ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾಜಿನಗರದಲ್ಲೊಂದು ಉತ್ತಮ ಪುಸ್ತಕ ಮಳಿಗೆ

By * ರಾಧಿಕಾ ಎಮ್.ಜಿ.
|
Google Oneindia Kannada News

Akruti - Kannada book store at Rajajinagar
ಬಸವನಗುಡಿಯಲ್ಲಿ ಅಂಕಿತ ಇದೆ, ಜಯನಗರದಲ್ಲಿ ಖ್ಯಾತವೆನ್ನುವ ಎಲ್ಲಾ ಪುಸ್ತಕ ಮಳಿಗೆಗಳು ಮನೆ ಮಾಡಿವೆ. ಆದರೆ ಇನ್ನೂ ಕನ್ನಡಿಗರ ಊರೇ ಆಗಿರುವ ರಾಜಾಜಿನಗರದಲ್ಲಿ, ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳ ಮಳಿಗೆಗಳು ದಂಡಿಯಾಗಿದ್ದರೂ, ಸಾಹಿತ್ಯಾಸಕ್ತರು ಪುಸ್ತಕಗಳಿಗೆ ಅಕ್ಕ ಪಕ್ಕದ ಬಡಾವಣೆಗಳ ಪುಸ್ತಕ ಮಳಿಗೆಗಳ ಮೊರೆ ಹೋಗಬೇಕಿತ್ತು. ಟ್ರಾಫಿಕ್ ಜಂಜಾಟದಲ್ಲಿ ಗಾಂಧಿನಗರದ ಸಪ್ನ ಮಳಿಗೆಗೆ ಎಡ ತಾಕುತಿದ್ದ ರಾಜಾಜಿನಗರದ ಸುತ್ತ ಮುತ್ತಣ ನಿವಾಸಿಗಳಿಗೆ "ಆಕೃತಿ"ಯ ಆಗಮನ ಸಂತಸದ ವಿಷಯ.

ಸದ್ದು ಗದ್ದಲವಿಲ್ಲದೆ ಕೆಲವೇ ದಿನಗಳ ಹಿಂದೆಯಷ್ಟೇ ಆರಂಭವಾದ ಆಕೃತಿ ಪುಸ್ತಕ ಮಳಿಗೆಯಲ್ಲಿ ಮೊನ್ನೆ ಭಾನುವಾರ, ಖ್ಯಾತ ಕತೆಗಾರ ವಸುಧೇಂದ್ರರವರಿಂದ ಇತ್ತೀಚಿನ ಪುಸ್ತಕ "ರಕ್ಷಕ ಅನಾಥ"ದ ಒಂದು ಬರಹ ವಾಚನ ಕಾರ್ಯಕ್ರಮವಿತ್ತು. ಮಳಿಗೆಯ ಸ್ಥಾಪಕ ಗುರುಪ್ರಸಾದ್ ಕುಟುಂಬ ವರ್ಗ, ಕೆಲವು ಸ್ನೇಹಿತರಷ್ಟೇ ನೆರೆದಿದ್ದ ಚಿಕ್ಕ ಚೊಕ್ಕ ಕಾರ್ಯಕ್ರಮ. "ಹೊಸ ಪೀಳಿಗೆಯನ್ನು ಓದಲು ಹಚ್ಚಿದ" ಲೇಖಕರೆಂದು ಬೊಳ್ವಾರ("ತಟ್ಟು ಚಪ್ಪಾಳೆ ಪುಟ್ಟ ಮಗು" ಪುಸ್ತಕದ ಸಂಪಾದಕ)ರಿಂದ ನಾಮಕರಣಗೊಂಡ ಲೇಖಕ ವಸುಧೇಂದ್ರ ನೆರೆದವರೆಲ್ಲರೊಡನೆಯೂ ಆತ್ಮೀಯವಾಗಿ ಬೆರೆತು ಮುಕ್ತವಾಗಿ ಮಾತನಾಡಿದರು.

