ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ಸೇವಂತಿ ಪ್ರಸಂಗ

By Staff
|
Google Oneindia Kannada News

ಪ್ರಸಾದ ನಾಯಿಕ

George Bernard Shaw Play Pygmalion which is translated into Kannada staged in Bangaloreಯುವಕ-ಯುವತಿಯರೇ ಇರುವ ಉತ್ಸಾಹೀ ತಂಡ 'ಅನ್ವೇಷಣೆ" ಮೇ 30ರಂದು 'ಸೇವಂತಿ ಪ್ರಸಂಗ" ನಾಟಕವನ್ನು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ಸಿಎಸ್‌ಐಸಿ ಸಭಾಂಗಣದಲ್ಲಿ ಪ್ರದರ್ಶಿಸಿತು.

ಬರ್ನಾರ್ಡ್‌ ಷಾ ಅವರ 'ಪಿಗ್ಮೇಲಿಯನ್‌" ಆಧಾರಿತ ಜಯಂತ ಕಾಯ್ಕಿಣಿ ರೂಪಾಂತರಿಸಿದ ಈ ನಾಟಕ ಪ್ರಯೋಗದ ದೃಷ್ಟಿಯಿಂದ ಗಮನ ಸೆಳೆದರೂ ಜನಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಭಾಗಶಃ ಸೋತಿದೆ. ಹಾಸ್ಯದ ಪಂಚ್‌ ನಾಟಕದುದ್ದಕ್ಕೂ ಇದ್ದರೂ ಸಮಕಾಲೀನ ದೃಷ್ಟಿಯಿಂದ ನೋಡಿದಾಗ ವಸ್ತುವಿನಲ್ಲಿ ಅಂತಹ ಸತ್ವ ಇಲ್ಲದ್ದು ಇದಕ್ಕೆ ಕಾರಣವಿರಬಹುದು.

ತಿಪ್ಪೆ ಕ್ರಾಸ್‌ ಬಲೂನ್‌ ಮಾರುವ ಸಿಂಬಳ ಸುರಿಸಿಕೊಂಡು ಓಡಾಡುವ ಗಯ್ಯಾಳಿ ಹುಡುಗಿ ಸೇವಂತಿಯನ್ನು ಕನ್ನಡ ಪ್ರೊಫೆಸರ್‌ ಒಬ್ಬರು 'ಮಿಸ್‌ ರಾಜಧಾನಿ" ಯನ್ನಾಗಿ ಮಾಡುವುದೇ ನಾಟಕದ ತಿರುಳು. ವ್ಯವಸ್ಥೆಯಲ್ಲಿರುವ ಸ್ವಾರ್ಥ, ನಿಸ್ವಾರ್ಥ, ಸೌಮ್ಯತನ, ಕ್ರೌರ್ಯ, ಸಿನಿಕತನ ಇವುಗಳನ್ನು ಬಿಂಬಿಸುವುದು ನಾಟಕದ ಇನ್ನೊಂದು ಮುಖ. ಇದರ ನಿರೂಪಣೆ ಕೆಲವೆಡೆ ನೀರಸವಾಗಿರುವುದು ನಾಟಕದ ನಿರಂತರ ಓಟಕ್ಕೆ ಹಿನ್ನೆಡೆ ತಂದಿದೆ. ಇಂಥದರಲ್ಲಿಯೂ ನಾಟಕವನ್ನು ಎತ್ತಿಹಿಡಿದಿದ್ದು, ನೋಡುವಂತೆ ಮಾಡಿದ್ದು ಸೇವಂತಿ ಪಾತ್ರಧಾರಿ ರೇಖಾ ಅವರ ಜೀವಂತ ಅಭಿನಯ. ಗಯ್ಯಾಳಿ ಸೇವಂತಿಯಾಗಿ ಅವರು ತಾವೇ ಪಾತ್ರಧಾರಿಯಾಗಿ ಚುರುಕಾಗಿ ಅಭಿನಯಿಸಿದ್ದಾರೆ. ಆದರೆ, ಸುಸಂಸ್ಕೃತ ಸೇವಂತಿಯಾಗಿ ಅವರ ಪಾತ್ರ ಸಮರ್ಥವಾಗಿ ಮೂಡಿಬಂದಿಲ್ಲ.

