ಬೆಂಗಳೂರಿನಲ್ಲಿ ಡೆಂಗ್ಯೂ ಹಠಾತ್ ಹೆಚ್ಚಳ: ಒಂದೇ ತಿಂಗಳಿನಲ್ಲಿ 1,649 ಪ್ರಕರಣ
ಬೆಂಗಳೂರು, ಆಗಸ್ಟ್ 02: ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಸಹ ಹರಡಲು ಆರಂಭವಾಗುತ್ತದೆ. ಈ ವರ್ಷ ಮುಂಗಾರು ವಿಳಂಬವಾಗಿ ಚುರುಕುಗೊಂಡಿದ್ದು, ಜುಲೈನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಇದರ ಜೊತೆ ಜೊತೆಗೆ ಸಾಂಕ್ರಾಮಿಕ ರೋಗಗಳು ಸಹ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಕಳೆದ ವಾರ ಮಳೆ, ಮೋಡ ಕವಿದ ವಾತಾವರಣ ಜೊತೆಗೆ ಚಳಿ ವಾತಾವರಣವಿದ್ದ ಕಾರಣ ನಗರದ ನಿವಾಸಿಗಳಲ್ಲಿ ಜ್ವರ, ಶೀತ ಹಾಗೂ ಗಂಟಲು ನೋವು ಕಾಣಿಸಿಕೊಳ್ಳುತ್ತಿದ್ದು, ಸಾಮಾನ್ಯ ಜ್ವರದ ಜೊತೆಗೆ ಡೆಂಗ್ಯೂ ಪ್ರಕರಣಗಳು ಕೂಡ ವಿಪರೀತ ಹೆಚ್ಚಾಗುತ್ತಿದೆ.

ಬಿಬಿಎಂಪಿ ಅಧಿಕಾರಿಗಳ ಮಾಹಿತಿ ಪ್ರಕಾರ, ಈ ವರ್ಷ ಜೂನ್‌ನಲ್ಲಿ 690 ಡೆಂಗ್ಯೂ ಪಕರಣಗಳು ವರದಿಯಾಗಿದ್ದಾರೆ. ಜುಲೈನಲ್ಲಿ ಡೆಂಗ್ಯೂ ಪ್ರಕರಣ ಸಂಖ್ಯೆ ಹಠಾತ್ ಏರಿಕೆಯಾಗಿದೆ. ಜುಲೈ 1ರಿಂದ ಜುಲೈ 30ರ ವರೆಗೆ ಬೆಂಗಳೂರು ನಗರದಲ್ಲಿ ಬರೋಬ್ಬರಿ 1,649 ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು 4,790 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಶೇಕಡಾ 50% ಅಂದರೆ ಸುಮಾರು 2,500ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದೆ.
ಡೆಂಗ್ಯೂ ರೋಗದ ಲಕ್ಷಣವೇನು?
ಈಡಿಸ್ ಈಜಿಪ್ಟೆ ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತದೆ. ಇದನ್ನು ಮೂಳೆಮುರಕ ಅಥವಾ ಬ್ರೇಕ್‌ಬೋನ್ ಜ್ವರವೆಂದು ಕೂಡ ಕರೆಯಲಾಗುತ್ತದೆ. ಈಡಿಸ್ ಈಜಿಪ್ಟ್ಟೆ ಎಂಬ ಸೊಳ್ಳೆ ಕಚ್ಚಿದ ಮೂರರಿಂದ ಹದಿನಾಲ್ಕು ದಿನಗಳ ನಂತರ ವ್ಯಕ್ತಿಯಲ್ಲಿ ರೋಗ ಉಲ್ಭಣವಾಗಿ ರೋಗದ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುತ್ತದೆ. ಸೊಳ್ಳೆಯು ಸೋಂಕಿಗೆ ತುತ್ತಾಗದ ವ್ಯಕ್ತಿಯನ್ನು ಕಚ್ಚಿದಲ್ಲಿ, ಆ ಸೊಳ್ಳೆಯ ಜೊಲ್ಲಿನ ಮೂಲಕ ವೈರಸ್ ವ್ಯಕ್ತಿಯ ದೇಹವನ್ನು ಪ್ರವೇಶಿಸಿ ದೇಹದಲ್ಲಿನ ಬಿಳಿ ರಕ್ತಕಣದೊಂದಿಗೆ ಸೇರಿಕೊಂಡು, ಬಿಳಿ ರಕ್ತ ಕಣಗಳಲ್ಲಿ ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ಈ ದ್ವಿಗುಣಗೊಳ್ಳುವಿಕೆಯು ಡೆಂಗ್ಯೂ ರೋಗದ ರೋಗದ ಪ್ರಮುಖ ಲಕ್ಷಣವಾಗಿರುತ್ತದೆ.
ಡೆಂಗ್ಯೂ ಕಾಣಿಸಿಕೊಳ್ಳುತ್ತಿದ್ದಂತೆ ಕೀಲು ನೋವು, ಸ್ನಾಯು ನೋವು, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಅಥವಾ ಮಲದಲ್ಲಿ ರಕ್ತ, ತ್ವಚೆಯ ಮೇಲೆ ಸಣ್ಣ ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ. ಜೊತೆಗೆ ಪದೇ ಪದೇ ಜ್ವರ ಮರುಕಳಿಸುವುದು, ಜ್ವರದ ತಾಪಮಾನವು 104 ಡಿಗ್ರಿವರೆಗೆ ಏರುವುದು, ಮೈ-ಕೈ ನೋವು ಮತ್ತು ಸ್ನಾಯುಗಳ ಸೆಳೆತ ಎಲ್ಲವೂ ಕಾಣಿಸಿಕೊಳ್ಳುತ್ತದೆ.

ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಕ್ರಮ
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹಠಾತ್ ಹೆಚ್ಚಾಗಿದ್ದು, ಬಿಬಿಎಂಪಿ ಅಧಿಕಾರಿಗಳು ನಿಯಂತ್ರಣ ಕ್ರಮ ತೀವ್ರಗೊಳಿಸಿದ್ದಾರೆ. ಪಾಲಿಕೆಯ ಆರೋಗ್ಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ತಮ್ಮ ಆವರಣವನ್ನು ಸ್ವಚ್ಛವಾಗಿಡಲು ಮತ್ತು ಮನೆಗಳಲ್ಲಿ ಹಾಗೂ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಹೋಟೆಲ್‌ಗಳಲ್ಲಿ, ಕಟ್ಟಡಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ನಿಲ್ಲದಂತೆ, ಸೊಳ್ಳೆ ಉತ್ಪಾದನೆಯಾಗದಂತೆ ನೋಡಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಸೊಳ್ಳೆಗಳು ಉತ್ಪತ್ತಿಯಾಗದಂತಹ ಪರಿಸರ ನಿರ್ಮಾಣ ಮಾಡುವುದು, ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ನಿವಾರಕ, ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯವಾಗಿದೆ. ಮನೆಯ ಸುತ್ತ ಚರಂಡಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ, ಬಕೆಟ್, ಟಯರ್, ಎಳನೀರು ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜೊತೆಗೆ ಜನರು ಜ್ವರ ಬಂದ ತಕ್ಷಣವೇ ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಳೆಗಾಲದಲ್ಲಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಜ್ವರವನ್ನು ನಿರ್ಲಕ್ಷಿಸದೆ ತಪಾಸಣೆ ಮಾಡಿ ಅದು ಯಾವ ಜ್ವರ ಎಂದು ಪತ್ತೆ ಮಾಡಿ ಚಿಕಿತ್ಸೆ ಪಡೆಯುವುದು ಬಹುಮುಖ್ಯವಾಗಿದೆ. ರೋಗ ಬಾರದಂತೆ ತಡೆಯಬೇಕಾದರೆ ಅದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಂಡು ಅದರಿಂದ ದೂರ ಇರಲು ಬೇಕಾದ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ.












Click it and Unblock the Notifications