ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲೆಯಲ್ಲಿ 2ನೇ rank ಪಡೆದ ರಮೇಶನಿಗೆ, ಅಪ್ಪ ಇಲ್ಲ, ಅಮ್ಮನೇ ಎಲ್ಲ!

By ಜಿಎಂ ರೋಹಿಣಿ
|
Google Oneindia Kannada News

ಬಳ್ಳಾರಿ, ಏಪ್ರಿಲ್ 30 : "ಅಪ್ಪ ಇಲ್ಲ. ಅಮ್ಮ ಅಂಗನವಾಡಿ ಟೀಚರ್. ಅವರಿವರ ಪ್ರೋತ್ಸಾಹ, ಪ್ರೇರಣೆಯಿಂದ ಓದಿದ್ದೇನೆ. ನನ್ನೂರು ಸಿರುಗುಪ್ಪ ತಾಲೂಕಿನ ಆಗಲೂರು. ಎಸ್‍ಎಸ್‍ಎಲ್‍ಸಿ ಆದ ಮೇಲೆ, ಕೊಟ್ಟೂರಿನ ಇಂದೂ ಕಾಲೇಜು ಸೇರಿ, ಓದಿದೆ. ಕಷ್ಟ ಬಿದ್ದಿದ್ದಕ್ಕೆ ಸಾರ್ಥಕ ಆಯಿತು" ಎಂದು ಸಮಾಧಾನದ ಮಾತುಗಳನ್ನಾಡುತ್ತಾನೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿರುವ ಎಸ್.ವಿ. ರಮೇಶ.

ಬಳ್ಳಾರಿಯ ಉಪನ್ಯಾಸಕ ಮಲ್ಲಿಕಾರ್ಜುನ ಮತ್ತು ಆಗಲೂರು ಗ್ರಾಮದ ರಾಮಕೃಷ್ಣ ಎನ್ನುವ ಶಿಕ್ಷಕರ ಮಾರ್ಗದರ್ಶನ, ಆರ್ಥಿಕ ಸಹಾಯದ ಕಾರಣ ನಾನು ಇಂದೂ ಕಾಲೇಜು ಸೇರಿದ್ದು. ಎರಡು ವರ್ಷ 160 ಕಿಲೋ ಮೀಟರ್ ದೂರ ಇದ್ದಿದ್ದಕ್ಕೂ ಇಂದಿನ ಫಲಿತಾಂಶಕ್ಕೂ ಸಾರ್ಥಕವಾಗಿದೆ ಎಂದು ಒನ್ಇಂಡಿಯಾ ಕನ್ನಡ ಜೊತೆ ತನ್ನ ಸಂತಸವನ್ನು ಹಂಚಿಕೊಂಡ ರಮೇಶ.

ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರುಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು

ಬಡವರಾದರೇನು, ಶ್ರೀಮಂತರಾದರೇನು ಶ್ರದ್ಧೆಯಿಂದ, ಯಶಸ್ವಿಯಾಗಲೇಬೇಕು ಎಂದು ಕಷ್ಟಪಟ್ಟು ಓದಿದರೆ ವಿದ್ಯಾಲಕ್ಷ್ಮೀ ಎಂಥವರಿಗೂ ಒಲಿಯುತ್ತಾಳೆ ಎಂಬುದಕ್ಕೆ ಆಗಲೂರು ಗ್ರಾಮದ ರಮೇಶನೇ ಸಾಕ್ಷಿ. 600 ಅಂಕಗಳಿಗೆ 593 ಅಂಕಗಳನ್ನು ಪಡೆದಿರುವ ಮಗನ ಸಾಧನೆ ಕಂಡು, ಅಂಗನವಾಡಿಯಲ್ಲಿ ಕೆಲಸ ಮಾಡುವ ಅಮ್ಮ ವರಲಕ್ಷ್ಮೀಯವರ ಕಂಗಳಲ್ಲಿ ಆನಂದಭಾಷ್ಪ. ರಮೇಶನಿಗೆ, ಆತನ ಸಾಧನೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ತ್ಯಾಗಮಯಿ ತಾಯಿಗೆ ಹೃತ್ಪೂರ್ವಕ ಅಭಿನಂದನೆಗಳು.