ಮೊದಲ ಎರಡು ದೃಶ್ಯಗಳು ಪ್ರೇಕ್ಷಕರನ್ನು ನಾಟಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಂತೆ ನಾಟಕ ಇದ್ದಕ್ಕಿದ್ದಂತೆ ಜೀವಂತಿಕೆ ಕಳೆದುಕೊಂಡು ಕುಂಟುತ್ತ ಸಾಗುತ್ತದೆ. ಇನ್ನೇನು ನಾಟಕ ಸತ್ತೇ ಹೋಯಿತು ಅನ್ನುವಾಗ ನೋಡುಗರ ಗಮನ ನಾಟಕದತ್ತ ಸೆಳೆದದ್ದು ನಾಟಕದ ಉದ್ದಕ್ಕೂ ಅಳವಡಿಸಿರುವ ಹಾಡು ಮತ್ತು ನೃತ್ಯದ ಸಂಯೋಜನೆ. ಅತ್ಯಂತ ಪ್ರೊಫೆಷನಲ್‌ ಆಗಿ ಮೂಡಿ ಬಂದಿರುವ ನೃತ್ಯ ಸಂಯೋಜನೆಯಲ್ಲಿ ತಂಡದ ದುಡಿತ ಎದ್ದು ಕಾಣುತ್ತದೆ. ಪ್ರಾರಂಭದಲ್ಲಿ ಬರುವ 'ಬಂತು, ಬಂತು ಮಳೆ" ಹಾಡು, ಪ್ರೊಫೆಸರ್‌ ಭಾರ್ಗವ ಶಾಸ್ತ್ರಿ ಬ್ಯಾಚಲರ್‌ ಲೈಫ್‌ ಆನಂದಿಸುವ 'ಇದ್ದೀನಪ್ಪ ಹಾಯಾಗಿ" ಹಾಡು, ಸೇವಂತಿಗೆ ನಡೆ-ನುಡಿಗಳನ್ನು ಕಲಿಸುವಾಗ ಶಾಸ್ತ್ರಿ ಪಡುವ ಅವಸ್ಥೆಯನ್ನು ಬಿಂಬಿಸುವ ' ಅಯ್ಯೋ ಪಾಪ ಶಾಸ್ತ್ರಿ ಎಂಥ ಗತಿ ಬಂತ್ರಿ" ಹಾಡು, ಶಾಸ್ತ್ರಿ - ಸೇವಂತಿ ಜೋಡಿಯನ್ನು ಅಪಹಾಸ್ಯ ಮಾಡುವ 'ಶಾಸ್ತ್ರಿ ಜೊತೆ ಸೇವಂತಿ ಎಂಥ ಅನ್ಯಾಯ" ಮುಂತಾದ ಹಾಡುಗಳು ನಾಟಕದ ಏಕತಾನತೆಯನ್ನು ಅಳಿಸಿ ಪ್ರೇಕ್ಷಕರನ್ನು ಮತ್ತೆ ನಾಟಕದಲ್ಲಿ ತೊಡಗುವಂತೆ ಮಾಡಿವೆ. ಈ ನಿಟ್ಟಿನಲ್ಲಿ ಸಂಗೀತ ಸಂಯೋಜಕ ಮತ್ತು ವೆಂಕಟ್‌ ಪಾತ್ರಧಾರಿ ಕಾವೇರಪ್ಪ ಹಾಗೂ ನೃತ್ಯ ಸಂಯೋಜಕಿ ಪ್ರತಿಮಾ ಅವರ ಪ್ರಯತ್ನ ಶ್ಲಾಘನೀಯ.

