Solar System: ಥೇಟ್ ಭೂಮಿ ರೀತಿಯ ಗ್ರಹ ಪತ್ತೆಮಾಡಿದ ವಿಜ್ಞಾನಿಗಳು!
ಮನುಷ್ಯ ಅದೆಷ್ಟೇ ಬೆಳೆದರೂ ಬ್ರಹ್ಮಾಂಡ ಅಥವಾ ಈ ವಿಶ್ವದ ಎದುರಿಗೆ ಆತ ಲೆಕ್ಕಕ್ಕಿಲ್ಲ. ಹೀಗಿದ್ದರೂ ಮನುಷ್ಯ ಇಡೀ ಬ್ರಹ್ಮಾಂಡ ಆಳುವ ಕನಸನ್ನು ಮಾತ್ರ ಕೈಬಿಟ್ಟಿಲ್ಲ. ಹೀಗಾಗಿ ತನ್ನ ಕನಸಿನ ಕುದುರೆ ಏರಿ ಹೊರಟಿದ್ದಾನೆ ಮಾನವ. ಇಂತಹ ಪ್ರಯತ್ನದಲ್ಲಿ ಮತ್ತೊಮ್ಮೆ ಯಶಸ್ಸು ಕೂಡ ಕಂಡಿದ್ದಾನೆ. ವಿಜ್ಞಾನಿಗಳು ನಮ್ಮ ಸಮೀಪದಲ್ಲೇ ಭೂಮಿ ರೀತಿ ಒಂದು ಗ್ರಹವನ್ನು ಪತ್ತೆ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ.
ಈಗಾಗಲೇ ಭೂಮಿ ರೀತಿಯ ಹಲವಾರು ಗ್ರಹಗಳು ನಮ್ಮ ಬ್ರಹ್ಮಾಂಡದಲ್ಲೇ ಪತ್ತೆ ಆಗಿವೆ. ಆದರೆ ಆ ಗ್ರಹಗಳು ಭೂಮಿಯಿಂದ ತುಂಬಾ ದೂರದಲ್ಲಿ ಇವೆ. ಈಗ ಭೂಮಿಗೆ ಅತ್ಯಂತ ಸಮೀಪದಲ್ಲೇ ಇರುವ ಭೂಮಿ ರೀತಿಯ ಗ್ರಹ ಮನುಷ್ಯರ ಕಣ್ಣಿಗೆ ಬಿದ್ದಿದೆ. ಹಾಗಾದರೆ ಈ ಗ್ರಹವನ್ನು ಪತ್ತೆ ಮಾಡಿದ್ದು ಯಾರು? ಭೂಮಿಯಿಂದ ಎಷ್ಟು ದೂರದಲ್ಲಿ ಭೂಮಿ ರೀತಿ ಗ್ರಹ ಇದೆ? ಅಲ್ಲಿ ಮನುಷ್ಯರು ಬದುಕಬಹುದಾ? ಮನುಷ್ಯರನ್ನು ಬಿಟ್ಟು ಬೇರೆ ಜೀವಿಗಳು ಅಲ್ಲಿ ಬದುಕಿವೆಯಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ, ಮುಂದೆ ಓದಿ.

