ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಿತ್ರ ಜ್ವರಕ್ಕೆ ಬೆಚ್ಚಿಬಿದ್ದ ಬಳ್ಳಾರಿ ಜಿಲ್ಲೆ

By * ರೋಹಿಣಿ, ಬಳ್ಳಾರಿ
|
Google Oneindia Kannada News

Leptospirosis in Kidney
ಬಳ್ಳಾರಿ, ಅ.24: ಬಳ್ಳಾರಿ ಜಿಲ್ಲೆಯಲ್ಲಿ ಅಪರೂಪದ ಇಲಿಜ್ವರ ಕಾಣಿಸಿಕೊಂಡಿದೆ. ರಾಜ್ಯ ಆರೋಗ್ಯ ಇಲಾಖೆಯೇ ಬೆಚ್ಚಿ ಬೀಳುವಂಥಹ, ಎಂದೂ ಕಾಣದ ಈ ವ್ಯಾಧಿಗೆ ಚಿಕಿತ್ಸೆ ನೀಡಲಿಕ್ಕಾಗಿಯೇ ತಜ್ಞರ ತಂಡಗಳು ಭುವನಹಳ್ಳಿಗೆ ಆಗಮಿಸಿದೆ. ಗಾದಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ತೀವ್ರ ಜ್ವರದ ಕಾರಣ ಮೃತಪಟ್ಟವರ ಸಂಖ್ಯೆ 15 ಕ್ಕೇರಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಅನಾರೋಗ್ಯ ಪೀಡಿತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ತೀವ್ರ ಜ್ವರ, ಕಾಮಲೆ ಲಕ್ಷಣಗಳು, ಉಸಿರಾಟದ ತೊಂದರೆ, ಇನ್ನಿತರೆ ಕಾರಣಗಳಿಂದ ನರಳುತ್ತಾ ಮೃತಪಡುವವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಅಪರೂಪದ ಜ್ವರ? :
ಚಿಕನ್‌ಗುನ್ಯಾ ವ್ಯಾಧಿಯನ್ನು ಅನುಭವಿಸಿದ್ದ ಅನೇಕರ ಪಾಲಿಗೆ ಈ ಜ್ವರ ಮತ್ತೆ ಹುಟ್ಟಿಬಂದಂಥಹ ಅನುಭವವನ್ನು ಮೂಡಿಸುತ್ತಿದೆ. ಅಲ್ಲದೇ, ಪೀಡಿಸುವ ಜ್ವರದ ಬಾಧೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ವಿವಿಧ ಗ್ರಾಮಸ್ಥರು ಮನೆಗಳನ್ನು, ಗ್ರಾಮಗಳನ್ನು ತೊರೆದು ದಿಕ್ಕುತೋಚದವರಂತೆ ವಲಸೆ ಹೋಗುತ್ತಿದ್ದಾರೆ. ನಿಜಕ್ಕೂ, ಕರ್ನಾಟಕ ಕಂಡ ಅಪರೂಪದ ಜ್ವರ ಇದಾಗಿದೆ.

ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮ ಪಂಚಾಯಿತಿಯ ಭುವನಹಳ್ಳಿ ಗ್ರಾಮದಲ್ಲಿ ಇಡೀ ಗ್ರಾಮ ಜನರು ಏಕಾಏಕಿ ತೀವ್ರ ಜ್ವರ, ಕಣ್ಣು ಹಸಿರಾಗಿ ಮೈಕೈ ನೋವು, ನರನಾಡಿಗಳಲ್ಲಿ ತೀವ್ರ ಸೆಳತ ಇನ್ನಿತರೆ ಲಕ್ಷಣಗಳಿಂದ ಅನಾರೋಗ್ಯ ಪೀಡಿದರಾದಾಗ ಜಿಲ್ಲಾ ಆರೋಗ್ಯ ಇಲಾಖೆ ಅಷ್ಟಾಗಿ ಗಮನ ನೀಡಲಿಲ್ಲ. ಈಗ ಇಡೀ ಇಲಾಖೆ ಈ ಗ್ರಾಮಗಳಲ್ಲಿ ಮೊಕ್ಕಾಂಹೂಡಿ ಚಿಕಿತ್ಸೆ ನೀಡುತ್ತಿದೆ.

ಜಿಲ್ಲಾ ಆರೋಗ್ಯ ಇಲಾಖೆ ನೀಡುವ ಅಂಕಿ-ಸಂಖ್ಯೆ:ಹೊಸಪೇಟೆ ತಾಲೂಕಿನ ಗಾದಿಗನೂರಲ್ಲಿ 675 ಜನರ ರಕ್ತ ತಪಾಸಣೆ ಮಾಡಲಾಗಿ 46 ಜನರಿಗೆ ಮಲೇರಿಯಾ, ಭುವನಹಳ್ಳಿಯಲ್ಲಿ 652 ಜನರಿಗೆ ರಕ್ತ ತಪಾಸಣೆ ಮಾಡಲಾಗಿ 55 ಜನರಿಗೆ ಮಲೇರಿಯಾ, ಧರ್ಮಸಾಗರದಲ್ಲಿ 279 ಜನರಿಗೆ ರಕ್ತ ತಪಾಸಣೆ ಮಾಡಲಾಗಿ 19 ಜನರಿಗೆ ಮಲೇರಿಯಾ, ಕೊಟಗಿನಹಾಳದಲ್ಲಿ 115 ಜನರಿಗೆ ರಕ್ತ ತಪಾಸಣೆ ಮಾಡಲಾಗಿ 6 ಜನರಿಗೆ ಮಲೇರಿಯಾ, ದೇವಸಮುದ್ರದಲ್ಲಿ 175 ಜನರಿಗೆ ರಕ್ತ ತಪಾಸಣೆ ಮಾಡಲಾಗಿ 8 ಜನರಿಗೆ ಮಲೇರಿಯಾ, ಉಪ್ಪಾರಹಳ್ಳಿಯಲ್ಲಿ 200 ಜನರ ರಕ್ತ ತಪಾಸಣೆ ಮಾಡಲಾಗಿ 8 ಜನರಿಗೆ ಮಲೇರಿಯಾ ಕಾಣಿಸಿಕೊಂಡಿದೆ.

