ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತ ಪ್ರತ್ಯೇಕ ಧರ್ಮ : ಒಪ್ಪಿದರೂ ಬಿಟ್ಟರೂ ಲಾಭ ಕಾಂಗ್ರೆಸ್ಸಿಗೆ

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಮುಂದಿನ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ ಎಂದು ಪರಿಗಣಿಸಲು, ಅಲ್ಪಸಂಖ್ಯಾತ ಸ್ಥಾನ ಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕಾಂಗ್ರೆಸ್ ನ ಚಿಂತಕರ ಚಾವಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದೆ. ಈ ರೀತಿ ಸಲಹೆ ನೀಡಲು ಅದು ಕೊಟ್ಟ ಕಾರಣಗಳೂ ಇಂಟರೆಸ್ಟಿಂಗ್ ಆಗಿವೆ.

ಅಂದ ಹಾಗೆ, ವೀರಶೈವ-ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮವಲ್ಲ. ಹಾಗೇನಾದರೂ ವಿಭಜಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ವೀರಶೈವ-ಲಿಂಗಾಯತ ಒಂದೇ ಎನ್ನುತ್ತಿರುವ ನಾಯಕರು, ಮಠಾಧೀಶರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿಶ್ಲೇಷಣೆ: ಲಿಂಗಾಯತ 'ಧರ್ಮ', ಏನಿದರ ನಿಜವಾದ 'ಮರ್ಮ'ವಿಶ್ಲೇಷಣೆ: ಲಿಂಗಾಯತ 'ಧರ್ಮ', ಏನಿದರ ನಿಜವಾದ 'ಮರ್ಮ'

ಆದರೆ ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ವಿಷಯದಲ್ಲಿ ನಡೆದ ಹೋರಾಟ ಎಷ್ಟು ಮುಂದೆ ಬಂದಿದೆ ಎಂದರೆ ಸಿದ್ದರಾಮಯ್ಯ ಸರ್ಕಾರ ಈಗ ವಾಪಸ್ ಹೋಗುವ ಸ್ಥಿತಿಯಲ್ಲೂ ಇಲ್ಲ.

Lingayat as separate religion : Success or failure, Congress will win

ಜನತಾ ಪರಿವಾರದ ವಿಭಜನೆಯ ನಂತರ ರಾಮಕೃಷ್ಣ ಹೆಗಡೆ ಸೀದಾ ಬಿಜೆಪಿ ಜತೆ ಹೋಗಿ ಕೈ ಜೋಡಿಸಿದರಲ್ಲ?
ಆನಂತರದ ದಿನಗಳಲ್ಲಿ ವೀರಶೈವ-ಲಿಂಗಾಯತರು ಗಣನೀಯ ಪ್ರಮಾಣದಲ್ಲಿ ಬಿಜೆಪಿ ಜತೆ ನಿಂತರು. ರಾಮಕೃಷ್ಣ ಹೆಗಡೆ ಅವರ ನಿಧನದ ನಂತರ ಆ ಸಮುದಾಯದ ನಾಯಕತ್ವಕ್ಕೆ ಕವಿದ ಶೂನ್ಯವನ್ನು ಯಡಿಯೂರಪ್ಪ ತುಂಬಿದರು.

ಬಿಜೆಪಿ-ಜೆಡಿಎಸ್ ಹಳೆ ಮೈತ್ರಿ ಹಿಂದೆ ಅನಂತ್ ಕೈವಾಡ

2004ರ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಯಡಿಯೂರಪ್ಪ ಅವರು ತಮ್ಮನ್ನು ತಾವು ರೈತ ನಾಯಕ ಎಂದು ಗುರುತಿಸಿಕೊಂಡಿದ್ದರು. ಆದರೆ 2004ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ದೊಡ್ಡ ರಾಜಕೀಯ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮಿತಲ್ಲ?

ಆ ಸಂದರ್ಭದಲ್ಲಿ ಜೆಡಿಎಸ್ ಜತೆ ಕೈಗೂಡಿಸಿ ಮೈತ್ರಿಕೂಟ ಸರ್ಕಾರ ರಚಿಸಲು ಆಗ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಅನಂತಕುಮಾರ್ ನಿರಂತರವಾಗಿ ಶ್ರಮಿಸಿದರು. ಇವತ್ತು ಕೇಂದ್ರದ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ಅವರನ್ನು ಕರೆದುಕೊಂಡು ದೇವೇಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮೈತ್ರಿಯ ಮಾತುಕತೆ ನಡೆಸಿದರು.

