ಹಿರಿಯೂರಿನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು ಗೊತ್ತಾ?
ಹಿರಿಯೂರು, ಏಪ್ರಿಲ್, 13: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ಸಕ್ರಿಯವಾಗಿವೆ. ಇನ್ನು ಇಂದು (ಏಪ್ರಿಲ್ 13) ಹಿರಿಯೂರಿಗೆ ಭೇಟಿ ನೀಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಜೆಡಿಎಸ್, ಬಜೆಪಿ ಪಕ್ಷದ ಕಾರ್ಯಕರ್ತರಿಗೆ ಕೆಲವೊಂದು ಕಿವಿಮಾತನ್ನು ಹೇಳಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದ 28 ಸ್ಥಾನಗಳನ್ನು ಗೆಲ್ಲಲು ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಲು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ನಗರದ ತಾಹಾ ಪ್ಯಾಲೇಸ್‌ನಲ್ಲಿ ಶನಿವಾರ (ಏಪ್ರಿಲ್ 13) ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಉದ್ದಗಲಕ್ಕೂ ಬಿಜೆಪಿ ಮತ್ತು ಜೆಡಿಎಸ್ ಗಾಳಿ ಬೀಸುತ್ತಿದೆ. ನೀರಾವರಿ ಸಚಿವರಾಗಿದ್ದಾಗ ಉತ್ಯುತ್ತಮವಾಗಿ ಕೆಲಸ ನಿರ್ವಹಿಸಿರುವ ಧೀಮಂತ ನಾಯಕ ಗೋವಿಂದ ಕಾರಜೋಳ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಅಭ್ಯರ್ಥಿ ಹೆಸರು ಹೇಳಲು ಸಾಧ್ಯವಿಲ್ಲದಂತಹ ಅಸಹಾಯಕ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ವಾಸ್ತವವಾಗಿ ದಿವಾಳಿಯಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಮೂಲೆ ಮೂಲೆಗಳಿಗೆ ನಾನು ಪ್ರವಾಸ ಮಾಡಿದ್ದು, ಮತದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಬೇಕು ಎಂಬುದು ದೇಶದ ಬಹುಪಾಲು ಮತದಾರರ ಮನಸ್ಸಿನಲ್ಲಿದೆ. ಹೀಗಾಗಿ 28 ಕ್ಷೇತ್ರದಲ್ಲೂ ಮಿತ್ರ ಪಕ್ಷದ ಗೆಲುವು ಖಚಿತ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರೈತರ ಖಾತೆಗೆ ಹಾಕುತ್ತಿದ್ದ 6 ಸಾವಿರದ ಜೊತೆಗೆ ನಾನು ಸಿಎಂ ಆಗಿದ್ದಾಗ 4 ಸಾವಿರ ರೂಪಾಯಿಯನ್ನು ಕೊಡಲಾಗುತ್ತಿತ್ತು. ಇದೀಗ ಕಾಂಗ್ರೆಸ್ ಪಕ್ಷ ಅದನ್ನು ನಿಲ್ಲಿಸಿ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಬದಲು ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿ ರಾಜ್ಯ ಸರ್ಕಾರ ತೇಲಾಡುತ್ತಿದೆ ಎಂದರು.
ಆಸ್ತಿ ನೋಂದಣಿ ದರ ಹೆಚ್ಚಿಸಿ, ಮದ್ಯದ ದರ ಹೆಚ್ಚಿಸಿ ಒಂದು ಕೈಯಿಂದ ಕಿತ್ತು ಮತ್ತೊಂದು ಕೈಗೆ ಗ್ಯಾರಂಟಿ ಹೆಸರಿನಲ್ಲಿ ಕೊಡುವ ಹೇಳಿಕೆ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಭಾಗದಲ್ಲಿ ತಾಂಡವಾಡುತ್ತಿರುವ ನೀರಿನ ಸಮಸ್ಯೆ ಪರಿಹರಿಸಲು ಬಿಜೆಪಿ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 80 ಕೋಟಿ ಜನರಿಗೆ ಅಕ್ಕಿ ಕೊಡಲಾಗುತ್ತಿದೆ. ಒಂದು ಕಾಳು ಅಕ್ಕಿ ಕೊಡಲಾಗದ ಕಾಂಗ್ರೆಸ್‌ನವರು ಅನ್ನ ಭಾಗ್ಯ ಹೆಸರಿನಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮೋದಿ ವಿಶ್ವ ನಾಯಕ ಎಂಬುದಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಯುದ್ದದಲ್ಲಿ ಅವರೊಂದಿಗೆ ಮಾತನಾಡಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದುದೇ ಸಾಕ್ಷಿ ಎಂದರು.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು, ಫಸಲ್ ಭೀಮಾ ಯೋಜನೆ ಜಾರಿಗೆ ತರುವ ಮೂಲಕ ರೈತರ ಬದುಕಿಗೆ ದಾರಿದೀಪವಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್ ಮುಖಂಡರು ಕಂಗಾಲಾಗಿದ್ದು, ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷವೇ ನಿಜವಾದ ಕೋಮುವಾದಿ ಪಕ್ಷ. ಬಿಜೆಪಿ ಎಂದಿಗೂ ಕೋಮುವಾದಿಯಲ್ಲ, ಅದು ರಾಷ್ಟ್ರವಾದಿ ಪಕ್ಷ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರ ಗೆಲುವು ನಿಶ್ಚಿತ. ಬಳ್ಳಾರಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ನೇಹಿತ ಶ್ರೀರಾಮುಲು ಅವರು 2 ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯ ಪತಾಕೆ ಹಾರಿಸಲಿದ್ದಾರೆ ಎಂದರು.
ಶಾಸಕ ಭೈರತಿ ಬಸವರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ, ಮುಖಂಡ ಎಂ.ರವೀಂದ್ರಪ್ಪ, ಎಸ್.ಲಿಂಗಮೂರ್ತಿ, ಎನ್.ಆರ್.ಲಕ್ಷ್ಮೀಕಾಂತ್, ಸಿದ್ದಾರ್ಥ್ ತಿಪ್ಪಾರೆಡ್ಡಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಕೆ.ಶಂಕರಮೂರ್ತಿ, ಜಗದೀಶ್, ಶಿವಪ್ರಸಾದ್ ಗೌಡ, ಜೆಜೆ ಹಳ್ಳಿ ಮಂಜುನಾಥ್, ಕೇಶವಮೂರ್ತಿ, ಹನುಮಂತರಾಯಪ್ಪ ಸೇರಿ ಇನ್ನಿತರರು ಹಾಜರಿದ್ದರು.












Click it and Unblock the Notifications