ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯದ ತಂಗಾಳಿ ಬೀಸುತ್ತಿರುವ ಧನ್ವಂತರಿ ವನ

By * ರೂಪ ಎಸ್.
|
Google Oneindia Kannada News

Roopa S, Bengaluru
ಸಣ್ಣ ಕೆಮ್ಮು ಅಥವಾ ಸೀನು ಬಂದರೆ ಸಾಕು ಎದ್ದುಬಿದ್ದು ಡಾಕ್ಟರ ಬಳಿಗೆ ಹೋಗಿ ಇಂಜೆಕ್ಷನ್ನು ಚುಚ್ಚಿಸಿಕೊಂಡು ವಾರಕ್ಕಾಗುವಷ್ಟು ಗುಳಿಗೆಗಳನ್ನು ತಿಂದರೇನೆ ಕೆಲವರಿಗೆ ತೃಪ್ತಿ. ವೈದ್ಯರ ಬಳಿಗೆ ಹೋಗಲೇಬಾರದಂತೇನೂ ಅಲ್ಲ. ಆದರೆ, ಅನೇಕ ರೋಗಗಳನ್ನು ಗುಣಪಡಿಸುವಂಥ ಉಪಶಮನಕಾರಿ ಗುಣಗಳು ಪ್ರಕೃತಿಜನ್ಯ ಔಷಧಿಗಳಲ್ಲಿಯೇ ಇರುತ್ತವೆ. ಅವುಗಳ ಪ್ರಯೋಜನ ಪಡೆಯುವ ತಿಳಿವಳಿಕೆ ಜನರಲ್ಲಿರಬೇಕು ಅಷ್ಟೇ.

ಅಂಥ ಔಷಧೀಯ ಗುಣಗಳಿರುವ ಗಿಡಗಳನ್ನು ಬೆಳೆಸುತ್ತಿರುವ ವನವೊಂದು ನಮ್ಮ ಬೆಂಗಳೂರಿನಲ್ಲಿಯೇ ಇದೆ ಎಂಬುದು ಅನೇಕರಿಗೆ ತಿಳಿದಿಲ್ಲ. ರೋಗ ನಿವಾರಕ ಶಕ್ತಿಯುಳ್ಳ ಅನೇಕ ಗಿಡಗಳನ್ನು ಬೆಳೆಸಿ ಪೋಷಿಸುತ್ತಿರುವ ಸಂಸ್ಥೆ ಮತ್ತು ಕೆಲ ಗಿಡಮೂಲಿಕೆಗಳ ಪ್ರಯೋಜನವನ್ನು ಓದುಗರಿಗೆ ತಿಳಿಯಪಡಿಸುವುದೇ ಈ ಲೇಖನದ ಮೂಲ ಉದ್ದೇಶ. ಇದನ್ನು ಓದಿ ಗಿಡಮೂಲಿಕೆಗಳ ಪ್ರಯೋಜನ ಪಡೆದರೆ ಲೇಖನವೂ ಸಾರ್ಥಕ.

ಎಲ್ಲಿದೆ ಧನ್ವಂತರಿ ವನ

ನಗರದ ಜ್ಞಾನಭಾರತಿ ಆವರಣದಲ್ಲಿ, ವಿದ್ಯಾರ್ಥಿಗಳ ಹಾಸ್ಟೆಲ್ ಬಳಿಯಲ್ಲಿ ಸದ್ದಿಲ್ಲದೇ ಧನ್ವಂತರಿ ವನ ಆರೋಗ್ಯಕರ ತಂಗಾಳಿ ಬೀಸುತ್ತಿದೆ. ಬೆಂಗಳೂರಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಸಸ್ಯ ಕಾಶಿಯೇ ನಾಶವಾಗುತ್ತಿರುವ ಸಂದರ್ಭದಲ್ಲಿ ಸಂಸ್ಥೆಯೊಂದು ಸಕಲ ರೋಗಗಳಿಗೂ ಉಪಯುಕ್ತವಾಗುವ ಔಷದ ಗುಣಗಳುಳ್ಳ ಸಸ್ಯಗಳನ್ನು ಬೆಳೆಸುತ್ತಿದೆ. ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮೀಯೋಪತಿ ಇಲಾಖೆ, ಕರ್ನಾಟಕ ಅರಣ್ಯ ಇಲಾಖೆ ಹಾಗು ಬೆಂಗಳೂರು ವಿ.ವಿ. ಸಹಯೋಗದೊಂದಿಗೆ ಐ.ಎಸ್.ಎಂ ಎಂಬ ಖಾಸಗಿ ಸಂಸ್ಥೆ, ಜ್ಞಾನ ಭಾರತಿಯ 42.37 ಎಕರೆ ಜಾಗದಲ್ಲಿ, ಔಷಧ ಸಸ್ಯಗಳನ್ನು ಬೆಳೆಸುತ್ತಿದೆ.

ಮದುಮೇಹ, ಗರ್ಭಕೋಶದ ಕಾಯಿಲೆ, ಕೆಮ್ಮು ದಮ್ಮು, ಕುಷ್ಠ ರೋಗ, ಮೂಳೆ ಮುರಿತ, ಕೀಲು ನೋವು, ಚರ್ಮವ್ಯಾಧಿ, ಮೊಡವೆ, ಬಾವು, ರಕ್ತಸ್ರಾವ, ಕಣ್ಣಿನ ಕಾಯಿಲೆ, ಪಾರ್ಶ್ವವಾಯು, ಜ್ಞಾಪಕ ಶಕ್ತಿ ಕೊರತೆ, ಉರಿಮೂತ್ರ, ಅಸ್ತಮಾ, ದಂತ ರೋಗ, ಹಾಗು ಸ್ತ್ರೀ ಸಂಬಂಧ ರೋಗಗಳಿಗೆ ಪರಿಹಾರ ನೀಡುವ ಗಿಡ ಮೂಲಿಕೆ ಸಸ್ಯಗಳು ಇಲ್ಲಿ ಹೇರಳವಾಗಿವೆ. ಇನ್ನೂರಕ್ಕೂ ಹೆಚ್ಚು ಪ್ರಬೇಧಗಳ ಔಷಧ ಸಸ್ಯಗಳು ಇಲ್ಲಿವೆ. ಕೆಲವು ಗಿಡಗಳ ಎಲೆಗಳು ಉಪಯೋಗಕ್ಕೆ ಬಂದರೆ, ಮತ್ತೆ ಕೆಲವು ಸಸ್ಯಗಳ ಬೇರು, ಇನ್ನು ಕೆಲವು ಗಿಡಗಳ ಕಾಂಡ ಪ್ರಯೋಜನಕಾರಿ ಅಂತ ಧನ್ವಂತರಿ ವನದ ರೂವಾರಿ, ಅರಣ್ಯಾಧಿಕಾರಿ ಚಂದ್ರಕಾಂತ್ ಎಚ್.ಎಸ್ ಅವರ ಅಂಬೋಣ. ಇವರು ಹಲವಾರು ವರ್ಷಗಳಿಂದ ದನ್ವಂತರಿ ವನವನ್ನು ಬೆಳೆಸಿಕೊಂಡು ಬಂದಿದ್ದಾರೆ.

ಧನ್ವಂತರಿಯ ಇತಿಹಾಸ

ವಿಷ್ಣುವಿನ ಮೂಲ ಅವತಾರವಾದ ಧನ್ವಂತರಿ, ಆರ್ಯುವೇದದ ಪಿತಾಮಹ ಎಂಬ ಪ್ರತೀತಿ ಇದೆ. ಧನ್ವಂತರಿ ಎಂದರೆ ಆದಿ ದೈವ ಔಷಧ. ಆಯುರ್ವೇದದ ಮೂಲ ಕೂಡ ಧನ್ವಂತರಿ ಎಂಬ ಮಾತಿದೆ. ಶತಮಾನಗಳ ಇತಿಹಾಸ ಹೊಂದಿರುವ ಧನ್ವಂತರಿ ಬಗ್ಗೆ ಮೊದಲು ಬಾಯಿಂದ ಬಾಯಿಗೆ ಜ್ಞಾನ ಪ್ರಸಾರವಾಗುತ್ತಿತ್ತು. ಆದರೆ ಮೂರು ಸಾವಿರ ವರ್ಷಗಳ ಈಚೆಗೆ ತಾಳೆಗರಿ ಮತ್ತು ಪುಸ್ತಕ ರೂಪದಲ್ಲಿ ಜನರನ್ನು ತಲುಪುತ್ತಿವೆ. ಈ ಆರ್ಯುವೇದ ಪದ್ದತಿ, ಪಂಚಭೂತಗಳಾದ ವಾಯು, ಭೂಮಿ, ಜಲ, ಅಗ್ನಿ, ಆಕಾಶ ಇವುಗಳ ಮೂಲ ರೂಪ.

