ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ; 28 ಕ್ಷೇತ್ರಗಳನ್ನು ಗೆದ್ದ ನಂತರ ಆ ಬಗ್ಗೆ ಮಾತಾಡೋಣ: ಬಿ ಎಸ್ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 07: ದಿವಾಳಿ ಅಂಚಿನಲ್ಲಿರುವ ಈ ಸರಕಾರ ಇನ್ನೆಷ್ಟು ದಿನ ಅಧಿಕಾರದಲ್ಲಿ ಮುಂದುವರೆಯುತ್ತಾರೋ ಎಂಬ ಪ್ರಶ್ನೆ ಇದೆ. ನಾನು ಆ ಬಗ್ಗೆ ಮಾತನಾಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆದ್ದ ನಂತರ ಆ ಬಗ್ಗೆ ಮಾತಾಡೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣ ದಿವಾಳಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. ಪುಕ್ಕಟೆ ಕಾರ್ಯಕ್ರಮಗಳನ್ನು ಘೋಷಿಸಿ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಬಹುಶಃ ಇದನ್ನು ಸುಧಾರಿಸಲು ನಮಗೆ 10 ವರ್ಷ ಬೇಕಾಗಬಹುದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರವೇ ಮತ್ತೊಮ್ಮೆ ಬರಲಿದ್ದು, ರೋಡ್ ಷೋದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ರಾಜ್ಯದಲ್ಲಿ ಬರಗಾಲವಿದೆ. ಕುಡಿಯುವ ನೀರಿನ ತೀವ್ರ ಹಾಹಾಕಾರ ಬೆಂಗಳೂರಿನಲ್ಲಿದೆ. ಕಿಸಾನ್ ಸಮ್ಮಾನ್‍ನಡಿ ಕೇಂದ್ರದ 6 ಸಾವಿರದ ಜೊತೆಗೆ ನಾನು 4 ಸಾವಿರ ಕೊಡುತ್ತಿದ್ದೆ. ಈಗ 4 ಸಾವಿರ ಕೊಡುವುದು ನಿಲ್ಲಿಸಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆ ನಿಂತಿದೆ. ಸೈಕಲ್ ವಿತರಣೆಯೂ ನಿಂತಿದೆ ಎಂದು ಹೇಳಿದರು.
ಮೋದಿ ಅವರ ಸತ್ಯದ ಹಾದಿ; ಸಿದ್ದರಾಮಯ್ಯರ ಮುಳ್ಳಿನ ದಾರಿ
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ಅವರು ನುಡಿದಂತೆ ನಡೆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳಿನ ಭರವಸೆಗಳನ್ನು ನೀಡುವ ಮೂಲಕ ಜನರನ್ನು ಮುಳ್ಳಿನ ಹಾದಿಯಲ್ಲಿ ನಡೆಸುತ್ತಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನುಡಿದಂತೆ ನಡೆದಿದೆ. ಜಿ 20, ಉಜ್ವಲ, ಎಲ್‍ಪಿಜಿ, ಜನೌಷಧ, ಸುಕನ್ಯ ಸಮೃದ್ಧ್ಧಿ, ಮುದ್ರಾ ಯೋಜನೆಗಳಂತಹ ಇನ್ನೂ ಅನೇಕ ಪ್ರಮುಖ ಯೋಜನೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
2014 ರಲ್ಲಿ ಭಾರತದ ಪ್ರಧಾನಿಯಾಗಿ ಮೋದಿಯವರು ಪ್ರಮಾಣವಚನ ಸ್ವೀಕರಿಸಿದರು. ಅವರ ಹತ್ತು ವರ್ಷಗಳ ಆಡಳಿತದಲ್ಲಿ ಮಾಡಿದಂತಹ ಸಾಧನೆಗಳು ಜನಸಾಮಾನ್ಯರನ್ನು ತಲುಪಿದೆ. ಮಹಾತ್ಮ ಗಾಂಧೀಜಿ ಅವರ ಅಂತ್ಯೋದಯ ಅನ್ನ ಯೋಜನೆಯ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಿದೆ. ಆದರೆ ಕಾಂಗ್ರೆಸ್‍ನವರು ಗಾಂಧೀಜಿ ಅವರನ್ನು ಹೀಯಾಳಿಸುವಂಥÀ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ತಿಳಿಸಿದರು.
ರಾಜ್ಯದ 28ಕ್ಕೆ 28 ಮತ ಕ್ಷೇತ್ರಗಳು ಬಿಜೆಪಿಗೆ ಸುರಕ್ಷಿತ ಕ್ಷೇತ್ರಗಳು, 400ಕ್ಕೂ ಮೀರಿ ಕ್ಷೇತ್ರಗಳನ್ನು ಗೆದ್ದು ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಈ ವೇಳೆ ಬಿಜೆಪಿ ರಾಜ್ಯ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ, ಪ್ರಕಾಶ್ ಶೇಷರಾಘವಾಚಾರ್, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಕರುಣಾಕರ ಖಾಸಲೆ ಹಾಗೂ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications