Siddaramaiah: ಇದು ಕನಸು ಬಿತ್ತುವ ಕಾಲವಲ್ಲ, ಕನಸು ಮಾರುವ ಕಾಲ ಮಹಾನಿರ್ಗಮನ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪ್ರಭಾವಿ ಹಾಗೂ ಅಹಿಂದ ಸಮುದಾಯದ ಪ್ರಮುಖ ರಾಜಕೀಯ ಮುತ್ಸದ್ದಿ ಸೌಹಾರ್ದದಿಂದಲೇ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ. ಇನ್ನು ಆಡಳಿತ ಹಾಗೂ ಆಲೋಚನೆ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಚಿಂತನಾ ಲಹರಿಯೇ ಬೇರೆ ಇದೆ. ಈ ಬಗ್ಗೆ "ಇದು ಕನಸು ಬಿತ್ತುವ ಕಾಲವಲ್ಲ, ಕನಸು ಮಾರುವ ಕಾಲ ಮಹಾನಿರ್ಗಮನ" - ಹವ್ಯಾಸಿ ಬರಹಗಾರ ಶ್ರೀನಿವಾಸ ಮಠ ಅವರ ಬರಹ ಇಲ್ಲಿದೆ.

ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯ ಯುಗ ಇಲ್ಲಿಗೆ ಅಲ್ಪವಿರಾಮ ಪಡೆದುಕೊಂಡಿದೆ. ಇದು ಡಿಕೆ ಶಿವಕುಮಾರ್ ಕಾಲ. ಎರಡು ಭಿನ್ನ ಚಿತ್ರಗಳು, ಎರಡು ಭಿನ್ನ ವ್ಯಕ್ತಿತ್ವ, ಎರಡು ಭಿನ್ನ ನಾಯಕತ್ವ - ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೀಗೆ ಒಂದು ಪಕ್ಷ ಎಂಬುದು ಬಿಟ್ಟರೆ ಹೇಳಿಕೊಳ್ಳುವಂಥ ಗುಣ ಸಾಮ್ಯತೆಗಳಿಲ್ಲದ ನಾಯಕರು. ಸೈದ್ಧಾಂತಿಕ ಗಟ್ಟಿತನದ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯ ಅವರು ಅದೆಷ್ಟೋ ಹೆಜ್ಜೆ ಮುಂದೆ ನಿಲ್ಲುತ್ತಾರೆ. ಆದರೆ, ಡಿ.ಕೆ ಶಿವಕುಮಾರ್ ಕನಸುಗಳನ್ನು ಕಾಣುತ್ತಾ, ಅದರ ಸಾಕಾರಕ್ಕಾಗಿ ಕೈ- ಕಾಲು, ಮಂಡಿಗೆಲ್ಲ ಗಾಯ ಮಾಡಿಕೊಳ್ಳುತ್ತಾ ಗುರಿಯತ್ತ ಸಾಗುವ ಮಾಡರ್ನ್ ರಾಜಕಾರಣಿ. ಈ ಎರಡೂ ಚಿತ್ರಗಳನ್ನು ಒಂದು ಫ್ರೇಮಿನಲ್ಲಿ ಕೂರಿಸುವುದು ಸಾಧ್ಯವೇ ಇಲ್ಲ. ಏರ್ ಪೋರ್ಟ್, ಸ್ಮಾರ್ಟ್ ಸಿಟಿ, ಡಿಜಿಟಲ್ ಆಡಳಿತ ಹೀಗೆ ಆಲೋಚಿಸುವ ಶಿವಕುಮಾರ್‌ ಅವರಿಗೂ ಅನ್ನಭಾಗ್ಯದಂಥ ಯೋಜನೆ, ಅಹಿಂದ ವರ್ಗದ ಪರ ಆಲೋಚನೆ ಮಾಡುವ ಸಿದ್ದರಾಮಯ್ಯಗೂ ನಯಾಪೈಸೆ ಹೋಲಿಕೆ ಆಗಲ್ಲ. ಒಂದು ರೂರಲ್ ಫೇಸ್- ಮತ್ತೊಂದು ಅರ್ಬನ್ ಫೇಸ್.

