ಹಾಸನ: ಡೆಂಗ್ಯೂ ಜ್ವರಕ್ಕೆ 3 ವರ್ಷದ ಹಸುಗೂಸು ಬಲಿ
ಹಾಸನ, ಆಗಸ್ಟ್, 04: ಡೆಂಗ್ಯೂ ಜ್ವರದಿಂದ 3 ವರ್ಷದ ಹಸುಗೂಸು ಬಲಿಯಾದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಚರಣ್ (3) ಡೆಂಗ್ಯೂಗೆ ಬಲಿಯಾದ ಮಗು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಜನರನ್ನು ಡೆಂಗ್ಯೂ ಜ್ವರ ಕಾಡುತ್ತಿದ್ದರೂ ಸೋಂಕು ತಡೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬಾಲಕನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚರಣ್ ಪೋಷಕರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾರೆ. ಹಾಸನಕ್ಕೆ ಬಂದು ಚಿಕ್ಕಮಗಳೂರಿಗೆ ಹೋದ ಬಳಿಕ ಚರಣ್‌ಗೆ ಜ್ವರ ಬಂದಿತ್ತು. ಹೀಗಾಗಿ ಆತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಹೆಚ್ಚುವರಿ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ಗೆ ಪೋಷಕರು ದಾಖಲಿಸಿದ್ದರು. ಅಲ್ಲಿಯೂ ಜ್ವರ ಕಡಿಮೆಯಾಗದಿದ್ದರಿಂದ ಬೆಂಗಳೂರಿಗೆ ಕರೆದೊಯ್ಯುವ ವೇಳೆ ಚರಣ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಚರಣ್ ಸಾವಿಗೆ ಅಧಿಕಾರಿಗಳ ದಿವ್ಯನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ಹೊರಹಾಕಿರುವ ಗ್ರಾಮಸ್ಥರು, ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆಗೂ ಕಾಲಿಟ್ಟ ಮದ್ರಾಸ್ ಐ
ಬಿಸಿಲ ನಾಡಲ್ಲಿ ತಂಪು ಆವರಿಸಿದ್ದು, ಗಾಳಿಯಲ್ಲಿ ತೇವಾಂಶ ಹೆಚ್ಚಾಗಿದೆ. ನೆರೆ ಜಿಲ್ಲೆಗಳಲ್ಲಿ ಮಳೆ ಹಾಗೂ ಚಳಿ ಎರಡೂ ಅಧಿಕವಾಗಿ ಇರುವುದರಿಂದ "ಮದ್ರಾಸ್ ಕಣ್ಣು" ಸೋಂಕು ಕಾಣಿಸಿಕೊಂಡಿದೆ. ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತಿರುವ ಈ ಸೋಂಕು ಇದೀಗ ಜಿಲ್ಲೆಗೂ ಕಾಲಿಟ್ಟಿದೆ.
ಕಣ್ಣು ನೋವು, ಕಣ್ಣು ಉರಿ ಉಂಟಾಗಿ ಮಕ್ಕಳು ಹೈರಾಣಾಗಿದ್ದಾರೆ. ಮಕ್ಕಳಿಂದಾಗಿ ಪಾಲಕರಿಗೂ ರೋಗ ಹರಡುತ್ತಿದೆ. ಸಾರಿಗೆ ಬಸ್‌ಗಳಲ್ಲಿ ಸಂಚಾರ, ಸಾರ್ವಜನಿಕ ಸ್ಥಳಗಳಲ್ಲಿನ ಮಾಲಿನ್ಯ, ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳದಿರುವುದು ಸಹ ಸೋಂಕು ಹರಡಲು ಪ್ರಮುಖ ಕಾರಣವಾಗಿದೆ. ಇದರಿಂದ ಪೋಷಕರು ಮಕ್ಕಳನ್ನು ಆಸ್ಪತ್ರೆಗಳಿಗೆ ಕರೆತರುತ್ತಲೇ ಇದ್ದಾರೆ. ಮಳೆಗಾಲದಲ್ಲಿ ಕೆಮ್ಮು, ಶೀತ, ಜ್ವರ ಸಾಮಾನ್ಯ. ಆದರೆ ಆಸ್ಪತ್ರೆಗೆ ಬರುವ ಶೇಕಡಾ 75ರಷ್ಟು ರೋಗಿಗಳು ನೇತ್ರ ಸೋಂಕಿನಿಂದ ಬಳಲುತ್ತಿದ್ದಾರೆ.
"ರಾಯಚೂರು ಹಾಗೂ ಲಿಂಗಸುಗೂರು ತಾಲೂಕು ಆಸ್ಪತ್ರೆಗಳಲ್ಲಿ ನೇತ್ರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ತಾಲೂಕು ಆಸ್ಪತ್ರೆಗಳಿಗೆ ನಿತ್ಯ ಕನಿಷ್ಠ 15 ಕೆಂಗಣ್ಣು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿದ್ದಾರೆ. ಮುನ್ನೆಚ್ಚರಿಕೆ ವಹಿಸಿದರೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು," ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.
ಬೆಂಗಳೂರು, ಮಂಗಳೂರು ಹಾಗೂ ಕಲಬುರಗಿ ಜಿಲ್ಲೆಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಬಂದು ಹೋಗುತ್ತಾರೆ. ಸ್ವಚ್ಛತೆ ಕೊರತೆ ಹಾಗೂ ಕಣ್ಣು ತಿಕ್ಕಿಕೊಂಡು ಬಸ್‌ಗಳಲ್ಲಿನ ಆಸನ, ಕಿಟಕಿ, ಬಾಗಿಲ ಹಿಡಿಕೆ ಹಿಡಿಯುತ್ತಾರೆ. ಇನ್ನೊಬ್ಬ ವ್ಯಕ್ತಿ ಅವುಗಳನ್ನು ಮುಟ್ಟಿದ ನಂತರ ಸಹಜವಾಗಿ ಸೋಂಕು ಹರಡುತ್ತಿದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು.












Click it and Unblock the Notifications