Get Updates
Get notified of breaking news, exclusive insights, and must-see stories!

ವೀರಶೈವ ಒಂದು ವ್ರತ, ಲಿಂಗಾಯತ ಸ್ವತಂತ್ರ ಧರ್ಮ!

ವೀರಶೈವ ಮತ್ತು ಲಿಂಗಾಯತ ಇವು ಬಸವ ಪೂರ್ವ ಮತ್ತು ನಂತರದ ಚರ್ಚೆಗಳಿಗೆ ಗ್ರಾಸವಾದ ವಿಷಯಗಳು. ಗುರು ವಿರಕ್ತ ಪರಂಪರೆ ವಾದ ಹೇಗೆ ಮತ್ತು ಏಕೆ ಹುಟ್ಟಿಕೊಂಡವು? ಎಂಬುದು ಒಂದು ಜಿಜ್ಞಾಸೆಯ ಚರ್ಚೆಯಾಗಿದೆ.

ಬಸವಣ್ಣನವರು 12ನೇ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ, ಸಮಕಾಲೀನ, ಸಮಾನತೆ ಸಾರುವ ಅತ್ಯಂತ ವೈಜ್ಞಾನಿಕ ಧರ್ಮವನ್ನು ಸ್ಥಾಪಿಸಿದರು. ಶ್ರೇಣೀಕೃತವಲ್ಲದ ಲಿಂಗ ಆಶ್ರಮ ವರ್ಗ ವರ್ಣ ಭೇದ ಹೊರೆತು ಪಡೆಸಿದ ಜಗತ್ತಿನ ಎಲ್ಲಾ ವಿದ್ವಾ೦ಸರಿಂದ ಮೆಚ್ಚುಗೆಗೆ ಪಾತ್ರವಾದ ಲಿಂಗಾಯತ ಧರ್ಮ.

ಹೇಗೆ ಲಿಂಗಾಯತ ಧರ್ಮ ತನ್ನ ಅಸ್ತಿತ್ವ ಕಳೆದುಕೊಳ್ಳಹತ್ತಿತು ಮತ್ತು ಆಂಧ್ರ ಮೂಲದಿಂದ ಬಂಡ ವೀರಶೈವ ವ್ರತ ಆಚರಣೆಯು ಹೇಗೆ ಲಿಂಗಾಯತ ಧರ್ಮವನ್ನು ಅತಿಕ್ರಮಿಸಿ ಅದರ ಮೂಲ ತತ್ವಗಳನ್ನು ನುಂಗಿ ಹಾಕಲು ಪ್ರಯತ್ನಿಸಿತು ಎಂಬುದರ ಪೂರ್ಣ ಸಾಕ್ಷಿ ದಾಖಲೆ ಸಮೇತ ಸದರಪಡಿಸಿದ ಒಂದು ಲೇಖನ.

The differences between Lingayat and Veerashaiva

ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು
ಮೊಗ್ಗು ಮಲ್ಲಿಗೆ ಅರಳ್ಯಾವ
ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ
ಬಸವಣ್ಣನ ಆಗಮನವನ್ನು ಜನಪದಿಗರು ತುಂಬು ಮನದಿಂದ ಸ್ವಾಗತಿಸಿದ್ದಾರೆ

ಸನಾತನದ ಶೈವ ಪ್ರಭೇದಗಳಾಗಿದ್ದ ಕಾಪಲಿಕ ಕಾಳಮುಖಿ ಲಕುಲಿಶ ಹೀಗೆ ಬೇರೆ ಬೇರೆ ಪ್ರಬೇಧಗಳಿದ್ದವು. ಉತ್ತರಾಗಮದ ಭಾಗವಾಗಿ 18 ಮತ್ತು 19ನೆ ಶತಮಾನದಲ್ಲಿ ಆಂಧ್ರ ಮೂಲದಿಂದ ಬಂದ ವೀರಶೈವವೆಂಬ 60 ವ್ರತಗಳ ಸಂಪ್ರದಾಯ ಮುಂದೆ ಒಂದು ಪುರೋಹಿತ ಮಾಹೇಶ್ವರ ವರ್ಗವನ್ನು ನಿರ್ಮಿಸುವ ಕುತಂತ್ರದಿಂದ ಬಸವ ಧರ್ಮಿಯರ ಮೇಲೆ ವೀರಶೈವ ತನ್ನ ಸವಾರಿ ನಡೆಸಿತು.