ಇದಲ್ಲದೇ, ಕಾಕಬಾಳು, ಗುಂಡ್ಲವದ್ದಿಗೇರಿ, ಬೈಲುವದ್ದಿಗೇರಿ, ನಲ್ಲಾಪುರ - ಚಿನ್ನಾಪುರ ಗ್ರಾಮಗಳಲ್ಲಿ ಕೂಡ ನೂರಾರು ಜನರ ರಕ್ತವನ್ನು ಸಂಗ್ರಹ ಮಾಡಲಾಗಿದೆ. ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ವಾಸ್ತವದಲ್ಲಿ ಭುವನಹಳ್ಳಿ - ಗಾದಿಗನೂರು ಗ್ರಾಮದಲ್ಲಿ ಶೇ. 95 ರಷ್ಟು ಜನರು ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಅವರೆಲ್ಲರಿಗೂ ಮಲೇರಿಯಾ ಕಾಣಿಸಿಕೊಂಡಿದೆ. ಆದರೆ, ಬಹುತೇಕರು ಸರ್ಕಾರಿ ವೈದ್ಯರು ಮತ್ತು ಚಿಕಿತ್ಸೆಯ ಮೇಲೆ ವಿಶ್ವಾಸ ಹೊಂದಿಲ್ಲದ ಕಾರಣ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮಲೇರಿಯಾ ಅಥವಾ ಇನ್ನಿತರೆ ವ್ಯಾಧಿ ಪೀಡಿತರ ನಿಖರ ಸಂಖ್ಯೆ ದಾಖಲೆಗಳಿಗೆ ಸಿಗುತ್ತಿಲ್ಲ ಎಂದೇ ತಜ್ಞ ಖಾಸಗಿ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು 'ವಲಸೆ' ಜ್ವರವೇ?: ಜನರು ಜ್ವರ, ಕಾಮಲೆ ಗುಣಲಕ್ಷಣಗಳಿಂದ ನರಳುತ್ತಿದ್ದಾಗ ಈ ವ್ಯಾಧಿಯನ್ನು 'ವಲಸೆ' ಜ್ವರ - 'ಬಿಹಾರಿ ಜ್ವರ' ಎಂದೇ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರಣಕ್ಕಾಗಿ ಭುವನಹಳ್ಳಿ ಸಮೀಪದಲ್ಲೇ ಪೈಪ್‌ಲೈನ್ ಹಾಕುವ ಕೆಲಸಕ್ಕಾಗಿ ಕಳೆದ 5 ತಿಂಗಳಿಂದ ಕೂಲಿಗಳಾಗಿ ಕೆಲಸ ಮಾಡುತ್ತಲಿರುವ ಬಿಹಾರ ಮೂಲದ 4-5 ಕುಟುಂಬಗಳ ಸದಸ್ಯರ ಆರೋಗ್ಯ ತಪಾಸಣೆ ನಡೆಸಿ ರಕ್ತ ಪರೀಕ್ಷೆ ನಡೆಸಲಾಯಿತು. ಈ ಕುಟುಂಬಗಳಲ್ಲಿ 9 ಜನರಿಗೆ ಮಲೇರಿಯಾ ಕಾಣಿಸಿಕೊಂಡಿತು.

ಬಿಹಾರಿಗಳಲ್ಲಿ ಕಾಣಿಸಿಕೊಂಡ ಮಲೇರಿಯಾ, ಭುವನಹಳ್ಳಿ ಜನರಲ್ಲಿ ಕಾಣಿಸಿಕೊಂಡ ಮಲೇರಿಯಾ ಒಂದೇ ರೀತಿಯಲ್ಲಿದ್ದು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದ್ದವು. ಆದರೆ, 'ಲೆಪ್ಟೋಸ್ಪಾರಸಿಸ್' ಬಿಹಾರಿಗಳಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ವಿಶೇಷ. ಆದರೆ, ಜಿಲ್ಲಾ ವೈದ್ಯರಿಗೆ ಸಮಾಧಾನ ಆಗಲಿಲ್ಲ. ನರಳುವವರ - ಸಾಯುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿತ್ತು.

ಶಂಕಿತ ರೋಗಿಗಳಿಗೆ ಡಾಕ್ಸಿಸೈಕ್ಲಿನ್ - 100 ಎಂಜಿಯ 2 ಮಾತ್ರೆಗಳ ಸಿಂಗಲ್ ಡೋಸ್ ವಿತರಿಸುತ್ತಿದ್ದಾರೆ. ಅಲ್ಲದೇ, ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು ಮಾತ್ರೆಗಳನ್ನು ಎಲ್ಲರೂ ಸೇವಿಸುವವರೆಗೂ ಸ್ಥಳದಲ್ಲೇ ನಿಂತು ನುಂಗಿಸುತ್ತಿದ್ದಾರೆ.

ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X