• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿ ನಮನ: ಆಪ್ತರು ಕಂಡಂತೆ ''ಎಲ್ಲರ ಕವಿ'' ಡಾ. ಸಿದ್ದಲಿಂಗಯ್ಯ

|
Google Oneindia Kannada News

ಇಂದು ಸಂಜೆ ಕವಿ ಸಿದ್ದಲಿಂಗಯ್ಯ ಅವರು ಇನ್ನಿಲ್ಲವೆಂಬ ಸುದ್ಧಿ ಕೇಳಿ ಬಂತು. ಕೋವಿಡ್ ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಒಟ್ಟಾಗಿ ಸೇರಿ ಅವರ ಆರೋಗ್ಯ ಹೈರಾಣಾಗಿದ್ದನ್ನು ನಾವೆಲ್ಲಾ ತಿಳಿದಿದ್ದೆವು. ಕವಿಗಳ ಆರೋಗ್ಯ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ತಿಳಿಯಬೇಕೆಂದು ಜನಾರ್ಧನ್ (ಜನ್ನಿ) ಅವರೊಂದಿಗೆ ಮಾತನಾಡಿದೆ.

"ತುಂಬಾ ಕ್ರಿಟಿಕಲ್ ಅಂತೇ ಕಣೋ ನಾಗೂ., ಮಿರಾಕಲ್ ಆಗ್ಬೇಕು ಅಂತಾ ಹೇಳ್ತಿದ್ದಾರೆ ಆಸ್ಪತ್ರೆಯಲ್ಲಿ" ಆದ್ರೂ "ಕಾಮ್ರೇಡ್‌ಗೆ ಒಂದು ಒಳಜೀವ ಐತೆ, ಅದೇನಾದ್ರೂ ಬದುಕಿಸ್ತದೆ ಅನ್ನೋ ನಂಬಿಕೆ ನಂಗೆ" ಅಂದರು ಜನ್ನಿ. ಅವರ ಪ್ರೀತಿ ಕಾಳಜಿ ದೊಡ್ಡದು. ನನಗಂತೂ ವೈದ್ಯರು ಬಳಸಿದ್ದ "ಮಿರಾಕಲ್" ಪದದ ಅರ್ಥ ಹೊಳೆದಿತ್ತು. ಕಡೆಗಿಂದು ನಮ್ಮನ್ನಗಲಿದ್ದಾರೆ. ಅವರ ಕಾವ್ಯ ಈ ಲೋಕವನ್ನಗಲುವುದಿಲ್ಲ.

ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೋಟಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೋಟ

ಅವರು ನಮ್ಮಿಂದ ದೈಹಿಕವಾಗಿ ನಿರ್ಗಮಿಸಿದ ಈ ದಿನದಂದು ನಮ್ಮೆಲ್ಲರ ಪ್ರೀತಿಯ ಅಭಿಮಾನದ ಕವಿ ಸಿದ್ದಲಿಂಗಯ್ಯ ಅವರಿಗೆ ಅವರ ಆಪ್ತರ ನುಡಿ ನಮನವನ್ನು ದಾಖಲಿಸುವ ಪ್ರಯತ್ನ ಮಾಡಿದ್ದೇನೆ.-ನಾಗೇಶ, ಕೆ. ಎನ್.

**
ಕನ್ನಡ ಕಾವ್ಯಕ್ಕೆ ವಿಶಿಷ್ಟ ಭಾಷೆ ಕೊಟ್ಟವರು ಸಿದ್ದಲಿಂಗಯ್ಯ

-ಅಗ್ರಹಾರ ಕೃಷ್ಣಮೂರ್ತಿ, ವಿಶ್ರಾಂತ ಕಾರ್ಯದರ್ಶಿ, ಕೇಂದ್ರ ಸಾಹಿತ್ಯ ಅಕಾಡೆಮಿ

ಕನ್ನಡದ ಬಹಳ ವಿಶಿಷ್ಟವಾದ ಕವಿ ಹೋರಾಟಗಾರರಾದ ಡಾ. ಸಿದ್ದಲಿಂಗಯ್ಯ ತೀರಿಕೊಂಡಿರುವ ಸುದ್ದಿ ಬಂದಿದೆ. ಇದು ಕನ್ನಡ ಕಾವ್ಯಕ್ಕೆ, ಸಾಹಿತ್ಯಕ್ಕೆ ಬಹುದೊಡ್ಡ ನಷ್ಟ ಅನ್ನುವ ಕ್ಲೀಷೆಯ ಮಾತು ಒಂದು ಕಡೆ ಆದ್ರೆ, ಇನ್ನೊಂದು ಕಡೆ ಅವರ ಅತ್ಯಂತ ವಿಶಿಷ್ಟವಾದ ಬದುಕು ಬಹಳ ಮುಖ್ಯವಾದದ್ದು. ಮುಂದೆ ಓದಿ...

