ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕಥೆಗಾರರನ್ನು ಕೊಟ್ಟ ಕಥೆಕೂಟಕ್ಕೆ 6 ವರ್ಷದ ಸಂಭ್ರಮ!

|
Google Oneindia Kannada News

ಕೇವಲ ಕಥೆಗಳಿಗೆ ಮಾತ್ರ ಸೀಮಿತವಾದ 'ಕಥೆಕೂಟ' ವಾಟ್ಸಪ್ ಗ್ರೂಪ್ ಇದೀಗ ಆರನೇ ವರ್ಷಕ್ಕೆ ಕಾಲಿಟ್ಟಿದ್ದು ಈ ಸಂದರ್ಭದಲ್ಲಿ ನಾಲ್ಕನೇ ಸಮಾವೇಶವನ್ನು ಇದೇ ಜೂನ್ 25 ಮತ್ತು 26ರಂದು ಬೆಂಗಳೂರಿನ ನೆಲಮಂಗಲದಲ್ಲಿರುವ ಗುಬ್ಬಿಗೂಡು ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದೆ.

ವಾಟ್ಸಪ್ ಗ್ರೂಪುಗಳು ಅಂದ ತಕ್ಷಣ ವಯುಕ್ತಿಕ ಅಥವಾ ಫಾರ್ವರ್ಡ್ ಮಾಡುವ, ಧರ್ಮ, ಮತ, ಪಂಥದ ಆಧಾರದಲ್ಲಿ ಇಲ್ಲಸಲ್ಲದ ಮಾತುಕತೆ ಅಥವಾ ಹಾಳುಹರಟೆಗಳಲ್ಲೇ ಕಾಲ ತಳ್ಳುವ ವೇದಿಕೆ ಅಂತ ಆದ ಸಂದರ್ಭದಲ್ಲಿ ಇದನ್ನು ಕತೆಗೋಸ್ಕರ ಮೀಸಲಿಡುವ ಯೋಜನೆಯನ್ನು ರೂಪಿಸಿದ್ದು ಕತೆಗಾರ, ಪತ್ರಕರ್ತ ಸ್ನೇಹಿತರಾದ ಗೋಪಾಲಕೃಷ್ಣ ಕುಂಟಿನಿ ಹಾಗೂ ಜೋಗಿ. ಈ ರೀತಿ ಕತೆಗೋಸ್ಕರವೇ ಒಂದು ವಾಟ್ಸಪ್ ಗ್ರೂಪ್ ರೂಪಿಸಿ, ಬೆಳೆಸಿರುವ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ. ಈ ಕಥೆಕೂಟ ಇವತ್ತು ಸುಮಾರು ನೂರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ.

ಹಳ್ಳಿಯಿಂದ ಹಿಡಿದು ವಿದೇಶದಲ್ಲಿ ನೆಲೆಯಾದವರ ತನಕ, ಸಾಫ್ಟ್ ವೇರ್ ವೃತ್ತಿಯವರಿಂದ ಕೃಷಿಕರ ತನಕ, ಗೃಹಿಣಿಯಿಂದ ಹಿಡಿದು ಹೊಸದಾಗಿ ಕಣ್ಬಿಡುತ್ತಿರುವ ತರುಣ, ತರುಣಿಯರ ತನಕ ಎಲ್ಲರೂ ಈ ಗ್ರೂಪಿನ ಸದಸ್ಯರು. ಕತೆ ಬರೆಯುವುದು ಮತ್ತು ಕತೆ ಓದುವುದು ಈ ಗ್ರೂಪಿನ ಮೂಲ ಉದ್ದೇಶ. ಕತೆಯನ್ನು ಯಾವ ಮತ, ಪಂಥಗಳ ಪೂರ್ವಗ್ರಹ ಇಲ್ಲದೇ ಓದಿ ಪ್ರತಿಕ್ರಿಯಿಸಿ, ತಮ್ಮನ್ನು ತಾವು ಕತೆಗಾರರಾಗಿ ರೂಪಿಸಿಕೊಳ್ಳಬೇಕೆನ್ನುವುದು ಈ ಗ್ರೂಪಿನ ಹಿಂದಿರುವ ಒತ್ತಾಸೆ.