ಬಸವ ಧರ್ಮ ಇದು ಸ್ವತಂತ್ರ ಧರ್ಮ. ಅಪ್ಪ ಬಸವಣ್ಣನವರು ಕೊಟ್ಟ ಗುರು ಲಿಂಗ ಜಂಗಮ -ಕಾಯಕ ದಾಸೋಹ ತತ್ವಗಳ ಮೂಲಕ, ಸರ್ವರೊಳಗೆ ಸಮಾನತೆ ತಂದ ಶ್ರೇಷ್ಠ ಧರ್ಮ.

ವಚನ ಸಾಹಿತ್ಯಗಳು ಸಂಕಲನಕಾರ ಸಮಯದಲ್ಲಿ ಬೇರೆ ಬೇರೆ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡಿದೆ. ಪರ್ಯಾಯ ಪದಗಳ ಸೇರಿಕೆ, ಸಂದರ್ಭ ಸಂಗತಿಗಳನ್ನು ಮುಂದು ಮಾಡಿ ಕೆಲವು ಪದಗಳ ಕೂಡಿಸುವ, ಪಾಠಾ೦ತರ ಸಮಯದಲ್ಲಿ ತಿಳಿದಿ ತಿಳಿಯದೋ ಮಾಡಿದ ವಾಕ್ಯ ಸಂಯೋಜನೆ, ವೈಭವೀಸುವ ಉದ್ದೇಶದಿಂದ ಒಮ್ಮೊಮ್ಮೆ ವಚನಗಳಲ್ಲಿ ಇಂತಹ ಬದಲಾವಣೆ ಕಂಡು ಬಂದಿದೆ. 12ನೇ ಶತಮಾನದ ನಂತರ 15ನೇ ಶತಮಾನದಲ್ಲಿ ಸಂಕಲನ ಪರಿಷ್ಕರಣೆ ನಡೆಯಿತು.

The differences between Lingayat and Veerashaiva

***
ಎಡೆಯೂರ ಶ್ರೀ ಸಿದ್ಧಲಿಂಗ ಯತಿಗಳು ಸುಮಾರು ಮೂರು ಶತಮಾನದವರೆಗೆ ಭೂಗರ್ಭ ಸೇರಿದ ವಚನಗಳ ಹೆಕ್ಕಿ ಅವುಗಳ ಪಾಠಾಂತರ ಮತ್ತು ಪರಿಷ್ಕರಣೆ ಕಾರ್ಯ ನಡೆಸಿದರು. ಈ ಕಾಲವನ್ನು ವಚನಗಳ ಜೀವನ್ಮುಕ್ತಿಯ ಕಾಲವೆಂದೆ ಹೇಳಬಹುದು. ನಂತರ 16ನೇ ಶತಮಾನದಲ್ಲಿ ಉದ್ದೇಶಪೂರಿತ ಬದಲಾವಣೆ ನಡೆಯಿತು.