ಬಡತನಕ್ಕೆ ಧ್ವನಿಯನ್ನು ಕೊಟ್ಟಂತ ಕವಿ

ಬಡತನಕ್ಕೆ ಧ್ವನಿಯನ್ನು ಕೊಟ್ಟಂತ ಕವಿ

ಕನ್ನಡ ಕಾವ್ಯ ಲೋಕದಲ್ಲಿ ರೊಮ್ಯಾಂಟಿಕ್ ಕಾವ್ಯದ ಮಾರ್ಗ ಕಳೆದು ನವ್ಯದ ಮಾರ್ಗ ಕೂಡಾ ಅವನತಿಯ ಸ್ಥಿತಿಗೆ ಬರುತ್ತಿದ್ದ ಸಂದರ್ಭದಲ್ಲಿ ಸಿದ್ದಲಿಂಗಯ್ಯ ತಮ್ಮ ಕಾವ್ಯ ರಚನೆಯನ್ನ ಶುರುಮಾಡಿದ ಅವರು ಕನ್ನಡ ಕಾವ್ಯಕ್ಕೆ ವಿಶಿಷ್ಟವಾದ ಪ್ರಕಾರವನ್ನೇ ಕೊಟ್ಟರು. ಅದು ಹಲವು ದೃಷ್ಠಿಗಳಿಂದ ಬಹಳ ಮುಖ್ಯ. ಒಂದು, ಕಾವ್ಯದ ಭಾಷೆ, ಇನ್ನೊಂದು ಕಾವ್ಯಕ್ಕೆ ಅವರು ತಂದ ಹೊಸ ಅನುಭವ. ಹೀಗೆ ಹೊಸ ಅನುಭವ ಮತ್ತು ಹೊಸ ಭಾಷೆಯಿಂದಾಗಿ ಬಹಳ ಬೇಗ ಅನೇಕ ಧ್ವನಿಯಿಲ್ಲದ ಸಮುದಾಯಗಳು ಅವರಿಗೆ ಆಕರ್ಷಿತರಾದರು.

ಅದೇ ರೀತಿ ಸಾಂಪ್ರದಾಯಿಕ ಕಾವ್ಯದ ನಿಲುವಿನಲ್ಲಿದ್ದ, ಜನರಿಗೆ ಒಂದು ರೀತಿಯಲ್ಲಿ ಬೆರಗು ಮತ್ತು ಸಂಶಯ ಉಂಟಾಯ್ತು. ಆ ಬೆರಗು ಮತ್ತು ಸಂಶಯಕ್ಕೆ ಕಾರಣ ಮುಖ್ಯವಾಗಿ ಕಾವ್ಯದ ವಸ್ತುವೇ ಆಗಿತ್ತು. ಸಿದ್ದಲಿಂಗಯ್ಯ ಮೊದಲ ಬಾರಿಗೆ ಬಡತನಕ್ಕೆ ಧ್ವನಿಯನ್ನು ಕೊಟ್ಟಂತ ಕವಿ. ಕುವೆಂಪು ಅವರಿಂದ ಬಹಳ ಪ್ರೇರಿತರಾಗಿದ್ದ ಕವಿ. ಹಾಗಾಗಿ ಅವರು ಎಷ್ಟೇ ಭಿನ್ನವಾಗಿ ಬರೆದರೂ ಕೂಡಾ, ಕುವೆಂಪು ಅವರ ಒಂದು ಆತ್ಮ ಅವರ ಕಾವ್ಯದೊಳಗಡೆ ಇತ್ತು ಎಂದೇ ಹೇಳಬಹುದು.

ನೋಡಿ, ಒಂದು ಬಹಳ ಮುಖ್ಯವಾದ ವಿಷಯ ಏನಂದ್ರೆ ಕನ್ನಡ ಕಾವ್ಯದೊಳಗೆ ಸ್ವಾತಂತ್ರ್ಯದ ಹೋರಾಟದ ಗೀತೆಗಳು ಬೇಕಾದಷ್ಟಿವೆ. ಬೇಕಾದಷ್ಟು ಕವಿಗಳು ಬರೆದಿದ್ದಾರೆ. ಆದರೆ ಅವೆಲ್ಲಾ ಸ್ವಾತಂತ್ರ್ಯ ಪಡೆದ ನಂತರ ನಿಂತು ಹೋದವು. ಡಾ.ಸಿದ್ದಲಿಂಗಯ್ಯ ಕಾವ್ಯವನ್ನು ಸ್ವಾತಂತ್ರ್ಯ ಬಂದ ನಂತರ ಬರೆದದ್ದು. ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಎಲ್ಲ ಕವಿತೆಗಳು ಹೋರಾಟದ ಕವಿತೆಗಳಾಗಿದ್ವು. ಚಳವಳಿಯ ಕವಿತೆಗಳಾಗಿದ್ವು. ಸ್ವಾತಂತ್ರ್ಯ ದಕ್ಕಿದ ನಂತರವೂ ಹೋರಾಟದ ಮತ್ತು ಚಳುವಳಿಯ ಕವಿತೆಗಳನ್ನು ಬರೆದವರು ಸಿದ್ದದಲಿಂಗಯ್ಯ ಮಾತ್ರ.

ಅದು ಅವರ ಕಾವ್ಯದ ಬಗ್ಗೆ ಬಹಳ ಮುಖ್ಯವಾದ ಅಂಶ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳನ್ನು ತಂದುಕೊಟ್ಟವರು ಸಿದ್ದಲಿಂಗಯ್ಯ. ಸ್ವಾತಂತ್ರ್ಯವನ್ನು ಪ್ರಶ್ನಿಸಿದವರು ಸಿದ್ದಲಿಂಗಯ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಕಾವ್ಯ ಯಾವ ರೀತಿಯ ಪಾತ್ರವನ್ನು ಆಡಿತ್ತೋ ಅದೇ ಪಾತ್ರವನ್ನು ಸ್ವಾತಂತ್ರ್ಯಾ ನಂತರ ಮತ್ತೆ ಸ್ವಾತಂತ್ರ್ಯಕ್ಕಾಗಿ ಹಾಡುಗಳನ್ನು, ಹೋರಾಟದ ಗೀತೆಗಳನ್ನು ಬರೆದು ಕಾವ್ಯದ ಲಯವನ್ನು ಬದಲಾಯಿಸಿದರು. ಅದು ನವ್ಯ ಕಾವ್ಯದ ನಂತರ ಬಂದ ಸಂದರ್ಭದಲ್ಲಂತೂ ತುಂಬಾ ವಿಶಿಷ್ಟವಾದ ಕಾವ್ಯದ ಧಾರೆಯಾಗಿ ಬೆಳೆಯಿತು.

ಆಮೇಲೆ ಅವರು ಕಾವ್ಯವನ್ನು ಬೇರೆ ದಿಕ್ಕಿಗೂ ತೆಗೆದುಕೊಂಡು ಹೋದರು. ಅದನ್ನು ಪ್ರತಿಮಾತ್ಮಕವಾಗಿ ಬರೆಯುವ ರೂಢಿಯನ್ನೂ ಮಾಡಿಕೊಂಡರು. ಇದರಿಂದ ಈ ಘಳಿಗೆಯವರೆಗೂ ದಲಿತ ಸಮುದಾಯಗಳ ಜಾಗೃತಿಯ ಸಂದರ್ಭದಲ್ಲಿ ಅವರ ಕಾವ್ಯದ ಮಾರ್ಗ ಹೆಚ್ಚು ಪ್ರಕರವಾಗಿ ಕಾಣುತ್ತದೆ. ನಾವು ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯದ ಹೋರಾಟದ ಅಥವಾ ಸಾಹಿತ್ಯ ಸಮಾರಂಭಗಳಲ್ಲಿ ಆ ಗೀತೆಗಳಿಗೆ ಹೆಚ್ಚಿನ ಅರ್ಥವನ್ನು ಕಾಣಬಹುದು.

ಸಿದ್ದಲಿಂಗಯ್ಯ ಗದ್ಯವನ್ನೂ ಬರೆದರು. ಡಾ.ಡಿ.ಆರ್.ನಾಗರಾಜ್ ಸಿದ್ದಲಿಂಗಯ್ಯನವರ ಕಾವ್ಯದ ಸಂದರ್ಭ ಮತ್ತವರ ಆತ್ಮ ಕಥೆಯ ಸಂದರ್ಭದೊಳಗಡೆ "ಬಡವರ ನಗುವಿನ ಶಕ್ತಿ" ಅನ್ನೋ ಮಾತನಾಡಿದ್ದಾರೆ. ಅದು ಈ ಬಡವರ ನಗುವಿಗೆ ಇರುವ ಶಕ್ತಿ ಎಂಥದ್ದು ಅನ್ನುವುದನ್ನು ಸಿದ್ದಲಿಂಗಯ್ಯ ಅವರ ಕಾವ್ಯ ಮತ್ತು ಆತ್ಮಕಥೆಯ ಹಿನ್ನೆಲೆಯೊಳಗೆ ಡಿ.ಆರ್ ಮಾತನಾಡಿದ್ದಾರೆ ಮತ್ತು ಹೊಸ ಮೀಮಾಂಸೆಯನ್ನು ಸೃಷ್ಠಿಮಾಡಿದ್ದಾರೆ. ಅಲ್ಲಿ ಬರುವ ವ್ಯಂಗ್ಯವನ್ನೇ ಉದ್ದೇಶಿಸಿ ಡಿ ಆರ್ ಅಂಥ ಮಾತನಾಡಿದ್ದು.