ನಾಟಕವನ್ನು ಸಮಗ್ರವಾಗಿ ದುಡಿಸಿಕೊಳ್ಳುವಲ್ಲಿ ನಿರ್ದೇಶಕ ಚನ್ನಬಸವರಾಜ ಅವರು ಗೆದ್ದಿದ್ದರೂ ನಾಟಕದ ನಿರೂಪಣೆಯಲ್ಲಿ ಮತ್ತು ಪಾತ್ರಧಾರಿಗಳ ಅಭಿನಯ ಸಾಮರ್ಥ್ಯವನ್ನು ಹೊರತೆಗೆಯುವಲ್ಲಿ ಸ್ವಲ್ಪ ಮುಗ್ಗರಿಸಿದ್ದಾರೆ. ಸಂಗೀತವನ್ನು ಹಾಡಿನಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದರೂ ಕೆಲ ದೃಶ್ಯಗಳಲ್ಲಿ live ಹಿನ್ನೆಲೆ ಸಂಗೀತವಿಲ್ಲದೆ ನಾಟಕ ಸೊರಗಿದೆ. ಸೇವಂತಿ ಪಾತ್ರದೆಡೆಗೆ ಹರಿಸಿದ ಗಮನ ಇತರ ಪಾತ್ರದೆಡೆಗೂ ಹರಿಸಿದ್ದರೆ ಉತ್ತಮವಿತ್ತು. ಇದ್ದುದರಲ್ಲಿ ಭಾರ್ಗವ ಪಾತ್ರಧಾರಿ ಕೃಷ್ಣಸ್ವಾಮಿ ಉತ್ತಮ. ಉಳಿದ ಪಾತ್ರಧಾರಿಗಳು ಪೂರಕವಾಗಿ ಅಭಿನಯಿಸಿದ್ದರೂ ಯಾರಲ್ಲಿಯೂ 'ಫೋರ್ಸ್‌" ಇರಲಿಲ್ಲ. ಸೇವಂತಿಯನ್ನು ಮಿಸ್‌ ರಾಜಧಾನಿಯನ್ನಾಗಿ ಮಾಡಿದ್ದು ತಾನೇ ಎಂದು ಭಾರ್ಗವ ತನ್ನ ಸ್ವಾರ್ಥವನ್ನು ಪ್ರದರ್ಶಿಸುವಾಗ ಆತನ ಸ್ವಾರ್ಥಗುಣ ಅಭಿವ್ಯಕ್ತವಾಗಲೇ ಇಲ್ಲ. ಆಗ ಸೇವಂತಿ ಭಾವನೆಯಲ್ಲಿ ಉತ್ಪತ್ತಿಯಾಗಬೇಕಾಗಿದ್ದ ಕೆಟ್ಟ ವ್ಯವಸ್ಥೆ ಬಗೆಗಿನ ಸಿಟ್ಟು, ನಿರಾಸೆ, ದುಃಖ ಹೊರಹೊಮ್ಮಿ ಬರಲೇ ಇಲ್ಲ. ಇಂಥ ಚಿಕ್ಕಪುಟ್ಟ ಅಂಶಗಳತ್ತ ನಿರ್ದೇಶಕರು ಗಮನ ಹರಿಸಿದ್ದರೆ ನಾಟಕ ಇನ್ನೂ ಉತ್ತಮವಾಗಿ ಬರುವ ಸಾಧ್ಯತೆ ಇತ್ತು.

ದೃಶ್ಯ ಬದಲಾವಣೆಯಲ್ಲಿಯೂ ತುಂಬಾ ಗ್ಯಾಪ್‌ ಇದ್ದದ್ದರಿಂದ ಪ್ರೇಕ್ಷಕರು ಮುಂದಿನ ದೃಶ್ಯದಲ್ಲಿ ಏನು ಬರುತ್ತದೆ ಎಂದು ಕಾತುರದಿಂದ ಕಾಯದೆ ಅಕ್ಕ-ಪಕ್ಕದವರ ಉಭಯ ಕುಶಲೋಪರಿ ವಿಚಾರಿಸುತ್ತಿದ್ದುದು ಅಲ್ಲಲ್ಲಿ ಕಂಡುಬಂತು. ಮಧ್ಯದಲ್ಲೊಬ್ಬ ಪ್ರೇಕ್ಷಕ ಆಕ್ಷೀ ಅಂತ ಒಂಟಿ ಸೀನಿದಾಗ ಎದ್ದ ನಗುವಿನ ಅಲೆ ನಾಟಕದ ಪಂಚ್‌ಲೈನ್‌ ಬಂದಾಗ ಬರಲಿಲ್ಲ . ಯಾಕೋ? ಕೇವಲ ಜಾಳು ಜಾಳು ನಾಟಕಗಳು ಹಾಗೂ ಅಗ್ಗದ ಮನರಂಜನೆಯ ನಾಟಕಗಳನ್ನೇ ನೋಡುತ್ತಿರುವ ಪ್ರೇಕ್ಷಕ ಇಂಥದೊಂದು ಹೊಸ ಸಾಧ್ಯತೆಯ ನಾಟಕ ನೋಡಿದಾಗ ಚಪ್ಪಾಳೆ ತಟ್ಟುವುದನ್ನೂ, ಪ್ರೋತ್ಸಾಹಿಸುವುದನ್ನೂ ಮರೆತಿದ್ದಾನೇನೊ ಎಂಬ ಶಂಕೆ ಕೂಡ ಬರುತ್ತದೆ.

ಕೇವಲ ಯುವಕ-ಯುವತಿಯರಿಂದ ಕೂಡಿರುವ ಕ್ರಿಯಾಶೀಲ ತಂಡಕ್ಕೆ ಪ್ರೋತ್ಸಾಹದ ಮತ್ತು ಅವಕಾಶಗಳ ಅಗತ್ಯವಿದೆ. ಅನ್ವೇಷಣೆ ತಂಡಕ್ಕೆ ಈ ಅವಕಾಶ ನೀಡಿದ ಭಾರತೀಯ ವಿಜ್ಞಾನ ಕನ್ನಡ ಸಂಘ ಅಭಿನಂದನಾರ್ಹ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X