ಅಂದಿನ ಕವಿಗಳು ಆಚಾರ್ಯ ಮೂಲದಿಂದ ಬಂದವರಾಗಿದ್ದರಿಂದ ಸಂಸ್ಕೃತ ಮತ್ತು ವೀರಶೈವ ಪದಗಳನ್ನು ಅನಗತ್ಯವಾಗಿ ವಚನಗಳಲ್ಲಿ ಸೇರ್ಪಡಿಸಿದರು. ಆರಾಧ್ಯ ಪರಂಪರೆಯವರು ಶರಣ ಸಾಹಿತ್ಯವನ್ನು ತಿರುಚಲು, ವಿರೂಪಗೊಳಿಸಲು ಯತ್ನಿಸಿದ್ದಾರೆ. ಅಚ್ಚ ಕನ್ನಡದಲ್ಲಿಯೇ ಸಾಹಿತ್ಯ ರಚಿಸಿದ ಶರಣರಿಗೆ ಸಂಸ್ಕೃತದ ವ್ಯಾಮೋಹವೇಕೆ?

ಲಿಂಗಾಯತ ಧರ್ಮಕ್ಕೆ ಬಿದ್ದ ಪೆಟ್ಟುಗಳು

ವೀರಶೈವ ವ್ರತಕ್ಕೆ ಧರ್ಮ ಗುರುವಿಲ್ಲ, ಧರ್ಮ ಗ್ರಂಥವಿಲ್ಲ, ಧರ್ಮಸೂತ್ರಗಳಿಲ್ಲ. ಸಿದ್ಧಾಂತ ಸಿಖಾಮಣಿ ಇದು ಬಸವೊತ್ತರದ ಕೃತಿಯೆಂದು ಸಿದ್ಧವಾಗಿದೆ. ಆ ಕೃತಿಯ ಮೊದಲೆನೆಯ ಪುಟದಲ್ಲಿ ಓಂ ಶ್ರೀ ಗುರು ಬಸವಲಿಂಗಾಯನಮ: ಎಂದು ದಾಖಲಿಸಲಾಗಿದೆ. ಬಹುದೇವೋಪಾಸನೆಯನ್ನು ಆಚರಿಸುವ ವೀರಶೈವ ಹೇಗೆ ಧರ್ಮವಾಗುತ್ತದೆ?

The differences between Lingayat and Veerashaiva

15 -16ನೇ ಶತಮಾನದಲ್ಲಿ ವೀರಶೈವ ಪದ ಬಳಕೆಯಲ್ಲಿ ಬಂತು. 1886ರ ವೇಳೆಗೆ ಲಿಂಗಾಯತ ಮುಖಂಡರನ್ನು ನಂಬಿಸಿ ಕೃತಕ ವೀರಶೈವ ಸಾಹಿತ್ಯ ಹುಟ್ಟು ಹಾಕಿದರು. ಅವರಲ್ಲಿ ಪ್ರಮುಖರು, 1) ಹುಬ್ಬಳ್ಳಿಯ ಚೆನ್ನವೀರಸ್ವಾಮಿಗಳು, 2) ಬಾರ್ಸಿಯ ಪ್ರಭುಲಿಂಗಯ್ಯನವರು, 3) ಸೀತಾರಾಮ ಶಾಸ್ತ್ರಿ ರೆತ್ರೆಕರ (ಬರ್ಸಿ) ಸಂಸ್ಕೃತ ಪಂಡಿತ, 4) ದಡ್ಡಿರಗಪ್ಪರಗಶೆಟ್ಟಿ ಮತ್ತು 5) ಯಜಮಾನ ವೀರಸಂಗಪ್ಪನವರು.