ಬೆಂಗಳೂರಿನಲ್ಲಿ ಧನ್ವಂತರಿ ವನ ಪ್ರಾರಂಭವಾಗಿದ್ದು 1987ರಲ್ಲಿ. ವಿಷಾದಕರ ಸಂಗತಿಯೆಂದರೆ, ಈ ವನದ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲದಿರುವುದು. ವನವನ್ನು ಪೋಷಿಸುತ್ತಿರುವ ಸಂಸ್ಥೆ ಕೂಡ ಇದರ ಬಗ್ಗೆ ಪ್ರಚಾರ ಮಾಡುವಲ್ಲಿ ಅಷ್ಟೊಂದು ಆಸಕ್ತಿ ತೋರಿಸಿಲ್ಲ. ಗೊತ್ತಿರುವವರು ಮಾತ್ರ ಇಲ್ಲಿಗೆ ಬಂದು ತಮಗೆ ಬೇಕಾದ ಗಿಡಗಳನ್ನು ಖರೀದಿಸುತ್ತಾರೆ. ಇಲ್ಲಿ ಎಲ್ಲ ಸಸ್ಯಗಳಿಗೂ ಮನುಷ್ಯನ ಒಂದಿಲ್ಲೊಂದು ರೋಗವನ್ನು ನಿವಾರಣೆ ಮಾಡುವ ಶಕ್ತಿ ಇದೆ. ಪ್ರತಿಯೊಂದು ಔಷದ ಸಸ್ಯದ ಬೆಲೆ 1.50 ರೂಗಳಿಂದ 3 ರೂ. ಮಾತ್ರ. ಇನ್ನೂ ಚೌಕಾಶಿ ಮಾಡುವವರು ಇಲ್ಲಿ ಬರದಿರುವುದು ಒಳಿತು.

ಸಸ್ಯದ ಉಪಯೋಗ

ಗುಲಗಂಜಿ ಬಳ್ಳಿ (ಗಂಟಲು ನೋವು ನಿವಾರಕ), ಮದುನಾಶಿನಿ (ಮದುಮೇಹ), ಉಂಚಿಕ (ಚರ್ಮಕ್ಕೆ ಸಂಬಂಧಿಸಿದಂತೆ), ಸೀತೆ ಅಶೋಕ (ಗರ್ಭಕೋಶ), ಅಮೃತ ಬಳ್ಳಿ (ಕಾಮಲೆ) ಮುಂತಾದ ರೋಗಗಳಿಗೆ ಉಪಶಮನಕಾರಿ. ಇವುಗಳ ಪ್ರಯೋಜನದ ಬಗ್ಗೆ ಜನ ಸಾಮಾನ್ಯರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಆಯುರ್ವೇದದ ವೈದ್ಯರಾದ ಕೆ.ಸಿ.ಬಳ್ಳಾಳ್ ಪ್ರಕಾರ, ಗಿಡ ಮೂಲಿಕೆಗಳು ಇಂಗ್ಲೀಷ್ ಔಷಧಕ್ಕಿಂತ ಹೆಚ್ಚು ಪರಿಣಾಮಕಾರಿ. ಆಹಾರ ರೂಪದಲ್ಲಿ ದೇಹವನ್ನು ಪ್ರವೇಶಿಸಿ ಸ್ವಾಭಾವಿಕವಾಗಿ ದೇಹವನ್ನು ಸದೃಢಗೊಳಿಸುತ್ತಾ ಆರೋಗ್ಯವನ್ನು ಕಾಪಾಡುವುದೇ ಇವುಗಳ ವೈಶಿಷ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X