ಕೂಟದ ಬೆಳವಣಿಗೆಗೆ ಕಾರಣದವರು: ಖ್ಯಾತ ಕತೆಗಾರ, ಕವಿ ಸುಬ್ರಾಯ ಚೊಕ್ಕಾಡಿ, ಕತೆಗಾರ ಜೋಗಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿಎಸ್ ಲಿಂಗದೇವರು, ಸೆಲ್ಕೋ ಸೋಲಾರ್ ಸಂಸ್ಥೆಯ ಸಿಇಒ ಮೋಹನ್ ಭಾಸ್ಕರ ಹೆಗಡೆ, ವಿದ್ವಾಂಸರಾದ ಜಗದೀಶ ಶರ್ಮ, ಹೆಸರಾಂತ ಪ್ರಕಾಶಕ ಜಮೀಲ್ ಸಾವಣ್ಣ ಅವರಿಂದ ಹಿಡಿದು ಹೊಸ ತಲೆಮಾರಿನ ಲೇಖಕರಾಗಿ ಗುರುತಿಸಿಕೊಳ್ಳುತ್ತಿರುವ ಪೂರ್ಣಿಮಾ ಮಾಳಗಿಮನಿ, ಮೇಘನಾ ಹಾಲ್ದೊಡ್ಡೇರಿ, ಸಚಿನ್ ತೀರ್ಥಹಳ್ಳಿ, ರಾಜೇಶ್ ಶೆಟ್ಟಿ ಅವರವರೆಗೆ ಬಹುತೇಕರು ಈ ಕೂಟದ ಬೆಳವಣಿಗೆಗೆ ಕಾರಣರಾಗಿದ್ದಾರೆ.

 ಈ ಕೂಟ ಹುಟ್ಟಿದ್ದು ಹೇಗೆ?

ಈ ಕೂಟ ಹುಟ್ಟಿದ್ದು ಹೇಗೆ?

ಕಥೆಕೂಟವನ್ನು ಹುಟ್ಟು ಹಾಕಬೇಕು ಅಂತ ಗೋಪಾಲಕೃಷ್ಣ ಕುಂಟಿನಿ ಅವರಿಗೆ ಅನಿಸಿದ್ದು ಹೇಗೆ? ಅವರೇ ಹೇಳುತ್ತಾ ಹೋಗುತ್ತಾರೆ: 'ನಾನು ಮೂಲತಃ ಒಬ್ಬ ಪತ್ರಕರ್ತ. ಪತ್ರಕರ್ತನಾಗಿದ್ದಾಗ ನಾನು ನೋಡಿದ ಯಾವುದೇ ಘಟನೆಗಳು ವರದಿ ಅನ್ನಿಸ್ತಿರಲಿಲ್ಲ, ಅದೊಂದು ಕತೆ ಅನ್ನಿಸ್ತಿತ್ತು. ಆದರೆ ವೃತ್ತಿಗೋಸ್ಕರ ಮಾತ್ರ ಅದನ್ನು ವರದಿ ಮಾಡುತ್ತಿದ್ದೆ.

