ನಡುಸಮುದ್ರದಲ್ಲಿ ಮಗುಚಿದ ದೋಣಿ: ಕುಟುಂಬವನ್ನು ಉಳಿಸಲು ಸತತ 6 ಗಂಟೆ ಈಜಿದ 12 ವರ್ಷದ ಬಾಲಕಿ!
ವ್ಯಕ್ತಿಯೊಬ್ಬರ ಧೈರ್ಯ ಅಥವಾ ಅವರಲ್ಲಿರುವ ನಾಯಕತ್ವ ಗುಣಗಳನ್ನು ಅವರ ವಯಸ್ಸು ಅಥವಾ ಹುದ್ದೆಯಿಂದ ಅಳೆಯಲು ಸಾಧ್ಯವಿಲ್ಲ ಎಂಬುದಕ್ಕೆ ಕೇವಲ 12 ವರ್ಷದ ಬಾಲಕಿಯೊಬ್ಬಳ ಸಾಹಸಗಾಥೆ ಅತ್ಯುತ್ತಮ ಉದಾಹರಣೆ.
ಹೌದು, ಸಮುದ್ರದ ಮಧ್ಯದಲ್ಲಿ ಮೋಟಾರ್ ಬೋಟ್ ಮಗುಚಿ ಬಿದ್ದಾಗ, ಯಾರದೋ ಸಹಾಯಕ್ಕಾಗಿ ಕಾಯದೆ, ತನ್ನ ಪ್ರಾಣವನ್ನು ಪಣಕ್ಕಿಟ್ಟು ಇತರರ ಜೀವ ಉಳಿಸಲು ಆ ಬಾಲಕಿ ತೆಗೆದುಕೊಂಡ ನಿರ್ಧಾರ ಇದೀಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.

ದಿವ್ಯಾಂಕ್ ಮಿಶ್ರಾ ಎಂಬುವವರು ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಕಥೆ ಸಾವಿರಾರು ಜನರಿಗೆ, ಅದರಲ್ಲೂ ವಿಶೇಷವಾಗಿ ಯುವಜನತೆಗೆ ಹಾಗೂ ಕಾರ್ಪೊರೇಟ್ ವಲಯದ ನಾಯಕರಿಗೆ ದೊಡ್ಡ ಸ್ಫೂರ್ತಿಯಾಗಿದೆ.
ಸಮುದ್ರದಲ್ಲಿ ವೇಗವಾಗಿ ಪ್ರಯಾಣಿಸುತ್ತಿದ್ದ ಮೋಟಾರ್ ಬೋಟ್ ಏಕಾಏಕಿ ಮಗುಚಿ ಬಿದ್ದಾಗ, ಆ ಗಳಿಗೆಯಲ್ಲಿ ಎಲ್ಲೆಡೆ ಭಯ, ಆತಂಕ ಆವರಿಸಿತ್ತು. ದೋಣಿಯಲ್ಲಿದ್ದ ಹಲವರು ಜೀವ ಉಳಿಸಿಕೊಳ್ಳಲು ಸಮುದ್ರದ ಅಲೆಗಳೊಂದಿಗೆ ಹೋರಾಡುತ್ತಿದ್ದರು. ಯಾರಿಗೂ ಏನು ಮಾಡಬೇಕೆಂದು ತೋಚದ ಸ್ಥಿತಿ. ಯಾರಾದರೂ ಬಂದು ತಮ್ಮನ್ನು ರಕ್ಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು.
ಆದರೆ, ಆ 12 ವರ್ಷದ ಪುಟ್ಟ ಬಾಲಕಿ ಮಾತ್ರ ಯಾವುದೇ 'ಹೀರೋ'ಗಾಗಿ ಕಾಯಲಿಲ್ಲ. ಅವಳೇ ಆ ಕ್ಷಣದ ನಿಜವಾದ ಹೀರೋ ಆಗಿದ್ದಳು. ಅವಳು ತಗೆದುಕೊಂಡ ಒಂದೇ ಒಂದು ಅಸಾಮಾನ್ಯ ಹಾಗೂ ದಿಟ್ಟ ನಿರ್ಧಾರ, ಅಲ್ಲಿ ಎದುರಾಗ ಬೇಕಿದ್ದ ಬಹುದೊಡ್ಡ ದುರಂತವನ್ನು ತಪ್ಪಿಸಿತು. ಆ ಬಾಲಕಿ ಮುಳುಗಿ ಹೋಗುತ್ತಿದ್ದವರ ಸಹಾಯಕ್ಕಾಗಿ ತಾನೇ ಈಜಲು ನಿರ್ಧರಿಸಿದ್ದಳು.!
ಕುಟುಂಬಕ್ಕಾಗಿ 6 ಕಿ.ಮೀ ಈಜಿದ ಸಾಹಸಿ
ಆ ಬಾಲಕಿ ಈಜಿದ್ದು ಯಾವುದೇ ದೊಡ್ಡ ಚಿನ್ನ, ಬೆಳ್ಳಿ ಪದಕಕ್ಕಾಗಿ ಅಲ್ಲ, ಸಮಾಜದಲ್ಲಿ ಹೆಸರು ಮಾಡಲು ಅಲ್ಲ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲೂ ಅಲ್ಲ. ಬದಲಾಗಿ, ತನ್ನ ಕುಟುಂಬ ಮತ್ತು ದೋಣಿಯಲ್ಲಿದ್ದ ಇತರ ಪ್ರಯಾಣಿಕರ ಜೀವ ಉಳಿಸಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಆಕೆ ತನ್ನ ಪ್ರಾಣವನ್ನು ಲೆಕ್ಕಿಸಲಿಲ್ಲ.
ದೊಡ್ಡ ದೊಡ್ಡ ಅಲೆಗಳಿರುವ ಸಮುದ್ರದಲ್ಲಿ, ಪ್ರಾಣಾಪಾಯದ ನಡುವೆಯೂ ಸತತ 6 ಗಂಟೆಗಳ ಕಾಲ, ಸುಮಾರು 6 ಕಿಲೋಮೀಟರ್ ದೂರವನ್ನು ಈಜಿ ದಡ ಸೇರುವಲ್ಲಿ ಅವಳು ಯಶಸ್ವಿಯಾದಳು. ಸಮುದ್ರದ ಉಪ್ಪು ನೀರು, ಕಣ್ಣಿಗೆ ಅಪ್ಪಳಿಸುವ ಅಲೆಗಳು ಯಾವುದಕ್ಕೂ ಅವಳು ಅಂಜಲಿಲ್ಲ, ಹಿಂಜರಿಯಲು ಇಲ್ಲ. ದಡ ತಲುಪಿದ ತಕ್ಷಣವೇ ಬೇರೆಯವರಲ್ಲಿ ನೆರವು ಕೋರಿ, ತನ್ನವರನ್ನು ರಕ್ಷಿಸುವಲ್ಲಿ ಆಕೆ ತೋರಿದ ಸಮಯಪ್ರಜ್ಞೆ ನಿಜಕ್ಕೂ ಅದ್ಭುತ.