ಇವರು ಕೃತ್ರಿಮವಾಗಿ ರಚಿಸಿದ ಸಾಹಿತ್ಯವನ್ನು ಚಿಕ್ಕಬಳ್ಳಾಪುರದ ವಿರುಪಾಕ್ಷ ಶಾಸ್ತ್ರಿಗಳು, ರಾಯಚೂರು ಕೃಷ್ನಾಮಾಚಾರ, ಫಕೀರ ಪರ್ವತ ಬಸವಲಿಂಗ ಶಿವಬಸವ ಶಾಸ್ತ್ರಿಗಳು, ಕರವೇ ವೆಂಕಟ ರಂಗೋ ಇವರ ಸಹಾಯದಿಂದ ರಚಿಸಿ, ಪರಿಶೀಲಿಸಿ ತಾವು ಲಿಂಗಿ ಬ್ರಾಹ್ಮಣ ಎಂದು ಸಾಧಿಸ ಹೊರಟಿದ್ದು ಮೊದಲನೆಯ ತಪ್ಪು. ಇದನ್ನು 1886ರಲ್ಲಿ ಸೆಪ್ಟೆಂಬರ್ 11ರಿಂದ 25ವರೆಗೆ ಬೆಳಗಾವಿಯ ಶಿವಾನಂದ ಥೀಯೇಟರ್ ಬಳಿಯ ಶಿವಾನಂದ ಪ್ರಿ೦ಟಿಂಗ್ ಪ್ರೆಸ್ಸಿನಲ್ಲಿ ಪ್ರಕಟ ಗೊಳಿಸಿದ್ದಾರೆ. "ವೀರಶೈವ ನಿರ್ಣಯ ಚಿಂತಾಮಣಿ" ಇದರಲ್ಲಿ ಈ ವಿಷಯವನ್ನು ಕಾಣಬಹುದು.

ಪರಳಿ ವೈಜನಾಥ ದೇವಸ್ಥಾನಕ್ಕೆ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳ ಪ್ರವೇಶ ನಿರಾಕರಣೆಯ ಹಿನ್ನೆಲೆಯಲ್ಲಿ ಅಂದಿನ ಹಿರಿಯ ಮುಖಂಡರಾದ ವಾರದ ಮಲ್ಲಪ್ಪನವರಿಂದ ಸಿದ್ದರಾಮಪ್ಪ ಪಾವಟೆ ಅವರ ಕಾನೂನಿನ ನೆರವಿಂದ ಲಿಂಗಾಯತರು "ಲಿಂಗಿ ಬ್ರಾಹ್ಮಣ" ಎಂದು ವಾದಿಸಿ ತಾವು ಬ್ರಾಹ್ಮಣರಿಗೆ ಸಮಾನರು, ಶೂದ್ರರಲ್ಲ ಅಂತ ಸಾಧಿಸಿದರು. ಇದು ಲಿಂಗಾಯತ ಧರ್ಮಕ್ಕೆ ಬಿದ್ದ ಇನ್ನೊಂದು ದೊಡ್ಡ ಪೆಟ್ಟು.

The differences between Lingayat and Veerashaiva

1904ರಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾ ಸಭೆ ಸ್ಥಾಪಿಸಿದ್ದು, ಲಿಂಗಾಯತ ಧರ್ಮಕ್ಕೆ ಕೊನೆಯ ಏಟು. 1910ರಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳು ಬಾದಾಮಿಯ ಬಳಿ ಸ್ಥಾಪಿಸಿದ ಶ್ರೀ ಶಿವಯೋಗ ಮಂದಿರ ಮತ್ತು ಸಂಸ್ಕೃತ ಶಾಲೆ ಬಸವ ಧರ್ಮೀಯರಿಗೆ ಮಾಡಿದ ಘೋರ ಅನ್ಯಾಯ.

ಬಸವ ತತ್ವಕ್ಕೆ ಸರಿಬಾರದ ವೀರಶೈವ ಆಚರಣೆಗಳು

ವೀರಶೈವರಿಗೆ ಅರವತ್ತು ಆಚರಣೆಗಳಿವೆ. ಅವು ಯಾವುವೂ ಬಸವ ತತ್ವಕ್ಕೆ ಸರಿಬಾರವು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕನೆಂದು ಸಮಕಾಲೀನ ವಚನಕಾರರು, ನಂತರದ ಕವಿಗಳು ಮತ್ತು ಜನಪದ ಕವಿಗಳು, ಅನೇಕ ಸಾಧಕರು, ಜನ ಗಣತಿಯ ಸೆನ್ಸಸ್ ಹಾಗು ಕೋರ್ಟ್ ಆದೇಶಗಳು ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಹೇಳುವಲ್ಲಿ ಸಹಾಯಕವಾಗಿವೆ.