ಕುಮಾರಸ್ವಾಮಿ ಅವರೇ ನೀವು ಮುಖ್ಯಮಂತ್ರಿಯಾಗಿ, ಅನಂತಕುಮಾರ್ ಅವರು ಉಪಮುಖ್ಯಮಂತ್ರಿಯಾಗಲಿ ಎಂದು ಅರುಣ್ ಜೇಟ್ಲಿ ಅವರೇನೇ ಹೇಳಿದರೂ ಕುಮಾರಸ್ವಾಮಿ ಮೈತ್ರಿ ಮಾತುಕತೆಗೆ ಹಿಂಜರಿದರು. ಯಾಕೆಂದರೆ ಆ ಸಂದರ್ಭದಲ್ಲಿ ದೇವೇಗೌಡರು ಕಮ್ಯೂನಿಸ್ಟರ ಮಾತು ಕೇಳದೆ ಮುಂದಡಿ ಇಡುತ್ತಿರಲಿಲ್ಲ.

Lingayat as separate religion : Success or failure, Congress will win

ದೇಶದಲ್ಲಿ ಬಿಜೆಪಿಯಂತಹ ಶಕ್ತಿಯನ್ನು ದೂರವಿಡಬೇಕು ಎಂದರೆ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಕಮ್ಯೂನಿಸ್ಟ್ ನಾಯಕರು ಹೇಳುತ್ತಿದ್ದುದರಿಂದ ದೇವೇಗೌಡರು ಕಮ್ಯೂನಿಸ್ಟರ ಮಾರ್ಗದರ್ಶಿ ಸೂತ್ರಕ್ಕೆ ಅಂಟಿಕೊಂಡಿದ್ದರು. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಕೂಡಾ ಬಿಜೆಪಿ ಜತೆ ಕೈ ಜೋಡಿಸುವ ಪ್ರಸ್ತಾಪದಿಂದ ಹಿಂದೆ ಸರಿದರು.

ವಿಶ್ಲೇಷಣೆ: ಅವರವರ ಭಾವಕ್ಕೆ, ಲಿಂಗಾಯತ ಪ್ರತ್ಯೇಕ ಧರ್ಮವಿಶ್ಲೇಷಣೆ: ಅವರವರ ಭಾವಕ್ಕೆ, ಲಿಂಗಾಯತ ಪ್ರತ್ಯೇಕ ಧರ್ಮ

ಯಾವಾಗ ಕುಮಾರಸ್ವಾಮಿ ಹಿಂದೆ ಸರಿದರೋ? ಆನಂತರ ಪ್ರತಿಪಕ್ಷದ ಸ್ಥಾನದಲ್ಲಿ ಕೂರದೆ ಬಿಜೆಪಿಗೆ ನಿರ್ವಾಹವೇ ಇರಲಿಲ್ಲ. ಆ ಸಂದರ್ಭದಲ್ಲಿ ಅನಂತಕುಮಾರ್ ಅವರು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಯಡಿಯೂರಪ್ಪ ಅವರನ್ನು ತಂದು ಕೂರಿಸಲು ತಯಾರಿರಲಿಲ್ಲ. ಹೀಗಾಗಿ ಪ್ರತಿಪಕ್ಷದ ನಾಯಕ ಯಾರಾಗಬೇಕು? ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಬಹು ದೊಡ್ಡ ಕೋಲಾಹಲವೇ ನಡೆದು ಹೋಯಿತು.

