ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಂತರು ಕಡಲಿನಂತಿದ್ದರು, ಜಗತ್ತು ಕಡಲನ್ನು ಗುರ್ತಿಸಲಿಲ್ಲ !

By Oneindia Staff Writer
|
Google Oneindia Kannada News

ಬೆಂಗಳೂರು : ಕಡಲಂತ ಪ್ರತಿಭೆಯ ಶಿವರಾಮ ಕಾರಂತರು ಕನ್ನಡದ ಚೌಕಟ್ಟಿನಲ್ಲೇ ಉಳಿದದ್ದು ಯಾಕೆ? ಇಂಥದೊಂದು ಜಿಜ್ಞಾಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಡಾ. ಶಿವರಾಮ ಕಾರಂತರ ಜನ್ಮ ಶತಮಾನೋತ್ಸವದ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೂಡಿಬಂತು.

ಕಾರಂತರ ಪರಿಸರ ಪ್ರೇಮ ದೊಡ್ಡದು. ಬೆಟ್ಟದ ಜೀವದ ಮೂಲಕ ಪ್ರಾರಂಭವಾದ ಅವರ ಪರಿಸರ ಚಿಂತನೆ ನಂತರದ ದಿನಗಳಲ್ಲಿ ಮತ್ತಷ್ಟು ಕವಲುಗಳೊಂದಿಗೆ ಗಾಢವಾಯಿತು. ಪ್ರಾಮಾಣಿಕತೆ, ನಿರ್ಭಿಡೆಗೆ ಹೆಸರಾದ ಕಾರಂತರು ಜೀವನಕ್ಕೆ ಹತ್ತಿರವಾದ ಸಂಗತಿಗಳನ್ನು ತಿಳಿಸಿದರು. ಪ್ರಶಸ್ತಿ ಮೋಹದಿಂದ ಕಾರಂತರು ದೂರವಾಗಿದ್ದರು ಎಂದು ಶತಮಾನೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಹಿರಿಯ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಹೇಳಿದರು.

ಕಾರಂತರದು ದೈತ್ಯ ಪ್ರತಿಭೆ. ಸಮರ್ಥ ಅನುವಾದಕರು ಸಿಕ್ಕದೆ ಹೋದದ್ದರಿಂದ ಕಾರಂತರು ವಿಶ್ವ ಮಾನ್ಯತೆಯಿಂದ ವಂಚಿತರಾದರು. ಯಕ್ಷಗಾನ ಕ್ಷೇತ್ರದಲ್ಲೂ ಕಾರಂತರ ಸಾಧನೆ ದೊಡ್ಡದು. ಆದರೆ, ಅವರ ಯಕ್ಷಗಾನ ಕ್ಷೇತ್ರದಲ್ಲಿನ ಸಾಧನೆಯನ್ನು ಮೊದಲು ಗುರ್ತಿಸಿದ್ದು ಸ್ವೀಡಿಷ್‌ ಅಕಾಡೆಮಿ ಎಂದು ಬಲ್ಲಾಳರು ಹೇಳಿದರು. ಕಾರಂತರು ಅದ್ಭುತ ಚಿತ್ತ ಸ್ಥಿಮಿತತೆ ಹೊಂದಿದ್ದರು. ಮಗ ನಿಧನನಾದ ಕಾರಂತರು ತೋರಿದ ಮನೋ ನಿಗ್ರಹ ಅಸಾಧಾರಣವಾದುದು. ಅವರು ತಮ್ಮ ಅಧೀರತೆಯನ್ನು ಯಾರೆದುರೂ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಬಲ್ಲಾಳರು ತಮ್ಮ ಹಳೆಯ ನೆನಪುಗಳ ಸ್ಮರಿಸಿಕೊಂಡರು.

ಯಾರಿಗೂ ಸಿಕ್ಕದ ಕನ್ನಡಕ್ಕೆ ದಕ್ಕಿದ ಕಾರಂತ
ಕಾರಂತರು ಒಂದು ದೊಡ್ಡ ವಿಶ್ವ ವಿದ್ಯಾಲಯವಾಗಿದ್ದರು ಎಂದು ಬಣ್ಣಿಸಿದ ನಾಟಕ ಅಕಾಡೆಮಿಯ ಅಧ್ಯಕ್ಷ ಆರ್‌.ನಾಗೇಶ್‌, ಇತರ ಭಾಷೆಗಳಿಗೆ ಸಿಕ್ಕದ ಕಾರಂತರಂಥ ಪ್ರತಿಭೆ ಕನ್ನಡಕ್ಕೆ ಸಿಕ್ಕಿದ್ದು ನಮ್ಮ ಭಾಗ್ಯ ಎಂದರು. ಯಕ್ಷಗಾನವನ್ನು ಯಕ್ಷರಂಗ ಶೈಲಿಯಲ್ಲಿ ಅವರು ಪ್ರಯೋಗಿಸಿದ್ದನ್ನು ನಾಗೇಶ್‌ ಗುರ್ತಿಸಿದರು.

ಕಾರಂತರು ಪುರಾಣದ ಉದಾತ್ತ ಪಾತ್ರವಿದ್ದಂತೆ. ಕಾರಂತ ಹಾಗೂ ಕುವೆಂಪು ರಾಜ್ಯಕ್ಕೆ ಸಾಂಸ್ಕೃತಿಕ ನಾಯಕತ್ವ ನೀಡಿದವರು. ಆದರೆ, ಕುವೆಂಪು ಅವರಿಗಿಂತ ಕಾರಂತರು ಹೆಚ್ಚು ಚಲನಶೀಲರಾಗಿದ್ದರು ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ।ಹಿ.ಶಿ.ರಾಮಚಂದ್ರಗೌಡ ಅಭಿಪ್ರಾಯಪಟ್ಟರು.

ಕಾರಂತರು ಚಿರಂಜೀವಿ!
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಎಚ್‌.ಆರ್‌.ಲೀಲಾವತಿ, ಕಾರಂತರನ್ನು ಚಿರಂಜೀವಿ ಎಂದು ಬಣ್ಣಿಸಿದರು. ಉದ್ಘಾಟನಾ ಸಮಾರಂಭದ ನಂತರ ನಡೆದ ಕಾರಂತರ ಬದುಕು- ಬರಹ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಗುರುಲಿಂಗ ಕಾಪಸೆ ವಹಿಸಿದ್ದರು. ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಸ.ಉಷಾ, ಚಂದ್ರಶೇಖರ ನಂಗಲಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯದ ನಿರ್ದೇಶಕ ಸಿ.ಸೋಮಶೇಖರ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮುಖಪುಟ / ಸಾಹಿತ್ಯ ಸೊಗಡು

English summary
Literatures of Dr. Shivarama Karantha should have been translated to English Dr. Vyasaraya ballala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X