ವೀರಶೈವರ ಅರವತ್ತು ಆಚರಣೆಗಳಲ್ಲಿ - ತಲೆ ಕೂದಲು ಸುಟ್ಟು ಕೊಳ್ಳುವುದು, ಬೆಂಕಿ ಹಾಯುವುದು, ಮುಳ್ಳಾವುಗೆಯ ಮೇಲೆ ನಿಲ್ಲುವುದು, ಅಸ್ತ್ರಗಳನ್ನು ಮೈಗೆ ಚುಚ್ಚಿ ಕೊಳ್ಳುವುದು, ಹೀಗೆ ಹಿ೦ಸೆಯನ್ನು ಆಚರಿಸುವ ಒಂದು ಉಪಕ್ರಮ ಮಾತ್ರ. ಅವರಲ್ಲಿ ಕೆಲವರು ಪೌರೋಹಿತ್ಯರಿಗೆ ನೆರವಾಗುವ ಕಾಯಕ ಮಾಡುತ್ತಿದ್ದರು.

ಬ್ಯಾಡಗಿ ವಿರಕ್ತ ಮಠದ ಶ್ರೀ ಮನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅನೇಕ ಗ್ರಂಥಗಳನ್ನು ಅಭ್ಯಾಸ ಮಾಡಿ ವೀರಶೈವ ಪಂಚಾಚಾರ್ಯರ ಚರಿತ್ರೆ ಎಂಬ ಕೃತಿಯನ್ನು 1958ರಲ್ಲಿ ರಚಿಸಿದ್ದಾರೆ. ಅದರಲ್ಲಿ ಅವರು ಸ್ಪಷ್ಟವಾಗಿ ರೇಣುಕ ಒಂದು ಕಲ್ಪನೆ, ಆದರೆ ರೇವುಣಸಿದ್ಧರೆ -ರೇಣುಕರು ಎಂದು ವಾದಿಸಿದ್ದಾರೆ. ಪುಟ 157 -159.

ಮುಂದೆ ಕಾಶಿನಾಥ ಶಾಸ್ತ್ರಿಗಳಿಗೆ ಚಿತ್ರದುರ್ಗ ಮಠದ ಪೀಠ ತಪ್ಪುವುದೋ ಅಂದೇ ಅವರು ಗುರು ವಿರಕ್ತ ಪಂಚ ಪೀಠ ವಿವಾದ ಹುಟ್ಟು ಹಾಕುತ್ತಾರೆ. ಈ ಹಿಂದೆ ವ್ಯವಸ್ಥಿತವಾಗಿ ಕ್ರೊಢೀಕರಿಸಿದ ಖೊಟ್ಟಿ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು, ಮೊಂಡುವಾದವನ್ನು ಪ್ರದರ್ಶಿಸುತ್ತ ಬಂದಿದ್ದಾರೆ.

1872ರಿಂದ -1989ವರೆಗಿನ ಎಲ್ಲ ಗೆಜೆಟ್ ಗಳಲ್ಲಿ ಲಿಂಗಾಯತ ಎಂದು ನಮೂದಿಸಲಾಗಿದೆ. ಕೆಲವು ಕಡೆ ವೀರಶೈವ ಅಂತ ದಾಖಲಾದರೂ ಸಹಿತ ಅದು ಲಿಂಗಾಯತ ಧರ್ಮದ ಒಂದು ಒಳ ಪಂಗಡ ಎಂದು ಹೇಳಲಾಗಿದೆ.