ಸಿದ್ದಲಿಂಗಯ್ಯ ವ್ಯಂಗ್ಯದ ದಾಟಿಯನ್ನು ಮತ್ತು ಲಘು ದಾಟಿಯನ್ನು ತುಂಬಾ ಅಪ್ಪಿಕೊಂಡು ಬರೆಯುವುದಕ್ಕೂ ಶುರು ಮಾಡಿದರು ಮತ್ತು ಎರಡು ಬಾರಿ ಎಂ.ಎಲ್.ಸಿ ಆಗಿದ್ದ ಸಂದರ್ಭದಲ್ಲಿ ವಿಧಾನಪರಿಷತ್‌ನಲ್ಲಿ ಮಾಡಿದ ಭಾಷಣಗಳಲ್ಲೂ ಈ ಲಘು ಧಾಟಿಯ ಲೇಪನ ಬಂದು ಕೆಲವು ಸಂದರ್ಭದಲ್ಲಿ ಹೊಸ ಪೀಳಿಗೆಯವರಿಗೆ (ನಗು) ಇವರೊಬ್ರು ಹಾಸ್ಯ ಸಾಹಿತಿಯೋ ಅನ್ನುವ ಅನುಮಾನ ಕೂಡ ಬಂದುಬಿಡುವ ಪರಿಸ್ಥಿತಿ ಇತ್ತು ಅವರಿಗೆ.

ಅತ್ಯಂತ ಹೊಸ ತಲೆಮಾರಿನವರು ಅವರ ಭಾಷಣಗಳನ್ನು ಕೇಳಿದರೆ ಹಾಗನ್ನಿಸುವುದು ನಿಜ. ಆದ್ರೆ ಅವರ ಪ್ರಾರಂಭದ ಬರವಣಿಗೆ ದಿನಗಳಿಂದ ಮತ್ತು ಹೋರಾಟದ ದಿನಗಳಿಂದ ಈ ನಗೆ ಮತ್ತು ಹಾಸ್ಯ ವ್ಯಂಗ್ಯವನ್ನು ರೂಢಿಸಿಕೊಂಡು ಅದರ ಮೂಲಕ ಒಂದು ಪ್ರೊಫೌಂಡ್ ಆದ ಅರ್ಥವನ್ನು ಹೇಳೋದಿಕ್ಕೆ ಪ್ರಯತ್ನಪಟ್ಟಂತ ವಿಶಿಷ್ಟವಾದ ಕವಿ ಸಿದ್ದಲಿಂಗಯ್ಯ.

ಇದು ತುಂಬಾ ಹೊತ್ತು ಮಾತನಾಡೊ ಘಳಿಗೆಯಲ್ಲ. ಕನ್ನಡ ಕಾವ್ಯದಲ್ಲಿ ಒಂದು ಹೊಸ ದಿಕ್ಕನ್ನ, ಒಂದು ಹೊಸ ದಾರಿಯನ್ನು ತೆರೆದ ವಿಚಾರ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ದಾಖಲೆ ಆಗುವಂತದ್ದು ನಿಜ. ಅವರನ್ನ ದಲಿತ ಕವಿ ಅಂತಾ ಕರೀತಾರೆ, ಹಂಗೇನೂ ಕರಿಯೋ ಅಗತ್ಯ ಇಲ್ಲ. ಅವರು ಕವಿ. ನಿಜವಾದ ಅರ್ಥದಲ್ಲಿ ಕವಿ ಆಗಿರೋದ್ರಿಂದ ಕವಿ ಅಂತ್ಲೇ ಕರೀಬೇಕು. ದಲಿತ ಅನ್ನೋದನ್ನು ಬೇಕಾದರೆ ಬಡವರ ಮತ್ತು ಧ್ವನಿ ಇಲ್ಲದವರ ಪ್ರಾತಿನಿಧಿಕವಾದ ಕವಿ ಎನ್ನುವುದನ್ನು ಒಪ್ಪಿಕೊಳ್ಳಬಹುದು ಅನಿಸುತ್ತದೆ. ಇದನ್ನು ಅನೇಕ ಸಂದರ್ಭದಲ್ಲಿ ಹೇಳಿದ್ದೇನೆ.