ಡಿ.ಕೆ ಶಿವಕುಮಾರ್ ವ್ಯಕ್ತಿತ್ವದಲ್ಲಿ ಮೂಲದಲ್ಲಿಯೇ ಕಾಂಗ್ರೆಸ್ ಸೈದ್ಧಾಂತಿಕ ಸ್ವಾದ ಕಾಣುವುದಿಲ್ಲ. ಇನ್ನು ಮುಂದೆ ಕರ್ನಾಟಕದಲ್ಲಿ ಪದೇಪದೇ 'ಸಾಫ್ಟ್ ಹಿಂದುತ್ವ' ಎಂಬ ಪದ ಕೇಳಿಬರುತ್ತಲೇ ಇರುತ್ತದೆ. ಕರ್ನಾಟಕ ಕಾಂಗ್ರೆಸ್ ಎಂಬುದು ಬೇರೆಯಾಗಿಯೇ ಕಾಣಿಸಿಕೊಳ್ಳುತ್ತದೆ. ವೈಚಾರಿಕವಾಗಿ ಸಿದ್ದರಾಮಯ್ಯ ಬೇರೆ, ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ಉಳಿದ ನಾಯಕರು ಬೇರೆ. ಈಗ ಮುಖ್ಯಮಂತ್ರಿ ಆಗುತ್ತಿರುವ ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಭಾಷಣಗಳನ್ನು ಮಾಡುವಾಗ ಪದೇಪದೇ ಪುನರಾವರ್ತಿಸುವ ಅವೇ ಪಂಚ್ ಡೈಲಾಗ್ ಗಳು, ಅವೇ ಆಲೋಚನಾ ಲಹರಿ ಇವೆಲ್ಲ ಬೇಕೆಂತಲೆ ರೂಢಿಸಿಕೊಂಡ ಟೆಂಪ್ಲೇಟ್ ನಂತೆ ಕಾಣುತ್ತವೆ. ಈ ಗುಣ ದೊಡ್ಡ ಸಂಖ್ಯೆಯಲ್ಲಿನ ಜನರಿಗೆ ಇಷ್ಟವೂ ಆಗುವಂತೆ ಕಾಣುತ್ತದೆ. ವಿಧಾನಸೌಧದಲ್ಲಿ ನಮಸ್ತೆ ಸದಾ ವತ್ಸಲೆ ಹೇಳುವ ಹಾಗೂ ಸದ್ಗುರು ಜಗ್ಗಿ ವಾಸುದೇವ್ ಆಯೋಜಿಸುವ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿವಕುಮಾರ್ ಅವರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಅದಾಗಲೇ ಸಿಟ್ಟು ಕಾಣಿಸುತ್ತಾ ಇದೆ.

Siddaramaiah

ಹೌದು, ಸಹಜವೂ ಹೌದು. ಪದೇ ಪದೇ "ಇನ್ನು ಐದು ವರ್ಷ ನಾನೇ ಸಿಎಂ, ನಾನೇ ಸಿಎಂ" ಎಂದು ಸಿದ್ದರಾಮಯ್ಯ ಹೇಳದಿದ್ದರೆ ಚೆನ್ನಾಗಿರುತ್ತಿತ್ತು. ಆ ಮೇಲೆ ವರಸೆ ಬದಲಾಯಿತಲ್ಲಾ, ಹೈಕಮಾಂಡ್ ಏನು ಹೇಳುತ್ತೋ ಆಗ ಕೇಳ್ತೀನಿ ಅಂತ. ಅಲ್ಲಿಗೆ ಇದು ಐದು ವರ್ಷ ಬಾಳಿಕೆ ಬರುವ ಸರ್ಕಾರವಲ್ಲ ಎಂಬುದು ಜಗಜ್ಜಾಹೀರಾಗಿತ್ತು. ರಾಜಕೀಯ ಅಧಿಕಾರ ಹಂಚಿಕೆಯ ಒಪ್ಪಂದದ ಭಾಗವಾಗಿ ಈಗ ಸಿದ್ದರಾಮಯ್ಯ ಅವರ ಕಾಲಘಟ್ಟ ಮುಕ್ತಾಯವಾಗಿ, ಡಿ.ಕೆ. ಶಿವಕುಮಾರ್ ಪೀಠಕ್ಕೇರುತ್ತಿದ್ದಾರೆ. ಆದರೆ ಈ "ಮಹಾನಿರ್ಗಮನ" ಕೇವಲ ಒಬ್ಬ ವ್ಯಕ್ತಿಯ ನಿರ್ಗಮನವಲ್ಲ; ಇದು ಕರ್ನಾಟಕ ಕಾಂಗ್ರೆಸ್ಸಿಗಿದ್ದ ಸೋಷಿಯಲಿಸ್ಟ್ ಮತ್ತು ಅಹಿಂದ ಸಿದ್ಧಾಂತದ ಬದ್ಧತೆಯ ನಿರ್ಗಮನವೂ ಹೌದು.

ಅಲ್ಲಿಗೆ ಇದು ಐದು ವರ್ಷ ಬಾಳಿಕೆ ಬರುವ ಅಖಂಡ ಸಾಮ್ರಾಜ್ಯವಲ್ಲ, ಬದಲಿಗೆ ಕೇವಲ ಒಪ್ಪಂದದ ಮೇಲೊಡ್ಡಿದ ತಾತ್ಕಾಲಿಕ ತೇಪೆ ಎಂಬುದು ಸ್ಪಷ್ಟವಾಗಿತ್ತು. ಸಿದ್ದರಾಮಯ್ಯ ಅವರು ಅಸಹಾಯಕರಾಗಿ ಅಧಿಕಾರ ಬಿಟ್ಟುಕೊಡಬೇಕಾಗಿ ಬಂದ ಈ ನಡೆ, ಅವರ ಬೆಂಬಲಕ್ಕಿದ್ದ ಶೋಷಿತ ವರ್ಗಗಳಲ್ಲಿ ಒಂದು ರೀತಿಯ ನಿರಾಸೆ ಮೂಡಿಸಿದೆ. ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ ನಿಜ, ಆದರೆ ಈ ಮೌನದ ಹಿಂದೆ ದೊಡ್ಡದೊಂದು ರಾಜಕೀಯ ಬಿರುಗಾಳಿ ಅಡಗಿದೆ. "ನಾನೇ ಸಿಎಂ" ಎಂಬ ಹಠದಿಂದ "ಹೈಕಮಾಂಡ್ ನಿರ್ಧಾರಕ್ಕೆ ಬದ್ಧ" ಎನ್ನುವವರೆಗಿನ ಸಿದ್ದರಾಮಯ್ಯ ಅವರ ವರಸೆ ಬದಲಾವಣೆ, ಕಾಂಗ್ರೆಸ್ ಒಳಗಿನ ಆಂತರಿಕ ಸಂಘರ್ಷ ಮತ್ತು ಅನಿವಾರ್ಯತೆಗೆ ಸಾಕ್ಷಿ.

ಈಗ ಪ್ರಶ್ನೆ ಇರುವುದು ಡಿಕೆ ಶಿವಕುಮಾರ್ ಅವರ ಮುಂದಿನ ಹಾದಿಯ ಬಗ್ಗೆ. ಸಿದ್ದರಾಮಯ್ಯ ಅವರ ಸಮಾಜವಾದಿ ಹೆಜ್ಜೆಯ ಗುರುತುಗಳ ಮೇಲೆ ಡಿ.ಕೆ. ಶಿವಕುಮಾರ್ ಅವರಿಗೆ ನಡೆಯಲು ಸಾಧ್ಯವೇ ಇಲ್ಲ. ಏಕೆಂದರೆ ಇಬ್ಬರ ದಾರಿಯೂ ಬೇರೆ, ಗುರಿಯೂ ಬೇರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್‌ನ ಒಟ್ಟಾರೆ ಸ್ವರೂಪವೇ ಬದಲಾಗಲಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಿದ್ದ ಬಡವರ, ದಲಿತರ, ಹಿಂದುಳಿದವರ ಪರವಾದ 'ಅಹಿಂದ' ಸಿದ್ದಾಂತದ ತೀವ್ರತೆ ಇನ್ನು ಮುಂದೆ ಕಣ್ಮರೆಯಾಗಬಹುದು. ಅದರ ಜಾಗದಲ್ಲಿ, ಉದ್ಯಮ ಸ್ನೇಹಿ ನೀತಿಗಳು, ಬೆಂಗಳೂರು ಕೇಂದ್ರೀಕೃತ ಅಭಿವೃದ್ಧಿ ಮಾದರಿ ಮತ್ತು ತಾಂತ್ರಿಕ ಆಡಳಿತ ಮುಂಚೂಣಿಗೆ ಬರಲಿವೆ.

ಇನ್ನೊಂದೆಡೆ, ಸಾಫ್ಟ್ ಹಿಂದುತ್ವದ ಹಣೆಪಟ್ಟಿ ಡಿ.ಕೆ. ಶಿವಕುಮಾರ್ ಅವರ ರಾಜಕಾರಣದ ಅನಿವಾರ್ಯ ಭಾಗವಾಗಲಿದೆ. ದೇವಸ್ಥಾನಗಳ ದರ್ಶನ, ಜ್ಯೋತಿಷ್ಯ-ಹೋಮ ಹವನಗಳ ಮೇಲಿನ ನಂಬಿಕೆ, ಮಠಾಧೀಶರೊಂದಿಗಿನ ನಿಕಟ ಬಾಂಧವ್ಯ-ಇವೆಲ್ಲವೂ ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್‌ಗೆ ಹತ್ತಿರ ಆಗುವ ಶಿವಕುಮಾರ್ ನಡೆಗಳು. ಆದರೆ ಇದೇ ನಡೆ ಸೋಷಿಯಲ್ ಮೀಡಿಯಾದಲ್ಲಿರುವ ಕಾಂಗ್ರೆಸ್‌ನ ಸಾಂಪ್ರದಾಯಿಕ ಎಡಪಂಥೀಯ ಮತ್ತು ಸೆಕ್ಯುಲರ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. 'ವಿಧಾನಸೌಧದಲ್ಲಿ ನಮಸ್ತೆ ಸದಾ ವತ್ಸಲೆ' ಎನ್ನುವ ಮುಖ್ಯಮಂತ್ರಿಯನ್ನು ಒಪ್ಪಿಕೊಳ್ಳುವುದು ಸಿದ್ದರಾಮಯ್ಯ ಅವರ ಸಿದ್ಧಾಂತವನ್ನು ಉಸಿರಾಡಿದ ಕಾರ್ಯಕರ್ತರಿಗೆ ಅಷ್ಟು ಸುಲಭವಲ್ಲ.

ಸಿದ್ದರಾಮಯ್ಯ ಯುಗದ ಮುಕ್ತಾಯವು ಕರ್ನಾಟಕ ರಾಜಕಾರಣದಲ್ಲಿ ಸಮಾಜವಾದಿ ಪರ್ವವೊಂದರ 'ಅಲ್ಪವಿರಾಮ' ಹೌದು. ಆದರೆ ಕೇವಲ ಪಂಚ್ ಡೈಲಾಗ್‌ಗಳು ಮತ್ತು ಟೆಂಪ್ಲೇಟ್ ಭಾಷಣಗಳ ಮೂಲಕವೇ ಜನರನ್ನು ಆಕರ್ಷಿಸುವ ಡಿಕೆ ಶಿವಕುಮಾರ್ ಅವರಿಗೆ ಇದು ಸವಾಲು. ಸಿದ್ದರಾಮಯ್ಯ ಅವರ ಸೈದ್ಧಾಂತಿಕ ನೆರಳಿನಿಂದ ಹೊರಬಂದು, ತನ್ನದೇ ಆದ ಸ್ವತಂತ್ರ ಮುಖದೊಂದಿಗೆ ಸರ್ಕಾರವನ್ನು ಮುನ್ನಡೆಸುವುದು ಶಿವಕುಮಾರ್ ಅವರಿಗೆ ಸುಲಭದ ಮಾತಲ್ಲ. ಸಿದ್ದರಾಮಯ್ಯ ಅವರ ಜನಪ್ರಿಯ ಯೋಜನೆಗಳ ಗ್ಯಾರಂಟಿಗಳನ್ನು ಮುಂದುವರಿಸುತ್ತಲೇ, ತಮ್ಮದೇ ಆದ 'ಬ್ರ್ಯಾಂಡ್ ಬೆಂಗಳೂರು' ಅಥವಾ 'ಮಾಡರ್ನ್ ಕರ್ನಾಟಕ'ದ ಕನಸನ್ನು ಸಾಕಾರಗೊಳಿಸಬೇಕಾದ ದ್ವಂದ್ವ ಅವರ ಮುಂದಿದೆ.

ಕೊನೆಯದಾಗಿ ಹೇಳಬೇಕೆಂದರೆ, ಸಿದ್ದರಾಮಯ್ಯ ಅವರ ಈ 'ಮಹಾನಿರ್ಗಮನ' ಕರ್ನಾಟಕ ಕಾಂಗ್ರೆಸ್ ಅನ್ನು ಹೊಸತೊಂದು ಪ್ರಯೋಗಕ್ಕೆ ತಳ್ಳಿದೆ. ಸಿದ್ಧಾಂತದ ಹಸಿವಿಗಿಂತ, ಆಧುನಿಕತೆಯ ತಾಂತ್ರಿಕ ಯಶಸ್ಸು ಮುಖ್ಯ ಎಂದು ನಂಬಿರುವ ಡಿಕೆ ಶಿವಕುಮಾರ್ ಅವರ ಈ ಹೊಸ ಇನಿಂಗ್ಸ್ ಯಶಸ್ವಿಯಾಗುತ್ತದೋ ಅಥವಾ ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಶೂನ್ಯತೆ ಪಕ್ಷವನ್ನು ಕಾಡುತ್ತದೋ ಎಂಬುದನ್ನು ಭವಿಷ್ಯವೇ ನಿರ್ಧರಿಸಬೇಕು. ಸದ್ಯಕ್ಕಂತೂ ಕರ್ನಾಟಕ ರಾಜಕಾರಣದಲ್ಲಿ ಹೊಸ ದೊರೆಯ ಪಟ್ಟಾಭಿಷೇಕದೊಂದಿಗೆ ಹಳೇ ಸಿದ್ಧಾಂತಕ್ಕೆ ತೆರೆ ಬಿದ್ದಿದೆ!

ಡಿಕೆ ಶಿವಕುಮಾರ್ ಅವರೀಗ ಕರ್ನಾಟಕದ ಮುಖ್ಯಮಂತ್ರಿ ಆಗ್ತಾರೆ. ಅವರ ಕನಸಿನ ಕಂಗಳಲ್ಲಿ ಇಡೀ ರಾಮನಗರ ಜಿಲ್ಲೆ, ಬೆಂಗಳೂರು ಹೇಗೆ ಅರಳಬಹುದೋ ಅಥವಾ ಹೇಗೆ ಮೆರೆಯಬಹುದೋ ನೋಡಬೇಕು.

ಬರಹ: ಶ್ರೀನಿವಾಸ ಮಠ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+