ಆದರೆ, ರಿಪೋರ್ಟ್ ಮಾಡಿ ಕೊಟ್ಟ ಮೇಲೂ ಅವುಗಳು ಕತೆಗಳೇ ಅನ್ನಿಸುತ್ತಿತ್ತು. ಇವತ್ತೂ ನನಗೆ ಎಲ್ಲ ಘಟನೆ, ವರದಿಗಳೂ ಕತೆಯಂತೇ ಕಾಣುತ್ತವೆ. ಜಗತ್ತಲ್ಲಿ ಇರೋದೆಲ್ಲ ಕತೆಯೇ, ಎಲ್ಲರ ಕಣ್ಣು, ಕಿವಿಗಳಲ್ಲೂ ಕತೆ ಇದೆ, ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಕತೆ ಹೇಳಲು ಬಿಕ್ಕಳಿಸ್ತಾ ಇರುತ್ತಾರೆ, ಅದನ್ನು ಹಿಡಿದಿಡಬೇಕು ಅಂತ ಅನ್ನಿಸಿತು. ಜೂನ್ ತಿಂಗಳ 25ನೇ ತಾರೀಕು, ಒಂದು ಮಧ್ಯಾಹ್ನ. ಇಂಥದ್ದೊಂದು ಕೂಟವನ್ನು ಕಟ್ಟಬೇಕೆಂದು ನಿರ್ಧರಿಸಿ, ನನ್ನ ಸ್ನೇಹಿತ, ಕತೆಗಾರ ಜೋಗಿಗೆ ಕಾಲ್ ಮಾಡಿದೆ'.

ಈ ಕೂಟ ಶುರುವಾಗಿ ಈ ಜೂನ್ 25ಕ್ಕೆ ಆರು ವರ್ಷ. 2016ರಲ್ಲಿ ಈ ಕೂಟ ಶುರು ಮಾಡಬೇಕೆಂದು ಅನ್ನಿಸುವಷ್ಟರಲ್ಲಿ ಗೋಪಾಲಕೃಷ್ಣ ಕುಂಟಿನಿ ಅವರು ತಮ್ಮ ತಾಯನ್ನು ಕಳೆದುಕೊಂಡು ಕೇವಲ ಒಂದು ವರ್ಷವಾಗಿತ್ತಷ್ಟೇ, ಅವರ ತಾಯಿ ಕುಂಟಿನಿ ಅವರಲ್ಲಿ ಕತೆ ಹೇಳುವ ಮತ್ತು ಕೇಳುವ ಆಸಕ್ತಿಯನ್ನು ರೂಪಿಸಿದವರು. ಹಾಗಾಗಿ ತಾಯಿ ನೆನಪಾದಾಗ ಕತೆ ನೆನಪಾಯ್ತು, ಎಲ್ಲರೊಳಗಿನ ಕತೆ ಹೇಳುವುದಕ್ಕೆ, ಕೇಳುವುದಕ್ಕೆ ಒಂದು ವೇದಿಕೆ ಇದ್ದರೆ ಚೆನ್ನ ಅಂತ ಈ ಕಥೆಕೂಟವನ್ನು ಪ್ರಾರಂಭ ಮಾಡಿದೆ ಎಂದು ಕುಂಟಿನಿ ಹೇಳಿಕೊಳ್ಳುತ್ತಾರೆ.

 ಈ ಕೂಟ ಏನು ಕೊಟ್ಟಿದೆ?

ಈ ಕೂಟ ಏನು ಕೊಟ್ಟಿದೆ?

ಈ ಆರು ವರ್ಷಗಳಲ್ಲಿ ನೂರಾರು ಕತೆಗಾರರನ್ನು ಕೊಟ್ಟಿರುವ, ರೂಪಿಸಿರುವ ಈ ಕೂಟದ ಬಗ್ಗೆ ಸ್ಥಾಪಕ ಕುಂಟಿನಿ ಅವರಿಗೆ ಹೆಮ್ಮೆ ಇದೆ. 'ಕತೆ ಬರೆಯುವವರು ಬೇಕು, ಅಂಥ ಕತೆಗಾರರು ಸಾಕಷ್ಟು ಈ ಕೂಟದಿಂದ ಹುಟ್ಟಿದ್ದಾರೆ, ಜೊತೆಗೆ ಸ್ಪಂದಿಸುವವರೂ ಬೇಕು, ಅವರನ್ನೂ ಈ ಕೂಟ ಹೊಂದಿದೆ, ಈ ಆರು ವರ್ಷಗಳಲ್ಲಿ ಕಥೆಕೂಟ ಒಂದು ಅವಿಭಕ್ತ ಕುಟುಂಬವಾಗಿ ಮಾರ್ಪಟ್ಟಿದೆ, ಒಂದು ಫ್ಯಾಮಿಲಿ ಸಮಾರಂಭ ನಡೆದರೆ ಹೇಗೆ ಅಕ್ಕ, ಅಮ್ಮ, ತಂಗಿ, ತಮ್ಮ- ಹೀಗೆ ಎಲ್ಲರೂ ಕೂತು ಕತೆ ಹೇಳುತ್ತಾ, ಕತೆಯನ್ನು ಸಂಭ್ರಮಿಸುತ್ತಾ, ಮಾತಾಡುತ್ತಾ ಒಂದು ಖುಷಿಯ ವಾತಾವರಣವನ್ನು ಸೃಷ್ಟಿಸುತ್ತಾರೋ ಅಂಥದ್ದೊಂದು ಸಾರ್ಥಕ ಕತೆಗಾರಿಕೆ ಇದರಿಂದ ನಡೆದಿದೆ.

ಕತೆ ಹೇಳಲು ಸಾಧ್ಯವಿಲ್ಲದವರೂ ಕತೆ ಹೇಳಲು ಪ್ರಾರಂಭ ಮಾಡಿದರು, ಬೇರೆ ಬೇರೆ ವೃತ್ತಿಯವರು ಕತೆಗಾರರಾದರು' ಎನ್ನುತ್ತಾರೆ ಕುಂಟಿನಿ. ಜೊತೆಗೆ ಈ ಕೂಟ ಕತೆಯನ್ನು ಗ್ಲೋಬಲ್ ಮಾಡಿದೆ, ಹಳ್ಳಿಯಿಂದ ವಿದೇಶದತನಕ ಬೇರೆ ಬೇರೆ ಕಡೆ ಜನ ಕೂತು ಈ ಕೂಟದ ಮೂಲಕ ಕತೆ ಬರೆದು, ಕತೆ ಬಗ್ಗೆ ಚರ್ಚಿಸಿದ್ದಾರೆ, ಇಂಥ ಸಾರ್ಥಕ ಕ್ಷಣಕ್ಕೆ ಕೂಟ ಕಾರಣವಾಗಿದೆ.

 ಕೂಟದ ಸಾಧನೆ ಏನು?

ಕೂಟದ ಸಾಧನೆ ಏನು?

ಈ ಕೂಟದ ಮೂಲಕ ಕೆಲವರು ಕತೆಗಾರರಾಗಿದ್ದಷ್ಟೇ ಅಲ್ಲ, ಸ್ವತಃ ಸಂಕಲನವನ್ನೂ ಹೊರತಂದರು. ಇದಕ್ಕೆ ಉದಾಹರಣೆ ಎಂದರೆ ಕತೆಗಾರ ಸಚಿನ್ ತೀರ್ಥಹಳ್ಳಿ ಅವರ 'ನವಿಲು ಕೊಂದ ಹುಡುಗ' ಹಾಗೂ 'ಮಿಸ್ಟರ್ ಎಕ್ಸ್'- ಈ ಎರಡೂ ಸಂಕಲನಗಳೂ ಈ ಕೂಟದ ಪ್ರಾಜೆಕ್ಟ್‌ಗಳು. ಹಾಗೆಯೇ ಪತ್ರಕರ್ತ ರಾಜೇಶ್ ಶೆಟ್ಟಿ (ಕಥಾಸಂಕಲನದ ಹೆಸರು- ಡ್ರಾಮಾ ಕಂಪನಿ), ಪ್ರಮೋದ್ ಹೆಗಡೆ (ಮೈಸೂರ್‌ ಪಾಕ್‌ ಹುಡುಗ), ಪೂರ್ಣಿಮಾ ಮಾಳಗಿಮನಿ (ಕಾದಂಬರಿಯ ಹೆಸರು ಪ್ರೀತಿಪ್ರೇಮ ಪುಸ್ತಕದಾಚೆಯ ಬದನೆಕಾಯಿ), ಅನನ್ಯ ತುಷಿರ (ಕಥಾ ಸಂಕಲನದ ಹೆಸರು- ಅರ್ಧ ನೆನಪು ಅರ್ಧ ಕನಸು) ಪುಸ್ತಕಗಳು ಕೂಟದ ಒತ್ತಾಸೆಯಿಂದ ಬೆಳಕು ಕಂಡಿವೆ.

ಇದರ ಜೊತೆಗೆ ಸಂಸ್ಕೃತ ಸಾಹಿತ್ಯ ಉಪನ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಜಗದೀಶ ಶರ್ಮ ಅವರು ಕನ್ನಡದಲ್ಲಿ ಬರೆಯಲಾರಂಭಿಸಿದರು, ಈವರೆಗೆ 'ಕಥೆಯೆಲ್ಲ ಜೀವನ', 'ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕತೆಗಳು' ಥರದ ಅವರ ಸಂಕಲನಗಳು ಓದುಗ ವರ್ಗದಲ್ಲಿ ಸಂಚಲನ ಮೂಡಿಸಿದ್ದಕ್ಕೆ ಕಥೆಕೂಟವೇ ಕಾರಣವಾಗಿದೆ.

ಹಾಗೆಯೇ ಸದ್ಯ ಸೆಲ್ಕೋ ಕಂಪನಿಯ ಸಿಇಒ ಆಗಿರುವ ಮೋಹನ ಭಾಸ್ಕರ ಹೆಗಡೆ, ಯಕ್ಷಗಾನ ಅರ್ಥದಾರಿಕೆಯ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದರೂ ಈ ಕೂಟದ ಮೂಲಕ ಅವರು ಕತೆ ಬರೆಯಲಾರಂಭಿಸಿ, 'ಪ್ರಭಾರಿ' ಎನ್ನುವ ಕಥಾ ಸಂಕಲನವನ್ನೂ ಪ್ರಕಟಿಸಿ ಕಥಾಲೋಕಕ್ಕೆ ಪ್ರವೇಶ ಪಡೆದರು. ಅಂಕಣಗಾರ್ತಿಯಾಗಿ ಹೆಸರುಪಡೆದಿದ್ದ 'ಜಯನಗರದ ಹುಡುಗಿ' ಕತೆಗಾರ್ತಿಯಾಗಿ ಬಡ್ತಿ ಪಡೆದಿದ್ದೂ ಈ ಕೂಟದ ಮೂಲಕವೇ.

ಇದಲ್ಲದೇ ಕಥೆಕೂಟದ ಇಪ್ಪತ್ಮೂರು ಕತೆಗಾರರ ಆಯ್ದ ಕತೆಗಳನ್ನೊಳಗೊಂಡ 'ಮಳೆಯಲಿ ನೆನೆದ ಕತೆಗಳು' ಸಂಕಲನವನ್ನು ಕೂಡ ಸಾವಣ್ಣ ಪ್ರಕಾಶನ ಹೊರತಂದಿದೆ.

 ಸಮಾವೇಶದಲ್ಲಿ ಏನೇನು ಇರುತ್ತದೆ?

ಸಮಾವೇಶದಲ್ಲಿ ಏನೇನು ಇರುತ್ತದೆ?