ಸಿದ್ದಲಿಂಗಯ್ಯ ನಾನು ಪರಿಚಯವಾಗಿದ್ದು 1972ರಲ್ಲಿ. ಆಗಲೇ 50 ವರ್ಷವಾಯಿತು. ಒಟ್ಟಿಗೆ ಕಾಲೇಜಿಗೆ ಸೇರಿದ್ದು. ಬಿ ಎ ಹಾನರ್ಸ್. ಕನ್ನಡ ಎಂಎ ಒಟ್ಟಿಗೆ ಮುಗಿಸಿದೆವು. ನೂರಾರು ನೆನಪುಗಳು ನುಗ್ಗಿ ಬರುತ್ತಿವೆ. ಅವೆಲ್ಲವುಗಳನ್ನೂ ಹೇಳುವ ಅವಕಾಶ ಈಗಿಲ್ಲ. ಅವರ ಸಾವಿನ ಸುದ್ಧಿ ಅತ್ಯಂತ ವಿಷಾದವನ್ನುಂಟುಮಾಡಿದೆ. ಮನಸ್ಸಿಗೆ ತುಂಬಾ ನೋವು ತರುವ ಸಂಗತಿಯಾಗಿದೆ. ಇನ್ನೊಮ್ಮೆ ಬಿಡುವಾಗಿ ಅವರ ಕಾವ್ಯದ ಕುರಿತು ನನ್ನ ಅವರ ಒಡನಾಟದ ಕುರಿತು ಬರೆಯಬಹುದು. ಇಂದಿಗೆ ಇಷ್ಟು ಸಾಕು.

ಮೋಹನ್ ಕುಮಾರ್ ಕೊಂಡಜ್ಜಿ, ವಿಧಾನ ಪರಿಷತ್ ಸದಸ್ಯರು

ಮೋಹನ್ ಕುಮಾರ್ ಕೊಂಡಜ್ಜಿ, ವಿಧಾನ ಪರಿಷತ್ ಸದಸ್ಯರು

ನನ್ನ ರಾಜಕೀಯ ಚಿಂತನೆಯನ್ನು ಬದಲು ಮಾಡಿದ ನಾಲ್ಕು ಜನ ಕಾರಣಕರ್ತರಲ್ಲಿ ಡಾ.ಸಿದ್ದಲಿಂಗಯ್ಯ ಸಹ ಒಬ್ಬರು. ಎಂ. ಕೆ. ಭಟ್, ಡಿ.ಆರ್.ನಾಗರಾಜ, ಶೂದ್ರ ಶ್ರೀನಿವಾಸ ಮತ್ತವನ ಪತ್ರಿಕೆ ನನಗೆ ರಾಜಕೀಯ ಗುರುಗಳು.

ನಾನು ಹೈಸ್ಕೂಲ್ ಮುಗಿಸಿಕೊಂಡು ಪಿಯುಸಿ ಯಲ್ಲಿದ್ದಾಗ ಈ ನಾಲ್ಕು ಜನ ನನ್ನ ಮೇಲೆ ಪರಿಣಾಮ ಬೀರಿದರು. ನಾನು ಆಗ ಗ್ಯಾಸ್ ಕಾಲೇಜಿನಲ್ಲಿ ಬಿ.ಎ ಮಾಡಬೇಕಾದರೆ ಸಿದ್ದಲಿಂಗಯ್ಯನವರು ಫೈನಲ್ ಇಯರ್ ಸ್ಟುಡೆಂಟ್. ಅವಾಗ ಬಸಲಿಂಗಪ್ಪನವರ ಬೂಸಾ ಚಳುವಳಿ ರಾಜಕೀಯದ ಮಹತ್ವದ ಬದಲಾವಣೆಗೆ ಕಾರಣವಾಯಿತು. ಅವರ ಹೇಳಿಕೆ ಅವರನ್ನು ದೇವರಾಜ್ ಅರಸರ ಸರ್ಕಾರದಿಂದ ತೆಗೆಯುವ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಆ ಬೂಸಾ ಚಳವಳಿಯ ನಾಯಕನೇ ನಮ್ಮ ಡಾ.ಸಿದ್ದಲಿಂಗಯ್ಯ.

