ಬೆಂಗಳೂರಿನ ಸೋಂಪುರ ಕೆರೆ ಉಳಿವಿಗೆ ಜಲಮಂಡಳಿ ಮಾಸ್ಟರ್ ಪ್ಲಾನ್, ಸಂಸ್ಕರಣಾ ಘಟಕಕ್ಕೆ ಕಲುಷಿತ ನೀರು
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ನಗರದ ಸೋಂಪುರ ಕೆರೆಯ ಸಂರಕ್ಷಣೆಗಾಗಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಬಹುಕೋಟಿ ವೆಚ್ಚದಲ್ಲಿ 'ನೀರು ಪಂಪಿಂಗ್ ಸ್ಟೇಷನ್' ಸ್ಥಾಪಿಸುತ್ತಿದೆ. ಈ ವಿಶಿಷ್ಟ ಯೋಜನೆ ಕಾಮಗಾರಿಗೆ ಇಂದು ಸೋಮವಾರ ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು, ಬೆಂಗಳೂರು ಜಲಮಂಡಳಿ ನಿರ್ಮಿಸಲಾಗುತ್ತಿರುವ ಎಂಟು ಎಂಎಲ್‌ಡಿ ಸಾಮರ್ಥ್ಯದ ಒಳಚರಂಡಿ ನೀರು ಪಂಪಿಂಗ್ ಸ್ಟೇಷನ್ ಕಾಮಗಾರಿ ಸೋಂಪುರ ಕೆರೆಯ ಸಂರಕ್ಷಣೆಯಲ್ಲಿ ಮಹತ್ವ ಪಾತ್ರ ನಿರ್ವಹಿಸುತ್ತಿದೆ. ಸೋಂಪುರ ಕೆರೆಯ ಉಳಿವು ಮತ್ತು ಅಂತರ್ಜಲ ಸಂರಕ್ಷಣೆಗಾಗಿ 11.62 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ 'ಮಧ್ಯಂತರ ಒಳಚರಂಡಿ ನೀರು ಪಂಪಿಂಗ್ ಸ್ಟೇಷನ್' (ISPS) ನಿರ್ಮಾಣ ಮಾಡಲು ಮುಂದಾಗಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಈ ಯೋಜನೆಯನ್ನು ಇಲಾಖೆಗಳ ಸಮನ್ವಯದಿಂದ ತ್ವರಿತವಾಗಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಒಳಿತಿಗಾಗಿ ಸರ್ಕಾರಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದರೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಈ ಯೋಜನೆಯು ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
ಕೆರೆಗೆ ಸೇರುವ ಕಲುಷಿತ ನೀರು ಪಂಪಿಂಗ್
ಇನ್ನೂ ಈ ಯೋಜನೆಯಿಂದ ಕಲುಷಿತ ನೀರನ್ನು ತಡೆದು ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡುವ ಮೂಲಕ, ತ್ಯಾಜ್ಯ ನೀರು ಸೋಂಪುರ ಕೆರೆಗೆ ಸೇರುವುದನ್ನು ಸಂಪೂರ್ಣವಾಗಿ ತಪ್ಪಿಸಲಾಗುತ್ತದೆ. ಇದರಿಂದ ಕೆರೆಯ ಪರಿಸರ ವ್ಯವಸ್ಥೆ ಉಳಿಯಲಿದೆ. ಶುದ್ಧ ಕೆರೆಗಳಿಂದ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಹಾಗೂ ಸುತ್ತಮುತ್ತಲಿನ ಸಮುದಾಯಗಳಿಗೆ ಸುಸ್ಥಿರ ನೀರಿನ ಮೂಲವನ್ನು ಒದಗಿಸುತ್ತದೆ. ಅತ್ಯಾಧುನಿಕ ಒಳಚರಂಡಿ ನಿರ್ವಹಣೆಯಿಂದಾಗಿ ಲಿಂಗಧೀರನಹಳ್ಳಿ ಮತ್ತು ಸೋಂಪುರ ಪ್ರದೇಶಗಳಲ್ಲಿ ಜಲಜನ್ಯ ರೋಗಗಳ ಹರಡುವಿಕೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅವರು ವಿವರಿಸಿದರು.
ಕಂದಾಯ ಇಲಾಖೆಯಿಂದ ಭೂಮಿ ಹಸ್ತಾಂತರ
ಕೆರೆಯ ಉಳಿವಿಗೆ ಪೂರಕವಾಗಿ, ಐಎಸ್‌ಪಿಎಸ್ (ISPS) ಯೋಜನೆಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯು ಅಗತ್ಯ ಭೂಮಿಯನ್ನು ಹಸ್ತಾಂತರಿಸುವ ಮೂಲಕ ಮಹತ್ವದ ಪಾತ್ರ ವಹಿಸಿದೆ. ಅಲ್ಲದೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) 'ಠೇವಣಿ ಕೊಡುಗೆ ನಿಧಿ'ಯ ಮೂಲಕ ಜಲಮಂಡಳಿಯು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಯೋಜನೆಯ ಕುರಿತು ತಿಳಿಸಿದರು.
ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಲೋಕಾಯುಕ್ತರ ನಿರ್ದೇಶನದಂತೆ ಈ ಕಾಮಗಾರಿಗೆ ಚಾಲನೆ ದೊರೆತಿದೆ. ಲೋಕಾಯುಕ್ತರ ಪರಿಸರ ಕಾಳಜಿ ಮೆಚ್ಚುವಂಥದ್ದು, ಅವರ ಮುತುವರ್ಜಿಯಿಂದ ಯೋಜನೆಗೆ ವೇಗ ಸಿಗಲಿದೆ. ಇಂತಹ ಮಹತ್ವದ ಯೋಜನೆಗೆ ಲೋಕಾಯುಕ್ತರಿಂದ ಸಿಕ್ಕ ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಕೆರೆಯ ಉಳಿವು ಮತ್ತು ಅಂತರ್ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಜಲಮಂಡಳಿಯ ಸ್ಪಂದನೆಗೆ ಲೋಕಾಯುಕ್ತರು ಪ್ರಶಂಸಿದ್ದಕ್ಕಾಗಿ ಜಲಮಂಡಳಿ ಅಭಾರಿಯಾಗಿದೆ ಎಂದು ಕೃತಜ್ಞತೆ ತಿಳಿಸಿದರು.












Click it and Unblock the Notifications