ಯಡಿಯೂರಪ್ಪ ಫೋಕ್ಸೋ ಪ್ರಕರಣ: ಮಹಿಳಾ ಆಯೋಗ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 16: ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕಾಯ್ದಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ಈ ಕೇಸಿನ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯವರು, ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದೆ. ತನಿಖೆಯಲ್ಲಿ ಯಡಿಯೂರಪ್ಪನವರ ತಪ್ಪು ಸಾಬೀತಾದರೆ ಅವರು ಶಿಕ್ಷೆಗೆ ಗುರಿಯಾಗುತ್ತಾರೆ. ವರದಿ ಬಂದರೆ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದರು.

ಯಡಿಯೂರಪ್ಪನವರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ತನಿಖೆಯಿಂದ ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು. ಕಾನೂನಿಗೆ ಯಾರು ಹೊರತಲ್ಲ. ತಪ್ಪು ಸಾಬೀತಾದರೆ ಪೊಕ್ಸೊ ಅಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ತನಿಖಾ ವರದಿ ಸಲ್ಲಿಕೆ ಬಳಿಕ ಎಲ್ಲವು ತಿಳಿಯಲಿದೆ ಎಂದು ತಿಳಿಸಿದರು.
ಪೋಷಕರಿಗೆ ಆಯೋಗದ ಅಧ್ಯಕ್ಷೆ ಸಲಹೆ
ಸಂಬಂಧಿಸಿದ ಪುರಷರಿಂದಲೇ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ವಯಸ್ಸಿಗೆ ಬಾರದ ಹೆಣ್ಣುಮಕ್ಕಳನ್ನು ಗರ್ಭೀಣಿ ಮಾಡಿ ನರಕಕ್ಕ ತಳ್ಳಲಾಗುತ್ತಿದೆ. 15 ಇಲ್ಲವೇ 16ನೇ ವಯಸ್ಸಿಗೆ ಹೆಣ್ಣುಮಕ್ಕಳು ಗರ್ಭ ಧರಿಸಿದರೆ ಏನು ಮಾಡುವುದು. ಹೆಣ್ಣು ಹೆತ್ತ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು, ನಿಗ ಇಡಬೇಕು ಎಂದು ಅವರು ಸಲಹೆ ನೀಡಿದರು.

ಮಹಿಳೆಯರು ಕಾಣೆಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಹಿಳಾ ಆಯೋಗದ ಅಧ್ಯಕ್ಷೆ, ಇದರ ಹಿಂದೆ ದೊಡ್ಡ ಮಾಫಿಯಾ ಇದೆ. ಕಾಣೆಯಾದವರ ಪೈಕಿ ಕೆಲವರಂತೂ ಪತ್ತೆ ಆಗುವುದೇ ಇಲ್ಲ ಎಂದು ವಿಷಾಧಿಸಿದರು.
ಸದ್ಯ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳ ಹಕ್ಕುಗಳಿಗೆ ಗೌರವ ಹೆಚ್ಚಾಗಿದೆ. ಯೋಜನೆಗಳಿಂದ ಕುಟುಂಬ, ಸಮಾಜ ಅಭಿವೃದ್ಧಿ ಹೊಂದುತ್ತಿದೆ. ಹೆಣ್ಣು ಮಕ್ಕಳಿಗೆ ಹಣ ನೀಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಇಂದಿನ ಹೆಣ್ಣು ಮಕ್ಕಳ ಗೌರವ, ಸರ್ಕಾರಿ ಯೋಜನೆಗಳ ಕುರಿತು ಅವರು ಶ್ಲಾಘಿಸಿದರು.
ಯಡಿಯೂರಪ್ಪ ತೇಜೋವಧೆ ಸರಿಯಲ್ಲ: ಸಚಿವ
ಫೋಕ್ಸೋ ಪ್ರಕರಣ ದಾಖಲಾಗಿದೆ. ಬಿಎಸ್ ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ. ದೂರು ದಾಖಲಾದ ತಕ್ಷಣ ಅವರನ್ನು ದೋಷಿ ಅಂತಲೂ ಇಲ್ಲ, ನಿರ್ದೋಷಿ ಅಂತಲೂ ಹೇಳಲು ಬರುವುದಿಲ್ಲ. ತನಿಖೆ ನಡೆಯಬೇಕು. ಅದಾದ ಬಳಿಕ ತಿಳಿಯಲಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
ಕೇಸ್ ಬಗ್ಗೆ ಯಡಿಯೂರಪ್ಪ ಸ್ಪಷ್ಟನೆ ಏನಿದೆ?
ದೂರು ನೀಡಿರುವ ಹೆಣ್ಣು ಮಗಳು ಕೆಲವು ಬಾರಿ ಸಹಾಯ ಕೇಳಿ ಕೊಂಡು ನಮ್ಮ ಬಳಿ ಬಂದಿದ್ದರು. ಅದರಂತೆಯ ಇತ್ತೀಚೆಗೆ ತಾಯಿ ಮಗಳ ಮನೆಗೆ ಬಂದಾಗ ಕೂರಿಸಿ ಸಹಾಯ ಮಾಡಲು ಮಾತನಾಡಿದ್ದೆ. ಸಮಸ್ಯೆ ಇದೆ ಎಂದಾಗ ಪೊಲೀಸರ ಬಳಿ ನಾನೇ ಅವರನ್ನು ಕಳುಹಿಸಿದ್ದೆ. ಅಲ್ಲಿಗೆ ಹೋಗ ಮೇಲೆ ಉಪಕಾರ ಮಾಡದವರ ಮೇಲೆ ರೀತಿ ಆರೋಪ ಮಾಡಿದ್ದಾರೆ.
ಈ ಆರೋಪಗಳು ಆಧಾರರಹಿತವಾದವು. ಏನೇ ತನಿಖೆ ಇದ್ದರೂ ನಾನು ಎದುರಿಸಲು ಸಿದ್ಧ ಎಂದು ಯಡಿಯೂರಪ್ಪ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಯಡಿಯೂರಪ್ಪನವರ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿದೆ. ತನಿಖೆ ಬಳಿಕೆ ಸತ್ಯಾಸತ್ಯತೆ ತಿಳಿಯಲಿದೆ ಎನ್ನಲಾಗಿದೆ..












Click it and Unblock the Notifications