ಲಿಂಗಾಯತ ಒಂದು ಧರ್ಮವೆಂದು ಹೇಳಿದ್ದು ಸುಪ್ರೀಂ ಕೋರ್ಟ್

ಇನ್ನು ಪಂಚಪೀಠದವರೊಬ್ಬಲಾದ ಶ್ರೀಶೈಲ ಪೀಠದ ಆದಿ ಜಗದ್ಗುರು ಮಲ್ಲಿಕಾರ್ಜುನ ಪಂಡಿತರು ಬಸವಣ್ಣನವರನ್ನು ಭೇಟಿ ಆಗಲು ಕಲ್ಯಾಣಕ್ಕೆ ಬರುತಿರಲು ಬಸವಣ್ಣನವರು ಐಕ್ಯವಾದ ಸುದ್ದಿ ಕೇಳಿದ್ದನ್ನು, ಮಲ್ಲಿಕಾರ್ಜುನ ಪಂಡಿತರು ಐಕ್ಯವಾದ ಘಟನೆ ತೆಲುಗು ಶಾಸನ 1190ರಲ್ಲಿ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ಪಂಡಿತರು ತಮ್ಮ ವಚನಗಳಲ್ಲಿ ಬಸವಣ್ಣ ತಮ್ಮ ಆರಾಧ್ಯ ದೈವವೆಂದು ಹೊಗಳಿದ್ದಾರೆ.

ಪಾಶ್ಚಿಮಾತ್ಯ ಸಂಶೋಧಕರಾದ ಎಂತ್ಹೊವಾನ್, ಕ್ಯಾಂಪ ಬೆಲ್, ಆರ್ ಸಿ ಕಾರ್, ಅರ್ಥರ್ ಮೈಲ್ಸ್ , ಥರ್ಸ್ಟನ್ ಮುಂತಾದ ನೂರಾರು ಜನರು ಬಸವಣ್ಣನೆ ಲಿಂಗಾಯತ ಧರ್ಮದ ಸ್ಥಾಪಕ ಎಂದು ಸ್ಪಷ್ಟ ಪಡಿಸುತ್ತಾರೆ. 1966ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಪಿ ಬಿ ಗಜೇಂದ್ರಗಡಕರ ಅವರು Buddhism Is started by Buddha, Jainisam started by Mahaveera, Basavanna became The founder of Lingayat Religion ಎಂಬ ಸ್ಪಷ್ಟವಾದ ಅಭಿಮತಕ್ಕೆ ತಿಳಿಸಿದ್ದಾರೆ.

ವಸ್ತುಸ್ಥಿತಿ ಹೀಗಿರುವಾಗ ಕೆಲ ಅರೆ ಬರೆ ಜ್ಞಾನಿಗಳು, ಸ್ವಾಮಿಗಳು ತಾವೇ ವೀರಶೈವ ಮತ ಸ್ಥಾಪಕರೆಂದು, ಅದು ಬಸವ ಪೂರ್ವ ಧರ್ಮವೆಂದು ಬೊಗಳೆ ಬಿಡುತ್ತಾರೆ. ವಚನ ಪಿತಾಮಹ ಡಾ ಫ.ಗು. ಹಳಕಟ್ಟಿ ಅವರ ವಚನ ಸಂಕಲನ ಪರಿಷ್ಕರಣೆಯಲ್ಲಿ ಕೆಲ ಜಾತಿವಾದಿ ಮೂಲಭೂತ ವಾದಿಗಳು ಅನಗತ್ಯ ಖೊಟ್ಟಿ ವೀರಶೈವ ಪದಗಳನ್ನು ಸೇರಿಸಿಕೊಟ್ಟರು. ಇದರ ಅರಿವಿಲ್ಲದ ಮುಗ್ಧ ಡಾ ಹಳಕಟ್ಟಿ ಅವರಿಂದ ಕೆಲ ಅನೇಕ ತಪ್ಪು ಪದಗಳ ಜೋಡಣೆಯಾದವು. ಅವುಗಳಲ್ಲಿ ಸಂಸ್ಕೃತ ಪದಗಳಿವೆ.