ಆಗ ನಮ್ಮ ಗ್ಯಾಸ್ ಕಾಲೇಜಿನಲ್ಲಿ 40-50% ದಲಿತ ಹುಡುಗರಿರುತ್ತಿದ್ದರು. ಅವರೆಲ್ಲ ಪ್ರೈವೇಟ್ ಸ್ಕೂಲ್ಗಳಿಗೆ ಹೋಗುವ ಸಾಧ್ಯತೆ ಇರಲಿಲ್ಲ. ಆಗ ಸಾಕಷ್ಟು ಗಲಾಟೆಗಳು ನಡೆಯುತ್ತಿದ್ದವು. ದಲಿತ ಹುಡುಗರ ಮೇಲೆ ದೌರ್ಜನ್ಯ ಮಾಡುವ ಹಂತಕ್ಕೆ ತಲುಪುತ್ತಿತ್ತು. ಆದರೆ ಯಾರಿಗೂ ಸಿದ್ದಲಿಂಗಯ್ಯ ಯಾರು ಅಂತಾನೇ ಗೊತ್ತಾಗುತ್ತಿರಲಿಲ್ಲ. ಅಷ್ಟು ಚೋಟುವಾಗಿದ್ದ ಇವನು. ಬಹಳ ಜನ ಸಿದ್ದಲಿಂಗಯ್ಯನನ್ನು ಹೊಡೆಯಬೇಕು ಅಂತ ಪ್ರಯತ್ನ ಮಾಡ್ತಿದ್ರು, ಸಿದ್ದಲಿಂಗಯ್ಯ ಯಾರು ಅಂತ ಗೊತ್ತಾಗ್ತಿರಲಿಲ್ಲ. (ನಗು)

ನನ್ನ ಮನೆ ರಾಜಾಜಿನಗರದ ಕಡೆ. ಶ್ರೀರಾಂಪುರದ ಸ್ಲಂ ನಲ್ಲೆ ಅವನ ಮನೆ. ನಾನು ಅವನ ಮನೆಗೆ 70ರ ದಶಕದಲ್ಲಿ ಊಟ ಮಾಡೋಕೆ ಒಮ್ಮೆ ಹೋಗಿದ್ದೆ. ಅವನಿದ್ದದ್ದು ಒಂದು ಸಣ್ಣ ಮನೆ, ತುಂಬಾ ಬಡತನ. ಆ ಸಂದರ್ಭದಲ್ಲಿಯೇ ಅವನು ಹರಿಶ್ಚಂದ್ರ ಘಾಟ್ ಬಳಿ ಅಂತ ಕಾಣುತ್ತೆ, ಅಲ್ಲೇ ಕೂತು 'ಹೊಲೆ ಮಾದಿಗರ ಹಾಡು' ಬರೆದಿದ್ದು. ಅದು ಎಷ್ಟು ಇನ್ಸ್ಪೈರ್ ಆಯ್ತು ಅಂದ್ರೆ ಸಿ.ಪಿ.ಎಂ ನಿಂದ ಭಟ್ ನೇತೃತ್ವ ದಲ್ಲಿ ಪ್ರಿಯ ಬುಕ್ ಸ್ಟಾಲ್ ಅಂತ ಓಪನ್ ಮಾಡಿದ್ವಿ ನಾವು. ಅಲ್ಲಿ ಹೊಲೆ ಮಾದಿಗರ ಹಾಡನ್ನು ಮೊದಲು ಮಾರಾಟ ಮಾಡಿದ್ದೇ ನಾವು. ಹೊಲೆ ಮಾದಿಗರ ಹಾಡು ಶೀರ್ಷಿಕೆಯನ್ನೇ ಬಹಳ ಜನ ವಿರೋಧಿಸಿದರು.

ಆದರೆ ಅದು ಆಗಲೇಬೇಕು ಎಂದು ಪಟ್ಟುಹಿಡಿದವರು ಡಿ.ಆರ್.ನಾಗರಾಜ. ಅಗ್ರಹಾರ ಕೃಷ್ಣಮೂರ್ತಿ, ಮುಂತಾದವರು. ಆಗ ಸಾವಿರ ಕಾಪಿ ಮಾಡಿಸಿ ಹಂಚಿದ್ವಿ. ನನ್ನಂಥ ಮೇಲ್ಜಾತಿಯವನಿಗೂ ಕೂಡಾ ಅದು ಇನ್ ಸ್ಪೈರ್ ಮಾಡಿತು, ಅದನ್ನು ಓದಿದ ಮೇಲೆ ನಮಗೆ ದಲಿತರ ಬಗ್ಗೆ ಕಾಳಜಿ ಬಂತು. ಇದಕ್ಕೆಲ್ಲ ಕಾರಣ ನಮ್ಮ ಡಾ.ಸಿದ್ದಲಿಂಗಯ್ಯ. ಅವನ ಬಗ್ಗೆ ಯಾರೇನೇ ಹೇಳಲಿ, ಅವನೊಬ್ಬ ಅದ್ಭುತವಾದ rational ವ್ಯಕ್ತಿ.

