ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ!

|
Google Oneindia Kannada News

I am not understanding what the text book says
ಕನ್ನಡ ಮಾಧ್ಯಮದಲ್ಲಿ ಓದೋ ಮಕ್ಕಳಿಗೆ ಅವರ ಕನ್ನಡ ಪುಸ್ತಕವೇ ಹೇಗೆ ಕಬ್ಬಿಣದ ಕಡಲೆಯಾಗಿದೆ. ಮಕ್ಕಳ ಆಡುನುಡಿಗೆ ಹತ್ತಿರವಾಗಿರುವ, ಅವರಿಗೆ ಸುಲಭಕ್ಕೆ ಅರ್ಥ ಆಗುವ, ಸುಲಭದಲ್ಲಿ ಉಲಿಯೋಕೆ ಆಗುವಂತ ಶಬ್ದಗಳೊಂದೂ, ಕನ್ನಡ ಮಾಧ್ಯಮದ ವಿಜ್ಞಾನ, ಗಣಿತದ ಪಠ್ಯ ಪುಸ್ತಕದಲ್ಲೇಕೆ ಇಲ್ಲ?

* ಪಕ್ಕದ ಮನೆ ಹುಡುಗಾ

ಕಳೆದ ವರ್ಷ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿರುವ ಅಜ್ಜಿ ಮನೆಗೆ 4 ದಿನ ರಜೆ ಅಂತಾ ಹೋಗಿದ್ದೆ. ಸಂಜೆ ಊಟದ ನಂತರ ಮನೆಯಲ್ಲಿ ಮಾಮನ ಮಕ್ಕಳೆಲ್ಲ ಓದಿಕೊಳ್ತಾ ಇದ್ರು. 9ನೇ ಕ್ಲಾಸಲ್ಲಿ ಓದ್ತಾ ಇರೋ ಅನುಷಾಳಿಗೆ ಅಭ್ಯಾಸ ಎಲ್ಲ ಹೇಗ್ ನಡಿತಾ ಇದೆ, ಯಾವ ವಿಷ್ಯ ಕಷ್ಟ ಅನ್ಸುತ್ತೆ ಅಂತಾ ಕೇಳಿದೆ. ಅದಕ್ಕವಳು " ಅಣ್ಣಾ, ನನಗೆ ಗಣಿತ ಒಂದೇ ಚೂರು ಕಷ್ಟಾ" ಅಂದ್ಲು.

ಸುಮ್ಮನಿರದೇ ಇರುವೆ ಬಿಟ್ಕೊಂಡ ಅನ್ನೋ ಹಂಗೆ ನಾನು ಹೌದಾ, ಎಲ್ಲಿ ಗಣಿತದ ಪುಸ್ತಕ ತಗೊಂಡ್ ಬಾ, ಏನ್ ಕಷ್ಟ ಅನ್ಸುತ್ತೋ ಕೇಳು, ನಾನು ಹೇಳಿಕೊಡ್ತಿನಿ ಅಂದೆ. ಅವಳು ಗಣಿತದ 9ನೇ ಕ್ಲಾಸಿನ ಪುಸ್ತಕ ತಂದು ಕೇಳಿದ್ದು ಈ ಪ್ರಮೇಯದ ಅರ್ಥ ಹತ್ತು ಸಲಿ ತಲೆಕೆಳಗಾಗಿ ಓದಿದ್ರೂ ಇದರ ಅರ್ಥ ಹೊಳಿಲಿಲ್ಲ.

ಕೆಳಗಿನದನ್ನು ಓದಿರಿ.

1. ಎರಡು ಬೀಜೋಕ್ತಿಗಳ ಭಾಗಲಬ್ಧದ ಸಂಖ್ಯಾ ಸಹಗುಣಕವು ಆ ಬೀಜೋಕ್ತಿಗಳ ಸಹಗುಣಕದ ಭಾಗಲಬ್ಧಕ್ಕೆ ಸಮವಾಗಿರುತ್ತದೆ.
2. ಎರಡು ಬೀಜೋಕ್ತಿಗಳನ್ನು ಭಾಗಿಸಿದಾಗ ಬರುವ ಭಾಗಲಬ್ಧದಲ್ಲಿರುವ ಚರಾಂಶ ಭಾಗ ಬೀಜೋಕ್ತಿಗಳಲ್ಲಿರುವ ಚರಾಂಶಗಳ ಭಾಗಲಬ್ಧಕ್ಕೆ ಸಮವಾಗಿರುತ್ತದೆ.

ಅರ್ಥವಾಗದಿದ್ದರೆ ಮತ್ತೆ ಓದಿ. ಮತ್ತೂ ಅರ್ಥವಾಗದಿದ್ದರೆ ಮಗದೊಮ್ಮೆ ಓದಿರಿ. ನಂತರ ಅರ್ಥ ಹೇಳಿ. ಅರ್ಥವಾಯ್ತಾ?

ಆಗಲೇ ಅನ್ನಿಸಿದ್ದು, ಕನ್ನಡ ಮಾಧ್ಯಮದಲ್ಲಿ ಓದೋ ಮಕ್ಕಳಿಗೆ ಅವರ ಕನ್ನಡ ಪುಸ್ತಕವೇ ಹೇಗೆ ಕಬ್ಬಿಣದ ಕಡಲೆಯಾಗಿರೋದು ಅಂತ. ಮಕ್ಕಳ ಆಡುನುಡಿಗೆ ಹತ್ತಿರವಾಗಿರುವ, ಅವರಿಗೆ ಸುಲಭಕ್ಕೆ ಅರ್ಥ ಆಗುವ, ಸುಲಭದಲ್ಲಿ ಉಲಿಯೋಕೆ ಆಗುವಂತ ಶಬ್ದಗಳೊಂದೂ, ಕನ್ನಡ ಮಾಧ್ಯಮದ ವಿಜ್ಞಾನ, ಗಣಿತದ ಪಠ್ಯ ಪುಸ್ತಕದಲ್ಲೇಕೆ ಇಲ್ಲ?