ಕೇಂದ್ರಕ್ಕೆ ಅನಂತ್, ರಾಜ್ಯಕ್ಕೆ ಯಡಿಯೂರಪ್ಪ

ಈ ಸಂದರ್ಭದಲ್ಲಿ ಬೆಂಗಳೂರಿನ ಜಕ್ಕರಾಯನಕೆರೆ ಮೈದಾನದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯಡಿಯೂರಪ್ಪ, ಆ ಸಮಾರಂಭಕ್ಕೆ ರಾಜ್ಯದ ಪ್ರಮುಖ ಲಿಂಗಾಯತ ಮಠಾಧಿಪತಿಗಳನ್ನು ಆಹ್ವಾನಿಸಿದರು.
ಅವತ್ತು ನಡೆದ ಸಮಾರಂಭದಲ್ಲಿ ಮಾತನಾಡಿದ ಬಹುತೇಕರು, ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿಯಾದರೂ ಬಿಜೆಪಿ ಹೈಕಮಾಂಡ್ ಗೆ ರವಾನಿಸಿದರು. ಪರಿಣಾಮವಾಗಿ ಬಿಜೆಪಿ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಒಂದು ಸೂತ್ರವನ್ನು ರೂಪಿಸಿತು. ಅದೆಂದರೆ, ಕೇಂದ್ರದ ರಾಜಕೀಯಕ್ಕೆ ಅನಂತಕುಮಾರ್, ರಾಜ್ಯ ರಾಜಕೀಯಕ್ಕೆ ಯಡಿಯೂರಪ್ಪ ಎಂಬುದು.

Lingayat as separate religion : Success or failure, Congress will win

ಪರಿಣಾಮವಾಗಿ ಯಡಿಯೂರಪ್ಪ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕರಾದರು. ಮುಂದೆ ನಡೆದಿದ್ದು ಇತಿಹಾಸ, ಆದರೆ ಅವತ್ತಿನಿಂದ ಯಡಿಯೂರಪ್ಪ ರೈತ ನಾಯಕ ಎಂಬುದಕ್ಕಿಂತ ಪ್ರಮುಖವಾಗಿ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡರು. ಮತ್ತು ಅವರನ್ನು ತಮ್ಮ ನಾಯಕ ಎಂದು ಗಣನೀಯ ಪ್ರಮಾಣದ ಲಿಂಗಾಯತ ಮತದಾರರು ಒಪ್ಪಿಕೊಂಡರು. ಇದಾದ ನಂತರದ ದಿನಗಳಲ್ಲಿ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಅವರೇ ಅಗ್ರಗಣ್ಯ ನಾಯಕ ಎಂಬುದು ನಿರ್ವಿವಾದ ಸಂಗತಿಯಾಯಿತು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಒಂದು ಸಮುದಾಯದ ನಾಯಕರು ಎಂದು ಯಾರನ್ನಾದರೂ ಗುರುತಿಸಿದರೆ ಆ ಸಮುದಾಯದಲ್ಲಿ ಅವರಿಗೆ ವಿರೋಧವೇ ಇರುವುದಿಲ್ಲ ಎಂದಲ್ಲ. ದೇವೇಗೌಡರು ನಂಬರ್ ಒನ್ ಒಕ್ಕಲಿಗ ನಾಯಕರಾದರೂ ಅವರನ್ನು ವಿರೋಧಿಸುವ ಒಕ್ಕಲಿಗ ಮತದಾರರ ಬಣ ಇದ್ದೇ ಇದೆ. ಹಾಗೆಯೇ ಯಾವುದೇ ಜಾತಿಯ ನಾಯಕರನ್ನು ಉದಾಹರಣೆಯಾಗಿ ತೆಗೆದುಕೊಂಡರೂ ಇದು ಅನ್ವಯವಾಗುತ್ತದೆ.

ಎಂಬಿ ಪಾಟೀಲರನ್ನು ಎತ್ತಿಕಟ್ಟಿದ ಸಿದ್ದರಾಮಯ್ಯ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದ ಪರಿಣಾಮವಾಗಿ ಆ ಸಮುದಾಯದ ಮತಗಳು ಗಣನೀಯವಾಗಿ ಒಡೆದು ಹೋದವು. ಬಿಜೆಪಿ ಕೇವಲ ನಲವತ್ತು ಸೀಟು ಪಡೆಯುವಷ್ಟಕ್ಕೇ ತೃಪ್ತವಾಗಬೇಕಾಯಿತು. ಆದರೆ ಯಾವಾಗ ಯಡಿಯೂರಪ್ಪ ಅವರು ಮರಳಿ ಬಿಜೆಪಿಗೆ ಬಂದರೋ? ಆನಂತರದ ದಿನಗಳಲ್ಲಿ ಈ ಮತಗಳು ಕ್ರೋಢೀಕರಣಗೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಅಪಾಯ ಎಂದು ಸಿದ್ದರಾಮಯ್ಯ ಅವರ ಬಣ ಗುರುತಿಸಿತು. ಮತ್ತು ಇದೇ ಕಾರಣಕ್ಕಾಗಿ ಅವರ ಸಂಪುಟದ ಪ್ರಭಾವಿ ಸಚಿವ ಎಂ.ಬಿ.ಪಾಟೀಲರು, ವೀರಶೈವ ಬೇರೆ-ಲಿಂಗಾಯತ ಬೇರೆ ಎಂಬ ಕೂಗಿಗೆ ಶಕ್ತಿ ತುಂಬಿದರು.

Lingayat as separate religion : Success or failure, Congress will win

ಇವತ್ತಿಗೂ ಕೇಳಿ ನೋಡಿ, ಈ ವಿವಾದಕ್ಕೂ ಕಾಂಗ್ರೆಸ್ ಗೂ ಸಂಬಂಧವಿಲ್ಲ ಎಂದೇ ಕೈ ಪಾಳೆಯದ ನಾಯಕರು ಹೇಳುತ್ತಾರೆ. ಆದರೆ ರಾಜಕೀಯ ಪಕ್ಷವೊಂದರ ಬೆಂಬಲವಿಲ್ಲದೆ ಹೋದರೆ ವೀರಶೈವ ಬೇರೆ-ಲಿಂಗಾಯತ ಬೇರೆ ಎಂದು ಕೂಗು ಹಾಕಲು ನಡೆದ ಸಮಾವೇಶಗಳು ಯಶಸ್ವಿಯಾಗಲು ಸಾಧ್ಯವೇ ಇರಲಿಲ್ಲ. ಅರ್ಥಾತ್, ಹಿಂದೆ ರಾಮಕೃಷ್ಣ ಹೆಗಡೆ ಅವರ ನೆತ್ತಿಯ ಮೇಲಿಂದ ಕಳಚಿದ ಲಿಂಗಾಯತ ನಾಯಕ ಎಂಬ ಕಿರೀಟವನ್ನು ಧರಿಸಿ ಯಡಿಯೂರಪ್ಪ ರಾಜಕೀಯದ ಮುಖ್ಯ ವಾಹಿನಿಗೆ ಬಂದರಲ್ಲ? ಅದೇ ರೀತಿ ಯಡಿಯೂರಪ್ಪ ಅವರ ನೆತ್ತಿಯ ಮೇಲಿರುವ ಕಿರೀಟವನ್ನು ಕಸಿದುಕೊಂಡು ತಮ್ಮ ನೆತ್ತಿಯ ಮೇಲಿಟ್ಟುಕೊಳ್ಳುವುದು, ಆ ಮೂಲಕ ಮುಖ್ಯಮಂತ್ರಿ ಕ್ಯಾಂಡಿಡೇಟ್ ಆಗುವುದು ಎಂ.ಬಿ.ಪಾಟೀಲರಿಗೆ ಬೇಕಾಗಿದೆ.

ಒಡಕಿನ ಬೀಜ ಬಿತ್ತಿಯಾಗಿದೆ

ಆಳವಾಗಿ ನೋಡಿದರೆ ಅವರು ಮಾಡಿರುವ ಬಹುತೇಕ ಸಮಾವೇಶಗಳು ಯಶಸ್ವಿಯೂ ಆಗಿವೆ.
ಇವತ್ತು ವೀರಶೈವ ನಾಯಕರು ಏನೇ ಆಕ್ರೋಶ ವ್ಯಕ್ತಪಡಿಸಿದರೂ ಒಡಕಿನ ಬೀಜ ಬಿದ್ದಾಗಿದೆ. ಇಂತಹ ಟೈಮಿನಲ್ಲಿ ಅವರು ಹಾಕಿದ ಬೆದರಿಕೆಗೆ ಮಣಿಯುವ ಅಗತ್ಯವಿಲ್ಲ ಎಂಬುದು ಸಿದ್ದರಾಮಯ್ಯ ಅವರ ಚಿಂತಕರ ಚಾವಡಿಯ ವಾದ. ಒಂದು ವೇಳೆ ಅವರ ಆಕ್ರೋಶಕ್ಕೆ ಮಣಿದು ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೆ ಹೋದರೆ ಆ ಸಮುದಾಯ ಒಗ್ಗೂಡಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತದೆಯೇ?