ಲಹರಿ ವೇಲು

ಲಹರಿ ವೇಲು

ಡಾ.ಸಿದ್ದಲಿಂಗಯ್ಯನವರನ್ನು ಯಾವ ಡಾಕ್ಟರ್ ಕೂಡಾ ಕೋವಿಡ್ ನಿಂದ ಗುಣಮುಖರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಸುಮಾರು 30 ದಿನಗಳಿಂದ ಸತತವಾಗಿ ಮಣಿಪಾಲ್ ಆಸ್ಪತ್ರೆಯ ಡಾ.ಥಾಮಸ್ ಅವರಿಗೆ ಫೋನ್ ಮಾಡಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದೆ. ನಾವೂ ಪ್ರಾರ್ಥನೆ ಮಾಡ್ತಿದ್ವಿ. ಅವರು ತಿರುಗಿ ಬರ್ತಾರೆ ಅಂದುಕೊಂಡಿದ್ವಿ.

ನನಗೆ ಎರಡನೇ ವಾರದಲ್ಲಿ ಹೇಳಿದ್ರು ಕೋವಿಡ್ ಬಂದು ಐ.ಸಿ.ಯು ಗೋದ್ರೆ ಕಷ್ಟ. ನೀವು ಬಹಳ ಕ್ಲೋಸ್ ಅಂತ ಹೇಳ್ತಿದ್ದೀರಿ, ಸ್ವಲ್ಪ ಧೈರ್ಯವಾಗಿರಿ ಅಂತ ಡಾಕ್ಟರ್ ಹೇಳಿದ್ರು. ಇದನ್ನ ಜನ್ನಿ ಅವರಿಗೂ ಹೇಳಿದ್ದೆ. ಇಂದು ಎಂಥ ದಿನ ಗೊತ್ತೆ, ನಾನು ಹುಟ್ಟಿದ ದಿನ. ಯಾವಾಗಲೂ ಈ ಕಹಿಯನ್ನು ನೆನಪಿನಲ್ಲಿರುವಂತೆ ಮಾಡಲು ಈ ದಿನಕ್ಕೇ ಕಾಯುತ್ತಿದ್ದರಾ ಕವಿಗಳು ಅನ್ನಿಸುತ್ತಿದೆ.? ಅವರ "ಹಸಿವಿನಿಂದ ಸತ್ತೋರು" ಹಾಡು ನನಗೆ ಬಹಳ ಸ್ಪೂರ್ತಿ ಕೊಟ್ಟಂತ ಹಾಡು. ಅದರ ಜೊತೆಗೆ "ನಲವತ್ತೇಳರ ಸ್ವಾತಂತ್ರ್ಯ" ಅಯ್ಯೋ ಒಂದಲ್ಲ ಎರಡಲ್ಲ ಅವರದು. ಅವರ ಹಾಡು ಕೇಳಿಕೊಂಡು, ಹಾಡು ಹೇಳಿಕೊಂಡು ನಮ್ಮ ನೋವನ್ನು ಮರೆಯುತ್ತಿದ್ದವರು ನಾವು.

ಅವರನ್ನ ದಲಿತ ಕವಿ ಅಂತ ಕರೆಯೋಕೆ ನಾನು ಇಷ್ಟಪಡಲ್ಲ. ನಾವೆಲ್ಲ ದಲಿತರೇ. ಒಮ್ಮೆ ಕಲಾಕ್ಷೇತ್ರದಲ್ಲಿ 'ದಲಿತ ಕವಿ' ಅಂತ ಅನೌನ್ಸ್ ಮಾಡುವಾಗ ನಾನು ಹೇಳಿದ್ದೆ 'ದಯಮಾಡಿ ದಲಿತ ಕವಿ ಅನ್ನುವುದನ್ನ ಬಿಡಿ, ಅವರು ಎಲ್ಲರ ಕವಿ' ಎಂದು ವಾದಿಸಿದ್ದೆ.

