Madhuswamy: ತಣ್ಣಗಾದ್ರಾ ಮಾಧುಸ್ವಾಮಿ? ತೋಟದ ಮನೆಯಲ್ಲಿ ಏನೇನಾಯ್ತು?
ತುಮಕೂರು ಮಾರ್ಚ್ 23: ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯವೆದ್ದ ಮಾಜಿ ಸಚಿವ ಮಾಧುಸ್ವಾಮಿ ತಣ್ಣಗಾಗಿರುವಂತೆ ಕಾಣಿಸುತ್ತಿದೆ. ಮಾಧುಸ್ವಾಮಿಯ ಕೋಪ ಶಮನ ಮಾಡಲು ಕಮಲ ನಾಯಕರು ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಬಿಜೆಪಿಯಲ್ಲಿ ಉಳಿಯಲು ಮಾಧುಸ್ವಾಮಿ ಒಪ್ಪಿದ್ದಾರೆ ಎನ್ನಲಾಗುತ್ತಿದೆ.
ಹೌದು.... ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದೆ ಬಹಿರಂಗ ಆಸಮಾಧಾನಗೊಂಡಿದ್ದ ಮಾಜಿ ಸಚಿವ ಮಾಧುಸ್ವಾಮಿ ಅವರ ಮನವೊಲಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಗೂ ಯಶಸ್ವಿಯಾಗಿದ್ದಾರೆ. ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಂ ಅವರ ತೋಟದ ಮನೆಯಲ್ಲಿ ಶುಕ್ರವಾರ ದಿಢೀರ್ ಗೌಪ್ಯ ಮಾತುಕತೆ ನಡೆಸಿ ಮಾಧುಸ್ವಾಮಿ ಕೋಪವನ್ನು ಶಮನ ಮಾಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪನವರೇ ತುಮಕೂರಿಗೆ ಆಗಮಿಸಿ ಮಾಧುಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರು. ಸುಮಾರು ಅರ್ಧ ಗಂಟೆ ಉಭಯ ನಾಯಕರು ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದು ಈ ವೇಳೆ ಮಾಜಿ ಸಚಿವರಾದ ಬೈರತಿ ಬಸವರಾಜು, ಗೋಪಾಲಯ್ಯ, ಮಸಾಲ ಜಯರಾಂ ಮತ್ತಿತರ ಜಿಲ್ಲಾ ಬಿಜೆಪಿ ನಾಯಕರೂ ಇದ್ದರು ಎನ್ನಲಾಗುತ್ತಿದೆ.
ಬಳಿಕ ಮಾಯನಾಡಿದ ಯಡಿಯೂರಪ್ಪ, ಅಸಮಾಧಾನಗೊಂಡಿದ್ದ ಮಾಧುಸ್ವಾಮಿ ಮನವೊಲಿಸಿದ್ದೇನೆ. ಕೇವಲ ಪಕ್ಷದ ವಿಚಾರದ ಬಗ್ಗೆ ಮಾತ್ರ ಅವರ ಜೊತೆಗೆ ಮಾತುಕತೆಯಾಗಿದ್ದು ಚುನಾವಣೆಯಲ್ಲಿ ಸೋಮಣ್ಣ ಬೆಂಬಲಿಸುವ ಕುರಿತು ಚರ್ಚೆಯಾಗಿಲ್ಲ. ಅವರಿಗೆ ಬೆಂಬಲ ನೀಡುವದು, ಬಿಡುವುದು ಮಾಧುಸ್ವಾಮಿಗೆ ಬಿಟ್ಟ ವಿಚಾರ., ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಅವರ ಮನವೊಲಿಸಿದ್ದು, ಅವರು ಪಕ್ಷದಲ್ಲೇ ಉಳಿಯುತ್ತಾರೆ ಎಂದರು.

ಸೋಮಣ್ಣಗೆ ಬೆಂಬಲ ನೀಡುತ್ತಾರಾ ಮಾಧುಸ್ವಾಮಿ?
ಇನ್ನೂ ಮಾಧುಸ್ವಾಮಿ ಅವರು ಸೋಮಣ್ಣ ಅವರಿಗೆ ಬೆಂಬಲ ನೀಡುತ್ತಾರಾ ಎನ್ನುವ ವಿಚಾರ ಮಾತ್ರ ಪಕ್ಕಾ ಆಗಿಲ್ಲ. ಈ ಬಗ್ಗೆ ಇನ್ನೂ ಕೂಡ ನಿರ್ಧಾರವಾಗಬೇಕಿದೆ. ಈ ಬಗ್ಗೆ ಖುದ್ದು ಮಾಧುಸ್ವಾಮಿ ಮಾತನಾಡಿದ್ದು,'ನಾನು ಪಕ್ಷ ತೊರೆಯುವ ನಿರ್ಧಾರದಿಂದ ಮಾತ್ರ ಹಿಂದೆ ಸರಿದಿದ್ದೇನೆ. ಆದರೆ ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಬೆಂಬಲ ನೀಡುವ ಕುರಿತು ಇನ್ನೂ ತೀರ್ಮಾನ ಆಗಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರೊಂದಿಗೆ ಮಾತನಾಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, 'ಯಡಿಯೂರಪ್ಪ ಅವರನ್ನು ಬೆಂಬಲಿಸಿ ಜೆಡಿಯು ಬಿಟ್ಟು ಬಿಜೆಪಿಗೆ ಹೋದವನು ನಾನು. ಅವರು ಹೇಳಿದ್ದಕ್ಕೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದೆ. ಯಡಿಯೂರಪ್ಪ ಅವರು ಪಕ್ಷ ಬಿಡುವುದು ಬೇಡ ಎಂದು ಹೇಳಿದ್ದಾರೆ. ಹೀಗಾಗಿ ನಾನು ಸುಮ್ಮನಾಗುತ್ತೇನೆ' ಎಂದರು.
ಈ ಚುನಾವಣೆ ವಿಚಾರದಲ್ಲಿ ಯಾವುದೇ ಒತ್ತಡ ಹಾಕಬೇಡಿ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ ಎಂದರು. ಜೊತೆಗೆ ನಾನು ಚುನಾವಣೆ ವಿಚಾರವಾಗಿ ಚರ್ಚೆ ಅವರೊಂದಿಗೆ ಮಾಡಿಲ್ಲ. ಚರ್ಚೆಯಾಗಿರುವುದು ಪಕ್ಷ ಬಿಡುವ ವಿಚಾರ ಮಾತ್ರ ಎಂದು ಈ ವೇಳೆ ಹೇಳಿದರು. ಜೊತೆಗೆ ನಾನು ಅಭ್ಯರ್ಥಿ ಸೋಮಣ್ಣ ಅವರಿಗೆ ನಾಲ್ಕೈದು ದಿನ ಬಿಟ್ಟು ಬರುವಂತೆ ಹೇಳಿದ್ದೇನೆ ಎಂದು ಹೇಳಿದರು. ಇದೇ ವೇಳೆ ನನ್ನ ಒಂದು ವೋಟ್‌ನಿಂದ ಏನಾಗುತ್ತೆ ಬಿಡಿ ಅಂತ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications