ಧಾರವಾಡ ಅಭ್ಯರ್ಥಿ ಬದಲಾವಣೆಗೆ ಶ್ರೀಗಳ ಪಟ್ಟು: ಯಡಿಯೂರಪ್ಪ ಕೊಟ್ಟ ಸ್ಪಷ್ಟನೆ ಏನು?
ಹುಬ್ಬಳ್ಳಿ, ಮಾರ್ಚ್ 27: ಧಾರವಾಡದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್ ಜೋಶಿ ಅವರ ವಿಚಾರದಲ್ಲಿ ಶಿರಹಟ್ಟಿ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರಿಗೆ ತಪ್ಪು ಗ್ರಹಿಕೆಯಾಗಿದೆ. ನಾನು ದಿಂಗಾಲೇಶ್ವರ ಶ್ರೀಗಳು ಮತ್ತು ಎಲ್ಲಾ ಶ್ರೀಗಳ ಜೊತೆಗೆ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರನ್ನು ಬದಲಾಯಿಸಬೇಕು, ಇಲ್ಲವಾದರೆ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೆ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಪ್ರಹ್ಲಾದ್ ಜೋಶಿಯವರು ಉಪಸ್ಥಿತಿಯು ಇದೆ.

ಜೋಶಿ ಬದಲಾವಣೆ ಪ್ರಶ್ನೆಯೇ ಇಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅವರು ಧೀಮಂತ ನಾಯಕ.
ಎಲ್ಲಾ ಜಾತಿ ಧರ್ಮಗಳಿಗೆ ಗೌರವ ನೀಡುತ್ತಾರೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊಡ್ಡ ಸ್ಥಾನ ನೀಡಿದ್ದಾರೆ. ಏನೋ ತಪ್ಪು ಗ್ರಹಿಕೆ ಆಗಿದೆ. ನಾನು ಸ್ವಾಮೀಜಿ ಬಳಿ ಮಾತನಾಡುತ್ತೇನೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ- ಜೆಡಿಎಸ್ ಕರ್ನಾಟಕದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ವಾತಾವರಣವಿದೆ. ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಶೆಟ್ಟರ್, ಬೊಮ್ಮಾಯಿ, ಜೋಶಿ ಗೆಲ್ಲುತ್ತಾರೆ
ರಾಜ್ಯದ ಅಭಿವೃದ್ಧಿ ಮಾಡಲು ಈ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ, ಅಭಿವೃದ್ಧಿ ಹಣವೇ ಇಲ್ಲ. ಶಾಸಕರುಗಳಿಗೆ ಅನುದಾನ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಜಗ ಮೆಚ್ಚಿದ ನಾಯಕ. ಅವರ ಅಲೆ ಇದ್ದು, ರಾಜ್ಯದಲ್ಲಿ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಬಿಜೆಪಿಯ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆ ಆಗುತ್ತಾರೆ ಎಂದು ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿ ಯಾರು ಕೂರುವುದಿಲ್ಲ. ಸೇರ್ಪಡೆ ನಿಜವಾದರೆ ಅವರು ಹಂತ ಹಂತವಾಗಿ ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಶ್ರೀಗಳ ಟೀಕೆ ನನಗೆ ಆಶೀರ್ವಾದ: ಜೋಶಿ
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಪೂಜ್ಯ ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ನನಗೆ ಗೌರವ ಇದೆ. ಅವರ ಪೀಠದ ಬಗ್ಗೆ ನನಗೆ ಗೌರವವಿದೆ. ಕಳೆದ ಮೂವತ್ತು ವರ್ಷದಿಂದ ನನಗೆ ಅವರ ಒಡನಾಟ ಇದೆ. ಕೆಲ ವಿಚಾರದಲ್ಲಿ ಅವರಿಗೆ ತಪ್ಪು ಗ್ರಹಿಕೆಯಾಗಿದೆ. ಅವರು ಮಾತಾಡಿರೋದು ಎಲ್ಲವೂ ನನಗೆ ಅಶೀರ್ವಾದ ಎಂದು ತಿಳಿಸಿದರು.
ಶ್ರೀಗಳ ಎಲ್ಲ ಟೀಕೆಯನ್ನು ನಾನು ಆಶೀರ್ವಾದ ಎಂದುಕೊಂಡಿದ್ದೇನೆ. ತುಲಾಭಾರ ಕಾರ್ಯಕ್ರಮದಲ್ಲಿ ನನ್ನ ಹೆಸರಿತ್ತು ಹಾಗಾಗಿ ನಾನು ಹೋಗಿದ್ದೆ, ಅವರು ಹೇಳಿರೋ ವೈಯಕ್ತಿಕ ಆರೋಪಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ದೊಡ್ಡವರು, ಅವರಿಗೆ ತಪ್ಪು ಗ್ರಹಿಕೆಯಾಗಿದೆ. ದಯಮಾಡಿ ಸಮಯ ಕೊಟ್ಟರೆ ನಾನು ಅವರ ಜೊತೆ ಮಾತಾಡುತ್ತೇನೆ ಎಂದು ಹೇಳಿದರು.












Click it and Unblock the Notifications