• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್

|

ನಮ್ಮ ಪ್ರೊಢಶಾಲೆಗಳಿಗೆ ಗೊತ್ತುಪಡಿಸಿರುವ ವಿಜ್ಞಾನ ಪಠ್ಯಗಳು ಇತ್ಲಕಡೆ ಕನ್ನಡವನ್ನೂ ಕಲಿಸುವುದಿಲ್ಲ ಅತ್ಲಕಡೆ ವಿಜ್ಞಾನವನ್ನೂ ಕಲಿಸುವುದಿಲ್ಲ. ಹಾಗಾಗಿ, ಕನ್ನಡ ಪ್ರೀತಿಯ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ತಲೆ ಕೆಟ್ಟು ಉಪ್ಪಿಟ್ಟಾಗುತ್ತಿದೆ. ಶಿಕ್ಷಣ ಮಾಧ್ಯಮ ಕನ್ನಡವಾಗಿರಬೇಕು ಎಂದು ವಾದಿಸುವ ತಜ್ಞರು ಮತ್ತು ಪಠ್ಯ ಪುಸ್ತಕ ರಚಿಸುವ ಪಿತಾಮಹರು ಸ್ವಲ್ಪ ಈಕಡೆ ತಲೆಹಾಕಿ ಮಲಗಬೇಕಾಗಿಯೂ ವಿನಂತಿ- ಸಂಪಾದಕ.

* ಶೇಷಗಿರಿ ಜೋಡಿದಾರ್, ಬೆಂಗಳೂರು

"ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ" ಬರಹ ಓದಿದ ನಂತರ ಪ್ರತಿಕ್ರಿಯಿಸಲೇಬೇಕೆಂಬ ಒತ್ತಾಸೆ ಬಂತು. ಕಾರಣ, ಲೇಖನದ ಕಳಕಳಿ ಚೆನ್ನಾಗಿದೆಯಾದರೂ ಕೆಲವು ಸ್ಪಷ್ಟನೆಗಳು ಅಗತ್ಯ. ಆದುದರಿಂದ ಮೊದಲು ಲೇಖಕರಿಗೆ ಅಭಿನಂದನೆಗಳನ್ನು ಹೇಳುತ್ತಾ ವಾಸ್ತವವನ್ನು ನೋಡೋಣ.

ಲೇಖಕರು ಗಣಿತದಲ್ಲಿ ಅದರಲ್ಲೂ ರೇಖಾಗಣಿತದ ಪ್ರಮೇಯವನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. ನಿಜ ಇದು ನಮ್ಮಪ್ಪನಿಗೂ ಅರ್ಥವಾಗದಷ್ಟು ಕ್ಲಿಷ್ಟವಾಗಿ ಒಗಟಾಗಿದೆ ಎನ್ನುವುದರಲ್ಲಿ ಎರಡುಮಾತಿಲ್ಲ. ಆದರೆ, ಎಲ್ಲವನ್ನೂ generalise ಮಾಡುವುದು ತಪ್ಪಾಗುತ್ತದೆ. ವಿಜ್ಞಾನ, ಗಣಿತ ಇತ್ಯಾದಿಗಳಲ್ಲಿ ಭಾಷೆಗಿಂತ ನಾವು ಕಲಿಯುವ ವೈಜ್ಞಾನಿಕ ಸಾರಾಂಶ ಮುಖ್ಯವೇ ವಿನಾ ಶಾಲಾಪಠ್ಯವನ್ನು ಸಾಹಿತ್ಯ ಮತ್ತು ಭಾಷೆಯ ಸೂಕ್ಷ್ಮಗಳಿಂದ ನೋಡಬಾರದು.