ರಮೇಶ ಪಡೆದಿರುವ ಅಂಕಗಳು ಈರೀತಿಯಿವೆ. ಕನ್ನಡ - 96, ಸಂಸ್ಕೃತ - 99, ಕನ್ನಡ ಐಚ್ಛಿಕ - 99, ಇತಿಹಾಸ - 100, ರಾಜಕೀಯ ವಿಜ್ಞಾನ - 99 ಮತ್ತು ಶಿಕ್ಷಣ - 100. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಕಲಾ ವಿಭಾಗದಲ್ಲಿ ಮೊದಲನೇ ಮತ್ತು ಮೂರನೇ ಶ್ರೇಯಾಂಕಗಳು ಕೂಡ ಇಂದೂ ಕಾಲೇಜಿಗೇ ಸಂದಿವೆ. ಮೊದಲ rank ಸ್ವಾತಿ ಎಸ್ ಪಾಲಾಗಿದ್ದರೆ, ಮೂರನೇ rank ಪಡೆದವಳು ಗೊರವರ ಕಾವ್ಯಾಂಜಲಿ.

ಮಾರೆಪ್ಪನ ಆತ್ಮಕ್ಕೆ ಮಗನ rankನಿಂದ ಶಾಂತಿ ಸಿಗಲಿ

ಮಾರೆಪ್ಪನ ಆತ್ಮಕ್ಕೆ ಮಗನ rankನಿಂದ ಶಾಂತಿ ಸಿಗಲಿ

ಅಂಗನವಾಡಿ ಕಾರ್ಯಕರ್ತೆಯಾಗಿರುವ ತಾಯಿ ಎಸ್. ವರಲಕ್ಷ್ಮಿ ಅವರು, "ಮಗ ಓದಲಿಕ್ಕಾಗಿಯೇ ನನ್ನಿಂದ ಎರಡು ವರ್ಷ ದೂರ ಇದ್ದ. ಕಷ್ಟಬಿದ್ದು ಓದವ್ನೆ. rank ಬಂದೈತೆ. ನಾನು ಅಂಗನವಾಡಿಯಲ್ಲಿ ಕೆಲಸ ಮಾಡಿ, ಓದಿಸಿದ್ದೇನೆ. ಗಂಡನಿಲ್ಲ. ಮಗನೇ ಎಲ್ಲಾ. ಪತಿ ಮಾರೆಪ್ಪನ ಆತ್ಮಕ್ಕೆ ಮಗನ rankನಿಂದ ಶಾಂತಿ ಸಿಗಲಿ" ಎಂದು ಸೆರಗಿನಂಚಿನಲ್ಲಿಯೇ ಕಂಬನಿ ಒರೆಸಿಕೊಳ್ಳುತ್ತಾರೆ.

ತಮ್ಮನ ರಿಸಲ್ಟ್ ನನಗೂ ಪ್ರೇರಣೆ

ತಮ್ಮನ ರಿಸಲ್ಟ್ ನನಗೂ ಪ್ರೇರಣೆ

"ನನ್ನ ತಮ್ಮ ಸಾಕಷ್ಟು ಕಷ್ಟಬಿದ್ದಿದ್ದಾನೆ. ಅಪ್ಪ ಇಲ್ಲದ ಮನೆಗೆ, ಅವನೇ ದಿಕ್ಕು. ನಾನು ಕೂಡ ಸಾಕಷ್ಟು ಬೆಂಬಲ ನೀಡಿದ್ದೇನೆ. ಇಷ್ಟು ಅಂಕ ಪಡೆದದ್ದು ನೋಡಿ ಖುಷಿ ಆಗುತ್ತಿದೆ. ನಾನು, ಬಿಎಡ್ ದ್ವಿತೀಯ ವರ್ಷದ ವಿದ್ಯಾರ್ಥಿ. ತಮ್ಮನ ರಿಸಲ್ಟ್ ನನಗೂ ಪ್ರೇರಣೆ ನೀಡುತ್ತಿದೆ. ಸಾಧನೆ ಮಾಡಲು ಪ್ರೋತ್ಸಾಹಿಸುತ್ತಿದೆ" ಎನ್ನುವ ಸಹೋದರಿ ರೇಣುಕಾಗೆ ತಮ್ಮನ ಸಾಧನೆಯ ಬಗ್ಗೆ ಹರ್ಷವೋ ಹರ್ಷ.

