ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಕಥೆ: KA 19-ಅಪ್ಪನ ಮೌಲ್ಯ ಅರ್ಥ ಮಾಡಿಸಿದ ಬೈಕ್

By ಆಶಿಕ್ ಮುಲ್ಕಿ
|
Google Oneindia Kannada News

ಆಗಷ್ಟೇ ಒಂದು ಪ್ರೇಮ ವೈಫಲ್ಯವಾಗಿ ಕೂತಿದ್ದ ಸಮಿತ್. ಸಮಿತ್‌ಗಿನ್ನೂ 21 ವರ್ಷ ಅಷ್ಟೇ. ಓದು ಬರಹ ಯಾವುದು ಕೂಡ ಸಮಿತ್‌ನನ್ನು ಅಷ್ಟೊಂದು ಕಾಡಲಿಲ್ಲ. ಮೂರು ಮುಕ್ಕಾಲು ರೂಪಾಯಿಗೆ ತಂದೆ ಕೊಡಿಸಿದ ಒಂದು ಮೊಟಾರು ಬೈಕೇ ಸಮಿತ್‌ನ ಆಸ್ತಿ. ಈ ಬೈಕು ಸಮಿತ್ ದಕ್ಕಿಸಿಕೊಂಡಿದ್ದು ಹಠಮಾಡಿ. 8ನೇ ತರಗತಿ ಪಾಸಾದ ಕೂಡಲೇ ಸಮಿತ್ ಇನ್ನು ಮುಂದಿನ ತರಗತಿ ಹೋಗಬೇಕೆಂದರೆ ಬೈಕ್ ಕೊಡಿಸಿ ಅನ್ನೋ ಹಠಕ್ಕೆ ಬಿದ್ದಿದ್ದ. ದಿನ ದೂಡುವುದೇ ಕಷ್ಟವಾಗಿದ್ದ ಸಮಯವದು. ಹೀಗಾಗಿ ಸಮಿತ್ ತಂದೆ ಬೇಡಿಕೆ ನಿರಾಕರಿಸಿದರು.

ಯೌವ್ವನದ ತುಂಟತನ, ಹಠ ಎಲ್ಲಾ ಹುಡುಗರಂತೆ ಸಮಿತ್‌ಗೂ ಇತ್ತು. ಬೈಕ್ ಕೊಡಿಸದ ಕಾರಣ ಊಟ ಬಿಡುವುದು, ಮನೆಗೆ ಬಾರದೆ ಇರುವುದು ಸಮಿತ್ ಮಾಡುತ್ತಿದ್ದ. ಈ ಕಾರಣಕ್ಕೆ ಒಂದು ದಿನ ಸಮಿತ್ ತಂದೆ ಆತನಿಗೆ ಹಿಗ್ಗಾಮುಗ್ಗ ನಾಗರ ಬೆತ್ತ ತಂದು ಬಾರಿಸಿದ್ದರು. ಸಮಿತ್ ಕೈ ಕಾಲೆಲ್ಲ ಕೆಂಪುಕೆಂಪಾಗಿ ಬಾತು ಹೋಗಿತ್ತು. ಆ ನಂತರ ಮಗನನ್ನು ನೋಡಿ ತಂದೆಗೆ ಬಹಳ ಸಂಕಟವಾಗ ತೊಡಗಿತ್ತು. ಇದೇ ಕಾರಣಕ್ಕೆ ಸಮಿತ್ ಹಠಕ್ಕೆ ಮಣಿದ ತಂದೆ ಕೊನೆಗೂ ಬೈಕೊಂದನ್ನ ಕೊಡಿಸಿದ್ದರು.

ಬೈಕ್ ಕಾರಣಕ್ಕೆ 8 ಮತ್ತು 9ನೇ ತರಗತಿ ಮುಗಿದು 10ನೇ ತರಗತಿಯಲ್ಲಿದ್ದ ಸಮಿತ್. ಸಮಿತ್ 10ನೇ ಕ್ಲಾಸಿನಲ್ಲಿ ಓದುವಾಗಲೇ ಅವರಪ್ಪ ಯಮನ ಕರೆಗೆ ಓಗೊಟ್ಟು ಹೊರಟಿದ್ದರು. ತಂದೆ ಇಲ್ಲದ ಸಮಿತ್ ಹೆಗಲಿಗೆ ತಾಯಿ ಸರೋಜ ಮತ್ತು ತಂಗಿ ಸುಮಾಳ ಜವಾಬ್ದಾರಿ ಬಿತ್ತು. ಹೀಗಾಗಿ ಸಮಿತ್ ಶಿಕ್ಷಣ ಅಷ್ಟಕ್ಕಷ್ಟೇ ಇತ್ತು. ಸಮಿತ್‌ಗೆ ದೊಡ್ಡದೇ ಆದ ಒಂದು ಗೆಳೆಯರ ವಲಯವಿತ್ತು. ಎಲ್ಲರೂ ಪ್ರೀತಿಯಿಂದ ಸಮಿತ್‌ನನ್ನು ಮಿತ್ತು ಎಂದು ಕರೆಯುತ್ತಿದ್ದರು. ಸಮಿತ್ ಓದಿನಲ್ಲಿ ತೀರಾ ಹಿಂದುಳಿದ್ದಿವನು. ಮನೆಯ ಅಷ್ಟೂ ಜವಾಬ್ದಾರಿ ಅವನ ಹೆಗಲ ಮೇಲೆಯೇ ಇತ್ತು. ಹೀಗಾಗಿ ಓದು ತಲೆಗೆ ಹೊಕ್ಕಿಲ್ಲ ಅನ್ನೋದೊಂದಾದರೆ, ಹೊಕ್ಕಿಸಿಕೊಳ್ಳಲು ಯಾರೂ ಅವಕಾಶ ಕೊಟ್ಟಿಲ್ಲ ಅನ್ನೋದೊಂದು. ನೋಡೋಕೆ ಸುಮಾರಾಗಿದ್ದ ಸಮಿತ್.

ಮುಲ್ಕಿಯ ಪುಂಡರು:
ಸಮಿತ್‌ಗೆ ತೀರಾ ಆಪ್ತ ಗೆಳೆಯರು ಇಬ್ಬರು. ಅರ್ಷದ್ ಹಾಗೂ ಅಶೋಕ. ಸಮಿತ್ ಸೇರಿದಂತೆ ಮೂವರ ಗುಂಪು ಇವರದ್ದು. ಕೆಲಸ ಇಲ್ಲ. ಓದಿಲ್ಲ. ಆಗಾಗ್ಗೆ ಅಲ್ಲಲ್ಲಿ ದುಡಿಮೆ ಬಿಟ್ಟರೆ ಹೇಳಿಕೊಳ್ಳಲು ಇವರ ಬಳಿ ಏನೂ ಇಲ್ಲ. ಸದಾ ತಮ್ಮ ಕೈಯಲ್ಲಿ ಏನೂ ಸಾಧ್ಯವಿಲ್ಲ ಎಂದು ಕೊರಗುತ್ತಾ ಪುಂಡರಂತೆ ಓಡಾಡುವ ಹುಡುಗರು. ಮಂಗಳೂರಿನ ಮುಲ್ಕಿ ಸಮಿತ್‌ನ ಊರು. ಸಮಿತ್ ಗೆಳೆಯ ಅಶೋಕ್ ಮೂಲತಃ ಈ ಮಂಗಳೂರಿನವನಲ್ಲ. ಅವ ಮೈಸೂರು ಹುಡುಗ. ವರ್ಷಗಳ ಹಿಂದೆ ಅಶೋಕ್ ತಂದೆ ಮುಲ್ಕಿಗೆ ಬಂದು ನೆಲೆಸಿದ್ದರು. ಆದ್ರೆ ಸಮಿತ್ ಗೆಳೆಯ ಅರ್ಷದ್ ಇಲ್ಲಿಯವನೇ. ಸಮಿತ್‌ನ ಬಾಲ್ಯದ ಗೆಳೆಯ ಈ ಅರ್ಷದ್. ಇವರ ನಡುವೆ ಅರ್ಷದ್ ಸಾಬಿ ಎಂದು ಕರೆಸಿಕೊಳ್ಳುತ್ತಿದ್ದ. ಇದು ಸಮಿತ್ ಹಾಗೂ ಆತನ ಗೆಳೆಯರು.

