Apple Store: ಐಫೋನ್ ಪ್ರಿಯರೇ ಗಮನಿಸಿ, ಬೆಂಗಳೂರಿನ ಈ ಭಾಗದಲ್ಲಿ ತಲೆಯೆತ್ತಲಿದೆ ಎರಡನೇ ಆಪಲ್ ಸ್ಟೋರ್
ಬೆಂಗಳೂರು: ಆಪಲ್ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಗ್ರಾಹಕರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಹೆಬ್ಬಾಳದಲ್ಲಿ ತನ್ನ ಮೊದಲ ರಿಟೇಲ್ ಮಳಿಗೆಯನ್ನು ಯಶಸ್ವಿಯಾಗಿ ಆರಂಭಿಸಿದ ಬೆನ್ನಲ್ಲೇ, ಆಪಲ್ ಸಂಸ್ಥೆ ಈಗ ನಗರದಲ್ಲಿ ತನ್ನ ಎರಡನೇ ಬೃಹತ್ ಮಳಿಗೆಯನ್ನು ತೆರೆಯಲು ಸಿದ್ಧತೆ ನಡೆಸಿದೆ. ಇದರಿಂದ ಐಫೋನ್ ಪ್ರಿಯರು ಫುಲ್ ಖುಷ್ ಆಗಿದ್ದಾರೆ.
ಹೆಬ್ಬಾಳದಲ್ಲಿ ತನ್ನ ಮೊದಲ ಅಧಿಕೃತ ಮಳಿಗೆಯನ್ನು ಆರಂಭಿಸಿ ಇನ್ನೂ ಒಂದು ವರ್ಷ ಕೂಡ ಕಳೆದಿಲ್ಲ, ಅದಾಗಲೇ ಆಪಲ್ ಸಂಸ್ಥೆಯು ನಗರದಲ್ಲಿ ತನ್ನ ಎರಡನೇ ಬೃಹತ್ ರಿಟೇಲ್ ಸ್ಟೋರ್ ತೆರೆಯಲು ಸಜ್ಜಾಗಿದೆ. ಆಪಲ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಕೆರಿಯರ್ (Careers) ಪುಟದಲ್ಲಿ ಹೊಸ ಉದ್ಯೋಗಾವಕಾಶಗಳ ಪಟ್ಟಿ ಪ್ರಕಟವಾಗಿದ್ದು, ಈ ಸುದ್ದಿ ಈಗ ಟೆಕ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಪೂರ್ವ ಬೆಂಗಳೂರಿನ ಈ ಪ್ರಸಿದ್ಧ ಮಾಲ್‌ನಲ್ಲಿ ಹೊಸ ಸ್ಟೋರ್
ಆಪಲ್‌ನ ಉದ್ಯೋಗ ಪ್ರಕಟಣೆಯಲ್ಲಿ ನೀಡಲಾಗಿರುವ ಸ್ಥಳದ ವಿವರಗಳ ಪ್ರಕಾರ, ಕಂಪನಿಯು ತನ್ನ ಹೊಸ ಆಫ್‌ಲೈನ್ ಮಳಿಗೆಯನ್ನು ಪೂರ್ವ ಬೆಂಗಳೂರಿನಲ್ಲಿ (East Bengaluru) ತೆರೆಯಲಿದೆ. ಐಟಿ ಕಾರಿಡಾರ್ ಎಂದೇ ಪ್ರಸಿದ್ಧವಾಗಿರುವ ವೈಟ್‌ಫೀಲ್ಡ್ ಹಾಗೂ ಮಹದೇವಪುರ ಭಾಗದ ಪ್ರಮುಖ ಶಾಪಿಂಗ್ ತಾಣವಾದ 'ಫೀನಿಕ್ಸ್ ಮಾರ್ಕೆಟ್‌ಸಿಟಿ' ಮಾಲ್‌ನಲ್ಲಿ ಈ ಹೊಚ್ಚ ಹೊಸ ಆಪಲ್ ಸ್ಟೋರ್ ತಲೆಯೆತ್ತಲಿರುವುದು ಬಹುತೇಕ ಖಚಿತವಾಗಿದೆ.