ಕನ್ನಡ ಮತ್ತು ಇಂಗ್ಲಿಷ್ ಜಗಳದಲ್ಲಿ ಬಡವಾಗಿರುವವರು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ 'ಬಡವರ'ಮಕ್ಕಳು. ಅವರು ಪಡುವ ಕಷ್ಟ ಯಾವ ಶತ್ರುವಿಗೂ ಬರಬಾರದು. ನಮ್ಮ ಅನೇಕ ಪಠ್ಯ ಪುಸ್ತಕಗಳಲ್ಲಿ ಯಾರಿಗೂ, ಬರೆದವರಿಗೂ ಅರ್ಥವಾಗದ ಪದಪುಂಜಗಳು ಇರುತ್ತವೆ. ಮಕ್ಕಳಿಗೆ ವಿಷಯ ಸುಲಭವಾಗಿ ಅರ್ಥವಾದರೆ ಸಾಕು ಇನ್ನೇನು ಬೇಕಿಲ್ಲ ಎನ್ನುವ ತತ್ತ್ವ ಇಲ್ಲಿ ಕಣ್ಮರೆಯಾಗಿ ಓದುವವರಿಗೆ ಮತ್ತು ಕಲಿಸುವವರಿಗೆ ಶಿಕ್ಷೆ ಕೊಡುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಗ್ರಹಿಸಬಲ್ಲ ವಾಕ್ಯಗಳು, ಗ್ರಹಿಕೆಗೆ ನಿಲಕುವ ವಿಜ್ಞಾನ ಸಂಬಂಧಿ ಪದಗಳು ಇರಬೇಕೇ ಹೊರತು ಬ್ರಹ್ಮನಿಗೂ ಅರ್ಥವಾಗದ ಬೀಜಾಕ್ಷರ ಮಂತ್ರಗಳಲ್ಲ.

ಪಕ್ಕದ ಮನೆ ಹುಡುಗಾ! ಲೇಖಕರು ಸೂಚಿಸಿರುವ ಹಾಗೆ ಗಣಿತದಲ್ಲಿನ ಅಪಭ್ರಂಶಗಳ ಬಗೆಗೆ ನನ್ನ ಅಭ್ಯಂತರವಿಲ್ಲ. ಆದರೆ, ಅವರು ಒಂದು ಹೆಜ್ಜೆ ಮುಂದೆ ಹೋಗಿ ಜೀವವಿಜ್ಞಾನಕ್ಕೂ ಕೈ ಹಾಕಿದ್ದಾರೆ. ಅವರು ಕೊಟ್ಟಿರುವ ಉದಾಹರಣೆ ಕ್ಲೋರೋಫಿಲ್ ಅಥವಾ ಇದುವರೆಗೂ ಬಳಕೆಯಲ್ಲಿರುವ ಪತ್ರಹರಿತ್ತು. ಪಾಠ ಮಾಡುವಾಗ ನಾವು ಅದನ್ನು ಹಸಿರು ವರ್ಣಕ ಎಂದು ಹೇಳುತ್ತೇವೆ. ಇವರ ಪ್ರಕಾರ 'ಪತ್ರಹರಿತ್ತು' ಪದದ ಬದಲು 'ಎಲೆ ಹಸಿರು' ಎಂದು ಹೇಳುವುದರಿಂದ ಏನುಸಾಧಿಸಿದಂತೆ ಆಗುತ್ತದೆ?

ವಿಜ್ಞಾನ ಕಲಿಸಿ ಅಥವಾ ಕನ್ನಡ ಕಲಿಸಿ

ನಾನು ಕಳೆದ 38 ವರ್ಷಗಳಿಂದ ಜೀವಶಾಸ್ತ್ರ ಅಥವಾ ನಿಮಗದು ಮೈಲಿಗೆ ಎನಿಸುವುದಾದರೆ ಜೀವವಿಜ್ಞಾನವನ್ನು ಪ್ರೌಢಶಾಲೆ ಮಕ್ಕಳಿಗೆ ಹೇಳಿಕೊಡುತ್ತಿದ್ದೇನೆ. ನನ್ನ ಅನುಭವದಲ್ಲಿ ಕನ್ನಡದ ಬಗ್ಗೆ ಪ್ರೇಮ ಹುಟ್ಟು ಹಾಕುವ ಬದಲು ಭಯಂಕರ confusion ಅನ್ನು ಬಿತ್ತಿ ಹೆಮ್ಮರವಾಗಿ ಬೆಳೆಸಿದ್ದೇವೆ. ಬಹುಮುಖ್ಯವಾಗಿ ನಾವೆಲ್ಲ ಜ್ಞಾಪಕದಲ್ಲಿ ಇಡಬೇಕಾದ ಅಂಶವೆಂದರೆ ಕನ್ನಡ ಪದ ಅಥವಾ ವಿಜ್ಞಾನ ಪಾಠದ ಒಟ್ಟು ವೈಜ್ಞಾನಿಕ ಸಾರಾಂಶ. ಇವೆರಡರಲ್ಲಿ ಯಾವುದು ಮುಖ್ಯ?