Heart Touching Father and Son Story BY Ashiq Mulki

ಮಂಗಳೂರು ಎಂದರೆ ಬುದ್ಧಿವಂತರ ಜಿಲ್ಲೆ ಅಂತೆಲ್ಲಾ ನಿಮಗನಿಸಬಹುದು. ಆದರೆ ಯಾರಿಗೂ ಗೊತ್ತಿಲ್ಲದ್ದ ಯಾರೂ ನೋಡದ ಕೇವಲ, ಕೆಲವೇ ಕೆಲವು ಜನರು ಮಾತ್ರ ನೋಡಿರುವ ಮಂಗಳೂರು ಬೇರೆಯೇ ಇದೆ. ಇದು ಸಹಜವಾಗಿ ಮಂಗಳೂರಲ್ಲಿ ಅನೇಕರ ಬಾಯಲ್ಲಿ ಕೇಳಿ ಬರುವ ಮಾತು. ಇದು ನಿಜವೋ ಸುಳ್ಳೋ ಅನ್ನೋದು ಗೊತ್ತಿಲ್ಲ. ಆದರೆ ಇದೊಂದೇ ಆಗಿತ್ತು ಸಮಿತ್ ಹಾಗೂ ಆತನ ಗೆಳೆಯರ ಬಂಡವಾಳ. ಹೋದಲ್ಲಿ ಬಂದಲ್ಲಿ ಎಲ್ಲಾ ಈ ಒಂದು ಮಾತನ್ನೇ ಆಡಿಕೊಂಡು ಪಾತಕಿಗಳಂತೆ ಮೀಸೆ ತಿರುವುತ್ತಿದ್ದರು. ಇನ್ನೂ ಸರಳವಾಗಿ ಹೇಳ ಬೇಕು ಎಂದರೆ ಫಸ್ಟ್ ಕ್ಲಾಸ್ ಪುಂಡರು. ಯೌವನದ ಸಹಜ ತಲ್ಲಣಗಳು ಎಲ್ಲರಂತೆ ಈ ಮೂವರನ್ನು ಕಾಡ್ತಿತ್ತು. ಈ ಮಧ್ಯೆ ಊರಲೆದುಕೊಂಡಿರುವ ಈ ಹುಡುಗರಿಗೆ ಕೆಟ್ಟ ಚಟ್ಟವೆಂದು ಸಮಾಜ ಕರೆಯುವ ಕೆಲ ಗುಣಗಳೂ ಇದ್ದವೂ. ಆದರೆ ಅದನ್ನು ಪೂರೈಸೋದಕ್ಕು ಇವರು ತಡಕಾಡುವುದು ಕೂಡ ಇವರ ದಿನಚರಿಯ ಒಂದು ಭಾಗ.

ಮಿತ್ತು ನಾಗಾಲೋಟ:
ಅದೊಂದು ದಿನ, ಮಟ ಮಟ ಮಧ್ಯಾಹ್ನ ಪಟ ಪಟನೆ ಮಿತ್ತು ಓಡೋಡಿ ಬರ್ತಿದ್ದ. ನಡುಬಿಸಲಿಗೆ ಕೆಂಡದಂತೆ ಕಾದು ಮಲಗಿದ್ದ ಮುಲ್ಕಿಯ ಕೆಎಸ್‌ರಾವ್ ನಗರದ ಡಾಂಬಾರು ರಸ್ತೆಯಲ್ಲಿ ಮಿತ್ತು ಬ್ರೇಕಿಲ್ಲದ ಬೈಕಿನಂತೆ ಓಡೋಡಿ ಬರುತ್ತಿದ್ದ. ಯಾಕೆ.? ಏನು.? ಅನ್ನೋದೆಲ್ಲಾ ಯಾರಿಗೂ ಗೊತ್ತಿರಲೇ ಇಲ್ಲ. ಇದನ್ನ ಕಂಡ ಅರ್ಷದ್ ಹಾಗೂ ಅಶೋಕ್ ಕೂಡ ಅವನ ದಾರಿ ಹಿಡಿದರು.

"ಎಂತಾ ಮಾರಾಯ.. ಎಂಥಾಯ್ತು ನಿಂಗೆ..'' ಅಂತ ಮಂಜು ಹಿಂದೆಯೇ ಓಡಿದ ಅರ್ಷದ್ ಜೋರಾಗಿ ಕೂಗೋದಕ್ಕೆ ಶುರುಮಾಡಿದ. "ಎಂಚಿ ಸಾವ್ಯಾ ಇಂಬೆನಾ.. ಉಂತುಯಾ ಮಿತ್ತು''.. (ಎಂತ ಸಾವು ಇವನದ್ದು. ನಿಲ್ಲೋ ಸಮಿತ್) ಆರಡಿ ಮೂರಿಂಚಿನ ಅಶೋಕ್ ಕೋಪದಲ್ಲಿ ಗುಡುಗ ತೊಡಗಿದ.

ಆದ್ರೆ ಸಮಿತ್ ಮಾತ್ರ ಯಾರ ಮಾತಿಗೂ ಕಿವಿಕೊಡದೆ ಓಡುತ್ತಲೇ ಇದ್ದ. ಕೊನೆಗೆ ಕೈಮರದಂತಿರುವ ಜಾಗದ ಒಂದು ಮೂಲೆಗಿರುವ ಸೀದರಣ್ಣನ ಅಂಗಡಿಯೊಳಕ್ಕೆ ಹೊಕ್ಕು ಕೂತ.

"ಹಲೋ ಸೀದರಣ್ಣ.. ನಂಗೊಂದು ಸಿಗರೇಟು'' ಎಂದ. ಅಷ್ಟರಲ್ಲೇ ಹಿಂದೆಯಿಂದ ಓಡೋಡಿ ಬರುತ್ತಿದ್ದ ಅರ್ಷ ಮತ್ತು ಅಶೋಕ ಸಮಿತ್ ಬಳಿ ತಲುಪಿದರು.

"ನೀ ಎಂಥಕ್ಕಾ ಓಡಿದ್ದು.. ನಿನ್ನಜ್ಜಿ ಶುಂಠಿ ಮಗನೇ.. ಅಲ್ಲಿಂದ ಕರೀತಿದ್ದೀವಿ.. ನಿಂತುಕೊಳ್ಳೊಕೆ ಏನು ದಾಡಿ ನಿನಗೆ''.. ಎನ್ನುತ್ತಲೇ ಅರ್ಷದ್ ಸಮಿತ್‌ಗೆ ಎರಡು ಬಾಂಕುಟ್ಟಿ (ತಲೆಗೆ ಹೊಡೆಯುವುದು) ಕೊಟ್ಟ. ಅಷ್ಟರಲ್ಲೇ ಅಶೋಕ "ಮುಖಕ್ಕೆ ಗುದ್ಲಿಕ್ಕುಂಟು ಮಗನೇ.. ನಿನ್ನ ಕರ್ಮಕ್ಕಾ ಅಲ್ಲಿಂದ ಓಡ್ಕೊಂಡು ಬಂದಿದ್ದು.. ಏನೋ ಆಯ್ತು ಅಂತ ನಾವು ನಿನ್ನ ಹಿಂದೆ ಓಡ್ಕೊಂಡು ಬಂದಿದ್ದು'' ಅಂತ ಉಫ್ ಉಫ್' ಉಸಿರು ಬಿಡುತ್ತನೆ ಹೇಳಿದ. ಪಾಪ.. ಅಲ್ಲಿ ನಿರಾಳವಾಗಿ ನಿಂತಿದ್ದ ಅರ್ಷ ಮತ್ತು ಅಶೋಕನ ಈ ಪಾಡಿಗೆ ಕಾರಣವಾದ ಸಮಿತ್ ಏನೂ ಉರುವಿಡದೆ ಸುಮ್ಮನೆ ಕೂತು, ಸೀದರಣ್ಣ ಕೊಟ್ಟ ಸಿಗರೇಟು ಸೇದುತ್ತಾ; ಫೂ.. ಫೂ.. ಎಂದು ತಲೆ ಎತ್ತಿ ಮೇಲಕ್ಕೆ ಹೊಗೆ ಬಿಡುತ್ತಲೇ ಮುಗುಳುನಗೆ ಬೀರುತ್ತಾ ಕೂತ. ಇದು ಅರ್ಷದ್ ನಿಗಿ ನಿಗಿ ಕೆಂಡವಾಗೋದಕ್ಕೆ ಕಾರಣವಾಯ್ತು.

