ಗಡಿಜಿಲ್ಲೆ ಚಾಮರಾಜನಗರದ 189 ಹಳ್ಳಿ ಇತಿಹಾಸ ಬರೆದ ಗ್ರಾಮ ಲೆಕ್ಕಿಗ
ಚಾಮರಾಜನಗರ, ಅಕ್ಟೋಬರ್ 11: ಸರ್ಕಾರಿ ನೌಕರಿ ಅಂದ್ರೆ ಗಂಟೆ ಹೊಡಿ ಸಂಬಳ ತಗೋ ಎಂಬ ಮಾತಿಗೆ ಅಪವಾದವಾಗಿ ತನ್ನೂರು ಬಿಟ್ಟು ನೂರಾರು ಕಿಮೀ ಬಂದು ನೆಲೆಸಿರುವ ಈ ಗ್ರಾಮ ಲೆಕ್ಕಿಗ ಚರಿತ್ರೆ ಬರೆಯುವ ಸಾಹಸದಲ್ಲಿ ತೊಡಗಿದ್ದು ಅದರಲ್ಲೂ ಯಶಸ್ವಿಯೂ ಆಗುತ್ತಿದ್ದಾರೆ.
ಬಳ್ಳಾರಿಯಿಂದ ವಿಭಜನೆಗೊಂಡು ಈಗ ವಿಜಯನಗರ ಜಿಲ್ಲೆಗೆ ಒಳಪಟ್ಟ ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ 6 ತಾಸು ಕೆಲಸವಷ್ಟೇ ಎಂಬ ಮನಸ್ಥಿತಿ ಹೊರಬಿಟ್ಟು ಚಾಮರಾಜನಗರ ತಾಲೂಕಿನ ಪ್ರತಿ ಹಳ್ಳಿಗಳ ಇತಿಹಾಸ ಹೇಳಲು ಮುಂದಾಗಿದ್ದಾರೆ.
ಹನೂರು: ಶವ ಹೂಳಲು ಸ್ಮಶಾನವಿಲ್ಲದೆ ಜಮೀನು ಮಾಲೀಕರಿಗೆ ಅಂಗಲಾಚಿದ ಕುಟುಂಬ
'ಚಾಮರಾಜನಗರ ದರ್ಶನಂ' ನಲ್ಲಿ 189 ಹಳ್ಳಿಗಳ ಚರಿತ್ರೆ
ಚಾಮರಾಜನಗರ ತಾಲೂಕಿನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಶ್ರೀಧರ್ ಮುಂದಾಗಿದ್ದು, ಈ ಕೃತಿಗೆ 'ಚಾಮರಾಜನಗರ ದರ್ಶನಂ' ಎಂದು ಹೆಸರಿಟ್ಟಿದ್ದಾರೆ. ಸಂಪೂರ್ಣ ಮಾಹಿತಿಯುಳ್ಳ ಪುಸ್ತಕ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಪ್ರತಿ ಊರಿಗೆ ಭೇಟಿ ಕೊಡುವ ಶ್ರೀಧರ್ ಆ ಊರಿಗೆ ಹೆಸರು ಏಕೆ ಬಂತು, ಈ ಹಿಂದಿನ ಹೆಸರು ಏನಾಗಿತ್ತು. ಗ್ರಾಮದಲ್ಲಿ ಸಿಗುವ ಶಾಸನಗಳಲ್ಲಿ ಊರಿನ ಬಗ್ಗೆ ಏನೆಂದು ಉಲ್ಲೇಖಿಸಲಾಗಿದೆ ಎಂಬುದನ್ನು ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಜೊತೆಗೆ ಊರಲ್ಲಿರುವ ಮತದಾರರು, ಜನಸಂಖ್ಯೆ, ದೇವಾಲಯಗಳು, ದೇವಾಲಯಗಳ ಶೈಲಿ, ಯಾವ ಕಾಲದ್ದು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಜೊತೆಗೆ ಗ್ರಾಮದಲ್ಲಿರುವ ಹಿರಿಯರ ಜೊತೆಗೆ ಊರಿನ ಇತಿಹಾಸದ ಬಗ್ಗೆ, ಊರಿನ ವಿಶೇಷತೆ, ಹಬ್ಬ ಹರಿದಿನ ಆಚರಣೆಗಳ ಬಗ್ಗೆ ಚರ್ಚಿಸಿ ಅವರಿಂದಲೂ ಮಾಹಿತಿಯನ್ನು ಕಲೆಯಾಕುತ್ತಿದ್ದಾರೆ. ಊರಲ್ಲಿರುವ ಕೆರೆಗಳ ಮಾಹಿತಿಯನ್ನು ಕೃತಿಯಲ್ಲಿ ಕಟ್ಟಿಕೊಡಲು ತಯಾರಿ ನಡೆಸಿದ್ದಾರೆ,
ಶ್ರೀಧರ್ ಇದಕ್ಕಾಗಿ ಕಳೆದ 6-8 ತಿಂಗಳುಗಳು ಕಾಲ ಚರಿತ್ರೆ ಬರೆಯಲು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದು, ಶಾಸನಗಳನ್ನು ಕಂಡು, ಎಫಿಗ್ರಾಪಿ ಕರ್ನಾಟಕವನ್ನು ಓದಿಕೊಂಡು ಈ ಇತಿಹಾಸ ಸಾರುವ ಪುಸ್ತಕವನ್ನು ಸಿದ್ಧಪಡಿಸುತ್ತಿದ್ದಾರೆ.

ಇನ್ನು ಪುಸ್ತಕದಲ್ಲಿ ಚಾಮರಾಜನಗರದ ಭಾಷೆಯ ಸೊಗಡು, ಅದ್ಭುತವಾದ ಫೋಟೋಗಳನ್ನು ಬಳಸಲಾಗುತ್ತಿದೆ. ದೂರದ ಹೈದರಾಬಾದ್ ಕರ್ನಾಟಕದಿಂದ ಬಂದು ತಾವೂ ಕಾರ್ಯ ನಿರ್ವಹಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಚರಿತ್ರೆ ಹೇಳಲು ಹೊರಟಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.