ನೂರಕ್ಕೆ ನೂರು ಅಂಕ ಪಡೆದವರ ಸಂಖ್ಯೆ ಬಲು ದೊಡ್ಡದಿದೆ!ನೂರಕ್ಕೆ ನೂರು ಅಂಕ ಪಡೆದವರ ಸಂಖ್ಯೆ ಬಲು ದೊಡ್ಡದಿದೆ!

ಗ್ರಾಮದಲ್ಲಿ ರಮೇಶನ ಸಾಧನೆಯ ಬಗ್ಗೆಯೇ ಮಾತು

ಗ್ರಾಮದಲ್ಲಿ ರಮೇಶನ ಸಾಧನೆಯ ಬಗ್ಗೆಯೇ ಮಾತು

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಗಲೂರು ಗ್ರಾಮದ ಜನರಲ್ಲಿ ಸಂಭ್ರಮವೋ ಸಂಭ್ರಮ. ಕುಗ್ರಾಮದ ಹುಡುಗನ ಹೆಮ್ಮೆಯ ಸಾಧನೆಯದ್ದೇ ಮಾತು. ಎಲ್ಲೆಲ್ಲೂ ರಮೇಶನ ಬಗ್ಗೆ, ಆತನ ಅಪ್ಪ - ಅಮ್ಮ, ಸಹೋದರಿಯ ಕಷ್ಟ - ಸಾಧನೆಯ ಬಗ್ಗೆ ಕೊಂಡಾಡಿಕೆ. ಊರಲ್ಲಿ ಹಬ್ಬದ ಸಂಭ್ರಮ ಕಾಣಿಸಿದೆ. ಅನೇಕರು ಸಾಲುಗಟ್ಟಿ ರಮೇಶನ ಮನೆ ಬಾಗಿಲಿಗೆ ಬಂದು, ಸಿಹಿ ಹಂಚಿ, ಶುಭ ಹಾರೈಸುತ್ತಿದ್ದಾರೆ.

ನನಗೆ ಐಎಎಸ್ ಓದುವ ಕನಸಿದೆ

ನನಗೆ ಐಎಎಸ್ ಓದುವ ಕನಸಿದೆ

"ನನಗೆ ಐಎಎಸ್ ಓದುವ ಕನಸಿದೆ. ಓದಲಿಕ್ಕಾಗಿ ನನ್ನ ಕಷ್ಟದಲ್ಲಿ ಭಾಗಿಯಾಗಲು ಅಮ್ಮ ಸದಾ ಸಿದ್ಧವಾಗಿದ್ದಾಳೆ. ನಾನೂ ಓದುವ ಉತ್ಸಾಹ ಹೊಂದಿದ್ದೇನೆ. ಸರಿಯಾದ ಮಾರ್ಗದರ್ಶನ ಸಿಗಬೇಕಿದೆ" ಎಂದು ತನ್ನ ಕನಸುಗಳನ್ನು ಬಿಚ್ಚಿಟ್ಟಿದ್ದಾನೆ ರಮೇಶ. ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಛಲವಾದಿ ರಮೇಶನ ಜೀವನ ಇನ್ನಷ್ಟು ಹಸನಾಗಲಿ, ಆತ ಇನ್ನಷ್ಟು ಸಾಧನೆಯ ಮೆಟ್ಟಿಗಳನ್ನೇರಲಿ, ಐಎಎಸ್ ಮಾಡುವ ಕನಸು ಕೈಗೂಡಲಿ ಎಂದು ಒನ್ಇಂಡಿಯಾ ಕನ್ನಡ ಹಾರೈಸುತ್ತದೆ.

English summary
Karnataka 2nd PUC results : Arts rank holder Ramesh interview by GM Rohini. Ramesh wants to pursue IAS. He has no father, but his mother is everything to him. He and his mother had to sacrifice eathers company to see this fantastic result. Congratulations Ramesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X