ನಮಗೆ ಪದಕ್ಕಿಂತ ಮುಖ್ಯವಾದುದು ವಿಜ್ಞಾನದ ಪರಿಕಲ್ಪನೆಗಳು ಸುಲಭವಾಗಿ ಹಾಗು ಪರಿಣಾಮಕಾರಿಯಾಗಿ ಮಕ್ಕಳ ಮಿದುಳನ್ನು ತಲುಪಿ ಅಲ್ಲೇ ಉಳಿಯುವಂತೆ ಮಾಡುವುದು. ಉದಾಹರಣೆಗೆ, ಹೃದಯಾವರಣ ಅಂದರೆ ಹೃದಯವನ್ನು ಸುತ್ತುವರೆದ ಒಂದು ತೆಳುವಾದ ಪೊರೆ. ಈ ವಾಕ್ಯ ಅರ್ಥವಾಗುವುದರಲ್ಲಿ ಯಾವ ತೊಡಕಿದೆ? ನೀವೇ ಹೇಳಿ. ಕೆಲವು ತಜ್ಞರು ಅದನ್ನು ಬಲವಂತವಾಗಿ ಕನ್ನಡ ಆಡುಭಾಷೆಗೆ ತಂದು "ಗುಂಡಿಗೆ ಸುತ್ಪೊರೆ" ಎಂದರೆ ಎಷ್ಟು ಹಾಗು ಯಾವ ಮಕ್ಕಳಿಗೆ ಅರ್ಥವಾಗಬಹುದು? ನಿಜ, ನಮ್ಮ ವೈವಿಧ್ಯಮಯ ಕರ್ನಾಟಕದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಸ್ಥಳೀಯ ಪದಗಳು ಬಳಕೆಯಾಗುತ್ತವೆ. ಹೃದಯ ಎನ್ನುವ ಪದ ಎಲ್ಲ ಕನ್ನಡಿಗರಿಗೂ ಅರ್ಥವಾಗುವ ಪದವಲ್ಲವೇ? ಕನ್ನಡಿಗರು ಹೃದಯವಂತರು ತಾನೇ? ಗ್ರಾಮಾಂತರ ಜನಗಳಿಗೂ ಈ ಪದ ಹೊಸತಲ್ಲ! ಅನವಶ್ಯಕವಾಗಿ ಮಕ್ಕಳಿಗೆ ಮಾತ್ರವಲ್ಲ ಅಧ್ಯಾಪಕರಿಗೂ confusion!

ಎರಡನೆಯ ಉದಾಹರಣೆ ತೆಗೆದುಕೊಳ್ಳೋಣ. ಇಲ್ಲಿ ಕನ್ನಡತನ ಹೆಸರಲ್ಲಿ ವೈಜ್ಞಾನಿಕ ಅಂಶವೇ ಮಾಯವಾಗುತ್ತದೆ. ಒಂಭತ್ತನೆಯ ತರಗತಿಯ ಪುಸ್ತಕದಲ್ಲಿ ಕೋಶವಿಭಜನೆ ಎಂಬ ಎರಡನೇ ಅಧ್ಯಾಯವಿದೆ. ಅದರಲ್ಲಿ karyokinesis ಹಾಗು cytokinesis ಎಂಬ ಪದಗಳನ್ನು ಬದಲಿಸಿ ಕೋಶಕೆಂದ್ರ (nucleus) ವಿಭಜನೆ ಮತ್ತು ಕೋಶದ್ರವ್ಯ (ಮೊದಲಿದ್ದ ಪದ-ಈಗ ಅದು ಕೋಶ್ರಸವಾಗಿದೆ) ವಿಭಜನೆ ಎಂದು ಮಾತ್ರ ಹೇಳಿಕೊಡಬೇಕು. ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಆಂಗ್ಲ ಮಾಧ್ಯಮ ಮಕ್ಕಳಿಗೆ ಸುಲಭವಾಗಿ what is karyokinesis? ಎಂಬ ಪ್ರಶ್ನೆ ಹಾಕಬಹುದು. ಅವರಿಗೆ ಈ ನಿರ್ದಿಷ್ಟ ಪದ ಗೊತ್ತಿರಲೇಬೇಕು. ಆದರೆ ಕನ್ನಡ ಮೀಡಿಯಂ ಮಕ್ಕಳಿಗೆ ಏನಂತ ಪ್ರಶ್ನೆ ಹಾಕೋಣ?

