ನೂರಕ್ಕೆ ನೂರು ಅಂಕ ಪಡೆದವರ ಸಂಖ್ಯೆ ಬಲು ದೊಡ್ಡದಿದೆ!
ಬೆಂಗಳೂರು, ಏಪ್ರಿಲ್ 30 : ಒಂದಾನೊಂದು ಕಾಲದಲ್ಲಿ ಗಣಿತಕ್ಕೆ ನೂರಕ್ಕೆ ನೂರು, ಸಂಸ್ಕೃತದಲ್ಲಿ ನೂರಕ್ಕೆ ನೂರು, ವಿಜ್ಞಾನದಲ್ಲಿ ಒಂದೂ ಅಂಕ ಬಿಡದ ಹಾಗೆ ಸಾಧನೆ ಮಾಡಿದವರಿಗೆ ಊರ ತುಂಬ ಮೆರವಣಿಗೆ ಮಾಡಿಸಿ ಕರೆದುಕೊಂಡು ಬರುತ್ತಿದ್ದರು. ಅವರಿಗೆ 'ಭಾರೀ ಶಾಣ್ಯಾ' ಎಂಬ ಪಟ್ಟುವನ್ನೂ ನೀಡಿ ಅಟ್ಟಕ್ಕೇರಿಸುತ್ತಿದ್ದರು.
ಈಗ ಯಾರನ್ನು ಮೆರವಣಿಗೆ ಮಾಡಿ ಕರೆದುಕೊಂಡು ಬರುವುದು, ಯಾರನ್ನು ಬಾರೀ ಶಾಣ್ಯಾ ಅನ್ನುವುದು? ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಬದಲಾಯಿಸಿದ್ದರಿಂದ ಹೀಗಾಗಿದೆಯೋ ಅಥವಾ ಇಂದಿನ ಜಮಾನಾದಲ್ಲಿ ಹುಟ್ಟುವವರೇ ಬುದ್ಧಿವಂತರಿರುತ್ತಾರೋ ಅಥವಾ ಅಷ್ಟೊಂದು ಸ್ಪರ್ಧಾತ್ಮಕವಾಗಿದೆಯೋ? ಒಟ್ಟಿನಲ್ಲಿ ನೂರಕ್ಕೆ ನೂರು ಅಂಕ ಪಡೆದವರ ಲೆಕ್ಕವೇ ಬಲು ದೊಡ್ಡದಿದೆ.

ಇಂದು ಗಣಿತವೆನ್ನುವುದು ಕಬ್ಬಣದ ಕಡಲೆಯಾಗಿ ಉಳಿದಿಲ್ಲ. ಶಾಲೆಗಳಲ್ಲಿ ಕಲಿಸುವ ಶೈಲಿ ಬದಲಾಯಿಸಲಾಗಿದೆ. ಮೂಲೆಗೊಂದರಂತೆ ಟ್ಯೂಷನ್ ಕ್ಲಾಸುಗಳಿವೆ, ಚಡ್ಡಿ ಹಾಕಿಕೊಳ್ಳಲು ಬಾರದಿರುವಾಗಲೇ ಅಬ್ಯಾಕಸ್ ಕ್ಲಾಸಿಗೆ ಮಕ್ಕಳನ್ನು ಅಟ್ಟುತ್ತಾರೆ, ಆನ್ ಲೈನ್ ನಲ್ಲಿ ಹಲವಾರು ಕೋರ್ಸುಗಳಿವೆ. ಹೀಗಿದ್ದಕ್ಕೇ ಈ ವರ್ಷ ಗಣಿತದಲ್ಲಿಯೇ 100ಕ್ಕೆ 100 ಅಂಕ ಪಡೆದವರಲ್ಲಿ ಗಣಿತ ವಿದ್ಯಾರ್ಥಿಗಳೇ ಹೆಚ್ಚು. ವಿದ್ಯಾರ್ಥಿಗಳೇ ಎಂದು ಬರೆದಾಗ ವಿದ್ಯಾರ್ಥಿನಿಯರೂ ಇರುತ್ತಾರೆ.
| ವಿಷಯ | ಒಟ್ಟು ವಿದ್ಯಾರ್ಥಿಗಳು |
| ಕನ್ನಡ | 115 |
| ಸಂಸ್ಕೃತ | 420 |
| ಹಿಂದಿ | 45 |
| ಐಚ್ಛಿಕ ಕನ್ನಡ | 1 |
| ಇತಿಹಾಸ | 75 |
| ಅರ್ಥಶಾಸ್ತ್ರ | 85 |
| ತರ್ಕಶಾಸ್ತ್ರ | 9 |
| ಭೂಗೋಳಶಾಸ್ತ್ರ | 521 |
| ಲೆಕ್ಕಶಾಸ್ತ್ರ | 2917 |
| ಸಂಖ್ಯಾಶಾಸ್ತ್ರ | 943 |
| ಮನಃಶಾಸ್ತ್ರ | 18 |
| ಭೌತಶಾಸ್ತ್ರ | 772 |
| ರಸಾಯನಶಾಸ್ತ್ರ | 1131 |
| ಗಣಿತಶಾಸ್ತ್ರ | 3384 |
| ಜೀವಶಾಸ್ತ್ರ | 208 |
| ಎಲೆಕ್ಟ್ರಾನಿಕ್ಸ್ | 261 |
ಆನ್ ಲೈನ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?
ಶೇ.85ಕ್ಕಿಂತ ಹೆಚ್ಚು ಅಂಕ ಪಡೆದವರು 54,692 ವಿದ್ಯಾರ್ಥಿಗಳು, ಪ್ರಥಮ ದರ್ಜೆ ಅಂದರೆ ಶೇ.85ಕ್ಕಿಂತ ಕೆಳಗೆ ಮತ್ತು ಶೇ.60ಕ್ಕಿಂತ ಹೆಚ್ಚು ಅಂಕ ಪಡೆದವರು 213,611 ವಿದ್ಯಾರ್ಥಿಗಳು, ದ್ವಿತೀಯ ದರ್ಜೆ ಅಂದರೆ ಶೇ.60ಕ್ಕಿಂತ ಕೆಳಗೆ ಮತ್ತು ಶೇ.50ಕ್ಕಿಂತ ಹೆಚ್ಚು ಅಂಕ ಪಡೆದವರು 82,532 ವಿದ್ಯಾರ್ಥಿಗಳು ಮತ್ತು ತೃತೀಯ ದರ್ಜೆ ಅಂದರೆ ಶೇ.50ಕ್ಕಿಂತ ಕಡಿಮೆ ಅಂಕ ಪಡೆದವರು 57,586 ವಿದ್ಯಾರ್ಥಿಗಳು. ಯಾರಿಗ್ಗೊತ್ತು ತೃತೀಯ ದರ್ಜೆಯಲ್ಲಿ ಪಾಸಾದವರೇ ಮುಂದೆ ಭಾರೀ ಯಶಸ್ವಿ ನಾಗರಿಕರಾಗಬಹುದು!












Click it and Unblock the Notifications