ಯಾವುದೇ ದೇಶದ ಜನಸಂಖ್ಯೆಯ 10% ಮಂದಿಯಷ್ಟೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುತ್ತಾರೆ. ಈಗೀಗ ಓದುಗರು ಹೆಚ್ಚಾಗುತ್ತಿದ್ದಾರೆ ಅದು ಸಂತಸದ ವಿಷಯವೆಂದ ವಸುಧೇಂದ್ರ, ಐ.ಟಿ ಉದ್ಯೋಗ ತೊರೆದು ಪುಸ್ತಕ ಪ್ರಕಾಶನ, ಮಾರಾಟ ಉದ್ಯಮಕ್ಕೆ ಕಾಲಿಟ್ಟಿರುವ ಗುರುಪ್ರಸಾದ್ ರವರಿಗೆ ಶುಭ ಹಾರೈಸಿದರು. ಬೆಂಗಳೂರಿನ ಮಕ್ಕಳ ಕನ್ನಡ ಭಾಷಾ ಪ್ರಭುತ್ವ ಅಂಗಡಿಯ ಬೋರ್ಡ್ ಓದಲಿಕ್ಕಷ್ಟೇ ಸೀಮಿತವೆಂದ ಅಭಿಪ್ರಾಯಕ್ಕೆ ಉತ್ತರವಾಗಿ, ಆಂಗ್ಲ ಭಾಷೆಯಾದರೂ ಸರಿ, ಪುಸ್ತಕ ಓದುವ ಅಭಿರುಚಿಯಿದ್ದಲ್ಲಿ, ಕನ್ನಡ ಕೃತಿಗಳನ್ನು ತರ್ಜುಮೆ ಮಾಡಿಯಾದರೂ ಸರಿ ಅವರಿಗೆ ತಲುಪಿಸಬಹುದಲ್ಲ ಎಂದರು ಆಶಾವಾದಿ ವಸುಧೇಂದ್ರ.

ಮನೆಯಲ್ಲಿ ತಾತನ ಕಾಲದಿಂದಲೂ ಇರುವ ದೇವರ ಪಟಗಳನ್ನು ಏನು ಮಾಡಬೇಕೆಂದು ತೋರದ ಧರ್ಮ ಸಂಕಟದಲ್ಲಿ ನೀವಿದ್ದಲ್ಲಿ, ವಸುಧೇಂದ್ರರ "ರಕ್ಷಕ ಅನಾಥ" ಪುಸ್ತಕವನ್ನು ಓದಿ. ಸಮರ್ಪಕ ಉತ್ತರವನ್ನು ನೀಡುತ್ತದೆ ಅವರ ಲಲಿತ ಪ್ರಬಂಧಗಳ ಸಂಕಲನ "ರಕ್ಷಕ ಅನಾಥ". ಹಿರಿಯರು ನೂರು ವರ್ಷ ಬಾಳಿ ಬದುಕಿದ ಬಳ್ಳಾರಿಯ ಮನೆಯಲ್ಲಿದ್ದ ಇನ್ನೂರಕ್ಕೂ ಮಿಕ್ಕ ದೇವರ ಪಟಗಳನ್ನು, ಬೆಂಗಳೂರಿನ ಆಧುನಿಕ ಜೀವನ ಶೈಲಿಗೆ ಹೊಂದುವ ಹಾಗೆ ಕಾಪಾಡಿಗೊಂಡ ಬಗೆಯ ಕುರಿತ ಹಾಸ್ಯ ಲೇಖನ ಎಲ್ಲರಿಗೂ ಮೆಚ್ಚುಗೆಯಾಗಿದ್ದಲ್ಲದೆ, ಸಭಿಕರಲ್ಲೊಬ್ಬರು ಅವರ ಮನೆಯಲ್ಲಿರುವ ರವಿವರ್ಮನ ಕಲಾಕೃತಿಗಳನ್ನು ರಕ್ಷಿಸುವ ಉಪಾಯ ಹೇಳಿಕೊಟ್ಟ ವಸುಧೇಂದ್ರರವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಗುರುಪ್ರಸಾದ್ ರವರ ಸಾಹಿತ್ಯಾಭಿರುಚಿಯನ್ನು ಬಿಂಬಿಸುವ, ಅಚ್ಚುಕಟ್ಟಾಗಿ ಜೋಡಿಸಿರುವ ಪುಸ್ತಕಮಳಿಗೆಗೊಮ್ಮೆ ಭೇಟಿ ಕೊಡಿ. ಬಹುತೇಕ ಜನಪ್ರಿಯ ಪುಸ್ತಕಗಳೆಲ್ಲವೂ ಅಲ್ಲಿವೆ. ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆ, ಬಿ.ಜಿ.ಎಲ್ ಸ್ವಾಮಿಯವರ ಹಸಿರು ಹೊನ್ನು, ತೇಜಸ್ವಿ, ಕುವೆಂಪು, ಕಾರಂತ, ಭೈರಪ್ಪನವರ ಸಮಗ್ರ ಕೃತಿಗಳು, ಸ್ವಪ್ನ ಸಾರಸ್ವತ, ವೈದೇಹಿಯವರ ಕ್ರೌಂಚಪಕ್ಷಿಗಳು, ರವಿ ಬೆಳಗೆರೆ, ಜೋಗಿ, ಪ್ರತಾಪ ಸಿಂಹ, ಆರ್.ಕೆ ನಾರಾಯಣ್ ರವರ ಕೃತಿಗಳ ಕನ್ನಡ ಅನುವಾದ, ಎಲ್ಲರ ಕೃತಿಗಳು ಲಭ್ಯ ಇಲ್ಲಿ. ತೇಜಸ್ವಿಯವರು ತೆಗೆದ ಛಾಯಾ ಚಿತ್ರಗಳ ಸಂಕಲನದ ಪುಸ್ತಕ ಅದರ ಹೆಚ್ಚಿನ ಬೆಲೆಯನ್ನು ಸೂಚಿಸುವಂತೆ ಕಪಾಟಿನ ಮೇಲ್ಗಡೆ ಸ್ಥಾನ ಆಕ್ರಮಿಸಿತ್ತು. ಛಂದ ಪುಸ್ತಕಗಳಿಗೆಂದೇ ಒಂದು ಕಪಾಟು ಮೀಸಲಾಗಿದೆ.