ವಯಸ್ಸನ್ನು ಮೀರಿದ ವ್ಯಕ್ತಿತ್ವ
ನಾವು ಒಂದು ಎಮ್‌ಎನ್‌ಸಿ ಕಂಪನಿಯನ್ನು ಮುನ್ನಡೆಸುತ್ತಿರಬಹುದು, ಒಂದು ಪ್ರಾಜೆಕ್ಟ್ ತಂಡದ ಹೆಡ್ ಆಗಿರಬಹುದು ಅಥವಾ ನಮ್ಮ ಕುಟುಂಬದ ಜವಾಬ್ದಾರಿ ಹೊತ್ತಿರಬಹುದು; ಪ್ರತಿಯೊಬ್ಬರಿಗೂ ಈ ಕಥೆ ಒಂದು ಉತ್ತಮ ಸಂದೇಶವನ್ನು ನೀಡುತ್ತದೆ. ನಾಯಕತ್ವ ಎಂಬುದು ಕೇವಲ ನಮ್ಮ ವಯಸ್ಸು, ನಮ್ಮ ಮುಂದಿರುವ ಬಿರುದು ಅಥವಾ ನಾವು ಕುಳಿತಿರುವ ಉನ್ನತ ಸ್ಥಾನದಿಂದ ಬರುವುದಿಲ್ಲ.
ಯಾರಾದರೂ ಕಷ್ಟಕಾಲದಲ್ಲಿ ಸಹಾಯಕ್ಕಾಗಿ ಕಾಯುತ್ತಿರುವಾಗ, ಎದ್ದುನಿಂತು ಸಹಾಯಕ್ಕೆ ದಾವಿಸುವ ಧೈರ್ಯ ತೋರುವುದು ನಿಜವಾದ ನಾಯಕತ್ವ. ಜಗತ್ತು ಯಾವಾಗಲೂ ವ್ಯಕ್ತಿಯ ಪ್ರತಿಭೆಯನ್ನು ಸಂಭ್ರಮಿಸುತ್ತದೆ, ಆದರೆ ಇತಿಹಾಸವು ಮಾತ್ರ ಇಂಥವರ ಧೈರ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ.
ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾದಾಗ, ಜವಾಬ್ದಾರಿಗಳ ಹೊರೆ ಹೆಚ್ಚಾದಾಗ ಅಥವಾ ಎಲ್ಲವೂ ಕೈಮೀರಿ ಹೋಗುತ್ತಿದೆ ಎಂದು ಅನ್ನಿಸಿದಾಗ, ಭಯದ ಬದಲು ಧೈರ್ಯವನ್ನು ಆಯ್ಕೆ ಮಾಡಿಕೊಂಡ ಈ ಪುಟ್ಟ ಬಾಲಕಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಪರಿಸ್ಥಿತಿಯನ್ನು ದೂರುತ್ತಾ ಕೂರುವ ಬದಲು, ಕಾರ್ಯೋನ್ಮುಖರಾಗಿ.












Click it and Unblock the Notifications