"ಬೋ$ಮಗನೆ ನಾನಲ್ಲಿ ಮನೆಗೆ ಸಾಮಾನು ತಗೊಳಕ್ಕೆ ಬಂದವ, ನಿನ್ನನ್ನು ನೋಡಿ ಓಡ್ಕೊಂಡು ಬಂದಿದ್ದು. ನೀನು ನೋಡಿದ್ರೆ ಧಮ್ ಎಳೀತಾ ಕೂತಿದ್ಯಾ..? ಎಂಥಾಯ್ತು ಹೇಳಾ..?'' ಅರ್ಷ ಏರು ಧ್ವನಿಯಲ್ಲೇ ಹೀಗಂದು ಸಮಿತ್ ತುಟಿಯಂಚಲ್ಲಿದ್ದ ಅರ್ಧ ಸಿಗರೇಟನ್ನು ಎಳೆದು ತನ್ನ ತುಟಿಗಿಟ್ಟು, ಸೀದರಣ್ಣನಿಗೆ ಒಂದು ಬೊಂಡ ಜ್ಯೂಸ್‌ಗೆ ಆರ್ಡರ್ ಮಾಡಿದ. ಇದಿಷ್ಟು ಕೇಳ್ತಿದ್ದಂತೆ "ಹಾಗಾದ್ರೆ ನಂಗೂ ಒಂದು ಕೊಡಿ ಸೀದರಣ್ಣ'' ಅಂತ ಅಶೋಕನೂ ಹೇಳಿದ. ಇಷ್ಟೆಲ್ಲಾ ಆದರೂ ಸಮಿತ್ ಏನೂ ಮಾತನಾಡದೆ ಸುಮ್ಮನೆ ಕೂತು ಬಿಟ್ಟಿದ್ದ.

Heart Touching Father and Son Story BY Ashiq Mulki

ಒಂದು ಸಿಗರೇಟು, ಒಂದು ಬೊಂಡ ಜ್ಯೂಸು ದುಡ್ಡನ್ನ ಕೊಟ್ಟು ಅಲ್ಲಿಂದ ಮೂರು ಜನ ಕೂಡ ಹೊರಟ್ರು. ಅಷ್ಟೊತ್ತಿಗೆ ಮಂಗಳೂರು ಮುಲ್ಕಿ ನಡುವೆ ಸರ್ವೀಸ್ ನಡೆಸುವ ಮ್ಯಾಂಗ್ಳೂರ್ ಟ್ರಾವೆಲ್ಸ್ ಬಸ್ಸು ಬರುತ್ತಿತ್ತು. ಬಸ್ಸನ್ನು ನೋಡುತ್ತಿದ್ದಂತೆಯೇ ಸಮಿತ್ ಓಡೋಡಿ ಹೋಗಿ ಬಸ್ ಒಳಕ್ಕೆ ಹತ್ತಿ ಕೂತ. ಇವನ ನೋಡಿ ಅಶೋಕ ಹಾಗೂ ಅರ್ಷದ್ ಕೂಡ ಹತ್ತಿ ಕೂತರು. ಬಸ್‌ನ ಕೊನೆಯ ಸ್ಟಾಪ್ ಮುಲ್ಕಿ ಬಸ್ ನಿಲ್ದಾಣದಲ್ಲಿ ಮೂವರು ಇಳಿದು, "ನಾವ್ಯಾಕೆ ಬಸ್‌ನಲ್ಲಿ ಬಂದಿದ್ದು. ನಿನ್ನ ಬೈಕಲ್ಲೇ ಹೋಗ್ಬಹುದಿತ್ತಲ್ವಾ ಮಿತ್ತು'' ಅಂತ ಕೇಳಿದ. ಆಗಲೂ ಸಮಿತ್ ಏನೂ ಹೇಳದೆ ಮೌನಕ್ಕೆ ಶರಣಾದ. ಇದು ಮತ್ತಷ್ಟು ಇನ್ನಷ್ಟು ಅರ್ಷದ್‌ನನ್ನ ಕೆಣಕಿತು.

"ಅಶೋಕ ಈ ಬೋ$ಮಗನದ್ದು ಪುಕಾರು ಇದ್ದಿದ್ದೇ. ಬಾ ನಡಿ ನಾವು ಹೋಗುವ'' ಅನ್ನುತ್ತಲೇ ಬಸ್ ಇಳಿದು ಕಾರ್ನಾಡು ಜಂಕ್ಷನ್ ಕಡೆ ಮುಖ ಮಾಡಿ ನಡೆಯೋಕೆ ಶುರುಮಾಡಿದರು. ಅಷ್ಟರಲ್ಲೇ ಸಮಿತ್ "ಮಚ್ಚಾ.. ನನ್ನ ಬೈಕ್ ಯಾರೋ ಕದ್ದುಕೊಂಡು ಹೋಗಿದ್ದಾರೆ'' ತನ್ನ ಮೌನದ ಕಾರಣವನ್ನು ತಿಳಿಸಿದ.

ಅಷ್ಟಕ್ಕೆ ಸಮಿತ್ ಯಾಕೆ ಅಲ್ಲಿಂದ ಉಸೇನ್ ಬೋಲ್ಟ್ ರೀತಿಯಲ್ಲಿ ಓಡ್ಕೊಂಡು ಬಂದಿದ್ದು ಅನ್ನೋದು ಆಗಲೂ ಉತ್ತರ ಸಿಗದ ಪ್ರಶ್ನೆಯಾಗಿತ್ತು ಅಶೋಕನಿಗೆ ಹಾಗೂ ಅರ್ಷದ್‌ಗೆ. ಇದನ್ನ ಮತ್ತೆ ಅವರಿಬ್ಬರು ಕೇಳೋಕು ಮುಂಚೆ ಸಮಿತ್ ತ್ತರ ಕೊಟ್ಟ. ಮನೆಯಲ್ಲಿ ಹೇಳಿದೆ.. ಬೈಕ್ ಕಳೆದು ಹೋಗಿದೆ ಅಂತ. ಅದಕ್ಕೆ ತಾಯಿ ಮಾಚಿಲ್ (ಪೊರಕೆ) ಹಿಡ್ಕೊಂಡು ಹೊಡೆಯೋಕೆ ಬಂದ್ರು. ಅದಕ್ಕೆ ಓಡಿದೆ'' ಅಂತ ತನ್ನ ನಿರಾಯಾಸ ಓಟದ ಕಾರಣವನ್ನು ಗೆಳೆಯರ ಮುಂದಿಟ್ಟ. ಇದು ಅರ್ಷ ಮತ್ತು ಅಶೋಕನನ್ನ ನಗೆಗಡಲಲ್ಲಿ ತೇಲಿಸಿತು. ಒಂದತ್ತು ನಿಮಿಷ ಇಬ್ಬರು ಕೂಡ ಎದ್ದು ಬಿದ್ದು ನಕ್ಕು, ಎಂಥಾ ಸಾವಾ ನಿಂದು'' ಅಂತ ಗೇಲಿ ಮಾಡಿದರು.

ಇದು ಸಮಿತ್‌ಗೆ ಕೋಪ ತರಿಸಿತು. ನಕ್ಕಿದ್ದು ಸಾಕು ಮುಂದೇನು ಮಾಡ್ಬೇಕು ಅನ್ನೋದ್ರ ಬಗ್ಗೆ ಮಾತಾಡಿ ಅಂತ ಸಮಿತ್ ಗುರುಗುಟ್ಟುತ್ತಲೇ ಇಬ್ಬರ ಹೆಗಲ ಮೇಲೆ ಕೈ ಹಾಕಿ ಮುಲ್ಕಿ ಬಸ್ಟ್ಯಾಂಡ್ ಹಿಂಬದಿಯ ರಸ್ತೆಗೆ ಇಳಿದು ಕೊಳಚ್ಚಿಕಂಬಳ ಸಮುದ್ರ ಕಿನಾರೆ ಕಡೆಗೆ ಹೊರಟರು. ಹೀಗಿಳಿದು ಹೋಗುವಾಗ ಬಸ್ ನಿಲ್ದಾಣದ ಪಕ್ಕದಲ್ಲೇ ಒಂದು ಆಟೋ ರಿಕ್ಷಾ ಸ್ಟ್ಯಾಂಡ್ ಕೂಡ ಇದೆ. ಇಲ್ಲಿ ಅರ್ಷದ್ ನೆರೆಮನೆಯ ಬಾವಾಕ ಇರ್ತಾರೆ. ಬಾವಾಕ ಆಟೋ ಚಾಲಕ. ಇದೇ ಮುಲ್ಕಿಯ ಆಟೋ ನಿಲ್ದಾಣದಲ್ಲೇ ಇರುವವರು ಅವರು. ಹೀಗೆ ಮತ್ತೊಂದು ಸುತ್ತಿನ ಹೊಗೆ ಕಾರ್ಯಕ್ರಮಕ್ಕೆ ಹೋಗುವ ದಾರಿಯಲ್ಲಿ ಬಾವಾಕನ ಕಣ್ಣಿಗೆ ಅರ್ಷದ್ ಬಿದ್ದು ಬಿಟ್ಟ.