ನಮ್ಮ ಮನೆಯ ಮಕ್ಕಳಿಗೆ ಕನ್ನಡ ಚೆನ್ನಾಗಿ ಓದಲು ಬರುವುದಿಲ್ಲವೆಂಬ ಬೇಸರ ಬೇಡ. ಪಂಚತಂತ್ರ, ಅಮರ ಚಿತ್ರಕಥೆ ಇನ್ನಿತರೆ ಚಿತ್ತಾಕರ್ಷಕ ಚಿತ್ರಗಳನ್ನು ಹೊಂದಿದ ಮಕ್ಕಳ ಪುಸ್ತಕಗಳು ಲಭ್ಯವಿವೆ. ಈಗಿನ ಪೀಳಿಗೆಯವರ ನಾಡಿ ಮಿಡಿತವನ್ನರಿತಿರುವ ಗುರು, ಅವರಿಗೆಂದೇ ಜೆಫ್ರಿ ಆರ್ಚರ್, ಸ್ಟೆಫಿನಿ ಮೆಯರ್ ಪುಸ್ತಕಗಳನ್ನು ಕಣ್ಣಿಗೆ ಕಾಣುವಂತೆ ಇಟ್ಟಿದ್ದಾರೆ. ಪುಸ್ತಕ ಕೊಳ್ಳುವುದು ಮಾತ್ರವಲ್ಲ, ಬೇಕೆಂದಲ್ಲಿ ಅಲ್ಲಿಯೇ ಕುಳಿತು ಓದಲು ಬೀನ್ ಬ್ಯಾಗ್ ಗಳಿವೆ. ಮಳಿಗೆ ಮೇಲ್ಮಹಡಿಯಲ್ಲಿರುವುದರಿಂದ ಸೂರ್ಯನ ನೈಸರ್ಗಿಕ ಬೆಳಕು ಯಥೇಚ್ಚವಾಗಿದೆ. ಬಿಡುವಿನ ಸಮಯದಲ್ಲೊಮ್ಮೆ ಭೇಟಿ ಕೊಡಿ. ಮಳಿಗೆಗೆ ಹತ್ತಿರದಲ್ಲೇ, ಎಮ್.ಟಿ.ಆರ್ ಮೊಮೆಂಟ್ಸ್ ನಲ್ಲಿ ದೋಸೆ, ಕಾಫಿ ಸೇವನೆಯೂ ಆಗಬಹುದು, ಖಾರ ಭರಿತ ಚಾಟ್ಸ್, ಜೋಳದ ರೊಟ್ಟಿ, ಮನೆಗೆ ಬೇಕಾದ ಸಣ್ಣ ಪುಟ್ಟ ಸಾಮಾನು ... ಈಗಾಗಲೇ ಗೊತ್ತಾಗಿರಬಹುದು ಯಾವುದೀ ರಸ್ತೆ ಎಂದು. ರಾಜಾಜಿನಗರದ ಭಾಷ್ಯಂ ಸರ್ಕಲ್ ಮತ್ತು ಇ.ಎಸ್.ಐ ಆಸ್ಪತ್ರೆಯ ನಡುವಿನ ರಸ್ತೆ ಇದು.

ಮಳಿಗೆಯ ವಿಳಾಸ:
ಆಕೃತಿ ಬುಕ್ಸ್
ನಂ. 28 (ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010

ಗುರುತು: ಇ.ಎಸ್.ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವೇರ್ ಮಳಿಗೆಯ ಮೇಲೆ

ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 98866 94580

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X