ಕನ್ನಡದ ಮಕ್ಕಳು ಊರು ಹೊಡೆಯುವುದಲ್ಲೇ ತಮ್ಮ ಕಾಲ ಕಳೆಯುತ್ತಿವೆಯೇ ಹೊರತು ವಿಜ್ಞಾನ, ಗಣಿತದ ಅಂಶಗಳನ್ನು ಅರಿಯುವುದರಲ್ಲಲ್ಲ. Concave, Convex mirror ಅನ್ನು ಉಬ್ಬುಗಾಜು, ತಗ್ಗುಗಾಜು ಅಂದರೆ ಎಂತಹ ಗಮಾರನಿಗೂ ಅರ್ಥ ಆಗುತ್ತೆ, ಅದೇ ಕನ್ನಡ ಮಾಧ್ಯಮದ ಪುಸ್ತಕದಲ್ಲಿ ಪೀನ ಮಸೂರ, ನಿಮ್ನ ಮಸೂರ ಎಂದು ಹೇಳಿ ಕೊಡುತ್ತಾರೆ. ಮಕ್ಕಳಿಗೆ ಯಾವುದು ಸುಲಭವಾಗುತ್ತೆ ನೀವೇ ಒಮ್ಮೆ ಯೋಚಿಸಿ. chlorophyl ಅನ್ನುವುದನ್ನು ಪತ್ರಹರಿತ್ತು ಎಂದೆನ್ನದೇ "ಎಲೆಹಸಿರು" ಅಂದರೆ ಮಕ್ಕಳಿಗೆ ಸುಲಭವಾಗುತ್ತಾ, ಕಷ್ಟವಾಗುತ್ತ ನೀವು ಹೇಳಿ? Denominator / Nominator ಅನ್ನಲು ಮೇಲ್ ಮನೆ / ಕೆಳಮನೆ ಅನ್ನೋದು ಸುಲಭಾನಾ ಇಲ್ಲ ಭಾಜ್ಯ-ಭಾಜಕ ಅನ್ನೋದಾ? Line ಅನ್ನಲು ಗೆರೆ ಸುಲಭಾನಾ ರೇಖೆ ಅನ್ನೋದಾ? ಈ ಪಟ್ಟಿಗೆ ಕೊನೆನೇ ಇಲ್ಲ. ಅಷ್ಟರ ಮಟ್ಟಿಗೆ ಕನ್ನಡದ ಕಲಿಕೆ ಆಡುನುಡಿಯಿಂದ, ಆದ್ದರಿಂದ ಆ ನುಡಿಯಾಡುವ ನಾಡಿಗರಿಂದ ದೂರ ಸರಿದಿದೆ.

83% ಕರ್ನಾಟಕದ ಮಕ್ಕಳು, ಹೌದು 83% ಮಕ್ಕಳು ಈಗಲೂ ಕನ್ನಡ ಮಾಧ್ಯಮದಲ್ಲೇ ಓದ್ತಾ ಇದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಮಕ್ಕಳು ನಾಡಿನ ಭಾಷೆಯಲ್ಲಿ ಓದುತ್ತಿರಬೇಕಾದರೆ, ಆ ಮಕ್ಕಳ ಕಲಿಕೆ ಸುಲಭ ಆಗಿಸುವತ್ತ, ಆ ಮಕ್ಕಳ ಬುದ್ಧಿ ಚುರುಕಾಗಿಸುವತ್ತ ನಮ್ಮ ಪಠ್ಯ ಪುಸ್ತಕದಲ್ಲಿ ಒಂದಿಷ್ಟು ಬದಲಾವಣೆಗಳಾಗಬೇಕು. ಹಾಗಂತ ನಿಮಗನಿಸಲ್ವಾ ಗೆಳೆಯರೇ? ಆ ಮಕ್ಕಳ ಕಲಿಕೆ ಸುಧಾರಿಸಿದ್ರೆ ತಾನೇ ಅಲ್ಲಿಂದ ಇನ್ನೊಬ್ಬ ವಿಶ್ವೇಶ್ವರಯ್ಯ, ಇನ್ನೊಬ್ಬ ಯು.ಆರ್.ರಾವ್ ತರಹದ ವ್ಯಕ್ತಿಗಳು ಬರಲು ಸಾಧ್ಯವಾಗೋದು?

ಅದಿರಲಿ, ಈ ಮೇಲಿನ ಚಿತ್ರದಲ್ಲಿದ್ದ ಬೀಜಗಣಿತದ ಈ ಪ್ರಮೇಯ ನಿಮಗೇನಾದ್ರೂ ಅರ್ಥ ಆದ್ರೆ, ಅದನ್ನ ವಿವರಿಸಿದರೆ ನಿಮಗೊಂದು ಬಹುಮಾನ ನಾನು ಕೊಡ್ತಿನಿ. :) Are you ready?

(ಕೃಪೆ : ವಸಂತ ಬಂದಾ...)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X