ಬಾವಾಕ "ಎಂದಲಾ ಅರ್ಷದ್ ಸೊರ್ತ್ಗ್ ಪೋಯ್ತ್ಲೇ..?'' (ಏನೋ ಅರ್ಷದ್ ಕೆಲಸಕ್ಕೆ ಹೋಗಿಲ್ವಾ..?) ಅಂತ ಅರ್ಷದ್‌ಗೆ ಬದುಕಿನ ಅತ್ಯಂತ ದೊಡ್ಡ ಹಾಗೂ ಕೆಟ್ಟ ಸವಾಲನ್ನು ಎಸೆದರು. ಹೀಗೊಂದು ಪ್ರಶ್ನೆ ಅರ್ಷದ್ ಕಡೆ ತೂರಿ ಬರುತ್ತಿದ್ದ ಹಾಗೆ ಪಕ್ಕದಲ್ಲೇ ಇದ್ದ ಮಿತ್ತು ಹಾಗೂ ಅಶೋಕ ಕಿಸಕ್ಕನ ಮುಖಕ್ಕೆ ಕೈ ಇಟ್ಟು ನಗೋದಕ್ಕೆ ಶುರು ಮಾಡಿದರು..

"ಇಲ್ಲೆಲೆ ಬಾವಾಕ ಇಂಡ್ ನ್ಙಾರಾಸೆ ಅಲ್ಲೆ.. ಸೊರ್ತ್ಗ್ ರಜೆ'' (ಇಲ್ಲ ಬಾವಾಕ. ಇವತ್ತು ಭಾನುವಾರ ಅಲ್ವಾ ಹಾಗಾಗಿ ಕೆಲಸಕ್ಕೆ ರಜೆ) ಅಂತೇಳಿ ಅರ್ಷದ್ ತನ್ನಿಬ್ಬರು ಗೆಳೆಯರನ್ನು ಎಳೆದು ಮುಂದಕ್ಕೆ ನಡೆದ.

ಈ ಮೂವರು ಮುಂದಕ್ಕೆ ನಡೆಯುತ್ತಿದ್ದಂತೆ ಹಿಂದಿನಿಂದ ಬಾವಾಕ ನಿಕ್ಕ್ ಪಿನ್ನೆ ಎಪ್ಪೊಲುಮ್ ನ್ಙಾರಾಸೆಮೆ ಅಲ್ಲೆಲ್ಲಾ'' (ನಿಂಗೆ ವಾರ ಪೂರ್ತಿ ಭಾನುವಾರವೇ ಅಲ್ವಾ..!) ಅಂತ ಗೇಲಿ ಮಾಡಿದರು..

ಇದನ್ನ ಕೇಳಿಸಿಕೊಂಡ ಅರ್ಷದ್ ಸಮಿತ್ ಬಳಿ "ಮಿತ್ತು ಈ ಬಾವಕನ ಕೊನೆ ಮಗಳು ಇದ್ದಾಳಲ್ಲ ಸುಮಯ್ಯ, ಅವಳನ್ನ ಪಟಾಯಿಸ್ಬೇಕು'' ಅಂತ ತನ್ನ ಮಾನಹಾರಾಜಾಕಿದ್ದಕ್ಕೆ ಪ್ರತಿಕಾರ ತೀರಿಸುವ ಮಾತುಗಳನ್ನ ಆಡಿದ. ಆದ್ರದು ಸಾಧ್ಯವಾಗದ ಮಾತು ಅನ್ನೋದು ಅರ್ಷದ್‌ಗೂ ಗೊತ್ತಿತ್ತು. ಯಾಕಂದ್ರೆ ಬಾವಾಕನ ಕೊನೆಯ ಮಗಳು ಸುಮಯ್ಯನಿಗೆ ಆಗಲೇ ಎಂಗೇಜ್ಮೆಂಟ್ ಆಗಿತ್ತು. ಅವಳಾಗ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿನಿ. ಮಂಗಳೂರಲ್ಲಿ ಬ್ಯಾರಿ ಹೆಣ್ಣು ಮಕ್ಕಳಿಗೆ 18-19 ತುಂಬುತ್ತಿದ್ದಂತೆಯೇ ಮದುವೆ ಮಾಡಿಸೋದು ಒಂದು ಸಂಪ್ರದಾಯ. ಇದ್ರಿಂದ ಸುಮಯ್ಯ ಕೂಡ ಹೊರತಾಗಿರಲಿಲ್ಲ. ಅಂದಹಾಗೆ ಸುಮಯ್ಯ ಪಿಯುಸಿಯಲ್ಲಿ rank ಪಡೆದ ವಿದ್ಯಾರ್ಥಿನಿಯಾಗಿದ್ದಳು. ಆದರೆ ಮದುವೆ ಅನ್ನೋದು ಅವಳ ಕನಸಿಗೆ ಕಟ್ಟಿದ ಬೇಲಿಯಾಗಿತ್ತು.

ಮುಲ್ಕಿ ಪೊಲೀಸ್ ಸ್ಟೇಷನ್ ಕಡೆಗೆ:
ಹೀಗೆ ಬೈಕ್ ಕಳೆದುಕೊಂಡ ಮಾತುಗಳನ್ನು ಆಡುತ್ತಾ ಸಮಿತ್ ಹಾಗೂ ಗೆಳೆಯರು ಕೂತಿದ್ದರು. ಸಮಿತ್ ಬೈಕ್ ಕಳೆದು ಹೋಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡುವ ನಿರ್ಧಾರಕ್ಕೆ ಬಂದನು. ಹೀಗಾಗಿ ಮೂವರೂ ಮುಲ್ಕಿ ಪೊಲೀಸ್ ಸ್ಟೇಷನ್ ಕಡೆಗೆ ನಡೆದರು. ಕೊನೆಗೆ ಮುಲ್ಕಿ ಪೊಲೀಸ್ ಸ್ಟೇಷನ್ ಇನ್ನೇನು ತಲುಪಬೇಕು. ಅಷ್ಟರಲ್ಲಿ ಅಶೋಕ ಸಮಿತ್‌ನ ಹೆಗಲ ಮೇಲೆ ಕೈ ಹಾಕಿ ಹೇಳಿದ.

"ಮಿತ್ತು.. ಆಕ್ಚುವಲಿ. ಏನಾಯ್ತು..? ಬೈಕ್ ಎಲ್ಲಿ ಕಳೆದು ಹೋಗಿದ್ದು..? ಯಾವಾಗ ಕಳೆದು ಹೋಗಿದ್ದು..?''

ಹೀಗೆ ನೂರೆಂಟು ಪ್ರಶ್ನೆಗಳು ಸಮಿತ್‌ನ ಮುಂದಿಟ್ಟ. ಇದಕ್ಕೆ ಅರ್ಷದ್

"ಹೌದು.. ಮಾರ್ರೆ. ನಾನು ಕೇಳೋದಕ್ಕೆ ಮರೆತು ಬಿಟ್ಟೆ. ಏನಾಗಿದ್ದಾ ಮಿತ್ತು ನಿನ್ನ ಗಾಡಿಗೆ'' ಎನ್ನುತ್ತಲೇ ಅಶೋಕನಿಗೆ ಸಾಥ್ ಕೊಟ್ಟ.

