ಮತ್ತೆ ಮತ್ತೆ ಓದಿದಷ್ಟು ಹೊಸ ಜಗತ್ತನ್ನು ಪರಿಚಯಿಸುವ ತೇಜಸ್ವಿ ಕೃತಿಗಳ ಭಂಡಾರ ಇಲ್ಲಿದೆ
ಕೊಟ್ಟಿಗೆಹಾರ, ಸೆಪ್ಟೆಂಬರ್, 09: ಸಾಮಾನ್ಯರ ಬದುಕಿನ ವಿವರಗಳನ್ನು ತಿಳಿಸುವ ತೇಜಸ್ವಿ ಅವರ ಕೃತಿಗಳನ್ನು ಮತ್ತೆ ಮತ್ತೆ ಓದಿದಷ್ಟು ಹೊಸ ಹೊಸ ಜಗತ್ತು ತೆರೆದುಕೊಳ್ಳುತ್ತದೆ ಎಂದು ಕನ್ನಡ ಪ್ರಾಧ್ಯಾಪಕರಾದ ಡಾ.ಸಬಿತಾ ಬನ್ನಾಡಿ ಅವರು ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 85ನೇ ಜನ್ಮದಿನದ ಹಿನ್ನೆಲೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ತೇಜಸ್ವಿ ಅವರು ತೋರಿದ ಲೋಕದೃಷ್ಟಿ ವಿಷಯದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು. ನಾಡಿನ ಪಾಠ ಕಾಡಿನಲ್ಲಿದೆ ಎನ್ನುವಂತೆ ಪ್ರಾಣಿ ಪಕ್ಷಿ ಸಸ್ಯಗಳು ತೋರುವ ಹೊಂದಾಣಿಕೆಯನ್ನು ಮನುಷ್ಯನನ್ನೂ ಕೂಡ ತೋರಬಹುದಾಗಿದೆ ಎಂಬುದನ್ನು ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ. ಈ ಕೃತಿಗಳು ಹೊಸ ಜಗತ್ತನ್ನು ತೆರೆದಿಡುತ್ತವೆ. ಇವುಗಳನ್ನು ಯುವ ಪೀಳಿಗೆಯವರು ಓದಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಮಾತನಾಡಿ, ತೇಜಸ್ವಿ ಪ್ರತಿಷ್ಠಾನದಿಂದ ನೂತನವಾಗಿ ತೇಜಸ್ವಿ ಓದಿನ ಮನೆ ನಿರ್ಮಾಣವಾಗಿದೆ. ಪ್ರಕೃತಿಯ ನಡುವೆ ತೇಜಸ್ವಿ ಅವರ ಕೃತಿಗಳನ್ನು ಓದಲು ಪೂರಕವಾದ ವಾತಾವರಣವೂ ಇಲ್ಲಿದೆ. ಪ್ರತಿಷ್ಠಾನದಿಂದ ಚಾರಣ, ವಿಚಾರ ಮಂಥನ, ಚಿತ್ರಕಲಾ, ಪೋಟೋಗ್ರಫಿ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದರು.
ತೇಜಸ್ವಿ ಒಡನಾಡಿಗಳು ಹಾಗೂ ಪುಸ್ತಕ ಪ್ರಕಾಶನದ ಮುಖ್ಯಸ್ಥರಾದ ರಾಘವೇಂದ್ರ ಮಾತನಾಡಿ, ತೇಜಸ್ವಿ ಅವರು ಪರಿಸರದ ನಡುವೆ ಬದುಕಿ ತಮ್ಮ ಅನುಭವಗಳನ್ನು ಕೃತಿಗಳಲ್ಲಿ ದಾಖಲಿಸಿದ್ದಾರೆ. ಚಂದ್ರಯಾನ, ಜೀವ ವಿಕಾಸ, ಪರಿಸರ ಮುಂತಾದ ಕ್ಷೇತ್ರಗಳ ಬಗ್ಗೆ ಬೆರಗು ಮೂಡಿಸುವ ವಿವರಗಳು ತೇಜಸ್ವಿ ಅವರ ಕೃತಿಗಳಲ್ಲಿವೆ ಎಂದರು.
ನಂತರ ಕೊಟ್ಟಿಗೆಹಾರ ಪ್ರೌಢಶಾಲೆಯ ವಿದ್ಯಾರ್ಥಿಗಳು ತೇಜಸ್ವಿ ಅವರ ಸಾಲುಗಳ ಭಿತ್ತಿಚಿತ್ರವನ್ನು ಪ್ರದರ್ಶಿಸಿದರು. ವಿದ್ಯಾರ್ಥಿ ದರ್ಶನ್ ತೇಜಸ್ವಿ ಅವರಂತೆ ವೇಷ ಧರಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಕಲಾವಿದ ಹರ್ಷ ಕಾವಾ ಅವರು ನಿರ್ಮಿಸಿದ ಮಾಯಾಲೋಕ ಪ್ರತಿಕೃತಿಗಳು ತೇಜಸ್ವಿ ಅವರ ಪಾತ್ರಗಳ ಲೋಕವನ್ನು ತೆರೆದಿಟ್ಟವು. ಅಲ್ಲದೆ ಬಳಿಕ ನೂತನವಾಗಿ ನಿರ್ಮಾಣವಾದ ತೇಜಸ್ವಿ ಓದಿನ ಗಾಜಿನ ಮನೆಯನ್ನು ಗಣ್ಯರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್ ಬಿ.ಎಂ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಪ್ರಜ್ವಲ್, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಪ್ರಾಧ್ಯಾಪಕರಾದ ದೀಪಾರಾಣಿ ಬಿ.ಎಸ್, ಡಾ. ನಾಗರಾಜ್ ಎಂ.ಎಸ್, ರವಿಕುಮಾರ್, ಸುಶ್ಮಿತಾ, ಸತೀಶ್, ಕಿರಣ್, ಲೇಖಕ ಕಾರ್ತಿಕ್ ಬೆಳಗೋಡು, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಹೋಬಳಿ ಅಧ್ಯಕ್ಷ ತರುವೆ ಆದರ್ಶ್, ಕಲಾವಿದ ಹರ್ಷ ಕಾವಾ, ಮಂಜುನಾಥ್, ಜಾನುವಾರು ಅಧಿಕಾರಿ ಡಾ.ನವೀನ್ ಕುಮಾರ್, ಗ್ರಾಮಸ್ಥರಾದ ನರೇಂದ್ರ ತರುವೆ, ಸಂಜಯಗೌಡ ಸೇರಿದಂಯೆ ಮತ್ತಿತರರು ಇದ್ದರು.











Click it and Unblock the Notifications