ಏಕೆಂದರೆ, ಪ್ರಶ್ನೆ ಕೋಶಕೇಂದ್ರ ವಿಭಜನೆ ಎಂದರೇನು? ಎಂದು ಕೇಳಿದರೆ ಉತ್ತರ ಬಲು ಸುಲಭ.. "ಕೋಶಕೆಂದ್ರದ ವಿಭಜನೆಗೆ ಕೋಶಕೇಂದ್ರ ವಿಭಜನೆ" ಎನ್ನುತ್ತಾರೆ! ಮೊದಲು ನಮಗೆ ತಿಳಿದಿರಬೇಕು ಇದು ಇಂಗ್ಲಿಷ್ ಪದವೂ ಅಲ್ಲ ಕನ್ನಡವೂ ಅಲ್ಲ. ಆದುದರಿಂದ karyokinesis ಮತ್ತು cytokinesis ಪದಗಳನ್ನು ಯಥಾವತ್ತಾಗಿ ಹಾಗೆ ಉಪಯೋಗಿಸಬಹುದಿತ್ತು.

ಪಠ್ಯಪುಸ್ತಕ ರಚನೆ ಮತ್ತು ಆಯ್ಕೆದಾರರು

ಇಂಥ ಮಹೋನ್ನತ ಉದಾಹರಣೆಗಳನ್ನು ಶಾಲಾಪಠ್ಯಪುಸ್ತಕಗಳಲ್ಲಿ ತುರುಕಿದ ಪಠ್ಯಪುಸ್ತಕ ಸಮಿತಿಯ ಮಹಾಶಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಮೂರು ವರ್ಷಗಳ ಹಿಂದೆ ಉತ್ಪಾದಕರು, ಉಪಭೋಗಿಗಳು ಮತ್ತು ವಿಘಟಕರು ಅಂದರೆ producers, consumers and decomposers ಬಳಕೆಯಲ್ಲಿತ್ತು. ಆದರೆ, ಯಾರ ಮಹಾತಲೆಯೋ ಏನೋ ಈಗ consumers ಅಂದರೆ ಉಪಭೋಗಿಗಳ ಬದಲಿಗೆ ಈಗ "ಭಕ್ಷಕ" ಎಂಬ ಹೊಸ ಪದ ಎಂಟ್ರಿ ಪಡೆದಿದೆ. ಬಾರಿಬಾರಿಗೂ ಹೆಸರುಗಳನ್ನು ಅಥವಾ ಪದಗಳನ್ನು ಬದಲಿಸುವುದರಿಂದ ವಿಜ್ಞಾನ ಸುಲಭವಾಗುವುದಿಲ್ಲ ಅಥವಾ ಕನ್ನಡ ಉದ್ಧಾರವಾಗುವುದಿಲ್ಲ.

ನಿಜ, ಕನ್ನಡಲ್ಲೇ ಮಕ್ಕಳಿಗೆ ಪ್ರಮೇಯ, ಸೂತ್ರ, ಸಮೀಕರಣ, ಅಥವಾ ನಿರೂಪಣೆಗಳನ್ನು ಸರಳವಾದ ಒಂದು ವಾಕ್ಯದಲ್ಲಿ ಅರ್ಥವಾಗುವಂತೆ ಹೇಳಿದರೆ ನಮ್ಮ ಧ್ಯೇಯ ಸಾರ್ಥಕವಾಗುತ್ತದೆ. ಅದನ್ನು ಬಿಟ್ಟು ವರ್ಷ, ವರ್ಷಕ್ಕೂ ಒಬ್ಬೊಬ್ಬ ಅಧಿಕಾರಿಯು ಬಂದಾಗ ತನ್ನ ಹಿರಿತನ ಮೆರೆಯಲೋ ಅಥವಾ ಯಾರನ್ನಾದರೂ ಮೆಚ್ಚಿಸಲೋ ಈ ವಿಧದ ಸರ್ಕಸ್ ಮಾಡಿ ಮಕ್ಕಳನ್ನು ತಲೆಕೆಳಗಾಗಿ ಜೋತು ಬೀಳಿಸಿದ್ದಾರೆ.