"ನಿನ್ನೆ ನಾನು ಮುಲ್ಕಿ ಬಸ್ಟ್ಯಾಂಡ್ ಪಕ್ಕದಲ್ಲೇ ವಾಲಿಬಾಲ್ ಆಡೋ ಗ್ರೌಂಡ್ ಇದೆಯಲ್ಲ, ಅಲ್ಲೇ ಗೂಡಗಂಡಿ ಪಕ್ಕ ಬೈಕ್ ಇಟ್ಟಿದ್ದೆ. ಸ್ವಲ್ಪ ಹೊತ್ತು ಬಂದು ಬಿಟ್ಟು ನೋಡ್ದೆ. ಗಾಡಿ ಇರ್ಲಿಲ್ಲ ಮರ‍್ರೆ. ಅಷ್ಟೊತ್ತಿಗೆ ಸಮಯ ಸಂಜೆ ಸುಮಾರು 7ಗಂಟೆ ಆಗಿತ್ತಾ'' ಅಂತ ಸಮಿತ್ ಗಾಡಿ ಕಳೆದು ಹೋದ ಬಗ್ಗೆ ವಿವರಿಸಿದ.

"ಆಯ್ತು ಬಾ. ಇದೆಲ್ಲಾ ನಿಜಾ ಅಲ್ವಾ.. ಸುಳ್ಳು ಗಿಳ್ಳು ಅಲ್ಲಲ್ವಾ ಮರ‍್ರೆ'' ಅಂತ ಅಶೋಕ್ ಸಮಿತ್‌ನನ್ನು ಕಿಚಾಯಿಸಿದ. ಹೀಗೆ ಸಮಿತ್‌ನ ಬೈಕ್ ಕಳೆದು ಹೋದ ಬಗ್ಗೆ ಕಂಪ್ಲೇಟ್ ಕೊಡೋಕೆ ಮೂವರು ಕೂಡ ಮುಲ್ಕಿ ಪೊಲೀಸ್ ಸ್ಟೇಷನ್‌ಗೆ ಹೊರಟ್ರು.

ಪೊಲೀಸ್ ಸ್ಟೇಷನ್ ಗೇಟ್ ದಾಟುತ್ತಿದ್ದಂತೆ ಅರ್ಷದ್ "ಇದೆಲ್ಲಾ ಬೇಕೇನಾ.. ನಮ್ ಗಾಡಿನ ನಾವೇ ಹುಡುಕಿದ್ರೆ ಸಾಕಾಗಾಲ್ವ'' ಅಂತ ಭಯದಿಂದ ಹೇಳಿದ. ಅರ್ಷದ್ ಹೀಗೇಳೋಕು ಒಂದು ಕಾರಣ ಇತ್ತು. ಈ ಹಿಂದೆ ಮನೆ ಪಕ್ಕದಲ್ಲಿ ಜಗಳ ಬಿಡಿಸೋಕೆ ಹೋಗಿದ್ದ ಅರ್ಷದ್ ಕೊನೆಗೆ ಆ ಜಗಳಕ್ಕೆ ತಾನೇ ಕಾರಣನಾಗಿ ಹೋಗಿದ್ದ. ಇದೇ ಕಾರಣಕ್ಕೆ ಪೊಲೀಸ್ ಸ್ಟೇಷನ್‌ನಲ್ಲಿ ಒಂದಿಡೀ ರಾತ್ರಿ ಕಳೆದ ಕರಾಳ ಅನುಭವ ಈ ಮೊದಲೇ ಅರ್ಷದ್‌ಗಿದೆ.

"ಗೊತ್ತುಂಟ್ಟಲ್ಲಾ.. ಕಾಲ ಸರಿ ಇಲ್ಲ ಮಿತ್ತು.. ಕಳ್ಳ ಸಿಕ್ಕಿಲ್ಲ ಅಂತ ಕೊನೆಗೆ ಕುಳ್ಳನನ್ನು ಅಪರಾಧಿ ಮಾಡೋ ಕಾಲ ಈಗ. ಪೊಲೀಸ್ ಗಿಲೀಸ್ ಏನು ಬೇಡಾ ಬಾ.. ನಾವೇ ಗಾಡಿ ಹುಡುಕೋಣ'' ಎನ್ನುತ್ತಲೇ ಅರ್ಷದ್ ಸ್ಟೇಷನ್ ಗೇಟ್ ಹೊರಕ್ಕೆ ಬಂದು ನಿಂತ. ಒಬ್ಬ ಹಿಂದೇಟು ಹಾಕಿದ್ರೆ ಜೊತೆಗಿದ್ದ ಮತ್ತೊಬ್ಬನಿಗೆ ಪುಕ ಪುಕ ಆಗೋಕೆ ಹೆಚ್ಚೇನು ಸಮಯ ಬೇಕಿಲ್ಲ ಅನ್ನೋದಕ್ಕೆ ಅಶೋಕನೇ ಸಾಕ್ಷಿ.

ಅರ್ಷದ್ ಹೀಗಂದುಕೊಳ್ಳುತ್ತಲೇ "ಮಿತ್ತು ಸುಮ್ನೆ ವಾಪಾಸ್ ಬಾ ನೀನು. ನಾವಿರುವಾಗ ಪೊಲೀಸ್ ಯಾಕೆ'' ಅಂತ ದೌಲತ್ತಿನ ಮಾತುಗಳನ್ನ ಆಡಿದ. ಆಗೋ ಹೀಗೋ ಅರ್ಷದ್ ಮತ್ತು ಅಶೋಕನ ಮಾತಿಗೆ ಮರುಳಾಗಿ ಕಳೆದು ಹೋದ ಬೈಕನ್ನ ತಾವೇ ಹುಡುಕೋ ನಿರ್ಧಾರಕ್ಕೆ ಬಂದು ಬಿಟ್ಟ ಸಮಿತ್.

ಜಿಲ್ಲೆ ಹುಡ್ಗರ ಮನ ಮೆಚ್ಚಿದ ಕ್ರೀಡೆ ಕ್ರಿಕೆಟ್
ಈಗಲೂ ಮಂಗಳೂರು ಅಸುಪಾಸಿನಲ್ಲಿ ಇರೋ ಹುಡುಗರ ಮನ ಮೆಚ್ಚಿದ ಕ್ರೀಡೆ ಕ್ರಿಕೆಟ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕಡೆ ಈಗಲೂ ಹೊನಲು ಬೆಳಕಿನ ಕ್ರೀಡಾ ಕೂಟ ನಡೆಯುತ್ತಲೇ ಇರುತ್ತದೆ. ಅದ್ರಲ್ಲೂ 30 ಯಾರ್ಡ್ ಪಂದ್ಯ ಕೂಟ ತುಸು ಹೆಚ್ಚೇ ರೋಚಕತೆಯನ್ನ ಹುಟ್ಟಿಸುವ ಆಟ. ಸಣ್ಣದಾದ ಒಂದು ವೃತ್ತದೊಳಗೆ ನಿಂತು ಗರಿಷ್ಠ 6 ಆಟಗಾರರ ಒಂದೊಂದು ತಂಡದಲ್ಲಿ ಆಡುವ ಆಟ ಈ 30 ಯಾರ್ಡ್ ಕ್ರಿಕೆಟ್. ಅರ್ಷದ್ ಈ ಆಟ ಆಡೋದ್ರಲ್ಲಿ ಪಂಟರ್. ವಾರದ ಕೊನೆಯಲ್ಲಿ ಅರ್ಷದ್ ಮನೆಯಲ್ಲಿ ಇದ್ದಿದ್ದೇ ಕಡಿಮೆ.

ಊರು ಬಿಟ್ಟು ಊರಿಗೆ ತಂಡ ಕಟ್ಟಿಕೊಂಡು 30 ಯಾರ್ಡ್ ಪಂದ್ಯಕೂಟದಲ್ಲಿ ಅರ್ಷದ್ ಸಾನಿಧ್ಯ ಇದ್ದೇ ಇರುತ್ತಿತ್ತು. ಬಹಳ ಗಮನವಿಟ್ಟು ಹಾಗೂ ಔಟಾಗದ ಹಾಗೆ ಜತನವಿಟ್ಟು ಅಂಗಳದಲ್ಲಿ ಬ್ಯಾಟಿಂಗ್ ಮಾಡಬೇಕು. ಯಾಕಂದ್ರೆ ಕೆಂಡದಂತ ಎಸೆತವನ್ನು ಕೇವಲ ಒಂದೇ ಒಂದು ಪಿಚ್‌ಗೆ ಸೀಮಾರೇಖೆಯ ಹೊರಗಡೆ ಅಟ್ಟಿದರೆ ನಾಲ್ಕು ಅಂಕ. ಒಂದು ವೇಳೆ ಮೈ ಕೈಗೆ ಬಿದ್ದು ಚೆಂಡು ನೇರವಾಗಿ ಬೌಂಡರಿ ಲೈನ್ ದಾಟಿದರೆ ಔಟ್. ಹೀಗೆ ಗಲ್ಲಿ ಕಟ್ ಮಾಡಿ ಚೆಂಡನ್ನ ಸೀಮಾರೇಖೆಯ ಆಚೆಗೆ ಅಟ್ಟೋದು ಅರ್ಷದ್‌ಗೆ ನೀರು ಕುಡಿದಷ್ಟೇ ಸಲೀಸು. ಇದೇ ಕಾರಣಕ್ಕೆ ಅರ್ಷದ್ ಈ ಆಟದಲ್ಲಿ ಪಂಟರ್ ಅಂತ ಗುರುತಿಸಿಕೊಂಡಿದ್ದ.

ಸಮಿತ್‌ನ ಕಳೆದು ಹೋದ ಬೈಕ್ ಹುಡುಕಿ ಕೊಂಡು ಮಿತ್ತು ಹಾಗೂ ಗೆಳೆಯರು ಸುಮಾರು ದಿನ ಅಲೆದಾಡಿದರು. ಆದರೆ ಒಂದೇ ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಹೀಗೆ ಅದೆಷ್ಟೋ ದಿನಗಳು ಬೈಕ್ ಹುಡುಕುತ್ತಲೇ ಕಳೆದು ಹೋಯ್ತು. ಹೀಗೊಂದು ದಿನ ಅರ್ಷದ್ ಒಂದು ಹೊನಲು ಬೆಳಕಿನ ಕ್ರಿಕೆಟ್ ಕೂಟಕ್ಕೆ ಹೊರಡೋಕೆ ಸಿದ್ಧನಾಗಿ ಮನೆ ಪಕ್ಕದ ಕಟ್ಟೆಯಲ್ಲಿ ಕುಳಿತಿದ್ದ. ಇದೇ ವೇಳೆ ಬೈಕ್ ಕಳೆದು ಹೋದ ಬೇಸರದಲ್ಲಿ ಮುಖ ಬಾಡಿಸಿಕೊಂಡು ಸಮಿತ್ ಅಂಬಿಕಾ ಸ್ಟೋರ್ ಕಡೆ ಹೆಜ್ಜೆ ಹಾಕುತ್ತಿದ್ದ.

"ಲೇ ಮಿತ್ತು. ಎಲ್ಲಿಗಾ..? ಬರ್ತಿಯೇನಾ ಕ್ರಿಕೆಟ್ ಆಡ್ಲಿಕ್ಕೆ'' ಹಿಂದಿನಿಂದ ಜೋರಾಗಿ ಕೂಗುತ್ತಾ ಅರ್ಷದ್ ಕೇಳಿದ. ಅರ್ಷದ್ ಕುಳಿತಿದ್ದ ಜಾಗ ಬಿಟ್ಟು ಮುಂದಕ್ಕೆ ನಡೆದು ಹೋದ ಸಮಿತ್ ಅರ್ಷದ್ ಧ್ವನಿ ಕೇಳಿ ಮತ್ತೆ ವಾಪಾಸ್ ಬಂದು ಅರ್ಷದ್ ಪಕ್ಕಕ್ಕೇ ಕುಳಿತ.

"ಇಲ್ಲವಾ.. ಗಾಡಿ ಕಳೆದು ಹೋಗಿ ಇವತ್ತಿಗೆ 10 ದಿನ ಆಯ್ತು ಮಾರ್ರೆ. ಇನ್ನೂ ಗಾಡಿ ಸಿಕ್ಕಿಲ್ಲ. ತಂದೆ ಕೊಟ್ಟಿದ್ದು ನಂಗದು. ಅವರ ನೆನಪು ಅಂತೇಳಿಕ್ಕೆ ಅದೊಂದು ಮಾತ್ರ ಇರೋದು. ಈಗದು ಕಳೆದು ಹೋಗಿದೆ ನೋಡು'' ಎಂದು ಅರ್ಷದ್ ಹೆಗಲಿಗೆ ಕೈ ಇಟ್ಟು ತನ್ನ ಮನದಾಳದ ಬೇಸರ ತೋಡಿಕೊಂಡ.

"ಇರ್ಲಿ ಬಿಡು ಮಾರಾಯ. ಸಿಗ್ತದೆ. ಜಾಸ್ತಿ ತಲೆ ಬಿಸಿ ಮಾಡಿಕೊಳ್ಬೇಡ. ನೀನು ಕ್ರಿಕೆಟ್ ಆಡೋಕೆ ಬರ್ತಿಯಾ ಹೇಳು. ಫ್ಲಡ್ ಲೈಟ್ ಟೂರ್ನಮೆಂಟ್ ಮಚ್ಚಾ'' ಅಂತ ಅರ್ಷದ್ ಬೇಸರದ ಗೋದಾಮಿಗೆ ಬಿದ್ದಿದ್ದ ಸಮಿತ್‌ನನ್ನ ಪುಸಲಾಯಿಸಿದ.

ಅರ್ಷದ್‌ನ ಸಕ್ಕರೆಯಂಥಾ ಮಾತಿಗೆ ಕರಗಿದ ಸಮಿತ್ "ಹಾಗಾದ್ರೆ ಅಶೋಕನ್ನು ಕರ್ಕೊಂಡು ಹೋಗುವ'' ಎಂದೇಳಿ ಅಶೋಕನ ಮನೆ ಕಡೆ ಹೊರಟರು. ರೌಫಾಕನ ಅಂಗಡಿ ಪಕ್ಕದಲ್ಲೇ ಇದ್ದ ಅಶೋಕನ ಮನೆಯ ಹೊರಗಡೆ ನಿಂತು ಶಿಳ್ಳೆ ಹಾಕಿ ಅಶೋಕನಿಗೆ ತಾವು ಬಂದಿರೋ ಸಂದೇಶ ರವಾನಿಸೋ ಕೆಲಸಕ್ಕೆ ಬಿದ್ದರು ಇಬ್ಬರು. ಅಶೋಕನ ಮನೆಗೆ ಏಕಾಏಕಿಯಾಗಿ ಹೊಕ್ಕುವ ಸಾಹಸಕ್ಕೆ ಯಾವತ್ತು ಸಮಿತ್ ಹಾಗೂ ಅರ್ಷದ್ ಕೈ ಹಾಕಲ್ಲ. ಯಾಕಂದ್ರೆ ಯಾವಾಗೆಲ್ಲಾ ಇವರಿಬ್ಬರ ತಲೆ ಅಶೋಕನ ತಾಯಿ ಶೋಭಕ್ಕನಿಗೆ ಕಾಣುತ್ತದೋ ಆಗೆಲ್ಲಾ ಶೋಭಕ್ಕಾ..

"ಬತ್ತರಾ ಬ್ಯಾವರ್ಸಿಲೇ. ಬಲೇ ಬಲೇ.. ಎನ್ನ ಬಾಲೆನ್ ಇನಿ ಒಡೆಗ್ ಲೆತ್ತೊಂದು ಪೋಪಿನಿ ನಿಕುಲು'' (ಬನ್ನಿ ಬೇವರ್ಸಿಗಳ ಬನ್ನಿ. ಇವತ್ತು ನನ್ನ ಮಗನನ್ನ ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀರಾ..?) ಅಂತ ಬೈಗುಳಗಳಿಂದಲೇ ತುಲಾಭಾರ ಮಾಡಿ ಮುಗಿಸುತ್ತಿದ್ದರು. ಹೀಗಾಗಿ ಶೋಭಕ್ಕನ ಕಣ್ಣಿಗೆ ಬೀಳದೆ ಅಶೋಕನ್ನ ಕರೆದುಕೊಂಡು ಹೊಗೋದು ಇವರಿಬ್ಬರ ಸಾಹಸಮಯ ಸಾಧನೆ. ಅಂತೂ ಈಗಲೂ ಶೋಭಕ್ಕನಿಗೆ ಗೊತ್ತಿಲ್ಲದಿರೋ ಹಾಗೆ ಅಶೋಕನನ್ನು ಕರೆದುಕೊಂಡು ಹೊರಟೇ ಬಿಟ್ಟರು.

ಈ ಪಂದ್ಯ ನಡೀತಿರೋದು ಮುಲ್ಕಿ ಬಿಟ್ಟು ಐದಾರು ಕಿ.ಮೀಟರ್ ದೂರದಲ್ಲಿನ ಕನ್ನಂಗಾರ್‌ನಲ್ಲಿ. ವಾರ-ವಾರ ಹೀಗೆ ಹೊನಲು ಬೆಳಕಿನ ಕ್ರಿಕೆಟ್ ನಡೆಯುತ್ತಲೇ ಇರುತ್ತದೆ ಇಲ್ಲಿ. ಇವರು ಹೊರಡುವ ಹೊತ್ತಿಗೆ ಚಂದ್ರ ತನ್ನ ಕಪ್ಪು ಹೊದಿಗೆಯನ್ನ ಆಕಾಶದಲ್ಲಿ ಮೈಗೆಳೆದುಕೊಂಡಿದ್ದ. ಗಂಟೆ ಸುಮಾರು 8. ಅರ್ಷದ್ ಆಡೋದು ಮುಲ್ಕಿಯ ಹೆಸರಾಂತ ಕ್ರಿಕೆಟ್ ತಂಡ ಎಹೆಚ್ ಕ್ರಿಕೆಟರ್ಸ್ ಪರವಾಗಿ. ಅಲ್ಲೆಲ್ಲರೂ ಅರ್ಷದ್ ಬರುವಿಕೆಗಾಗಿ ಕಾದು ಕುಳಿತಿದ್ದರು.

ಸ್ಚಲ್ಪ ತಡವಾಗಿಯಾದರೂ ಅರ್ಷದ್ ತಂಡ ಸೇರಿಕೊಂಡ. ಮತ್ತೆ ಅಲ್ಲಿ ನಡೆದಿದ್ದು ಚೆಂಡು ದಾಂಡಿನ ಸಮರ. ಹಾಗೋ ಹೀಗೋ ಎದುರಾಳಿ ತಂಡವನ್ನು ಮಣ್ಣು ಮುಕ್ಕಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿತು ಎಹೆಚ್ ಕ್ರಿಕೆಟರ್ಸ್. ಈ ಎಹೆಚ್ ತಂಡದ ಮಾಲೀಕ ಶಮೀರ್. ಶಮೀರ್ ಮೊದಲ ಸುತ್ತಿನ ಪಂದ್ಯ ಮುಗಿಯುತ್ತಿದ್ದಂತೆ ತಂಡದ ಆಟಗಾಗರಿಗೆ ಜಾಫ್ಫಾ ಕೂಲ್ ಡ್ರಿಂಕ್ಸ್ ತಂದು ಕೊಟ್ಟು..

"ಶಬ್ಬಾಸ್.. ಶಬ್ಬಾಸ್.. ಮೂರನೇ ಓವರ್‌ನಲ್ಲಿ ನಾವು ಒಂದು ಫೋರ್ ಹೆಚ್ಚು ಹೊಡೀತಿದ್ರೆ ಬೇಗ ಗೆಲ್ಬಹುದಿತ್ತು ಅಲ್ವಾ ನಾಸಿರ್'' ಅಂತ ಮೊದಲ ಪಂದ್ಯ ಕುರಿತ ಚರ್ಚೆಗೆ ಆರಂಭ ನೀಡಿದರು. ಎರಡನೇ ಸುತ್ತಿನ ಪಂದ್ಯ ಬರೋವರೆಗೂ ಇಲ್ಲಿ ಮೊದಲ ಸುತ್ತಿನ ಮಾತು, ಕತೆ ಹರಟೆ ಮುಗಿದೇ ಇರ್ಲಿಲ್ಲ.

ಈ ಮಧ್ಯೆ ಬೇಸರದಿಂದ ಸಮಿತ್ ಎದ್ದು ಹೊರಟೇ ಬಿಟ್ಟ. ಇನ್ನೇನು ಮನೆಗೆ ಹೊರಟೇ ಹೊಗೋಣ ಅನ್ನೋಷ್ಟರಲ್ಲಿ ಹಿಂದಿನಿಂದ ಅಶೋಕ್ ಹಾಗೂ ಅರ್ಷದ್ ಬಂದು ಸಮಿತ್‌ನನ್ನು ತಡೆದರು. ಬೇಸರ ಮಾಡಿ ಏನು ಪ್ರಯೋಜನ ಇಲ್ಲ ಅನ್ನೋ ರೀತಿಯಲ್ಲಿ ಪಾಠ ಮಾಡಿ ಸಮಿತ್‌ನ ನೋವಿನಲ್ಲಿ ಭಾಗಿಯಾಗೋದಕ್ಕೆ ಮುಂದಾದರು.

ಬೈಕ್ ನಿಂತಿರೋದು ಗಮನಕ್ಕೆ ಬಂತು

ಇನ್ನೇನು ಎರಡನೇ ಸುತ್ತಿನ ಪಂದ್ಯಕ್ಕಾಗಿ ವೀಕ್ಷಣೆ ವಿವರಣೆಯಲ್ಲಿ ಕರೆ ಕೊಡುತ್ತಲೇ ಇರುವ ಹೊತ್ತಿಗೆ ಇತ್ತ ಅರ್ಷದ್ ಕಣ್ಣಿಗೆ ಅಲ್ಲೊಂದು ಮೂಲೆಯಲ್ಲಿ ಒಂದು ಬೈಕ್ ನಿಂತಿರೋದು ಗಮನಕ್ಕೆ ಬಂತು. ಅಷ್ಟರಲ್ಲೇ ಅರ್ಷದ್ ಅಶೋಕನಿಗೂ ಬರುವಂತೆ ಜೋರಾಗಿ ಕೂಗಿ, ಸಮಿತ್‌ನ ಕೈ ಹಿಡಿದು ಎಳೆದು ಬೈಕ್ ಸಮೀಪಕ್ಕೆ ಹೆಜ್ಜೆ ಹಾಕಿದ. ಹತ್ತಿರ ಬಂದು ನೋಡುವಾಗ ಇದು ಕಳೆದು ಹೋದ ಸಮಿತ್‌ನ ಬೈಕು.

ಕೋಟಿ ಕೋಟಿ ಗಟ್ಟಲೆ ಹಣ ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ತನ್ನ ಹಣವೆಲ್ಲಾ ವಾಪಾಸ್ ಆದ ಖುಷಿಗಿಂತ ಏನು ಕಡಿಮೆ ಇರ್ಲಿಲ್ಲ ಸಮಿತ್ ಖುಷಿಗೆ. ಬೈಕು ವಾಪಾಸು ಸಿಕ್ಕಿದ ಖುಷಿಯಲ್ಲಿ ಗಾಡಿಯನ್ನ ಅಲ್ಲಿಂದ ಕೊಂಡೊಯ್ಯುವ ತೀರ್ಮಾನಕ್ಕೆ ಬಂದರು. ಅಷ್ಟೊತ್ತಿಗೆ ಅಜಾನುಬಾಹು ಜೀವದ ವ್ಯಕ್ತಿಯೊಬ್ಬರು ಅಲ್ಲಿಗೆ ದಾಂಗುಡಿ ಇಟ್ಟರು.

"ಹೂ.. ಎಂಥಾ.. ಎಂಥ ಬೇಕು..?'' ಜೋರು ಧ್ವನಿಯಲ್ಲೇ ಆ ವ್ಯಕ್ತಿ ಕೇಳಿದ. ಇದಕ್ಕೆ ಅಶೋಕ್ "ಇದು ಮಿತ್ತುವಿನ ಬೈಕ್. ಮೊನ್ನೆ ಅಲ್ಲಿ ಕಳೆದು ಹೋಗಿತ್ತು.. ನಿಮಗೆಲ್ಲಿಂದ ಸಿಕ್ಕಿತು..? ಅನ್ನೋ ಪ್ರಶ್ನೆಯನ್ನ ಆ ಆಜಾನುಬಾಹು ವ್ಯಕ್ತಿಗೆ ಹಾಕಿದ.

"ಎಂಥ ಕರ್ಮಸ ಇಲ್ಲ. ಇದು ನನ್ನ ಬೈಕ್..? ತುಂಬಾ ಹಿಂದೆ ನನ್ನ ಕೈಯಿಂದ ಕಳೆದು ಹೋಗಿತ್ತು..?'' ಎಂದ ಅಜಾನುಬಾಹು ಮಾತಿಗೆ ಮಂಜು ಕೆಂಡಾಮಂಡಲವಾದ. ಕ್ರಿಕೆಟ್ ರಣ ಕಣವಾಗಿದ್ದ ಆ ಮೈದಾನ ನೋಡ ನೋಡುತ್ತಲೇ ಅಜಾನುಬಾಹು ವರ್ಸಸ್ ಸಮಿತ್ ಗೆಳೆಯರು ಹೊಡೆದಾಟಕ್ಕೆ ಸಾಕ್ಷಿಯಾಯ್ತು.

ಆ ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಜಗಳ ತಣ್ಣಗಾಯ್ತು. ಒಂದೆರಡು ದಿನ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋದು ಸಮಿತ್ ಗೆಳೆಯರ ಕೆಲಸವಾಗಿತ್ತು. ಈ ನಡುವೆ ಸಮಿತ್ ಮತ್ತು ಗೆಳೆಯರು ಮಾಡಿದ ರಂಪಾಟ ಇಡೀ ಊರಿಗೇ ಗೊತ್ತಾಗಿ ಬಿಟ್ಟಿತ್ತು. ಈ ವೇಳೆ ವಾಸ್ತವದಲ್ಲಿ ಈ ಬೈಕ್ ಯಾರದ್ದು ಅನ್ನೋ ಪ್ರಶ್ನೆ ಇಡೀ ಊರಿನವರದಾಗಿತ್ತು. ಪೊಲೀಸರ ತನಿಖೆಯ ಬಳಿಕ ಆ ಸತ್ಯವೂ ಹೊರಗೆ ಬಂತು.

ಆದ್ರೆ ಸಮಿತ್‌ಗೆ ಇದು ನನ್ನ ಬೈಕ್. ನನ್ನ ತಂದೆ ಕೊಡಿಸಿದ್ದು ಅನ್ನೋ ಬಲವಾದ ನಂಬಿಕೆ ಇತ್ತು. ಇದೇ ರೀತಿ ಅತ್ತ ಆ ಅಜಾನುಬಾಹು ವ್ಯಕ್ತಿಗೂ ಇದು ನನ್ನ ಬೈಕ್ ನಾನು ಯಾಕೆ ಭಯ ಪಡಲಿ ಅನ್ನೋ ಹಾವಭಾವವೇ ಇತ್ತು. ಆದರೆ ವಾಸ್ತವದಲ್ಲಿ ಇದು ಯಾರ ಬೈಕ್ ಅನ್ನೋ ಪ್ರಶ್ನೆ ಎಲ್ಲರದ್ದೂ ಆಗಿತ್ತು. ಅಂತೆಯೇ ಪೊಲೀಸ್ ಸಾಹೇಬ್ರು ಇಬ್ಬರು ಬೈಕ್ ಮಾಲೀಕರನ್ನು ಕರೆದು ಕೂರಿಸಿ ಸಂಧಾನಕ್ಕೆ ಪ್ರಯತ್ನ ಪಡುವ ವೇಳೆ ಸಮಿತ್ ನಿಜಕ್ಕೂ ಬೆಚ್ಚಿ ಬಿದ್ದು ಹೋಗಿದ್ದ.

ವಾಸ್ತವದಲ್ಲಿ ಈ ಬೈಕು ಆ ಅಜಾನುಬಾಹು ವ್ಯಕ್ತಿಯದ್ದೇ ಆಗಿತ್ತು. ಆದ್ರೆ ಸುಮಾರು ವರ್ಷಗಳ ಹಿಂದೆ ಈ ಬೈಕು ಕಳ್ಳತನವಾಗಿದ್ದು. ಅದೇ ಸಮಯದಲ್ಲಿ ಈ ಬೈಕ್ ಕಾಣೆಯಾಗಿರೋದ್ರ ಬಗ್ಗೆ ಇದೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಆದ್ರೆ ಇದು ಮಂಜನ ಕೈಗೆ ಹೇಗೆ ಬಂತು ಅನ್ನೋದು ಮತ್ತೊಂದು ಪ್ರಶ್ನೆಯೇ ಆಗಿತ್ತು.

ಸತ್ಯ ಅರಿವಾದಾಗ..,
ನಾನು ಮೊದಲೇ ಹೇಳಿದ್ದೇ ಸಮಿತ್ ತೀರಾ ಹಠಮಾರಿ. ಶಾಲೆಗೆ ಹೋಗಬೇಕು ಎಂದರೆ ಬೈಕ್ ಕೊಡಿಸಿ ಅನ್ನೋ ಹಠಕ್ಕೆ ಮನೆಯಲ್ಲಿ ಬಿದ್ದಿದ್ದ. ಇದಕ್ಕೆ ಮಣಿದ ಸಮಿತ್‌ನ ತಂದೆ ಯಾರೋ ಕದ್ದ ಬೈಕನ್ನು ಕಡಿಮೆ ಬೆಲೆಗೆ ಖರೀದಿಸಿ ಮನೆಗೆ ತಂದಿದ್ದರು.

ವಾಸ್ತವದಲ್ಲಿ ಆ ಬೈಕಿಗೆ ಯಾವ ಪತ್ರಗಳೂ ಆಧಾರಗಳೂ ಕಾನೂನು ಸಹಿತವಾಗಿ ಇರಲಿಲ್ಲ. ಇದು ಮೊನ್ನೆ ಮುಲ್ಕಿಯ ಬಸ್ಟ್ಯಾಂಡ್ ಹಿಂಬದಿ ನಿಂತಿರೋದನ್ನ ಕಂಡು ಬೈಕಿನ ನಿಜವಾದ ಮಾಲೀಕ ಗಾಡಿಯನ್ನ ಕೊಂಡೊಯ್ದಿದ್ದಾನೆ ಅಷ್ಟೇ. ಅಲ್ಲದೇ ಆ ಬೈಕಿನ ಎಲ್ಲಾ ದಾಖಲಾತಿ ಪತ್ರಗಳು ಕೂಡ ಆ ಅಜಾನುಬಾಹು ವ್ಯಕ್ತಿಯ ಕೈಯಲ್ಲಿತ್ತು. ಈ ಎಲ್ಲಾ ವಿಚಾರಗಳು ಸಮಿತ್‌ಗೆ ಸಿಡಿಲು ಬಡಿದಂತೆ ಭಾಸವಾಗಿತ್ತು.

ತಂದೆ ಎಷ್ಟು ಕಷ್ಟ ಪಟ್ಟು ನನ್ನ ಆಸೆಗಳನ್ನ ಪೂರೈಸುತ್ತಿದ್ದರು ಅನ್ನೋ ನೋವು ಸಮಿತ್‌ವನ್ನ ಮೆಲ್ಲನೆ ಆವರಸಿತೊಡಗಿತು. ಕಣ್ಣಂಚಲಿ ನೀರು ಮಿಟುಕೋದಕ್ಕೆ ಶುರುವಾಯ್ತು. ಈಗ ತಂದೆಯನ್ನು ಕಳೆದುಕೊಂಡು ಕೆಲ ವರ್ಷಗಳೇ ಆಗಿವೆ. ತಂದೆ ಇಲ್ಲದ ನೋವು ನಿಜಕ್ಕೂ ಸಮಿತ್‌ಗೆ ಕಾಡಿದ್ದು ಆ ಕ್ಷಣದಿಂದ. ಅಳುತ್ತಾ.. ಕಣ್ಣೊರೆಸುತ್ತಾ ಸಮಿತ್.. "ದಯವಿಟ್ಟು ಕ್ಷಮಿಸಿ ಸರ್'' ಎನ್ನುತ್ತಲೇ ಕೈ ಮುಗಿದು ಅರ್ಷದ್ ಹಾಗೂ ಅಶೋಕ್ ಹೆಗಲೊರಗಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ.

ಅತ್ತ ಮನೆ ಮುಂದೆ ಸಮಿತ್‌ನ ಬರುವಿಕೆಗಾಗಿ ತಾಯಿ ಕಾದು ನಿಂತಿದ್ದಳು. ಹೀಗೆ ಬಂದವನೇ ನೇರವಾಗಿ ತಾಯಿಯನ್ನ ಅಪ್ಪಿಕೊಂಡು ಜೋರಾಗಿ ಅತ್ತು ತಂದೆಯ ನೆನಪುಗಳನ್ನ ಹಾಗೂ ತಂದೆಯ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡೋಕ್ಕೆ ಶುರುಮಾಡಿದ. ಇನ್ನೇನು ಒಂದೆರಡು ದಿನಕ್ಕೆ ಸಮಿತ್‌ನ ತಂದೆಯ ಪುಣ್ಯ ತಿಥಿಯೂ ಹತ್ತಿರವಾಗಿತ್ತು.

English summary
Here we presenting the heart touching father and son short story KA 19 BY Ashiq Mulki. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X