ಮತ್ತೊಂದು ಬೃಹತ್ ಭೂಮಿ ಪತ್ತೆ!
ಹೌದು, ಜಪಾನ್ ಮೂಲದ ಇಬ್ಬರು ಬಾಹ್ಯಾಕಾಶ ವಿಜ್ಞಾನಿಗಳು ನಮ್ಮ ಸೌರ ವ್ಯವಸ್ಥೆಯಲ್ಲೇ ಮಹತ್ವದ ಸಂಶೋಧನೆ ಮಾಡಿದ್ದಾರೆ. ಅಂದಹಾಗೆ ಸೌರ ಕುಟುಂಬದಲ್ಲೇ ಭೂಮಿ ರೀತಿ ಇರುವ ಮತ್ತೊಂದು ಗ್ರಹ ಪತ್ತೆ ಆಗಿದೆ. ಈ ಬಗ್ಗೆ ಪುರಾವೆ ಪತ್ತೆ ಮಾಡಿರುವ ವಿಜ್ಞಾನಿಗಳು, ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ. ಪ್ಲೂಟೋ ಹೊರಗಡೆ, ಅಂದ್ರೆ ಭೂಮಿಯಿಂದ ಕೋಟಿ ಕೋಟಿ ಕಿಲೋ ಮೀಟರ್ ಹೊರಗೆ ಇರುವ ಕ್ಯೂಪೆರ್ ಬೆಲ್ಟ್ ಬಳಿ ಭೂಮಿ ರೀತಿಯೇ ಇರುವ ಒಂದು ಗ್ರಹ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಹೊರ ಸೌರ ವ್ಯವಸ್ಥೆಯಲ್ಲಿರುವ ವಸ್ತುಗಳಿಂದಲೇ ಕೂಡಿರುವ ವೃತ್ತಾಕಾರದ ಡಿಸ್ಕ್ ರೀತಿ ಇದೆ ಅಂತಿದ್ದಾರೆ ವಿಜ್ಞಾನಿಗಳು.
ಏನ್ ಗುರೂ ಇದು ಮಾನವನ ಸಾಧನೆ!
ಹೊಸ ಗ್ರಹವು ನೆಫ್ಚೂನ್ ಗ್ರಹದ ಕಕ್ಷೆಗಿಂತಲೂ ಹೊರಗೆ ಇದೆ ಎನ್ನಲಾಗಿದ್ದು, ಗ್ರಹಗಳ ರೀತಿ ಕ್ಯೂಪೆರ್ ಬೆಲ್ಟ್‌ನಲ್ಲಿ ಇರುವ ವಸ್ತುಗಳು ಕೂಡ ಸೂರ್ಯನ ಸುತ್ತ ಪರಿಭ್ರಮಿಸುತ್ತವೆ. ಇದೀಗ ವಿಜ್ಞಾನಿಗಳು ನೀಡಿರುವ ಮಾಹಿತಿಯ ಪ್ರಕಾರ ಭೂಮಿಯಂತಹ ಗ್ರಹದ ಅಸ್ತಿತ್ವ ಇದೆ ಎಂದು ಅಂದಾಜು ಮಾಡಲಾಗಿದೆ. ಅಲ್ಲದೆ ಈ ಬಗ್ಗೆ ಕೆಲ ಸಾಕ್ಷಿ ಸಿಕ್ಕಿದೆ. ಈ ಆದಿ ಸ್ವರೂಪದ ಗ್ರಹ ಸೌರ ವ್ಯವಸ್ಥೆ ಅಂದರೆ ಸೌರ ಮಂಡಲದ ಆರಂಭಿಕ ಕಾಲಘಟ್ಟದಲ್ಲಿ ಅಸ್ತಿತ್ವದಲ್ಲಿದ್ದ ಹಲವು ವಸ್ತುಗಳಿಂದ ರೂಪುಗೊಂಡಿದೆ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಜಪಾನ್ ವಿಜ್ಞಾನಿಗಳು ಮುಂದಾಗಿದ್ದಾರೆ.

ಒಸಾಕಾದ ಕಿಂಡೈ ವಿವಿಯ ಪ್ಯಾಟ್ರಿಲ್ ಸೋಫೀಯಾ ಲೈಕ್ವಾ & ತಕಾಶಿ ಇಟೊ ಅವರ ಪ್ರಕಾರ, ಹೊಸ ಗ್ರಹ ಅಸ್ತಿತ್ವದಲ್ಲಿ ಇರುವುದೇ ನಿಜವಾದರೆ ಭೂಮಿಯ ಗಾತ್ರಕ್ಕಿಂತ 1.5 ರಿಂದ 3 ಪಟ್ಟು ದೊಡ್ಡದಾಗಿ ಇರಬಹುದು ಎನ್ನಲಾಗಿದೆ.ಈ ಮೂಲಕ ಇಷ್ಟು ದಿನಗಳ ಕಾಲ ಮಾನವರನ್ನ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆ ಮೂಡಿದೆ. ಭೂಮಿ ರೀತಿಯಲ್ಲೇ ಬೇರೆ ಬೇರೆ ಗ್ರಹದಲ್ಲಿ ಮನಷ್ಯರು ಅಥವಾ ಜೀವಿಗಳು ಬದುಕಿರಬಹುದಾ? ಎಂಬ ಕುತೂಹಲದ ಪ್ರಶ್ನೆ ಮನಷ್ಯರನ್ನು ಹಲವು ಶತಮಾನದಿಂದ ಕಾಡುತ್ತಿದೆ. ಹೆಜ್ಜೆ ಹೆಜ್ಜೆಗೂ ಈ ಪ್ರಶ್ನೆಗೆ ಉತ್ತರ ಸಿಗುವ ದಿನಗಳು ಹತ್ತಿರವಾಗುತ್ತಿವೆ.
ಒಟ್ನಲ್ಲಿ ಮನುಷ್ಯ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಧ್ಯಯನ ಕೈಗೊಂಡಷ್ಟು ಆಳವಾಗಿ ಹೊಸ ವಿಚಾರಗಳು ಹೊರಬೀಳುತ್ತಿವೆ. ನಾಸಾ ಕೂಡ ಈಗಾಗಲೇ ಹಲವು ಗ್ರಹಗಳನ್ನ ಪತ್ತೆ ಮಾಡಿದ್ದು, ನೂರಾರು ಗ್ರಹಗಳು ಭೂಮಿಯನ್ನೇ ಹೋಲುತ್ತವೆ. ಆದರೆ ಆ ಗ್ರಹಗಳಲ್ಲೆಲ್ಲಾ ಮನುಷ್ಯರು ಬದುಕಬಹುದಾ? ಅಥವಾ ಜೀವಿಗಳು ಬದುಕಿವೆಯಾ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸ್ಪಷ್ಟವಾಗಿಲ್ಲ. ಹೀಗಾಗಿ ಉತ್ತರ ಕಂಡುಕೊಳ್ಳಲು ಇಡೀ ಜಗತ್ತು ಹುಡುಕಾಡುತ್ತಿದೆ.












Click it and Unblock the Notifications