ಆಪಲ್ ಸ್ಟೋರ್‌ನಲ್ಲಿ ಉದ್ಯೋಗಾವಕಾಶ: ಅರ್ಜಿ ಆಹ್ವಾನ
ಹೊಸ ಮಳಿಗೆಯ ಉದ್ಘಾಟನೆಗೂ ಮುನ್ನವೇ ಆಪಲ್ ಕಂಪನಿಯು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಪ್ರಮುಖ ರಿಟೇಲ್ ಹುದ್ದೆಗಳಾದ ಆಪರೇಷನ್ಸ್ ಎಕ್ಸ್‌ಪರ್ಟ್ (Operations Expert), ಬಿಸಿನೆಸ್ ಪ್ರೊ (Business Pro), ಟೆಕ್ನಿಕಲ್ ಸ್ಪೆಷಲಿಸ್ಟ್ (Technical Specialist), ಕ್ರಿಯೇಟಿವ್ (Creative) ಮತ್ತು ಎಕ್ಸ್‌ಪರ್ಟ್ (Expert) ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಭಾರತೀಯ ಮಾರುಕಟ್ಟೆಯತ್ತ ಆಪಲ್ ತೀವ್ರ ನಿಗಾ ಏಕೆ?
ಅಮೆರಿಕ, ಚೀನಾ ಮತ್ತು ಯುರೋಪ್‌ನಂತಹ ಪ್ರಮುಖ ಜಾಗತಿಕ ಮಾರುಕಟ್ಟೆಗಳು ಉತ್ತಮ ಹಂತ ತಲುಪುತ್ತಿರುವ ಹಿನ್ನೆಲೆಯಲ್ಲಿ, ಆಪಲ್ ವಿಶ್ವದ ಎರಡನೇ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯತ್ತ ಸಂಪೂರ್ಣ ಗಮನ ಹರಿಸಿದೆ. ಇತ್ತೀಚಿನ ಆರ್ಥಿಕ ವರದಿಗಳ ಪ್ರಕಾರ, ಇದೇ ಮೊದಲ ಬಾರಿಗೆ ಆಪಲ್ ಇಂಡಿಯಾ ಕೇವಲ ಐಫೋನ್ ಮಾತ್ರವಲ್ಲದೆ, ಆಪಲ್ ಮ್ಯಾಕ್ ಕಂಪ್ಯೂಟರ್ ಹಾಗೂ ಐಪ್ಯಾಡ್‌ಗಳ ಮಾರಾಟದಲ್ಲೂ ಎರಡಂಕಿ ಪ್ರಗತಿ ದಾಖಲಿಸಿದೆ. ವಿಶೇಷವಾಗಿ ಕೈಗೆಟುಕುವ ದರದ ಐಪ್ಯಾಡ್‌ಗಳು ಮತ್ತು ಮಾರುಕಟ್ಟೆಗೆ ಬಂದಿರುವ ಹೊಚ್ಚ ಹೊಸ 'ಮ್ಯಾಕ್‌ಬುಕ್ ನಿಯೋ' (MacBook Neo) ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.
ಭಾರತದಲ್ಲಿ ಆಪಲ್ ಮಳಿಗೆಗಳ ವಿಸ್ತರಣೆ ಹೀಗಿದೆ
2020ರಲ್ಲಿ ಭಾರತದಲ್ಲಿ ಆನ್‌ಲೈನ್ ಸ್ಟೋರ್ ಆರಂಭಿಸಿದ ಆಪಲ್, 2023ರಿಂದ ಭೌತಿಕ ಮಳಿಗೆಗಳನ್ನು ವೇಗವಾಗಿ ವಿಸ್ತರಿಸುತ್ತಿದೆ. 2023ರಲ್ಲಿ ಮುಂಬೈ (ಬಿಕೆಸಿ) ಮತ್ತು ದೆಹಲಿ (ಸಾಕೇತ್), 2025ರಲ್ಲಿ ಬೆಂಗಳೂರು (ಹೆಬ್ಬಾಳ), ಪುಣೆ ಮತ್ತು ನೋಯ್ಡಾ, 2026ರಲ್ಲಿ ಮುಂಬೈನಲ್ಲಿ (ಬೋರಿವಲಿ-2ನೇ ಮಳಿಗೆ) ಮಳಿಗೆಗಳನ್ನು ತೆರೆದಿದೆ. ಆಪಲ್ ಸಂಸ್ಥೆಯು ಇದೇ ವರ್ಷದ (2026) ಅಂತ್ಯದ ವೇಳೆಗೆ ಹೈದರಾಬಾದ್‌ನಲ್ಲಿ ಹೊಸ ಮಳಿಗೆಯನ್ನು ತೆರೆಯುವ ನಿರೀಕ್ಷೆಯಿದೆ. ಇನ್ನು ಪೂರ್ವ ಬೆಂಗಳೂರಿನ (ವೈಟ್‌ಫೀಲ್ಡ್) ಈ ಎರಡನೇ ಮಳಿಗೆಯು 2027ರ ಆರಂಭದಲ್ಲಿ ಅಧಿಕೃತವಾಗಿ ಗ್ರಾಹಕರಿಗೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.













Click it and Unblock the Notifications