ವೀರಶೈವ ಮತ್ತು ಲಿಂಗಾಯತದಲ್ಲಿನ ವ್ಯತ್ಯಾಸಗಳು

ವೀರಶೈವ ಆಚರಣೆಯು ವೇದ ಶಾಸ್ತ್ರ ಆಗಮ ಮಾನ್ಯತೆಯಂತೆ ನಡೆಯುತ್ತವೆ. ಅಲ್ಲಿ ಹೋಮಹವನ ಯಜ್ಞಗಳ ಆಚರಣೆ ಇದೆ. ವೀರಶೈವವು ಪುನರ್ಜನ್ಮ ಕರ್ಮ ಸಿದ್ಧಾಂತವನ್ನು ಒಪ್ಪುತ್ತದೆ. ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮವು ವೇದ ಆಗಮ ಶಾಸ್ತ್ರಗಳನ್ನು ಧಿಕ್ಕರಿಸುತ್ತದೆ. ವೀರಶೈವ ಆಚರಣೆಯಲ್ಲಿ ನಂದಿ ಗಣಪತಿ ವೀರಭದ್ರ ಪರಶಿವ ಪಾರ್ವತಿಯ ಪೂಜೆಗೆ ಅವಕಾಶವಿದೆ. ಲಿಂಗಾಯತ ಧರ್ಮವು ಇದನ್ನು ಉಗ್ರವಾಗಿ ವಿರೋಧಿಸುವದಲ್ಲದೆ, ಗುಡಿ ಗುಂಡಾರ ಸಂಸ್ಕೃತಿಯನ್ನು ತಳ್ಳಿ ಹಾಕುತ್ತದೆ.

ಲಿಂಗಾಯತ ಧರ್ಮದಲ್ಲಿ ಜೀವಾತ್ಮನೇ ಪರಮಾತ್ಮನು. ನರನೊಳಗೆ ಹರನನ್ನು ಕಾಣುವ ಸೂಕ್ಷ್ಮ ಹಾಗು ಮುಕ್ತ ಧರ್ಮವೇ ಲಿಂಗಾಯತ ಧರ್ಮವು. ಲಿಂಗಾಯತ ಧರ್ಮವು ಸನ್ಯಾಸತ್ವವನ್ನು ಒಪ್ಪುವದಿಲ್ಲ. ಸಹಜ ದಾಂಪತ್ಯವನ್ನು ಪುರಸ್ಕರಿಸುತ್ತದೆ. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಇನ್ನು ಸುಂದರ ಸರಳ ಧರ್ಮದ ಮೂಲ ನೀತಿ ಕಾಯಕ ದಾಸೋಹ ಮತ್ತು ದಯೆ ಪ್ರೀತಿ ಸಮಾನತೆ.

ಇನ್ನು ಲಿಂಗಾಯತರಿಗೆ ಮಠಗಳ ವ್ಯವಸ್ಥೆಯಲ್ಲಿ ಭಕ್ತರ ಮನೆಗಳೇ ಮಹಾ ಮನೆಗಳು (ಮಠಗಳು). ಇತರ ಮಠಗಳು ಭಕ್ತರನ್ನು ದಾಸ್ಯತ್ವಕ್ಕೆ ತಳ್ಳುತ್ತವೆ. ಭಕ್ತ ಪ್ರಧಾನ ಧರ್ಮವೇ ಲಿಂಗಾಯತ ಬಸವ ಧರ್ಮ. ಗುಲಾಮಗಿರಿಯ ಧರ್ಮವಲ್ಲ. ವೀರಶೈವ ಒಂದು ಆಚರಣೆ ಹಾಗೂ ವ್ರತ ಆದರೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಒಂದು ಸ್ವತಂತ್ರ ಪರಿಪೂರ್ಣ ಧರ್ಮ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+