ಜೂನ್ 25, 26ರಂದು ನಡೆಯುವ ಕಥೆಕೂಟದ ಸಮಾವೇಶವನ್ನು ಎರಡು ದಿನಗಳ ಕಾಲ ಒಟ್ಟ ಐದು ಗೋಷ್ಠಿಗಳು ನಡೆಯಲಿವೆ. ಜೂನ್ 25ರಂದು ಸಂಜೆ 7. 30ಕ್ಕೆ 'ಮುಸ್ಸಂಜೆ ಕಥಾ ಪ್ರಸಂಗ' ಗೋಷ್ಠಿಯಲ್ಲಿ ಲೋಹಿತ್ ಶರ್ಮ, ರೂಪಲ್ ಶೆಟ್ಟಿ, ಸುಶಾಂತ್ ಮುಂಗರವಳ್ಳಿ, ಶ್ರೀಕಂಠಮೂರ್ತಿ, ಭರತ್ ಕುಮಾರ್ ಎಚ್ ಹಾಗೂ ವಿಕಾಸ್ ನೇಗಿಲೋಣಿ ಕತೆಯ ಕುರಿತು ಮಾತಾಡಲಿದ್ದಾರೆ. ಜೂನ್ 26ರಂದು ಬೆಳಿಗ್ಗೆ 10ಕ್ಕೆ ಖ್ಯಾತ ನಿರ್ದೇಶಕ ಬಿಎಸ್ ಲಿಂಗದೇವರು ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಗೋಪಾಲಕೃಷ್ಣ ಕುಂಟಿನಿ ಅವರ ಅಧ್ಯಕ್ಷತೆಯಲ್ಲಿ ಜೋಗಿ ಅವರು 'ಕತೆ ಮತ್ತು ನಾನು' ಅನ್ನುವ ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ. ಅನಂತರ ನಡೆಯುವ 'ಕತೆಯ ಕಷ್ಟಸುಖ' ಗೋಷ್ಠಿಯಲ್ಲಿ ಈರಯ್ಯ ದೂಂತೂರು, ಪ್ರಮೋದ್ ಹೆಗಡೆ, ಅನನ್ಯ ತುಷಿರ, ಮಾರುತಿ ಎನ್ ಎನ್, ವಾಣಿ ಸುರೇಶ್ ಮಾತಾಡಲಿದ್ದಾರೆ.

'ನಮ್ಮೊಳಗೂ ಕತೆಗಳಿವೆ' ಗೋಷ್ಠಿಯಲ್ಲಿ ವಿದ್ಯಾ ಭರತನಹಳ್ಳಿ, ಭಾಗ್ಯಜ್ಯೋತಿ, ಪೂರ್ಣಿಮಾ ಮಾಳಗಿಮನಿ, ಶ್ರೀರಕ್ಷಾ ಹೆಗಡೆ, ಸುಧಾ ದೇಶಪಾಂಡೆ ಮತ್ತು ಶುಭಶ್ರೀ ಭಟ್ಟ ಮಾತಾಡಲಿದ್ದಾರೆ. 'ಹುಟ್ಟಿದ ಕತೆ, ಕಟ್ಟಿದ ಕತೆ' ಗೋಷ್ಠಿಯಲ್ಲಿ ಮೇಘನಾ ಸುಧೀಂದ್ರ, ಶ್ರೀನಿವಾಸ ದೇಶಪಾಂಡೆ, ನೀಲಿಚಿಟ್ಟೆ, ಹರೀಶ್ ಕೇರ, ರಾಘವೇಂದ್ರ ಅಗ್ನಿಹೋತ್ರಿ ಮಾತಾಡಲಿದ್ದಾರೆ. 'ಓದು ಜನಮೇಜಯ' ಗೋಷ್ಠಿಯಲ್ಲಿ ರಾಜೇಶ್ ಶೆಟ್ಟಿ, ಪ್ರಿಯಾ ಕೆರ್ವಾಶೆ, ಜಗದೀಶ ಶರ್ಮ, ಸಚಿನ್ ತೀರ್ಥಹಳ್ಳಿ ಹಾಗೂ ರಂಜನಿ ಕೀರ್ತಿ ಮಾತಾಡಲಿದ್ದಾರೆ. ಈ ಸಮಾವೇಶದ ನೇರ ಪ್ರಸಾರವನ್ನು ಅಧಿಕೃತವಾಗಿ ಬುಕ್ ಬ್ರಹ್ಮ ನಡೆಸಿಕೊಡಲಿದ್ದು ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

Recommended Video

Kapil Dev ನಿರೀಕ್ಷೆಯನ್ನು ಹುಸಿ ಮಾಡಿದ Virat Kohli:ನೋವಿನಲ್ಲಿ ಕಪಿಲ್ ಹೇಳಿದ್ದೇನು? | *Cricket | OneIndia

English summary
Kathekoota turns Six, A Whatsapp Group formed by Kannada enthusiastic with an intend to build new Kannada stories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X