ಕೊನೆಯ ಉದಾಹರಣೆಯನ್ನು ನೋಡೋಣ. ಮಾನವನ ವೈಜ್ಞಾನಿಕ ಹೆಸರು, (ದ್ವಿನಾಮ ನಾಮಕರಣ ಪದ್ದತಿಗೆ ಅನುಗುಣವಾಗಿ) ಹೋಮೋ ಸೆಪಿಯನ್. ಈ ಹೆಸರು ಪ್ರಪಂಚದ ಯಾವ ಭಾಷೆಯನ್ನಾಡುವ ಮನುಷ್ಯನಿಗಾಗಲಿ ಅರ್ಥವಾಗುತ್ತದೆ. ಅರ್ಥವಾಗಲೇಬೇಕು. ಅದನ್ನು ನಾವು ಕನ್ನಡೀಕರಣಗೊಳಿಸಿ ವಿವೇಕಿ ಮಾನವ ಎಂದು ಮಾಡಿದರೆ ನಮ್ಮಂಥಹ ಅವಿವೇಕಿಗಳು ಎಲ್ಲೂ ಸಿಕ್ಕಲಿಕ್ಕಿಲ್ಲ.

ಸಾಮಾನ್ಯವಾಗಿ ಈಗ ನಾವು ನಮ್ಮ ಶಿಕ್ಷಣದಲ್ಲಿ ಬಳಸುತ್ತಿರುವ ಅದರಲ್ಲೂ ವಿಶೇಷವಾಗಿ ವಿಜ್ಞಾನ ಮತ್ತು ಗಣಿತದ ಅನೇಕ ಪದಗಳು ಆಂಗ್ಲ ಭಾಷೆಯದಲ್ಲ. ಅಷ್ಟೇ ಏಕೆ ಯಾವ ಭಾಷೆಯೂ ಅಲ್ಲ. ಅದು ಕೇವಲ ವೈಜ್ಞಾನಿಕ ಭಾಷೆ ಎಂಬುದನ್ನು ಕಂಡುಕೊಂಡಾಗ ಮಾತ್ರ ನಾವು ಮತ್ತು ನಮ್ಮ ಕನ್ನಡ ಎರಡೂ ಪ್ರಗತಿ ಕಾಣಬಹುದು. ಇಲ್ಲವಾದರೆ ಆಗಾಗ್ಗೆ ಕೆರೆದುಕೊಳ್ಳುವಂತೆ ಪದಗಳನ್ನು ಬಳಸುವುದಾಗಲೀ, ಅಥವಾ ತಮಗೆ ಅರ್ಥವಾಗದ ಪರಿಕಲ್ಪನೆಗಳನ್ನು ಪದ ಭಾಷಾಂತರ ಮಾಡುವುದರ ಮೂಲಕ ಅಭಾಸ ಮತ್ತು ಅನಾಹುತ ಸಂಭವಿಸುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ವಸಂತ ಬಂದ ಬ್ಲಾಗ್ ಲೇಖಕರು ಉದಾಹರಣೆ ಸಹಿತ ತೋರಿಸಿ ಕೊಟ್ಟಿರುವುದಕ್ಕೆ ಧನ್ಯವಾದಗಳು.

ಕೊನೆಯದಾಗಿ, ವಿಜ್ಞಾನ ಮತ್ತು ಸಾಹಿತ್ಯ ಎರಡೂ ಭಿನ್ನವಾದ ವಿಷಯಗಳು. ಅದನ್ನು ಕಲಸುಮೇಲೋಗರ ಮಾಡುವುದುಬೇಡ. ಭಾಷೆಯ ವ್ಯಾಮೋಹಕ್ಕೆ ವಿಜ್ಞಾನ ಬಲಿಯಾಗದಿರಲಿ.

ಲೇಖಕರು : ಬೆಂಗಳೂರು ಬಸವನಗುಡಿಯಲ್ಲಿರುವ ಕಮಲಾ ನೆಹರು ಮಕ್ಕಳ ಮಂದಿರದ ಮುಖ್ಯೋಪಾಧ್ಯಾಯರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X