ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಈ ಆತ್ಮನು!

ತಮ್ಮ70ನೇ ಹುಟ್ಟುಹಬ್ಬದ ಅಂಗವಾಗಿ ತೋಂಟದಪ್ಪ ಛತ್ರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ ಅವರು ತಮ್ಮ ಭಾಷಣದುದ್ದಕ್ಕೂ ದೇವೇಗೌಡ ಹಾಗೂ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು.
'ದೇವೇಗೌಡರು ಸೇರಿದಂತೆ ಹಲವರು ನಾನು ಪಕ್ಷ ಬಿಡುವುದನ್ನೇ ಕಾಯುತ್ತಿದ್ದಾರೆ. ಆದರೆ, ನಾನು ಪಕ್ಷ ಬಿಡುವುದು ಕನಸಿನ ಮಾತು. ನಾನು ಎಂದೂ ಬಿಜೆಪಿ ಬಿಟ್ಟು ಹೋಗುವುದಿಲ್ಲ' ಎಂದು ಬಿಎಸ್ ವೈ ಹೇಳಿದರು.
ಕುರ್ಚಿ ನಾನು ಕೇಳಿದ್ದಲ್ಲ: ಸಿಎಂ ಕುರ್ಚಿಗಾಗಿ ನಾನು ದೆಹಲಿಗೆ ಹೋಗುವುದಿಲ್ಲ. ಮತ್ತೆ ಸಿಎಂ ಸ್ಥಾನ ನೀಡುತ್ತೇನೆ ಎಂದು ನಿತಿನ್ ಗಡ್ಕರಿ ಈ ಹಿಂದೆ ಭರವಸೆ ನೀಡಿದ್ದರು. ಅದಕ್ಕಾಗಿ ಗಡ್ಕರಿ ಅವರನ್ನು ಕರೆಸಿ ಕೇಳಲಾಯಿತು. ಇಲ್ಲದಿದ್ದರೆ ಆ ಕಡೆ ತಲೆ ಹಾಕುತ್ತಿರಲಿಲ್ಲ.
ಮತ್ತಷ್ಟು ಕೆಚ್ಚಿನಿಂದ ಮತ್ತೆ ಜನರ ಮುಂದೆ ಬರುವೆ. ನನ್ನ ಸರ್ಕಾರ ಬೀಳಿಸಲು ಮೂರು ಬಾರಿ ಯತ್ನಿಸಲಾಯಿತು. ರಾಜ್ಯಪಾಲರನ್ನು ದಾಳವಾಗಿ ಬಳಸಲಾಯಿತು. ವಿಶ್ವಾಸದ್ರೋಹಿಗಳಿಂದ ಪಾಠ ಕಲಿತ್ತಿದ್ದೇನೆ.
ಉಡುಪಿ- ಚಿಕ್ಕಮಗಳೂರು ಚುನಾವಣೆ ನಮಗೆ ಉತ್ತಮ ಅವಕಾಶ ಒದಗಿಸಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದರು.
ತುಮಕೂರಿನಲ್ಲಿ ಹುಟ್ಟುಹಬ್ಬ ಸಮಾರಂಭ, ಸಂಭ್ರಮ ಮುಗಿಸಿಕೊಂಡ ಯಡಿಯೂರಪ್ಪ ಹಾಗೂ ಅವರ ಪರಿವಾರ ಈಗ ಬೆಂಗಳೂರಿನ ರೇಸ್ ಕೋರ್ಸ್ ನಿವಾಸಕ್ಕೆ ಹಿಂದಿರುಗಿದೆ. ಬೆಂಗಳೂರಿಗೆ ಕಾಲಿಟ್ಟ ಬಳಿಕ, ಸುದ್ದಿಗಾರರೊಂದ್ಗೆ ಮಾತನಾಡಿದ ಅವರು, ಬಜೆಟ್ ಸಿದ್ಧತೆಯಲ್ಲಿರುವ ಸಿಎಂ ಸದಾನಂದ ಗೌಡರಿಗೆ ಕಿವಿಮಾತು ಹೇಳಿದರು. 'ಯಾವುದೇ ಕಾರಣಕ್ಕೂ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡಿ' ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications