"ತುಮಕೂರು: ಅಕ್ಕಪಕ್ಕದ ಜಿಲ್ಲೆಗಳಿಗೆ ಬೆಂಗಳೂರಿನ ಹೆಸರು, ಸರ್ಕಾರದಿಂದ 'ರಿಯಲ್ ಎಸ್ಟೇಟ್ ಲಾಭಿ''
ಬೆಂಗಳೂರು: ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮಾಡಿದ ಬೆನ್ನಲ್ಲೆ ಮೆಟ್ರೋ ವಿಸ್ತರಣೆ ಆಗಲಿರುವ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಮಾಡುವಂತೆ ಆಗ್ರಹ ಜೋರಾಗಿದೆ. ಸಚಿವರ ಆದಿಯಾಗಿ ಅನೇಕರು ಈ ಬೇಡಿಕೆ ಇಟ್ಟಿದ್ದಾರೆ. ಇದನ್ನು ಆಕ್ಷೇಪಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, 'ಸರ್ಕಾರ ರಿಯಲ್ ಎಸ್ಟೇಟ್ ದಂಧೆ ವಿಸ್ತರಣೆಗಾಗಿ' ಆಸಕ್ತಿ ತೋರಿದೆ ಹೊರತು ಅಭಿವೃದ್ಧಿಗಲ್ಲ ಎಂದು ಗಂಭೀರ ಆರೋಪ ಮಾಡಿದರು.
ಬಿಡದಿ ಟೌನ್‌ಶಿಪ್ ಯೊಜನೆ ಪ್ರಸ್ತಾಪಿಸಿದ ಬೆನ್ನಲ್ಲೆ ಇತ್ತೀಚೆಗೆ ಆ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಉತ್ತೇಜನ ಸಿಕ್ಕಂತಾಗಿದೆ. ಫಲವತ್ತಾದ ಜಮೀನುಗಳನ್ನು ಕೋಟಿ ಬೆಲೆಯಲ್ಲಿ ಉದ್ಯಮಿಗಳು ಕೇಳುತ್ತಿದ್ದಾರೆ. ಅಂದರೆ ಒಂದು ಯೋಜನೆ, ಹೊಸ ನಗರ, ಜಿಲ್ಲೆ, ಅಭಿವೃದ್ಧಿ ಕಾರ್ಯಗಳು ಪ್ರಸ್ತಾವನೆ ಆಗುತ್ತಿದ್ದಂತೆ ಇಂತಹ ಬೆಳವಣಿಗೆ ತೀರಾ ಸಹಜ. ಅದರ ಬೆನ್ನಲ್ಲೆ ಆರ್.ಅಶೋಕ್ ಅವರು ಇಂತಹ ಆರೋಪ ಮಾಡಿದರೇ?. ತುಮಕೂರು ಉತ್ತರ ಜಿಲ್ಲೆಯಾಗಿಸುವ ವಿಚಾರವು ಮತ್ತೊಂದು ಆಯಾಮದಲ್ಲಿ ಜನರನ್ನು ಯೋಚಿಸುವಂತೆ ಮಾಡಿದೆ.

ಅಕ್ಕಪಕ್ಕದ ಜಿಲ್ಲೆಗಳಿಗೆ "ಬೆಂಗಳೂರು' ಹೆಸರು
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ರಾಜಧಾನಿಯ ಅಕ್ಕಪಕ್ಕದ ಜಿಲ್ಲೆಗಳಿಗೆ "ಬೆಂಗಳೂರು' ಹೆಸರು ಅಂಟಿಸಿ ರಿಯಲ್ ಎಸ್ಟೇಟ್ ದಂಧೆ ವಿಸ್ತರಿಸುವುದರಲ್ಲಿ ತೋರಿಸುತ್ತಿರುವ ಆಸಕ್ತಿಯ ಅರ್ಧದಷ್ಟಾದರೂ ಬೆಂಗಳೂರಿನ ಸುರಕ್ಷತೆ, ಕಾನೂನು ಸುವ್ಯವಸ್ಥೆ ಬಗ್ಗೆ ಈ ಕಾಂಗ್ರೆಸ್ ಸರ್ಕಾರಕ್ಕಿದ್ದಿದ್ದರೆ ಇಂದು ಸಿಲಿಕಾನ್ ಸಿಟಿ 'ಕ್ರೈಂ ಸಿಟಿ' ಆಗುತ್ತಿರಲಿಲ್ಲ! ಎಂದು ದೂರಿದ್ದಾರೆ.
ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಿಗೆ ಬೆಂಗಳೂರು ಹೆಸರು ತಳಕು ಹಾಕಿ, ಜಮೀನಿನ ಬೆಲೆ ಏರಿಸಿ ರಿಯಲ್ ಎಸ್ಟೇಟ್ ಲಾಬಿಯ ಜೇಬು ತುಂಬಿಸುವುದನ್ನೇ ಕಾಂಗ್ರೆಸ್‌ನ ಏಕೈಕ ಅಜೆಂಡಾ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಅಭಿವೃದ್ಧಿ, ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಹೀಗಾಗಿಯೇ ನಮ್ಮ ಹೆಮ್ಮೆಯ ಸಿಲಿಕಾನ್ ಸಿಟಿ, ಕ್ರೈಮ್ ಸಿಟಿಯಾಗಿ ಮಾರ್ಪಟ್ಟಿದೆ. ಆವಿಷ್ಕಾರದ ರಾಜಧಾನಿ, ಅಪರಾಧಗಳ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.
ಬೆಂಗಳೂರು ದೇಶದಲ್ಲೇ ಕೊಲೆ ಪ್ರಕರಣಗಳಲ್ಲಿ 2ನೇ ಸ್ಥಾನದಲ್ಲಿದೆ. 2024ರಲ್ಲಿ ಬೆಂಗಳೂರಿನಲ್ಲಿ 176 ಕೊಲೆ ಪ್ರಕರಣಗಳು ದಾಖಲಾಗಿದ್ದು, ಮಹಾನಗರಗಳ ಅಪರಾಧ ಪಟ್ಟಿಯಲ್ಲಿ ಬೆಂಗಳೂರು ಟಾಪ್ ನಗರಗಳಲ್ಲಿ ಒಂದಾಗಿದೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ 4,748 ವರದಿ ಆಗಿದ್ದರೆ, ಅದರಲ್ಲಿ 16 ಗ್ಯಾಂಗ್ ರೇಪ್ ಪ್ರಕರಣಗಳು ದಾಖಲಾಗಿವೆ. ಇದೇನಾಲ್ "ಬ್ರ್ಯಾಂಡ್ ಬೆಂಗಳೂರು' ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಒಂದೇ ವರ್ಷದಲ್ಲಿ 17,561 ಸೈಬರ್ ಅಪರಾಧ ಪ್ರಕರಣಗಳು ವರದಿ ಆಗಿದ್ದು, ಜನರ ಬೆವರಿನ ಹಣವನ್ನು ಸೈಬರ್ ಕಳ್ಳರು ಲೂಟಿ ಮಾಡುತ್ತಿದ್ದಾರೆ. ಬೆಂಗಳೂರು ಸೈಬರ್ ಕ್ರೈಂ ರಾಜಧಾನಿಯಾಗಿದೆ
ಭಯವಿಲ್ಲದೇ ಹಬ್ಬಿದೆ ಡ್ರಗ್ ಮಾಫಿಯಾ
ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯ ಅಟ್ಟಹಾಸ ಹೆಚ್ಚಾಗಿದೆ. ಗಾಂಜಾ, ಹೆರಾಯಿನ್ ಸೇರಿ 98.69 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಡ್ರಗ್ ಮಾಫಿಯಾ ಜಾಲ ದೊಡ್ಡದಾಗಿ ಬೆಳೆದಿದೆ. ಹಿರಿಯ ನಾಗರಿಕರಿಗೂ ಸುರಕ್ಷತೆಯಿಲ್ಲದಂತಾಗಿದ್ದು, ಹಿರಿಯರನ್ನು ಗುರಿಯಾಗಿಸಿ 671 ಪ್ರಕರಣಗಳು ದಾಖಲಾಗಿವೆ.
ಅಪ್ರಾಪ್ತರ ಅಪರಾಧ ಪ್ರಕರಣಗಳಲ್ಲಿ ಭಾರೀ ಏರಿಕೆ ಆಗಿದ್ದು, 2022ರಲ್ಲಿ 200 ಇದ್ದ ಪ್ರಕರಣಗಳು,
2023ರಲ್ಲಿ 427ಕ್ಕೆ ಹೆಚ್ಚಾಗಿದೆ. 2024ರಲ್ಲಿ ಕೂಡ 386 ಪ್ರಕರಣಗಳು ದಾಖಲಾಗಿವೆ. ಇದೆಲ್ಲದರ ಮಧ್ಯೆ ಸರ್ಕಾರ ಸಾಧನಾ ಸಮಾವೇಶ ಮಾಡಿದೆ. ಇದೇನಾ ಸರ್ಕಾರದ ಸಾಧನೆ, ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು ಎಂದು ಖಾರವಾಗಿ ಪ್ರಶ್ನಿಸಿದರು.
ಗೃಹ ಸಚಿವ, ಡಿಸಿಎಂಗೆ ರಿಯಲ್ ಎಸ್ಟೇಟ್ ಲಾಭದ ಚಿಂತೆ
ಬೆಂಗಳೂರು ಜನರ ಸುರಕ್ಷತೆ ಕುಸಿದು ಬಿದ್ದಿದೆ. ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ತುಮಕೂರು-ರಾಮನಗರದ ರಿಯಲ್ ಎಸ್ಟೇಟ್ ಲಾಭದ ಚಿಂತೆಯೇ ಹೆಚ್ಚಾಗಿದೆ. ಜನರ ಭದ್ರತೆಯಿಗಿಂತ ರಿಯಲ್ ಎಸ್ಟೇಟ್ ದಂಧೆಯೇ ಮುಖ್ಯವಾಗಿರುವ ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ನಿರೀಕ್ಷಿಸಬಹುದು?. ಜನರ ಜೀವ-ಆಸ್ತಿ ರಕ್ಷಿಸಲು ವಿಫಲವಾದ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ. ಬೆಂಗಳೂರಿನ ಗೌರವ, ಸುರಕ್ಷತೆ ಮತ್ತು ಭವಿಷ್ಯಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದು ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.













Click it and Unblock the Notifications