯಂ ಮನೆ ಹಾಗೂ ಬಾಡಿಗೆ ಮನೆಗಳ ಬಾಡಿಗೆಯು ಉಳಿದ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಹೆಚ್ಚು ಕೈಗೆಟುಕುವ ಬಾಡಿಗೆ ಆಯ್ಕೆಗಳನ್ನು ನೀಡುತ್ತದೆ.
ಸರಾಸರಿ ಮಾಸಿಕ ಬಾಡಿಗೆ ಬೆಲೆ: 1BHKಗೆ 6,500 ರೂಪಾಯಿಯಿಂದ 15,000 ರೂಪಾಯಿ ಇದೆ. ಅಲ್ಲದೆ ವಿವಿಧ ರೀತಿಯ ಆಸ್ತಿಗಳ ಬೆಲೆಯು 8,000 ರೂಪಾಯಿಯಿಂದ 20,000 ರೂಪಾಯಿ ಇದೆ.
4. ಯಲಹಂಕ
ಉತ್ತರ ಬೆಂಗಳೂರಿನ ಯಲಹಂಕ ಭಾಗದಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಯೋಜಿತ ನಗರಾಭಿವೃದ್ಧಿ ಮತ್ತು ಹಸಿರು ವಾತಾವರಣ ಮತ್ತೊಂದು ಪ್ಲಸ್ ಪಾಯಿಂಟ್ಸ್ ಆಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲೇ ಇರುವುದು. ಬೆಳೆಯುತ್ತಿರುವ ವಾಣಿಜ್ಯ ಚಟುವಟಿಕೆ ಮತ್ತು ಮೂಲಸೌಕರ್ಯ ಸುಧಾರಣೆಯಿಂದ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉತ್ತಮವಾಗಿದೆ. ನಗರದ ಜನನಿಬಿಡ ಪ್ರದೇಶಗಳಿಗೆ ಹೋಲಿಸಿದರೆ, ಇದು ಉತ್ತಮ ಪ್ರದೇಶವಾಗಿದೆ.
ಸರಾಸರಿ ಮಾಸಿಕ ಬಾಡಿಗೆ ಬೆಲೆಯು: 10,000 ರೂಪಾಯಿಯಿಂದ 25,000 ರೂಪಾಯಿಯ ವರೆಗೆ ಇದೆ.
5. ಕನಕಪುರ ರಸ್ತೆ
ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ ಮತ್ತೊಂದು ಪ್ರದೇಶವೆಂದರೆ, ಕನಕಪುರ ರಸ್ತೆ. ಈ ಭಾಗದಲ್ಲೂ ಉತ್ತಮ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಸುಧಾರಿತ ಮೆಟ್ರೋ ಸಂಪರ್ಕ, ಪ್ರಮುಖ ಉದ್ಯೋಗ ಕೇಂದ್ರಗಳಿಗೆ ಸಮೀಪದಲ್ಲೇ ಇರುವುದು ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಕಾರಣಕ್ಕೆ ಇಲ್ಲೂ ರಿಯಲ್ ಎಸ್ಟೇಟ್ ಬೂಮ್ ಆಗಿದೆ.
ಸರಾಸರಿ ಮಾಸಿಕ ಬಾಡಿಗೆ ಬೆಲೆ: 11,200 ರಿಂದ 25,000 ರೂಪಾಯಿಯ ವರೆಗೆ ಇದೆ.












Click it and Unblock the Notifications