Lingayat as separate religion : Success or failure, Congress will win

1989ರ ವಿಧಾನಸಭಾ ಚುನಾವಣೆಯ ನಂತರದ ದಿನಗಳಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಆ ಸಮುದಾಯದ ಗಣನೀಯ ಮತಗಳು ಕಾಂಗ್ರೆಸ್ಸೇತರ ಪಕ್ಷಗಳ ಕಡೆಗೇ ಹೋಗಿವೆ. 1994ರಲ್ಲಿ ಅದರ ಬೆಂಬಲ ಜನತಾ ದಳಕ್ಕೆ ದಕ್ಕಿತ್ತು. 1999ರ ಚುನಾವಣೆಯಲ್ಲಿ ಅದು ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡದೆ ಸಂಯುಕ್ತ ಜನತಾದಳ-ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ನೀಡಿತ್ತು. ಅಲ್ಲಿಂದ ಶುರುವಾದ ಅದರ ಧೋರಣೆ ಹೆಚ್ಚು ಕಡಿಮೆ ಹಾಗೆಯೇ ಮುಂದುವರಿದುಕೊಂಡು ಬಂದಿದೆ.

ಲಿಂಗಾಯತ ಪ್ರತ್ಯೇಕ ಧರ್ಮ : ಶ್ರೇಯಸ್ಸು ಯಾರಿಗೆ

ಹೀಗಾಗಿ ಅವರ ಆಕ್ರೋಶಕ್ಕೆ ಮಣಿಯುವ ಬದಲು ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡುವ ಕೆಲಸವಾದರೆ ಗಣನೀಯ ಪ್ರಮಾಣದ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ದೊರೆಯುತ್ತವೆ. ಅದೇ ರೀತಿ ಶಿಫಾರಸಿನ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿ ಬೀಳುವುದರಿಂದ ಅದು ಏನು ತೀರ್ಮಾನ ತೆಗೆದುಕೊಂಡರೂ ಲಾಭ ಕಾಂಗ್ರೆಸ್ ಪಕ್ಷಕ್ಕೇ ಆಗುತ್ತದೆ.

Lingayat as separate religion : Success or failure, Congress will win

ಒಂದು ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಕೇಂದ್ರ ಸರ್ಕಾರ ಗುರುತಿಸಿದರೆ ಇಲ್ಲಿ ಅದಕ್ಕಾಗಿ ಹೋರಾಟ ನಡೆಸಿದವರಿಗೆ ಅದರ ಶ್ರೇಯಸ್ಸು ಸಲ್ಲುತ್ತದೆ. ಹೋರಾಟ ನಡೆಸಿದವರು ಎಂದರೆ? ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು. ಒಂದು ವೇಳೆ ಕೇಂದ್ರ ಸರ್ಕಾರ ಈ ಶಿಫಾರಸನ್ನು ತಿರಸ್ಕರಿಸಿದರೆ? ಆಗ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಕೂಗು ಹಾಕುತ್ತಿರುವವರು ಬಿಜೆಪಿಯ ವಿರುದ್ಧ ಆಕ್ರೋಶಿತರಾಗುತ್ತಾರೆ. ಹೀಗಾಗಿ ಏನೇ ಬೆಳವಣಿಗೆ ನಡೆದರೂ ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವೇ ಹೊರತು ನಷ್ಟವೇನಿಲ್ಲ ಎಂಬುದು ಸಿಎಂ ಸಿದ್ದರಾಮಯ್ಯ ಅವರಿಗೆ ಚಿಂತಕರ ಚಾವಡಿ ನೀಡಿದ ಸಲಹೆ. ಸಹಜವಾಗಿಯೇ ಈ ಸಲಹೆ ರಾಜಕೀಯ ವಲಯಗಳ ಕುತೂಹಲ ಕೆರಳಿಸಿದೆ.

English summary
Lingayat as separate religion : Success or failure, Congress will get upperhand in both situation. If centre gives separate identity, Congress leaders will say it is because of their fight. If centre doesn't agree, majority of Lingayat votes will go to Congress. As the ball is in BJP court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X