ನಾವು ಒಟ್ಟಿಗೆ ಕೂತಾಗ ಎಲ್ಲ ಅನುಭವಗಳ ಬಗ್ಗೆ ಮಾತನಾಡುತ್ತಿದ್ದೆವು. ಸಾಹಿತ್ಯವಲಯದಲ್ಲಿ, ಸಂಗೀತವಲಯದಲ್ಲಿ ರಾಜಕೀಯ ಇಂಥದ್ದೆಲ್ಲ ನಮಗೆ ಗೊತ್ತಾಗಲ್ಲ. ನಾವು ಈ ಇಂಡಸ್ಟ್ರಿಗೆ ರಾಜಕೀಯಮುಕ್ತವಾಗಿ ಬಂದವರು. ಅವರು ಬಿಡಿಸಿ ಹೇಳುತ್ತಿದ್ದರು ನಾವೆಲ್ಲ ಹೇಗೆ ಶೋಷಣೆಗೆ ಒಳಗಾಗಿದೀವಿ ಅಂತ. ಅವರು ಹೇಳಿದಾಗಲೇ ತಿಳಿಯುತ್ತಿದ್ದದ್ದು ನಮಗೆಲ್ಲಾ.

ಬುದ್ಧನ ಹಾಗೆ ಕೂರುವ ಸ್ಟೈಲ್ ಎಲ್ಲವೂ ಚೆಂದ

ಬುದ್ಧನ ಹಾಗೆ ಕೂರುವ ಸ್ಟೈಲ್ ಎಲ್ಲವೂ ಚೆಂದ

ಡಾ. ಸಿದ್ದಲಿಂಗಯ್ಯ ಅವರಲ್ಲಿದ್ದ ಮೃದು ಸ್ವಭಾವ, ಅವರ ಮಾತು, ನಗು, ಬುದ್ಧನ ಹಾಗೆ ಕೂರುವ ಸ್ಟೈಲ್ ಎಲ್ಲವೂ ಚೆಂದ. ಅವರು ಕೊಟ್ಟ ಧೈರ್ಯ ಸ್ಪೂರ್ತಿಯಿಂದ ಸಾಕಷ್ಟು ಕಲಿತಿದ್ದೇನೆ. ಅವರ ಒಂದು ಆಸೆಯನ್ನ ನನಗೆ ಪೂರೈಸಲಾಗಲಿಲ್ಲ. "ಸಂಗೀತ" ಕಂಪನಿ ಅಂತ ಒಂದಿದೆ. ಅವರು ಸಿನಿಮಾಗೆ ಬರೆದ ಹಾಡೆಲ್ಲ ಒಂದು ಸಿ.ಡಿ ಮಾಡಿ ರಿಲೀಸ್ ಮಾಡಬೇಕು ಅಂದಿದ್ದರು. ಆಗ "ಗುರುಗಳೇ, ಕಂಪನಿ ನಂದಲ್ಲ, ಆ ಕಂಪನಿ ತೆಗೆದುಕೊಂಡ ಮೇಲೆ ನಿಮ್ಮ ಫೋಟೋ ಹಾಕಿ ಬಿಡುಗಡೆ ಮಾಡ್ತೀನಿ" ಅಂದಿದ್ದೆ. ಈಗ ಕಂಪನಿ ಟೇಕ್ ಓವರ್ ಮಾಡಿದೀವಿ, ಆದರೆ ಬಿಡುಗಡೆ ಮಾಡಲು ಅವರೇ ಇಲ್ಲ.

ಒಂದು ರಾತ್ರಿ ಕೂತು ಹರಟುವಾಗ ನಾವೆಲ್ಲ ಶೂನ್ಯದಿಂದ ಬಂದವರು, ಶೂನ್ಯದಲ್ಲೇ ಹೋಗುವವರು, ಹಾಗಾಗಿ ಶೂನ್ಯದ ಬಗ್ಗೆ ಒಂದು ಹಾಡು ಬರೀರಿ ಗುರುಗಳೆ ಅಂದಿದ್ದೆ. ಆಗ ಅವರು ಎಷ್ಟೆಲ್ಲಾ ಆಳವಾಗಿ ಯೋಚಿಸ್ತೀರಿ ನೀವು ಅಂದಿದ್ರು. ಅವರು ಬರೆದರೋ ಇಲ್ಲವೋ ತಿಳಿಯದು. ಬರೆದಿದ್ದರೆ ಖಂಡಿತವಾಗಿ ಆ ಹಾಡನ್ನು ಬಿಡುಗಡೆ ಮಾಡುತ್ತೇನೆ.

English summary
Writer Agrahara Krishnamurthy, Lahari Velu and MLC Mohan kumar Kondajji remember Poet Dr Siddalingaiah. Dr Siddalingaiah died due to Covid-19 on June 11, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X