ಬೆಂಗಳೂರು ವಿವಿಯಲ್ಲಿ ವಿಶ್ವದರ್ಜೆಯ ಸೈನ್ಸ್ ಫೋರಂ ಸ್ಥಾಪನೆ: ಏನಿದರ ವಿಶೇಷತೆ
ಬೆಂಗಳೂರು, ಡಿಸೆಂಬರ್ 18: ವಿಶ್ವ ಮಟ್ಟದಲ್ಲಿ ಸಾಕಷ್ಟು ಹಿರಿಮೆ ಗರಿಮೆ ಸಾಧಿಸಿರುವ ಬೆಂಗಳೂರು ವಿಶ್ವ ವಿದ್ಯಾಲಯ ಈಗ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ವಿಶ್ವವಿದ್ಯಾಲಯ ಸ್ಥಾಪನೆಯಾಗಿ 6 ದಶಕ ಕಳೆದರೂ ಅನುಷ್ಠಾನವಾಗದ ಕಾರ್ಯಕ್ರಮ ಈಗ ಕಾರ್ಯರೂಪಕ್ಕೆ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯ ಸೈನ್ಸ್ ಫೋರಂ (BUSF) ಸ್ಥಾಪಿಸಿ ಒಂದೇ ಸೂರಿನಡಿ ವಿಜ್ಞಾನ ಕ್ಷೇತ್ರದ ಎಲ್ಲಾ ಸಂಶೋಧನೆ, ಅನ್ವೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಸೈನ್ಸ್ ಫೋರಂ ಲೋಗೊ' ಅನಾವರಣ ಮಾಡುವ ಮೂಲಕ ಸೈನ್ಸ್ ಫೋರಂ ಸ್ಥಾಪನೆಗೆ ಅಧಿಕೃತ ಮುದ್ರೆ ಹಾಕಲಾಯಿತು. ಈ ಮೂಲಕ ಭವಿಷ್ಯದಲ್ಲಿ ಒಂದೇ ಸೂರಿನಡಿ ವಿಜ್ಞಾನ ಸಂಶೋಧನೆಗೆ ಆದ್ಯತೆ ನೀಡಲಾಗುತ್ತಿದೆ.

ಈ ವಿಜ್ಞಾನ ವೇದಿಕೆ (ಸೈನ್ಸ್ ಫೋರಂ)ಯು ಕಲಿಕೆಗೂ ಉತ್ತೇಜಿಸುವ ಜೊತೆಗೆ ಒಂದು ವೇದಿಕೆಯಡಿ ಸಂಶೋಧನೆ, ಆವಿಷ್ಕಾರದಂತಹ ಕಾರ್ಯಗಳಿಗೆ ಪೂರಕವಾಗಿರಲಿದೆ. ಇದು ವಿಶ್ವಮಟ್ಟದ ಸೌಲಭ್ಯ, ಸೌಕರ್ಯಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ಏನಿದು ಸೈನ್ಸ್ ಫೋರಂ?
ಬೆಂಗಳೂರು ವಿಶ್ವವಿದ್ಯಾಲಯವು ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದು, ಮುಂದಿನ ಎಲ್ಲಾ ಅನ್ವೇಷಣೆಗಳನ್ನು ಒಂದೇ ಸೂರಿನಡಿ ತರಲು ವೇದಿಕೆ ಸೈನ್ಸ್ ಫೋರಂ (BUSF) ನಿರ್ಮಿಸಲಾಗುತ್ತಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳನ್ನು ಒಟ್ಟುಗೂಡಿಸಿ ಸಮಗ್ರ ಚರ್ಚೆ, ವೈಜ್ಞಾನಿಕ ವಿಷಯ ವಿನಿಮಯ, ಜ್ಞಾನ ಸಂಪಾದನೆ ಮಾಡುವ ಉದ್ದೇಶವನ್ನು ಸೈನ್ಸ್ ಫೋರಂ ಹೊಂದಿದೆ.
ಈ ಸೈನ್ಸ್ ಪೋರಂ ಮೂಲಕ ವರ್ಷದ 365 ದಿನಗಳ ಕಾಲ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿಯನ್ನು ಹೊಂದಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆ, ಅನ್ವೇಷಣೆಗೆ ಸೂಕ್ತ ಮಾರ್ಗದರ್ಶವನ್ನು ಈ ಫೋರಂ ಮೂಲಕ ನೀಡಲಾಗುವುದು.

ಏನೆಲ್ಲಾ ಮಾಡಲಿದೆ ಸೈನ್ಸ್ ಫೋರಂ?
* ವಿಶ್ವದ ಶ್ರೇಷ್ಠ ವಿಜ್ಞಾನಿಗಳಿಂದ ಉಪನ್ಯಾಸ ಮಾಲಿಕೆ ಆಯೋಜನೆ
* ಕೇಂದ್ರಿಕೃತ ಉಪಕರಣ ಕೇಂದ್ರ ಸ್ಥಾಪನೆ
* ಅಂತರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳೊಂದಿಗೆ ಒಡಂಬಡಿಕೆ
* ಉದ್ಯಮಶೀಲತೆ ಸಹಭಾಗಿತ್ವ ಇರಲಿದೆ.
* ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುತ್ತದೆ.
* ವಿಜ್ಞಾನ ಕಾರ್ಯಗಾರಗಳ ಆಯೋಜನೆ.
* ಅಲ್ಯೂಮಿನಿಗಳಿಂದ ಮಾರ್ಗದರ್ಶನ ನೀಡಲಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಹೆಚ್ ಎ ರಂಗನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದೆ. ಕುಲಪತಿ ಡಾ.ಜಯಕರ ಎಸ್ ಎಂ, ಕುಲಸಚಿವ ಶೇಕ್ ಲತೀಫ್, ಕುಲಸಚಿವ ಮೌಲ್ಯಮಾಪನ ಶ್ರೀನಿವಾಸ್ ಸಿ, ಸೈನ್ಸ್ ಡೀನ್ ಅಶೋಕ್ ಹಂಜಗಿ ಅವರು ಕಾರ್ಯಕ್ರಮದಲ್ಲಿದ್ದರು.












Click it and Unblock the Notifications